
ಅವಳಿ ಮಕ್ಕಳಿಗೆ ಇದೀಗ 19 ವರ್ಷ. ಆದರೆ ಒಡಹುಟ್ಟಿದವಳೊಬ್ಬಳು ಇದ್ದಾಳೆ ಅನ್ನೋ ಮಾಹಿತಿ ಇವರಿಬ್ಬರಿಗೂ ಇರಲಿಲ್ಲ. ತಾವು ಬೆಳೆಯುತ್ತಿದ್ದ ಮನೆಯಲ್ಲಿದ್ದವರೇ ತನ್ನ ಪೋಷಕರು, ಕುಟುಂಬಸ್ಥರು ಎಂದುಕೊಂಡಿದ್ದರು. ಆದರೆ ಟಿಕ್‌ಟಾಕ್ ಇವರಿಬ್ಬರನ್ನು ಒಂದು ಮಾಡುವಲ್ಲಿ ಯಶಸ್ವಿಯಾಗಿದೆ. 19 ವರ್ಷದ ಬಳಿಕ ಈ ಅವಳಿಗಳು ಒಂದಾಗಿದ್ದಾರೆ. ಇಷ್ಟೇ ಅಲ್ಲ ತಮ್ಮ ತಾಯಿಯನ್ನು ಪತ್ತೆಹಚ್ಚಿದ್ದಾರೆ. ಆದರೆ ಈ 19 ವರ್ಷದ ಪಯಣ, ಜನನ ಪಡೆದ ಮರುಕ್ಷಣದಲ್ಲಿ ಅನುಭವಿಸಿದ ಯಾತನೆ ಎಂತವಹರ ಕಣ್ಣಲ್ಲೂ ನೀರು ಜಿನುಗಿಸುತ್ತದೆ.
ಆ್ಯಮಿ ಖವಿಟಿಯಾ ಹಾಗೂ ಆ್ಯನೂ ಸರ್ತಾನಿ ಅವಳಿ ಜವಳಿ. ಆದರೆ ಇವರಿಬ್ಬರಿಗೂ ಈ ವಿಚಾರ ಗೊತ್ತೇ ಇರಲಿಲ್ಲ. ಇಬ್ಬರು ಬೇರೆ ಬೇರೆ ಮನೆಯಲ್ಲಿ ಬೆಳೆದಿದ್ದಾರೆ. ತಾವಿದ್ದ ಮನೆಯ ಸದಸ್ಯರೇ ತನ್ನ ಬಂಧು ಬಳಗ ಎಂದುಕೊಂಡಿದ್ದರು. ಹೀಗಿರುವ ಜಾರ್ಜಿಯಾ ಗಾಟ್ ಟಾಲೆಂಟ್ ರಿಯಾಲಿಟಿ ಶೋ ನೋಡುತ್ತಿದ್ದ ಆ್ಯಮಿ ಖವಿಟಿಯಾಗೆ ಕರೆಂಟ್ ಶಾಕ್ ಹೊಡೆದ ಅನುಭವ. ಕಾರಣ ಈ ವೇದಿಕೆಯಲ್ಲಿ ಕಾಣಿಸಿಕೊಂಡ ಯುವತಿ ತನ್ನಂತೆ ಇದ್ದಾಳೆ. ಇದು ಹೇಗೆ ಸಾಧ್ಯ? ಮುಖ, ಮಾತು, ನಡೆ, ಎಲ್ಲವೂ ತನ್ನಂತಿದೆ ಎಂದು ಅಚ್ಚರಿಕೊಂಡಿದ್ದಾಳೆ.
ಬಾಲ್ಯದಲ್ಲಿ ನಾಪತ್ತೆಯಾದ ಬಾಲಕ 20 ವರ್ಷದ ಬಳಿಕ ಮರಳಿ ಪೋಷಕರ ಮಡಿಲಿಗೆ
ಇತ್ತ ಆ್ಯನೂ ಟಿಕ್‌ಟಾಕ್ ವಿಡಿಯೋಗಳನ್ನು ನೋಡುತ್ತಿದ್ದ ವೇಳೆ ಆ್ಯಮಿಯ ವಿಡಿಯೋ ಒಂದನ್ನು ನೋಡಿದ್ದಾಳೆ. ಇರೇ ಇದೇನಿದು. ಈಕೆ ತನ್ನಂತೆ ಇದ್ದಾಳೆ. ಎತ್ತರ, ತೂಕ, ಮುಖ ಚರ್ಚೆ, ಕಣ್ಣುಗಳು ಎಲ್ಲವೂ ತನ್ನಂತಿದೆ. ಈಕೆಯ ನೋಡುತ್ತಿದ್ದಾಗ ಅದೇನು ಹೊಳೆದಂತಾಗುತ್ತಿದೆ ಎಂದು ತೀವ್ರ ತಲೆಕೆಡಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಭೇಟಿಯಾಗುವ, ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಪ್ರಯತ್ನವನ್ನೂ ಇಬ್ಬರು ಮಾಡಿದ್ದಾರೆ.
ಇಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಚಾಟ್ ಮಾಡಿದ್ದಾರೆ. ಬಳಿಕ ಭೇಟಿಯಾಗಲು ನಿರ್ಧರಿಸಿದ್ದಾರೆ. ಇಬ್ಬರು ಭೇಟಿಯಾಗಿದ್ದಾರೆ, ಸಂತಸಕ್ಕೆ ಪಾರವೇ ಇರಲಿಲ್ಲ. ಆದರೆ ಇಬ್ಬರು ಬೇರೆ ಬೇರೆ ಮನೆಯಲ್ಲಿ ಬೆಳೆದಿದ್ದಾರೆ. ನಾವೀಗ ಬೆಳೆಯುತ್ತಿರುವ ಮನೆಯ ಸದಸ್ಯರೇ ನಮ್ಮ ಸಂಬಂಧಿಕರೇ, ಪೋಷಕರೇ ಅನ್ನೋ ಅನುಮಾನಗಳು ಕಾಡತೊಡಗಿದೆ. ಇತ್ತ ಬೇರ್ಪಟ್ಟ ಮಕ್ಕಳು, ಕುಟುಂಬಗಳನ್ನು ಒಂದೂಗೂಡಿಸುವ ಫೇಸ್‌ಬುಕ್ ಗ್ರೂಪ್ ಸಂಪರ್ಕಿಸಿ ಮಾಹಿತಿ ನೀಡಿದ್ದಾಳೆ. ಇಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾಳೆ.
ಈಕೆಯ ಪೋಸ್ಟ್‌ಗೆ ಜರ್ಮನಿಯಿಂದ ಪ್ರತಿಕ್ರಿಯೆ ಬಂದಿದೆ. ಈ ಪ್ರತಿಕ್ರಿಯೆ ನೋಡಿ ಆ್ಯಮಿ ಹಾಗೂ ಆ್ಯನೋ ಮನಸ್ಸು ಭಾರವಾಗಿದೆ.ಕಾರಣ ಅಝಾ ಶೋನಿ ಅನ್ನೋ ಮಹಿಳೆ 2002ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಹೆರಿಗೆ ಬೆನ್ನಲ್ಲೇ ಅಝಾ ಶೋನಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಕೋಮಾಗೆ ಜಾರಿದ್ದರು. ಈ ವೇಳೆ ಅವಳಿ ಮಕ್ಕಳ ತಂದೆ ನಾನು ಇಬ್ಬರು ಮಕ್ಕಳನ್ನು ಹೇಗೆ ಸಾಕಲಿ ಎಂದು ಇಬ್ಬರನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ.
ಇಬ್ಬರು ಕೂಡ ಬೇರೆ ಬೇರೆ ಕುಟುಂಬಗಳಿಗೆ ಮಾರಾಟ ಮಾಡಿದ್ದಾರೆ. ಆ್ಯಮಿಯನ್ನು ಜಾರ್ಜಿಯಾದ ಜುಗ್ದಿದಿ ಅನ್ನೋ ಪ್ರಾಂತ್ಯದಲ್ಲಿ ಬೆಳೆದರೆ, ಆ್ಯನೋ ಟಿಬಿಲಿಸಿಯಲ್ಲಿ ಬೆಳೆದಿದ್ದಾಳೆ. ಅಕ್ರಮವಾಗಿ ಮಕ್ಕಳನ್ನು ಖರೀದಿಸಿದ ಕುಟುಂಬಕ್ಕೆ ಇವರು ಟ್ವಿನ್ಸ್ ಎಂದು ಗೊತ್ತಿರಲಿಲ್ಲ. ಈ ಮಾಹಿತಿ ಪಡೆದ ಆ್ಯಮಿ ಹಾಗೂ ಆ್ಯನೋ ತಮ್ಮ ತಾಯಿಯನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ.
ಇದ್ದರೆ ಇರಬೇಕು ನಿನ್ನಂಥ ಅಪ್ಪ..!ಕಿಡ್ನ್ಯಾಪ್ ಆದ ಮಗನನ್ನೂ 24 ವರ್ಷದ ಬಳಿಕ ಮರಳಿ ಪಡೆದ!
ಸಾಮಾಜಿಕ ಮಾಧ್ಯಮ ಸೇರಿದಂತೆ ಇತರರ ನೆರವು ಪಡೆದು ಮಾಹಿತಿ ನೀಡಿದ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ. ಬಳಿಕ ಅವರು ನೀಡಿದ ಮಾಹಿತಿಯಂತೆ ತಾಯಿಯನ್ನು ಭೇಟಿ ಮಾಡಿದ್ದಾರೆ. 2002ರಲ್ಲಿ ಅವಳಿ ಮಕ್ಕಳನ್ನು ಹೆತ್ತು ಕೋಮಾಗೆ ಜಾರಿದ್ದ ಮಹಿಳೆ ಸರಿಸುಮಾರು ಒಂದು ವರ್ಷಗಳ ಕಾಲ ಕೋಮಾದಲ್ಲಿ ಚಿಕಿತ್ಸೆ ಪಡೆದು ಕೋಮಾದಿಂದ ಹೊರಬಂದಿದ್ದರು. ಈ ವೇಳೆ ಮೊದಲು ಕೇಳಿದ ಪ್ರಶ್ನೆ ತನ್ನ ಮಕ್ಕಳೆಲ್ಲಿ ಎಂದು? ಹುಟ್ಟಿದ ಮರುಕ್ಷಣವೇ ಇಬ್ಬರು ಸಾವನ್ನಪ್ಪಿದ್ದರು ಎಂದು ತಾಯಿಗೆ ಹೇಳಲಾಗಿತ್ತು. ಆದರೆ ಅಸಲಿಗೆ ನಡೆದಿದ್ದೇ ಬೇರೆ. ಇದೀಗ ಅವಳಿ ಮಕ್ಕಳು, ತಾಯಿ ಒಂದಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.