
ಬೆಂಗಳೂರು: ವ್ಯಕ್ತಿಯೋರ್ವ ತನ್ನ ಸಂಗಾತಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ ಎಂಬ ಕಾರಣಕ್ಕೆ ಮದುವೆಯಿಂದ ದೂರ ಸರಿದು ವಿಚ್ಛೇದನ ಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ವಿವಾಹ ವಿಚ್ಛೇದನ ಕೋರಿ ಸಲ್ಲಿಸಿದ್ದ ತಮ್ಮ ಅರ್ಜಿಯನ್ನು ತಿರಸ್ಕರಿಸಿದ್ದ ಮೈಸೂರಿನ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಅವರ ನೇತೃತ್ವದ ವಿಭಾಗೀಯ ಪೀಠ, ಆದೇಶವನ್ನು ನೀಡಿದೆ.
ಹಿಂದೂ ಕಾನೂನಿನಡಿಯಲ್ಲಿ ಮದುವೆ ಒಂದು ಸಂಸ್ಕಾರ ಮತ್ತು ಅದು ಒಪ್ಪಂದವಲ್ಲ. ಆದ್ದರಿಂದ, ಪತಿ ಹಾಗೂ ಪತ್ನಿ ಮದುವೆಯಾದ ನಂತರ ಜತೆಯಾಗಿ ಜೀವನ ಸಾಗಿಸಬೇಕು, ಒಬ್ಬರು ಇನ್ನೊಬ್ಬರಲ್ಲಿ ಆಸಕ್ತಿ ಹೊಂದಿಲ್ಲವೆನ್ನುವ ಕಾರಣಕ್ಕೆ ಮದುವೆಯಿಂದ ದೂರ ಸರಿಯಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಅಲ್ಲದೇ, ಪ್ರೇಮ ವಿವಾಹವಾಗಿ, ವಯಸ್ಕ ಹೆಣ್ಣುಮಗುವಿಗೆ ತಂದೆಯಾಗಿ, ನಂತರ ನ್ಯಾಯಾಲಯದ ಮುಂದೆ ಮದುವೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ ಎಂದು ಹೇಳಿಕೊಂಡು ಪತಿ ತನ್ನ ತಪ್ಪಿನ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾನೆ. ಹಿಂದೂ ಕಾನೂನಿನಡಿಯಲ್ಲಿ ವಿವಾಹವು ಒಪ್ಪಂದವಲ್ಲ ಮತ್ತು ಯಾವುದೇ ಪತಿ ಅಥವಾ ಪತ್ನಿ ಆಸಕ್ತಿಯ ಕೊರತೆಯನ್ನು ಉಲ್ಲೇಖಿಸಿ ಅದರಿಂದ ದೂರ ಸರಿಯಲು ಸಾಧ್ಯವಿಲ್ಲ. ಆದ್ದರಿಂದ, ಕೌಟುಂಬಿಕ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.
2003ರ ಡಿಸೆಂಬರ್ 15ರಂದು ಮೇಲ್ಮನವಿದಾರರು ಮತ್ತು ಶೋಭಾ (ಹೆಸರು ಬದಲಿಸಲಾಗಿದೆ) ವಿವಾಹವಾಗಿದ್ದರು. ಅವರಿಗೆ ಈಗ ವಯಸ್ಕ ಮಗಳಿದ್ದಾಳೆ. ಸುಮಾರು ಎರಡು ದಶಕಗಳ ವಿವಾಹದ ನಂತರ 2019ರಲ್ಲಿ ಪತಿ ವಿಚ್ಛೇದನವನ್ನು ಕೋರಿದ್ದರು, ಆದರೆ ಪತ್ನಿ ದಾಂಪತ್ಯ ಹಕ್ಕುಗಳನ್ನು ಮರು ಸ್ಥಾಪಿಸುವಂತೆ ಕೋರಿದ್ದರು. ಎರಡೂ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ಪತ್ನಿಯ ವೈವಾಹಿಕ ಸಂಬಂಧ ಮರುಸ್ಥಾಪನೆ ಅರ್ಜಿ ಮಾನ್ಯ ಮಾಡಿ, ಪತಿಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತು. ನಂತರ ಪತಿಯು ಪತ್ನಿ ಸಹಬಾಳ್ವೆಯನ್ನು ಪುನರಾರಂಭಿಸಲಿಲ್ಲ.
ಇದನ್ನೂ ಓದಿ: ಗಂಡ ಒಳ್ಳೇವ್ನೆ, ಸಂಸಾರನೂ ಚೆನ್ನಾಗಿದೆ, ಆದ್ರೂ ಈಕೆ ಯಾಕೆ ಡಿವೋರ್ಸ್ ಕೇಳಿದ್ಲು?
ಹೆಂಡತಿಯನ್ನು ತನ್ನೊಂದಿಗೆ ಸೇರಿಸಲು ಮನವೊಲಿಸುವ ಪ್ರಯತ್ನಗಳು ವಿಫಲವಾಗಿವೆ. ಮದುವೆಯು ಮುರಿದುಬಿದ್ದಿದೆ. ಸಂಗಾತಿಯಲ್ಲಿ ಆಸಕ್ತಿ ಇಲ್ಲವಾಗಿದೆ. ಹಾಗಾಗಿ ವಿಚ್ಛೇದನ ಮಂಜೂರು ಮಾಡಬೇಕು ಎಂದು ಕೋರಿದ್ದರು.
ಇದನ್ನೂ ಓದಿ: ಡಿವೋರ್ಸ್ ಕುರಿತು ಮನದ ಮಾತು ತೆರೆದಿಟ್ಟ 'ಕುಲವಧು' ಧನ್ಯಾ ದೀಪಿಕಾ: ಸಂಬಂಧದ ಬಗ್ಗೆ ನಟಿ ಹೇಳಿದ್ದೇನು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.