Happy Valentines Day ಬ್ಲಾಕ್‌. ಅನ್‌ಬ್ಲಾಕ್‌. ರಿಪೀಟ್‌ ಕಥೆ ಇದು!

By Kannadaprabha News  |  First Published Feb 13, 2022, 12:50 PM IST

ಒಂದು ಹಳೆಯ ಕತೆ ಇದೆ. ಸನ್ಯಾಸಿಯೊಬ್ಬ ಒಂದು ಕಾಲೇಜಿಗೆ ಹೋಗುತ್ತಾನೆ. ಅಲ್ಲಿ ಅವರು ಒಂದು ಉಪನ್ಯಾಸ ಕೊಡಬೇಕು. ಆದರೆ ಅಲ್ಲಿರುವವರೆಲ್ಲಾ ಪ್ರೀತಿ ಕುರಿತು ಆಸಕ್ತಿ ಇರುವವರು ಅನ್ನುವುದು ಸನ್ಯಾಸಿಗೆ ಗೊತ್ತಾಯಿತು. ಅವರು ತಮ್ಮ ಉಪನ್ಯಾಸ ಆರಂಭಿಸಿದರು.


ರಾಜೇಶ್‌ ಶೆಟ್ಟಿ

‘ಬದುಕಿನಲ್ಲಿ ಯಾವುದೂ ಅತಿಯಾಗಬಾರದು. ಅತಿಯಾಗಿರುವುದೆಲ್ಲಾ ಅತ್ಯಂತ ಅಪಾಯಕಾರಿ. ಯುದ್ಧದಲ್ಲಿ ಅತಿಯಾದ ಕೋಪ ಸಾವುಂಟು ಮಾಡಬಹುದು. ಅತಿಯಾದ ಧಾರ್ಮಿಕ ಶ್ರದ್ಧೆ ಅಂಧ ಭಕ್ತಿ ಉಂಟುಮಾಡಬಹುದು. ಇನ್ನು ಪ್ರೀತಿಯ ವಿಚಾರವಾಗಿ ಬಂದರೆ ಅತಿಯಾದ ಪ್ರೀತಿಯಿಂದಾಗಿ ಸಂಗಾತಿ ಬಗೆಗೆ ನೀವು ನಿಮ್ಮದೇ ಇಮೇಜ್‌ ಸೃಷ್ಟಿಸಿಕೊಳ್ಳುತ್ತೀರಿ. ದಿನ ಕಳೆದಂತೆ ಆ ಇಮೇಜ್‌ ಸುಳ್ಳು ಅನ್ನುವುದು ಗೊತ್ತಾಗಿ ಸಿಟ್ಟು ಬರುತ್ತದೆ. ಅತಿಯಾದ ಪ್ರೀತಿ ಎಂದರೆ ಹರಿತವಾದ ಕತ್ತಿಯ ಮೇಲೆ ಇರುವ ಜೇನು ತುಪ್ಪವನ್ನು ನಾಲಗೆಯಿಂದ ಸವರಿದಂತೆ.’

Latest Videos

ಈ ಮಾತುಗಳನ್ನೆಲ್ಲಾ ಒಬ್ಬಳು ಹುಡುಗಿ ಎದ್ದು ನಿಂತು, ‘ನೀವು ಸನ್ಯಾಸಿ ಅಲ್ವಾ. ಹುಡುಗ- ಹುಡುಗಿ ಮಧ್ಯದ ಪ್ರೀತಿ ನಿಮಗೆ ಹೇಗೆ ಗೊತ್ತು’ ಎಂದು ಕೇಳುತ್ತಾಳೆ.

ಅದಕ್ಕೆ ಆ ಸನ್ಯಾಸಿ ನಗುತ್ತಾ, ‘ನಾನು ಯಾಕೆ ಸನ್ಯಾಸಿ ಆದೆ ಅನ್ನುವುದನ್ನು ಇನ್ನೊಮ್ಮೆ ಹೇಳುತ್ತೇನೆ’ ಎನ್ನುತ್ತಾನೆ.

undefined

ಕತೆ ಅಲ್ಲಿಗೆ ಮುಗಿಯುತ್ತದೆ. ಈ ಕತೆಯನ್ನು ಜೋಕ್‌ ಆಗಿಯೂ ತೆಗೆದುಕೊಳ್ಳಬಹುದು. ಹೇಗೆ ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ಈಗಂತೂ ಅತಿಯಾದ ಮಾಹಿತಿ ಸಿಗುವ ಕಾಲ. ಬೇಕು ಎಂದರೆ ಆ್ಯಪ್‌ಗಳ ಮೂಲಕ ಒಬ್ಬ ವ್ಯಕ್ತಿಯ ಇಡೀ ಜೀವನವೇ ತಿಳಿದುಕೊಳ್ಳಬಹುದು. ಪ್ರೀತಿ ಉಂಟಾಗುವುದಕ್ಕೆ ಕೆಲವು ಕ್ಷಣಗಳು ಸಾಕು. ಅವರನ್ನು ತಲುಪುವುದಕ್ಕೂ ಕೆಲವೇ ಗಂಟೆಗಳು ಸಾಕು. ಅದೇ ಥರ ಅವರಿಂದ ಬ್ಲಾಕ್‌ ಆಗುವುದಕ್ಕೂ ತುಂಬಾ ಸಮಯವೇನೂ ಬೇಕಾಗಿಲ್ಲ.

Valentine's day: ನಿಮ್ಮ ಕೈಯಾರೆ ವಿಶೇಷ ತಿಂಡಿ ತಯಾರಿಸಿ, ಸಂಗಾತಿಯ ಮನ ಗೆಲ್ಲಿ

ಕಳೆದ ತಿಂಗಳು ಮುಂಜಾನೆ ಚಿಕ್ಕಮಗಳೂರಿನ ಯಾವುದೇ ಒಂದು ಕಾಫಿ ತೋಟದ ಮಧ್ಯೆ ಬೈಕು ನಿಲ್ಲಿಸಿ ಮುಂದಿನ ತಿರುವಲ್ಲಿ ಯಾವುದಾದರೊಂದು ಪ್ರೇಮ ಸಂಭವಿಸಬಹುದಾ ಎಂಬ ಆಲೋಚನೆಯಲ್ಲಿ ನಿಂತಿದ್ದಾಗ ಗೆಳೆಯನೊಬ್ಬ ಫೋನ್‌ ಮಾಡಿದ. ಅವಳು ಅನ್‌ಬ್ಲಾಕ್‌ ಮಾಡಿದ್ಲು ಕಣೋ, ಮುಂದಿನವಾರ ಪಾರ್ಟಿ ಮಾಡೋಣ ಅಂತ. ಪ್ರೇಮ ಗೆದ್ದ ಖುಷಿಯಲ್ಲಿದ್ದ ಅವನ ಧ್ವನಿ ಕೇಳಿ ನನಗೂ ಉತ್ಸಾಹ ಹೆಚ್ಚಾಯಿತು. ಹಲವು ಬ್ಲಾಕ್‌, ಅನ್‌ಬ್ಲಾಕ್‌ಗಳ ಈ ಕತೆ ಬಹಳ ಸಮಯದಿಂದ ಗೊತ್ತಿದ್ದರೂ ಈ ಸಲ ಬ್ಲಾಕ್‌ ಅವಧಿ ದೀರ್ಘವಾಗಿತ್ತು. ಅನ್‌ಬ್ಲಾಕ್‌ ಆಗಿದ್ದು ಒಳ್ಳೆಯ ವಿಚಾರವೇ ಆಗಿತ್ತು.

ಅದಾಗಿ ಎರಡೇ ದಿನದಲ್ಲಿ ರಾತ್ರೋರಾತ್ರಿ ಅವನಿಂದಲೇ ಫೋನ್‌ ಬಂತು. ಬ್ರೇಕಪ್‌ ಎಂದು ಹೇಳುವುದಕ್ಕಾಗಿಯೇ ಅವಳು ಅನ್‌ಬ್ಲಾಕ್‌ ಮಾಡಿದ್ದಳು. ಸಕ್ಸಸ್‌ ಪಾರ್ಟಿ ಬ್ರೇಕಪ್‌ ಪಾರ್ಟಿಯಾಗಿ ಬದಲಾಗಿತ್ತು. ಅವನಿಗೆ ಅದರಿಂದ ದುಃಖವಾಯಿತಾ ಎಂದು ನೋಡಿದರೆ ಹಾಗೇನೂ ಅನ್ನಿಸಲಿಲ್ಲ. ಈಗ ಅವನು ಮೊದಲಿಗಿಂತ ಶಿಸ್ತಾಗಿದ್ದಾನೆ. ಹೆಚ್ಚು ಖುಷಿಯಾಗಿದ್ದಾನೆ ಅಂತ ಅನ್ನಿಸುತ್ತಿದೆ.

ಒಂದು ಕಾಲವಿತ್ತು. ಒಂದು ಕಣ್ಣೋಟ ಬಿಟ್ಟರೆ ಬೇರೇನೂ ಸಿಗುತ್ತಿರಲಿಲ್ಲ. ಈಗಂತೂ ನಂಬರ್‌ ಸಿಗುವುದು ದೊಡ್ಡ ವಿಷಯವೇ ಅಲ್ಲ. ಮಹಾನ್‌ ಪ್ರಚಂಡರು ನಮ್ಮ ಮಧ್ಯೆ ಇರುವ ಕಾಲ ಇದು. ಟಿಂಡರ್‌ ಅಂತ ಒಂದು ಡೇಟಿಂಗ್‌ ಆ್ಯಪ್‌ ಇದೆ. ಅಲ್ಲಿ ಇಷ್ಟಇದ್ದವರು ಪ್ರೊಫೈಲ್‌ ಮಾಡುತ್ತಾರೆ. ಪ್ರೊಫೈಲ್‌ ನೋಡಿಕೊಂಡು ಪಟಾಯಿಸುವ ಇಚ್ಛೆ ಉಳ್ಳವರು ಆ ವ್ಯಕ್ತಿಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಅವರವರ ಸೋಷಿಯಲ್‌ ಮೀಡಿಯಾದಲ್ಲಿ ನೋಡುತ್ತಾರೆ. ಅದನ್ನು ಪತ್ತೆ ಹಚ್ಚಿದ ಒಬ್ಬ ಹುಡುಗ ಟಿಂಡರ್‌ನಲ್ಲಿ ಇರುವ ಪ್ರತಿಯೊಬ್ಬರ ಪೂರ್ತಿ ಮಾಹಿತಿಯನ್ನು ಒಂದೊಂದೇ ಪುಟದಲ್ಲಿ ಹಾಕಿ ಅದಕ್ಕೊಂದು ಆ್ಯಪ್‌ ಮಾಡಿ ಟಿಂಡರ್‌ ಪುಟದ ಬದಿಯಲ್ಲಿ ಇಟ್ಟ. ಒಂದೇ ಕ್ಲಿಕ್‌ನಲ್ಲಿ ಸಂಪೂರ್ಣ ಮಾಹಿತಿ ಸಿಗುವ ಹಾಗೆ. ಸ್ವಲ್ಪ ದಿನ ಏನೋ ನಡೆಯಿತು. ಆಮೇಲೆ ಜನರು ನಮ್ಮ ವೈಯಕ್ತಿಕ ಮಾಹಿತಿ ಹೀಗೆ ಎಲ್ಲರಿಗೂ ಸಿಗುವುದು ಬೇಡ ಎಂದು ಜಗಳಾಡಿ ಆ ಆ್ಯಪ್‌ ಅನ್ನು ಕಿತ್ತುಹಾಕುವಂತೆ ನೋಡಿಕೊಂಡರು.

Hug day: ಮನದ ಮಾತನ್ನು ಅಪ್ಪಿಕೊಂಡು ಹೇಳಿದ್ರೆ ಒಪ್ಪಿಕೊಳ್ದೆ ಇರ್ತಾರಾ?

ಕಾಲ ಕಳೆದಂತೆ ಫೋನ್‌ಗಳು ಬಂದಂತೆ ನಮ್ಮ ನಮ್ಮ ಮಾಹಿತಿಗಳು ಎಲ್ಲರಿಗೂ ಹೆಚ್ಚುಹೆಚ್ಚು ಸಿಗುತ್ತಿವೆ. ನಾವು ಇಂಟರ್‌ನೆಟ್‌ಗೆ ಬಂದ ಮೇಲೆ ಅಷ್ಟೂವರ್ಷಗಳಲ್ಲಿ ಏನೇನು ಮಾಡಿದೆವು, ಏನೇನು ನೋಡಿದೆವು ಅನ್ನುವ ಮಾಹಿತಿ ಯಾರೋ ಒಬ್ಬನ ಬಳಿ ಇರುತ್ತದೆ. ದುರದೃಷ್ಟವಶಾತ್‌ ಹೀಗೆಲ್ಲಾ ಆಗಿ ಪ್ರತಿಯೊಬ್ಬರಿಗೂ ಇನ್ನೊಬ್ಬರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗಿದೆ. ಇನ್ನೊಬ್ಬರ ಮೊಬೈಲ್‌ ನೋಡಬೇಕು. ಮೆಸೇಜ್‌ ಓದಬೇಕು. ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಅಂತ ಹುಡುಕಾಡುತ್ತಿರುವುದರಿಂದಲೇ ಸಂಬಂಧಗಳ ಅರ್ಥಗಳು ಬದಲಾಗಿವೆ. ಹಳೆಯ ಲವ್‌ಲೆಟರ್‌ ಎತ್ತಿಟ್ಟುಕೊಳ್ಳುವ ಸೌಭಾಗ್ಯ ಈಗಿಲ್ಲ. ಪ್ರೇಮ ಕಾಲದ ವಸ್ತುಗಳನ್ನೆಲ್ಲಾ ಇಟ್ಟುಕೊಂಡು ಪುಟ್ಟದೊಂದು ಮ್ಯೂಸಿಯಂ ಮಾಡುವ ಆಸೆ ಯಾರಿಗೂ ಇದ್ದಂತಿಲ್ಲ. ಬ್ಲಾಕ್‌. ಅನ್‌ಬ್ಲಾಕ್‌. ರಿಪೀಟ್‌.

ಹಾಗಂತ ಯಾರಿಗೂ ಬೇಸರವಿಲ್ಲ. ಮೊದಲೆಲ್ಲಾ ಸ್ನೇಹ, ಪ್ರೀತಿ, ಮದುವೆ ಎಂಬ ಬಂಧನ. ಈಗ ಪ್ರೀತಿ ಎಂದರೆ ಸ್ವಾತಂತ್ರ್ಯ. ಬಂಧನದಲ್ಲೇ ಖುಷಿ ಕಾಣುವ ಕಾಲ ಹೊರಟುಹೋಗಿದೆ. ಇಷ್ಟಇಲ್ಲದೇ ಇದ್ದರೆ ಮೂವ್‌ ಆನ್‌. ಪ್ರೀತಿಯಾದರೂ ಮದುವೆಯಾಗಿದ್ದರೂ. ಇತ್ತೀಚೆಗೆ ಡಿಕಪಲ್ಡ್‌ ಎಂಬ ಸೀರೀಸ್‌ ಬಂತು ನೆಟ್‌ಫ್ಲಿಕ್ಸ್‌ನಲ್ಲಿ. ಓಪನ್‌ ರಿಲೇಷನ್‌ಶಿಪ್‌ ಬಗ್ಗೆ ಇರುವ ಈ ಸೀರೀಸ್‌ ಅದು. ಡಿವೋರ್ಸ್‌ ಅನ್ನೂ ಸೆಲೆಬ್ರೇಟ್‌ ಮಾಡುವ ದೃಶ್ಯವಿದೆ ಅದರಲ್ಲಿ. ಅದರಲ್ಲೊಂದು ಡೈಲಾಗ್‌ ಇದೆ. ನೀನು ನಿನ್ನ ಪತಿಯನ್ನು ಪ್ರೀತಿಸುತ್ತಿಲ್ಲ. ಆದರೂ ಮಗುವಿನ ಕಾರಣಕ್ಕೆ ಒಂದೇ ಮನೆಯಲ್ಲಿದ್ದಿ. ಇದನ್ನೇ ಮದುವೆ ಅನ್ನುತ್ತಾರೆ ಅಂತ. ಆದರೆ ಆ ಮಗುವಿಗೆ ಬುದ್ಧಿ ಬಂದ ಮೇಲೆ ಪರಸ್ಪರ ದೂರಾಗಿ ಬೇರೆ ಬೇರೆ ಬದುಕು ಕಟ್ಟುವುದೂ ಕೂಡ ಈಗ ಟ್ರೆಂಡ್‌.

#ValentinesDay ಯಾರೆಲ್ಲಾ ದಂಪತಿಗೆ ಮೊದಲ ವರ್ಷದ ಪ್ರೇಮಿಗಳ ದಿನ ಗೊತ್ತಾ?

ಯಾರಿಗೆ ಯಾರೂ ಅನಿವಾರ್ಯರಲ್ಲ. ಯಾರಿಗೂ ಯಾವುದೂ ಅನಿವಾರ್ಯತೆಯಲ್ಲ. ಇಂಥದ್ದೊಂದು ಕಾಲದಲ್ಲಿರುವಾಗ ಮತ್ತೊಂದು ಕತೆ ಹೇಳುತ್ತೇನೆ. ಒಂದು ಪುಟ್ಟಹುಡುಗಿ ಮತ್ತು ಸರ್ಕಸ್ಸಿನವನ ಕತೆ ಇದು.

ಅವನು ಒಂದು ಬಿದಿರನ್ನು ತಲೆ ಮೇಲೆ ಹೊತ್ತುಕೊಳ್ಳುತ್ತಾನೆ. ಆ ಹುಡುಗಿ ಅದರ ಮೇಲೆ ಹತ್ತಿ ನಿಂತುಕೊಳ್ಳುತ್ತಾಳೆ. ಜನ ನಕ್ಕು ಕುಣಿಯುತ್ತಾರೆ. ಅವರು ಹಾಗೆ ಮಾಡಬೇಕಾದರೆ ಅದಕ್ಕೆ ಅದ್ಭುತವಾದ ಏಕಾಗ್ರತೆ ಬೇಕು. ಆ ಏಕಾಗ್ರತೆ ತಪ್ಪಿದರೆ ಕಷ್ಟ. ಒಂದು ದಿನ ಆ ವ್ಯಕ್ತಿ ಬಂದು ಅವಳಿಗೆ ಹೇಳುತ್ತಾನೆ, ‘ನಾವು ಏಕಾಗ್ರತೆ ಸಾಧಿಸಬೇಕಾದರೆ ನೀನು ನನ್ನ ನೋಡು, ನಾನು ನಿನ್ನ ನೋಡುತ್ತೇನೆ. ಪರಸ್ಪರ ನೋಡಿಕೊಂಡು ಏಕಾಗ್ರತೆ ಪಡೆಯೋಣ. ಬದುಕೋಣ’ ಅಂತ.

ಆ ಹುಡುಗಿ ಜಾಣೆ. ಅವಳು ಅವನನ್ನು ನೋಡುತ್ತಾ ಹೇಳಿದಳು, ‘ನಾನು ನಿನ್ನನ್ನು, ನೀನು ನನ್ನನ್ನು ನೋಡಬಾರದು. ನಾನು ನನ್ನನ್ನೂ, ನೀನು ನಿನ್ನನ್ನೂ ನೋಡಿಕೊಳ್ಳಬೇಕು. ನಾವು ನಮ್ಮನ್ನು ನೋಡಿಕೊಂಡಾಗ ಇನ್ನೊಬ್ಬರು ಕೂಡ ಕಾಣುತ್ತಾರೆ. ಬದುಕಿಕೊಳ್ಳುತ್ತೇವೆ’.

ತಂತ್ರಜ್ಞಾನ ಎಷ್ಟೇ ಮುಂದುವರೆದರೂ ತೊಂದರೆ ಇಲ್ಲ. ನಮ್ಮನ್ನು ನಾವು ಕಾಣುವ ಮನಸ್ಸು ಇರಬೇಕು. ನಮ್ಮನ್ನು ನಾವು ಜಾಸ್ತಿ ಜಾಸ್ತಿ ನೋಡಿಕೊಂಡಷ್ಟು, ಅರ್ಥ ಮಾಡಿಕೊಂಡಷ್ಟುಇನ್ನೊಬ್ಬರಿಗೆ ಪ್ರೀತಿ ನೀಡಲು ಸಾಧ್ಯವಾಗುತ್ತದೆ. ಪ್ರೀತಿ ನೀಡಲು ಸಾಧ್ಯವಾಗುವಷ್ಟುದಿನ ಪ್ರೀತಿ ಗೆಲ್ಲುತ್ತದೆ. ಹ್ಯಾಪಿ ವ್ಯಾಲೆಂಟೈನ್ಸ್‌ ಡೇ.

click me!