ಭಾರತ ಅದೆಷ್ಟೇ ಮುಂದುವರೆದರೂ ಕೆಲ ಅನಿಷ್ಟ ಪದ್ಧತಿಗಳು ಮಾತ್ರ ಇವತ್ತಿಗೂ ಜೀವಂತವಾಗಿದೆ. ಅದರಲ್ಲಿ ವರದಕ್ಷಿಣೆ ಕೂಡಾ ಒಂದು. ಅದೆಷ್ಟೇ ಶ್ರೀಮಂತರಾಗಿದ್ದರೂ ಕೆಲವೊಬ್ಬರು ವರದಕ್ಷಿಣೆ ಕೇಳೋದನ್ನು ಮಾತ್ರ ಬಿಡೋದಿಲ್ಲ. ಹೀಗೆ ಕೇಳಿದ ವರದಕ್ಷಿಣೆ ಕೊಡಲ್ಲಿಲ್ಲ ಅನ್ನೋ ಕಾರಣಕ್ಕೆ ವರನೊಬ್ಬ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡ್ದಿದೆ.
ಭಾರತದಲ್ಲಿ ವರದಕ್ಷಿಣೆ ಪಿಡುಗು ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ಹೆಣ್ಣು ಹೆತ್ತವರಿಗೆ ಇದು ಶಾಪ ಎಂದೇ ಬಿಂಬಿತವಾಗ್ತಿದೆ.
ಭಾರತದಲ್ಲಿ ಹೆಣ್ಣನ್ನು ದೇವತೆಗೆ ಹೋಲಿಸಲಾಗುತ್ತದೆ. ಆದ್ರೆ ಇದು ಬಾಯಿ ಮಾತಿಗೆ ಮಾತ್ರ ಎಂಬುದು ಪದೇ ಪದೇ ಸಾಬೀತಾಗ್ತಿದೆ. ಭಾರತ ಎಷ್ಟೇ ಮುಂದುವರೆದ್ರೂ ಹೆಣ್ಣಿನ ಶೋಷಣೆಗೆ ಮಾತ್ರ ಫುಲ್ ಸ್ಟಾಪ್ ಬಿದ್ದಿಲ್ಲ. ಹೆಣ್ಣಿನ ಮೇಲೆ ನಿರಂತರ ಶೋಷಣೆ ನಡೆಯುತ್ತಲೇ ಇದೆ. ಹೆಣ್ಣು ಭ್ರೂಣ ಹತ್ಯೆ, ಬಾಲ್ಯವಿವಾಹ, ಗಂಡು-ಹೆಣ್ಣು ಮಕ್ಕಳ ನಡುವೆ ತಾರತಮ್ಯ, ಕೌಟುಂಬಿಕ ದೌರ್ಜನ್ಯ ಇದಕ್ಕೆ ದೊಡ್ಡ ಉದಾಹರಣೆ. ಅದರಲ್ಲೂ ವರದಕ್ಷಿಣೆ ಅತಿ ದೊಡ್ಡ ದುಸ್ವಪ್ನವಾಗಿ ಹೆಣ್ಣುಮಕ್ಕಳನ್ನು ಕಾಡ್ತಿದೆ. ಗಂಡಿನ ಕಡೆಯವರು ವರದಕ್ಷಿಣೆ ಹೆಸರಲ್ಲಿ ದೊಡ್ಡ ದೊಡ್ಡ ಡಿಮ್ಯಾಂಡ್‌ನ್ನು ಮುಂದಿಡುತ್ತಾರೆ. ಲಕ್ಷಗಟ್ಟಲೆ ಹಣ, ಬಂಗಲೆ, ಕಾರು, ಒಡವೆಗಳನ್ನು ಕೇಳುತ್ತಾರೆ.
ಫಾರ್ಚೂನರ್ ಕಾರು ಕೊಡಲ್ಲಿಲ್ಲವೆಂದು ಮದ್ವೆ ಕ್ಯಾನ್ಸಲ್ ಮಾಡಿದ ವರ
ಇವತ್ತಿನ ಕಾಲದಲ್ಲಿ ವರದಕ್ಷಿಣೆ (Dowry)ಯನ್ನು ಪಿಡುಗು ಎಂಬಂತೆ ಪರಿಗಣಿಸದೆ ಫ್ಯಾಷನ್ ಎಂಬಂತೆ ನೋಡಲಾಗುತ್ತಿದೆ. ಹೀಗಾಗಿಯೇ ಪುರುಷರು ಹೆಚ್ಚೆಚ್ಚು ವರದಕ್ಷಿಣೆ ಕೇಳುವತ್ತ ಉತ್ಸಾಹ ತೋರುತ್ತಿದ್ದಾರೆ. ವರದಕ್ಷಿಣೆಗಾಗಿ ಹೆಣ್ಣಿನ ಕಡೆಯವರಿಗೆ ಕಾಟ ಕೊಡುವುದು ಸಹ ಹೊಸತೇನಲ್ಲ. ಕೆಲವೊಬ್ಬರು ಹೇಳಿದಷ್ಟು ವರದಕ್ಷಿಣೆ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿಬಿಡುತ್ತಾರೆ. ಹಾಗೆಯೇ ಉತ್ತರ ಪ್ರದೇಶದಲ್ಲೊಬ್ಬ ವರ (Groom), ವಧುವಿನ (Bride) ಕಡೆಯವರು ತಾನು ಡಿಮ್ಯಾಂಡ್ ಮಾಡಿದ ಫಾರ್ಚೂನರ್ ಕಾರು ಕೊಡಲ್ಲಿಲ್ಲವೆಂಬ ಕಾರಣಕ್ಕೆ ಮದುವೆಯೇ ಬೇಡ ಅಂದಿದ್ದಾನೆ.
Dowry Deaths: ವರದಕ್ಷಿಣೆ ಕಾಟಕ್ಕೆ ಪ್ರತಿ ದಿನ ಸಾಯ್ತಿದ್ದಾರೆ ಇಷ್ಟೊಂದು ಮಹಿಳೆಯರು!
ಹೌದು, ಉತ್ತರ ಪ್ರದೇಶದ ಸರ್ಕಾರಿ ಕಾಲೇಜು ಉಪನ್ಯಾಸಕನಾಗಿದ್ದ (Lecturer) ಸಿದ್ಧಾರ್ಥ್ ವಿಹಾರ್, ವರದಕ್ಷಿಣೆ ರೂಪದಲ್ಲಿ ವಧುವಿನ ಕಡೆಯವರಿಂದ ಫಾರ್ಚೂನರ್ ಕಾರು ಬೇಕೆಂಬ ಬೇಡಿಕೆಯಿಟ್ಟಿದ್ದ. ಅದು ಮದುವೆಗೇ (Marriage) ಕೇವಲ ಒಂದು ತಿಂಗಳು ಇರುವಾಗ ಈ ಬೇಡಿಕೆ ಸಲ್ಲಿಸಲಾಗಿತ್ತು. ಆದ್ರೆ ಕಾರಣಾಂತರಗಳಿಂದ ವಧುವಿನ ಕಡೆಯವರಿಗೆ ಕಾರನ್ನು ಕೊಡಲು ಸಾಧ್ಯವಾಗಿಲ್ಲ. ಇದರಿಂದ ಸಿಟ್ಟಿಗೆದ್ದ ವರ ಮದುವೆ ಕ್ಯಾನ್ಸಲ್ ಮಾಡಿದ್ದಾನೆ. ಮಂಟಪದಿಂದಲೇ ಎದ್ದು ಹೋಗಿದ್ದಾನೆ. ಯುಪಿಯ ಗಾಜಿಯಾಬಾದ್‌ನಿಂದ ಈ ಘಟನೆ ವರದಿಯಾಗಿದೆ. ತಾವು ಕೇಳಿದ ವರದಕ್ಷಿಣೆ ದೊರೆಯುತ್ತಿಲ್ಲ ಎಂದು ತಿಳಿದಾಗ ಉಪನ್ಯಾಸಕರು ಮಹಿಳೆಗೆ ಸರಳವಾಗಿ ಸಂದೇಶ ರವಾನಿಸಿ ಮದುವೆಯನ್ನು ರದ್ದು (Cancel)ಗೊಳಿಸಿದ್ದಾರೆ.
ಈ ಹಿಂದೆ ವ್ಯಾಗನಾರ್ ಕಾರು ನೀಡಿದ್ದ ವಧುವಿನ ಕುಟುಂಬ
ಅಕ್ಟೋಬರ್ 10, 2022ರಂದು, ಮಹಿಳೆಯ ಕುಟುಂಬವು ವರನಿಗೆ ಉಡುಗೊರೆಯಾಗಿ ವ್ಯಾಗನಾರ್ ಕಾರನ್ನು ಕಾಯ್ದಿರಿಸಿದೆ. ಇದರ ಬೆನ್ನಲ್ಲೇ, ವರನ ಕುಟುಂಬದ ಸದಸ್ಯರು ವಧುವಿನ ಮನೆಗೆ ಬಂದು ವ್ಯಾಗನಾರ್ ಬದಲಿಗೆ ಫಾರ್ಚೂನರ್ ಕಾರನ್ನು ಕೇಳಿದರು. ಆದರೆ, ವಧುವಿನ ಕುಟುಂಬವು ಅವರ ಬೇಡಿಕೆಯನ್ನು ನಿರಾಕರಿಸಿತು. ಹೀಗಾಗಿ ನವೆಂಬರ್ 23, ಉಪನ್ಯಾಸಕರು ಮದುವೆಯನ್ನು ರದ್ದುಗೊಳಿಸಿದರು. ಕಾಲೇಜು ಶಿಕ್ಷಕನ ವಿರುದ್ಧ ಐಪಿಸಿ ಸೆಕ್ಷನ್ 506 ಮತ್ತು ವರದಕ್ಷಿಣೆ ಕಾಯ್ದೆಯಡಿ ಕ್ರಿಮಿನಲ್ ಬೆದರಿಕೆ ಆರೋಪ ಹೊರಿಸಲಾಗಿದೆ.
11 ಲಕ್ಷ ರೂ. ವರದಕ್ಷಿಣೆಯನ್ನು ವಧುವಿನ ಪೋಷಕರಿಗೇ ಹಿಂತಿರುಗಿಸಿದ ವರ !
ಈ ಹಿಂದೆಯೂ ಉತ್ತರಪ್ರದೇಶದಲ್ಲಿ ಮಂಟಪದಲ್ಲೇ ವಧು ಮದುವೆಯನ್ನು ರದ್ದುಗೊಳಿಸಿದ್ದಳು. ದಂಪತಿ ಪರಸ್ಪರ ಹಾರ ವಿನಿಮಯ ಮಾಡಿಕೊಂಡು ಸಪ್ತಪದಿ ತುಳಿದ ಬಳಿಕ ವಧು ನೀತಾ ಯಾದವ್ ತನಗೆ ಈ ಮದುವೆ ಬೇಡ ಅಂದಿದ್ದಳು. ಮಾತ್ರವಲ್ಲ, ಹುಡುಗನ ತುಂಬಾ ಕಪ್ಪಾಗಿದ್ದಾನೆ ಎಂದು ಹೇಳಿದ್ದಳು.ಕುಟುಂಬ ಸದಸ್ಯರು ಮನವೊಲಿಸಲು ಯತ್ನಿಸಿದರೂ ವಧು ಕೇಳಲ್ಲಿಲ್ಲ. ಕೊನೆಗೆ ವರ ಮತ್ತು ಅವರ ಕುಟುಂಬ ಆರು ಗಂಟೆಗಳಿಗೂ ಹೆಚ್ಚು ಸಮಯ ಕಾದ ಬಳಿಕ ವಾಪಾಸ್ ಹೋಗಲು ನಿರ್ಧರಿಸಿದರು. ನಂತರ ವಧುವಿಗೆ ಉಡುಗೊರೆಯಾಗಿ ನೀಡಿದ್ದ ಸಾವಿರಾರು ರೂಪಾಯಿ ಚಿನ್ನಾಭರಣಗಳನ್ನು ವಾಪಾಸ್ ನೀಡಿಲ್ಲ ಎಂದು ವರನ ತಂದೆ ಇದೀಗ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಅದೇನೆ ಇರ್ಲಿ, ಜನ್ಮ ಜನ್ಮದ ಸಂಬಂಧ ಎಂದು ಕರೆಸಿಕೊಳ್ಳುವ ಮದುವೆಯೆಂಬ ಸುಂದರವಾದ ಸಂಬಂಧಕ್ಕೀಗ ಅರ್ಥವೇ ಇಲ್ಲದಂತಾಗಿದೆ. ಇವತ್ತಿನ ದಿನಗಳಲ್ಲಿ ಜನರು ಸಣ್ಣಪುಟ್ಟ ಕಾರಣಕ್ಕೂ ಮದ್ವೆ ಕ್ಯಾನ್ಸಲ್ ಮಾಡಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ. ಅದರಲ್ಲೂ ಎಲ್ಲರಿಗೂ ತಿಳಿಹೇಳಬೇಕಾದ, ವರದಕ್ಷಿಣೆಯ ವಿರುದ್ಧ ಮಾತನಾಡಬೇಕಾದ ಶಿಕ್ಷಕನೇ ಕಾರು ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ಮದುವೆ ರದ್ದುಗೊಳಿಸಿರೋದು ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತದೆ.