ಕೋವಿಡ್ 19 ವಿರುದ್ಧ ಹೋರಾಡಲು ಮುಂಬೈ ಇಂಡಿಯನ್ಸ್ ತಂಡ, ತನ್ನ ಆಟಗಾರರು, ಸಹಾಯಕ ಸಿಬ್ಬಂದಿ ಸೇರಿದಂತೆ ತಂಡದ ಪ್ರತಿಯೊಬ್ಬ ಸದಸ್ಯರಿಗೂ ‘ಸ್ಮಾರ್ಟ್ ರಿಂಗ್’ ವಿತರಿಸಿದೆ.
ದುಬೈ (ಸೆ. 06): ಕೊರೋನಾ ಸೋಂಕಿನ ಭೀತಿ ನಡುವೆಯೇ ಐಪಿಎಲ್ ಆಯೋಜಿಸಿರುವ ಬಿಸಿಸಿಐ, ಟೂರ್ನಿಯಲ್ಲಿ ಆಡಲಿರುವ ಎಲ್ಲಾ ಆಟಗಾರರು, ಸಹಾಯಕ ಸಿಬ್ಬಂದಿ ಬಯೋ ಸೆಕ್ಯೂರ್ ವಾತಾವರಣದಲ್ಲೇ ಇರಬೇಕು ಎನ್ನುವ ಷರತ್ತು ವಿಧಿಸಿದೆ.
ಜೊತೆಗೆ ಜಿಪಿಎಸ್ ಆಧಾರಿತ ಸಾಧನವೊಂದನ್ನು ನೀಡಿದ್ದು, ಬಯೋ ಸೆಕ್ಯೂರ್ ವಾತಾವರಣದಿಂದ ಹೊರಹೋದರೆ ಆ ಸಾಧನ ಎಚ್ಚರಿಸಲಿದೆ. ಕೊರೋನಾದಿಂದ ದೂರವಿರುವ ಉದ್ದೇಶದಿಂದ ಒಂದು ಹೆಜ್ಜೆ ಮುಂದೆ ಹೋಗಿರುವ ಮುಂಬೈ ಇಂಡಿಯನ್ಸ್ ತಂಡ, ತನ್ನ ಆಟಗಾರರು, ಸಹಾಯಕ ಸಿಬ್ಬಂದಿ ಸೇರಿದಂತೆ ತಂಡದ ಪ್ರತಿಯೊಬ್ಬ ಸದಸ್ಯರಿಗೂ ‘ಸ್ಮಾರ್ಟ್ ರಿಂಗ್’ ವಿತರಿಸಿದೆ.
ಇದನ್ನು ಧರಿಸುವ ಮೂಲಕ ಎದೆಬಡಿತ, ಉಸಿರಾಟದಲ್ಲಿ ಏರುಪೇರು, ದೇಹದ ತಾಪಮಾನವನ್ನು ತಿಳಿಯಬಹುದಾಗಿದೆ. ಆರೋಗ್ಯದಲ್ಲಿ ಸಣ್ಣ ಸಮಸ್ಯೆಯಾದರೂ ತಕ್ಷಣ ಚಿಕಿತ್ಸೆ ನೀಡಲು ಈ ರಿಂಗ್ ಸಹಕಾರಿಯಾಗಲಿದೆ. ಅಮೆರಿಕದ ಎನ್ಬಿಎ ಬಾಸ್ಕೆಟ್ಬಾಲ್ ಟೂರ್ನಿಯಲ್ಲಿ ಇದೇ ರೀತಿಯ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.