ಇದ್ದರೆ ಇರಬೇಕು ನಿನ್ನಂಥ ಅಪ್ಪ..!ಕಿಡ್ನ್ಯಾಪ್ ಆದ ಮಗನನ್ನೂ 24 ವರ್ಷದ ಬಳಿಕ ಮರಳಿ ಪಡೆದ!
ಒಂದಲ್ಲ, ಎರಡಲ್ಲ, ಬರೋಬ್ಬರಿ 24 ವರ್ಷ ಅಲೆದಾಡಿದ್ದ. ಕೊನೆಗೂ ತನ್ನ ಕಿಡ್ನಾಪ್ ಆಗಿದ್ದ ಮಗನ ಹುಡುಕುವಲ್ಲಿ ಅಪ್ಪ ಯಶಸ್ವಿಯಾಗಿದ್ದಾನೆ. ಪೊಲೀಸ್ ಸೇರಿದಂತೆ ಯಾರ ಸಹಾಯವೂ ಇಲ್ಲದೆ ಮಗನ ಹುಡುಕಿ ಬಿಗಿದಪ್ಪಿ ಕಣ್ಣೀರಿಟ್ಟ ಅಪ್ಪನ ರೋಚಕ ಪಯಣ ಇಲ್ಲಿದೆ.
ಶೋಭಾ ಎಂ.ಸಿ, ಔಟ್ ಪುಟ್ ಹೆಡ್, ಏಷ್ಯಾನೆಟ್ ಸುವರ್ಣ ನ್ಯೂಸ್
ಅಪ್ಪ..! ಮಕ್ಕಳ ಪಾಲಿನ ಮೊದಲ ಹೀರೋ. ಅಪ್ಪ ಅನ್ನೋ ಹೆಸರಲ್ಲೇ ಒಂದು ಗಾಂಭೀರ್ಯವಿದೆ, ಗೌರವವಿದೆ, ಎಂದೆಂದೂ ಮುಗಿಯದ ಪ್ರೀತಿಯ ಕಣಜ. ಮಕ್ಕಳಿಗಾಗಿ ದುಡಿಯುತ್ತಲೇ, ತನ್ನ ಕಸುವ ಕೊಳ್ಳುವ ಅಪ್ಪಂದಿರ ತ್ಯಾಗದ ಬಗ್ಗೆ ಅನೇಕ ಕಥೆಗಳಿವೆ. ಆದರೆ, ಈಗ ಹೇಳಲು ಹೊರಟಿರುವವನ ಕಥೆ, ಸಿನಿಮಾದಲ್ಲಷ್ಟೇ ಕೇಳಿ, ನೋಡಿರಬಹುದು ಎಂದುಕೊಂಡರೆ ಸುಳ್ಳು. ಇದು ಸತ್ಯ ಕಥೆ. ತನ್ನ ಮಗನನ್ನು ಪತ್ತೆ ಹಚ್ಚಲು ಒಂದಲ್ಲ, ಎರಡಲ್ಲ ಬರೋಬ್ಬರಿ 24 ವರ್ಷ ಹೋರಾಡಿದ ಅಪ್ಪನ ಕಥೆ.
ಆತನ ಹೆಸರು ಗುವೋ ಗಾಂಗ್ಟಾಂಗ್. ಚೀನಾದ ಶಾನಡಾಂಗ್ ಎಂಬ ಸಣ್ಣ ಊರಿನಲ್ಲಿ ಶಿಕ್ಷಕ. 1997ರ ಅದೊಂದು ದಿನ ಗುವೋ ಕಣ್ಣೆದುರೇ ಎರಡೂವರೆ ವರ್ಷದ ಮಗ ಗುವೋ ಕ್ಸಿನ್ಝೆನ್ ನನ್ನು ಮಹಿಳೆಯೊಬ್ಬಳು ಕಿಡ್ನ್ಯಾಪ್ ಮಾಡಿಬಿಡುತ್ತಾಳೆ. ಬೀಜಿಂಗ್ಗೆ ಹೊತ್ತೊಯ್ದ ಆ ಮಹಿಳೆ, ಮಗುವನ್ನು ದಂಪತಿಯೊಬ್ಬರಿಗೆ ಮಾರಿಬಿಡುತ್ತಾಳೆ. ಮಗನನ್ನು ಕಳೆದುಕೊಂಡು ಕಂಗಾಲಾದ ಗುವೋ ದಂಪತಿ, ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನವಾಗಲಿಲ್ಲ. ಯಾಕಂದ್ರೆ, ಚೀನಾದಲ್ಲಿ ಮಕ್ಕಳ ಅಪಹರಣ, ಮಕ್ಕಳ ಕಳ್ಳಸಾಗಣೆ ದೊಡ್ಡ ಸುದ್ದಿಯೇ ಅಲ್ಲ. ಕಿಡ್ನ್ಯಾಪ್ ಆದ ಮಕ್ಕಳು ವಾಪಸ್ ಪೋಷಕರ ಮಡಿಲು ಸೇರಿದ್ದೂ ಕಡಿಮೆಯೇ. ಇದರನ್ನು ಅರಿತಿದ್ದ ಗುವೋ, ಕುಸಿದು ಬಿಟ್ಟ. ಪೊಲೀಸರನ್ನು ನಂಬಿದರೆ ಪ್ರಯೋಜವಿಲ್ಲ ಎಂದು ಅರಿತ ಗುವೋ, ಮಗನನ್ನು ಹುಡುಕು ನಿರ್ಧರಿಸಿಬಿಟ್ಟ.
2015ರಲ್ಲಿ ತೆರೆಕಂಡ ‘Lost and Love’ ಚಿತ್ರದಿಂದ ಪ್ರೇರಣೆಗೊಂಡಿದ್ದ ಗುವೋ, ಮಗನಿಲ್ಲದೇ ಬದುಕಿಲ್ಲ ಎಂದು ಕೊಂಡು, ಪತ್ತೆಗೆ ಇಳಿದೇ ಬಿಟ್ಟ. ಕೆಲಸ ಬಿಟ್ಟ, ಹೆಂಡತಿ, ಇನ್ನಿಬ್ಬರನ್ನೂ ಬಿಟ್ಟ, ಊಟ, ನಿದ್ದೆ ತೊರೆದು, ಮಗನಿಗಾಗಿ ಹಂಬಲಿಸಿ ಊರು ಬಿಟ್ಟ. ಬೈಕ್ನಲ್ಲಿ ತನ್ನ ಮಗನ ದೊಡ್ಡ ಭಾವಚಿತ್ರ ಕಟ್ಟಿಕೊಂಡು, ಬರೋಬ್ಬರಿ 24 ವರ್ಷ, ಚೀನಾದ 34 ಪ್ರಾಂತ್ಯದ ಹಳ್ಳಿ ಹಳ್ಳಿಯಲ್ಲೂ ತಿರುಗಿಬಿಟ್ಟ. ಒಟ್ಟು 5 ಲಕ್ಷ ಕಿಮೀ ಸಂಚರಿಸಿದ ಗುವೋ, 10 ಬೈಕ್ ಬದಲಿಸಿದ್ದ. ಆಗ ಗುವೋ ವಯಸ್ಸು ಕೇವಲ 27 ವರ್ಷ.
ಗಂಡಾಗಿ ಹುಟ್ಟಿ ಹೆಣ್ಣಾಗಿ, 11 ವರ್ಷಕ್ಕೆ ಅತ್ಯಾಚಾರದಲ್ಲಿ ಬೆಂದ ನಾಝಾಗೆ ಒಲಿದ ಅಂತಾರಾಷ್ಟ್ರೀಯ ಕಿರೀಟ!
ಮಗನ ಫೋಟೋ, ಬಲಗಡೆ ಪಾದದಲ್ಲಿ ಗಾಯದ ಕಲೆಯ ಮಾಹಿತಿ ಹಿಡಿದುಕೊಂಡು, ಪೊಲೀಸ್ ಠಾಣೆಗಳನ್ನು ಸುತ್ತಿದ.
2012ರಲ್ಲಿ ಕಾಣೆಯಾದ ಮಕ್ಕಳ ಪತ್ತೆಗೆ ವೆಬ್ಸೈಟ್ ಆರಂಭಿಸಿದ ಗುವೋ, ಕಿಡ್ನ್ಯಾಪ್ ಆಗಿದ್ದ ನೂರಾರು ಮಕ್ಕಳು, ಹೆತ್ತವರ ಮಡಿಲು ಸೇರುವಂತೆ ಮಾಡಿದ್ದ. ಇಷ್ಟಾದರೂ, ಗುವೋ ತನ್ನ ಮಗನನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಹಠ ಬಿಡದ ತ್ರಿವಿಕ್ರಮನಂತೆ ಹುಡುಕಾಟ ನಡೆಸಿದ್ದ ಗುವೋ, ದೊಡ್ಡನಾದಾಗ ತನ್ನ ಮಗ ಹೇಗಿರಬಹುದೆಂಬ ಕಲ್ಪನೆಯಲ್ಲಿ ಇಮೇಜ್ ಸಿದ್ಧಪಡಿಸಿದ್ದ. ಮಗುವಿನ ಫೋಟೋ, ಡಿಎನ್ಎ ವರದಿ ಆಧರಿಸಿ ಕೊನೆಗೂ 2021ರ ಜುಲೈನಲ್ಲಿ ಗುವೋ ತನ್ನ ಮಗನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ಬಿಟ್ಟ.
ಆಗ ಗುವೋಗೆ 51 ವರ್ಷ, ಕಾಣೆಯಾಗಿದ್ದ ಮಗನಿಗೆ 26 ವರ್ಷ.
ಬೆಳೆದು ನಿಂತ ಮಗನನ್ನು ಅಪ್ಪಿಕೊಂಡ ಗುವೋ ಕಣ್ಣಲ್ಲಿ ಧಾರಾಕಾರ ನೀರು.
ಯುದ್ಧಗೆದ್ದಷ್ಟೇ ಸಂತಸದಲ್ಲಿ ಮಗನನ್ನು ಬಾಚಿತಬ್ಬಿದ ಗುವೋ, ಕೊನೆಗೂ ತನ್ನ ಹೋರಾಟ ಸಾರ್ಥಕವಾಯ್ತೆಂದು ನಿಟ್ಟುಸಿರು ಬಿಟ್ಟಿದ್ದ. ಅಪ್ಪನ ಸಾಹಸ, ಹೋರಾಟವನ್ನು ಅರಿತ ಮಗ ಗುವೋ ಕ್ಸಿನ್ಝೆನ್, ‘He is a great father, i am proud of him’ ಎಂದಾಗ, ಆ ಅಪ್ಪನ ಕಣ್ಣಲ್ಲಿ ಅದೆಂಥಾ ಸಾರ್ಥಕತೆ ಕಂಡಿತ್ತು ಗೊತ್ತಾ ?
ನಾನು ಬದುಕೋದು ಆರೇ ತಿಂಗಳು, ಅಪ್ಪ ಅಮ್ಮನಿಗೆ ಹೇಳಬೇಡಿ ಪ್ಲೀಸ್, 6 ವರ್ಷದ ಬಾಲಕನ ಮಾತಿಗೆ ಡಾಕ್ಟರ್ ಕಣ್ಣೀರು!
ಇಡೀ ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಗುವೋ ಪರ ಬಹುಪರಾಕ್.
ಇಬ್ಬರು ಮಕ್ಕಳಿದ್ದರೂ, ಕಳೆದುಹೋದ ಮಗನಿಗಾಗಿ ಹಂಬಲಿಸಿದ ಗುವೋ, ತನಗೆ ಮಕ್ಕಳೇ ಇಲ್ಲ ಎಂದುಕೊಂಡು, ಕಿಡ್ನ್ಯಾಪ್ ಆದ ಮಗನ ಹುಡುಕಾಟ ನಡೆಸಿದ್ದನಂತೆ. ‘ಮಗನನ್ನು ಕಳೆದುಕೊಂಡು ಬದುಕಿದ್ರೆ ಏನ್ ಪ್ರಯೋಜನ’ ಎಂದು ಪ್ರಶ್ನಿಸುವ ಗುವೋ, ಮಗನನ್ನು ಹುಡುಕದಿದ್ದ ಮೇಲೆ ನಾನೆಂಥ ಅಪ್ಪ’ ಎಂದು ಗರ್ವದಿಂದ ಹೇಳುತ್ತಿದ್ರೆ, ಮಕ್ಕಳನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದ ಸಾವಿರಾರು ಹೆತ್ತವರ ಪಾಲಿಗೆ ಮಾದರಿ ಎನಿಸಿದ್ದ.
ಗುವೋ ಕ್ಸಿನ್ಝೆನ್, ಕಿಡ್ನ್ಯಾಪ್ ಮಾಡಿದ್ದ ಮಹಿಳೆ, ಆಕೆಯ ಬಾಯ್ಫ್ರೆಂಡ್ ಜೈಲು ಪಾಲಾಗಿದ್ದಾರೆ, ಮಗುವನ್ನು ದತ್ತು ಪಡೆದಿದ್ದ ದಂಪತಿ ಕಂಗಾಲಾಗಿದ್ದಾರೆ. ಆದ್ರೆ, 24 ವರ್ಷ ಮಗನನ್ನು ಸಾಕಿ, ಬೆಳೆಸಿದ ದಂಪತಿಗೆ ಪರ ಗುವೋಗೆ ಅಪಾರ ಪ್ರೀತಿ ಇದೆ. ದತ್ತು ಪಡೆದ ದಂಪತಿ ಭೇಟಿಯಾಗಲು ಮಗನಿಗೆ ಅವಕಾಶ ನೀಡಿದ್ದಾನೆ. ಈ ರೀತಿ ಕಿಡ್ನ್ಯಾಪ್ ಆದ ಮಕ್ಕಳು ಸಿಗದೇ ಲಕ್ಷಾಂತರ ಪೋಷಕರು ಕೈಚೆಲ್ಲಿದ್ದಾರೆ. ಪೊಲೀಸರ ವೈಫಲ್ಯವನ್ನು ಹಳಿಯುತ್ತಾ, ಬದುಕು ಸಾಗಿಸಿದ್ದಾರೆ. ಆದ್ರೆ, ಮಗನನ್ನು ಮರಳಿ ಪಡೆಯಲೇಬೇಕೆಂಬ ಗುವೋ ಗಾಂಗ್ಟಾಂಗ್ ಛಲ ಎಲ್ಲರಿಗೂ ಮಾದರಿ. ಅದಕ್ಕೆ ಹೇಳೋದು ಅಪ್ಪ ಅಂದ್ರೆ ಬರೀ ಆಕಾಶ ಅಲ್ಲ, ಎಲ್ಲ ಮಕ್ಕಳ ರಿಯಲ್ ಹೀರೋ.!