ಬೆಂಗ್ಳೂರಿನ 4 ದಿಕ್ಕುಗಳಲ್ಲಿ ಕ್ರೀಡಾಂಗಣ-17 ಕೋಟಿ ಮಂಜೂರು!

By Web DeskFirst Published Oct 21, 2018, 8:20 AM IST
Highlights

ಉದ್ಯಾನ ನಗರಿ ಬೆಂಗಳೂರನ್ನ ಮಾದರಿ ಕ್ರೀಡಾನಗರವನ್ನಾಗಿಸಲು ಪ್ರಯತ್ನಗಳು ನಡೆಯುತ್ತಿದೆ. ಇದೀಗ ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಸರ್ಕಾರ ಮುಂದಾಗಿದೆ. ಆದರೆ ಅದೆಷ್ಟೇ ಕ್ರೀಡಾಂಗಣ ಮಾಡಿದರೂ ಪ್ರೊ ಕಬಡ್ಡಿಗೆ ಅನುಮತಿ ನೀಡೋ ಮನಸ್ಸು ಇಲಾಖೆಗಿಲ್ಲ.

ಬೆಂಗಳೂರು(ಅ.21): ಕಂಠೀರವ ಕ್ರೀಡಾಂಗಣದ ಮಾದರಿಯಲ್ಲಿ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ 4 ಕ್ರೀಡಾಂಗಣ ನಿರ್ಮಿಸಲು  17 ಕೋಟಿ ರು. ಅನುದಾದ ಮಂಜೂರು ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ, ರಾಜ್ಯ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದರು. ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನವೀಕರಣಗೊಂಡ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.

‘ಕಳೆದ ರಾಜ್ಯ ಬಜೆಟ್‌ನಲ್ಲಿ ಕಂಠೀರವ ಕ್ರೀಡಾಂಗಣ ಮಾದರಿ ನಗರದ 4 ಭಾಗಗಳಲ್ಲಿ ಅಂದರೆ, ದೇವನಹಳ್ಳಿ, ತಾವರೆಕೆರೆ, ಗುಂಜೂರು ಮತ್ತು ಎಚ್‌.ಎಸ್‌.ಆರ್‌ ಲೇಔಟ್‌ನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಾಗಿದೆ. ಈಗಾಗಲೇ 2 ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣದ ಕೆಲಸ ಶುರುವಾಗುವ ಹಂತದಲ್ಲಿದೆ. ಕಂಠೀರವ ಕ್ರೀಡಾ ಸಂಕೀರ್ಣವನ್ನು ಅಭಿವೃದ್ಧಿಪಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇಲ್ಲಿನ ಶೌಚಾಲಯ ಮರು ನಿರ್ಮಾಣಕ್ಕೆ 2 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಹೇಳಿದರು.

‘10 ವರ್ಷ ಹಳೆಯದಾದ ಸಿಂಥೆಟಿಕ್‌ ಟ್ರ್ಯಾಕ್‌ ಮೇಲ್ದರ್ಜೆಗೇರಿಸಲು 3.5 ಕೋಟಿಗೆ ಟೆಂಡರ್‌ ಕರೆಯಲಾಗಿದೆ. ಇನ್ನೊಂದು ತಿಂಗಳೊಳಗೆ ಕೆಲಸ ಪ್ರಾರಂಭಿಸಲಾಗುವುದು. ಕ್ರೀಡಾಂಗಣದ ನವೀಕರಣಕ್ಕೆ 5.77 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದರ ಭಾಗವಾಗಿ 3 ಬಾಸ್ಕೆಟ್‌ಬಾಲ್‌ ಕೋರ್ಟನ್ನು ಅಂ.ರಾ.ಮಟ್ಟದ ರೀತಿಯಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ. ಬ್ಯಾಡ್ಮಿಂಟನ್‌ ಕೋರ್ಟ್‌ಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ 5 ಸ್ಟಾರ್‌ ನೀಡಿದೆ’ ಎಂದರು. ‘ಕ್ರೀಡಾಂಗಣದಲ್ಲಿ  2 ಕೋಟಿ ವೆಚ್ಚದಲ್ಲಿ ಹೈಟೆಕ್‌ ಜಿಮ್‌ ನಿರ್ಮಾಣವಾಗಿದ್ದು, ಇದಕ್ಕೆ ಅಮೆರಿಕದಿಂದ ಉಪಕರಣ ತರಿಸಲಾಗಿದೆ. ಇನ್ನೊಂದು ವಾರದಲ್ಲಿ ಇದರ ಉದ್ಘಾಟನೆ ನಡೆಯಲಿದೆ’ ಎಂದರು.

ಪ್ರೊ ಕಬಡ್ಡಿ ಆತಿಥ್ಯ ವಿಚಾರಕ್ಕೆ ಹಾರಿಕೆ ಉತ್ತರ:

ಈ ವರ್ಷವೂ ಬೆಂಗಳೂರಿಂದ ಪ್ರೊ ಕಬಡ್ಡಿ ಎತ್ತಂಗಡಿಯಾಗುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಕ್ಕೆ, ಕ್ರೀಡಾ ಸಚಿವರು ಹಾರಿಕೆ ಉತ್ತರ ನೀಡಿದರು. ‘ಟೂರ್ನಿ ಬೆಂಗಳೂರಿನಲ್ಲಿ ನಡೆಯುದಿರುವುದಕ್ಕೆ ಅಂತಹ ಕಾರಣಗಳೇನಿಲ್ಲ. ಕಬಡ್ಡಿ ಸಂಸ್ಥೆಗೆ ಎಲ್ಲಿ ಅನುಕೂಲವಾಗಲಿದೆಯೋ ಅಲ್ಲಿ ಪಂದ್ಯಗಳನ್ನು ಆಯೋಜಿಸುತ್ತಾರೆ. ಕಬಡ್ಡಿ ಸಂಸ್ಥೆ ಪಂದ್ಯಗಳ ಆಯೋಜನೆಗೆ ಅನುಮತಿ ಕೇಳಿ ನಮ್ಮ ಬಳಿ ಬಂದರೆ, ಕ್ರೀಡಾ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಿದ್ದೇವೆ’ ಎಂದರು. ಬೆಂಗಳೂರು ಬುಲ್ಸ್‌ ತಂಡದ ಮೂಲಗಳ ಪ್ರಕಾರ, ಹಲವು ಬಾರಿ ಕ್ರೀಡಾ ಇಲಾಖೆಯನ್ನು ಸಂಪರ್ಕಿಸಿದರೂ ಪಂದ್ಯಗಳನ್ನು ನಡೆಸಲು ಅನುಮತಿ ಸಿಕ್ಕಿಲ್ಲ ಎನ್ನಲಾಗಿದೆ.
 

click me!