ಸಾವು ಎಂದರೆ ಹಾಗೆಯೇ. ಕರೆಯದೆ ಬರುವ ಅತಿಥಿ. ಯಾವಾಗ, ಯಾಕೆ ಬರುತ್ತದೆಯೆಂದು ಹೇಳಲು ಸಾಧ್ಯವಿಲ್ಲ. ರಾಜಸ್ಥಾನದಲ್ಲಿ ಮುದ್ದಾದ ಅವಳಿ ಸಹೋದರರು ವಿಧಿಯ ಕ್ರೂರತನಕ್ಕೆ ಇನ್ನಿಲ್ಲವಾಗಿದ್ದಾರೆ. ಜೊತೆಯಾಗಿ ಹುಟ್ಟಿದ ಅವಳಿ ಅಣ್ತಮ್ಮ ಖುಷಿಯಿಂದ ಆಡಿ ನಲಿದು ಒಟ್ಟಿಗೇ ಸಾವನ್ನಪ್ಪಿದ್ದಾರೆ. ಅವಳಿ ಜೀವಗಳು ಒಟ್ಟಿಗೆ ಹುಟ್ಟಿದ್ದಷ್ಟೇ ಅಲ್ಲ, ಒಟ್ಟಿಗೆ ಸಾವು ಅಪ್ಪಿಕೊಂಡಿದ್ದು ಎಂಥ ಘೋರ..
ಶೋಭಾ ಎಂ.ಸಿ, ಔಟ್ ಪುಟ್ ಹೆಡ್, ಏಷ್ಯಾನೆಟ್ ಸುವರ್ಣ ನ್ಯೂಸ್
ಅವರಿಬ್ಬರು ಅವಳಿ ಮಕ್ಕಳು. ಒಂದು ನಿಮಿಷದ ಅಂತರದಲ್ಲಿ ಹುಟ್ಟಿದ ಅಣ್ತಮ್ಮ, ಸಾವಿನಲ್ಲೂ ಒಂದಾಗಿದ್ದು ಕೇವಲ ಒಂದು ಗಂಟೆ ಅಂತರದಲ್ಲಿ. ಹೃದಯವನ್ನೇ ಕಲಕುವ ಈ ಘಟನೆ ನಡೆದಿದ್ದು ರಾಜಸ್ಥಾನದ ವಾರ್ಮರ್ ಹಳ್ಳಿಯಲ್ಲಿ. 26 ವರ್ಷದ ಸುಮರ್, ಸೋಹನ್ ಅವಳಿ ಮಕ್ಕಳು. ಸುಮರ್ ಗುಜರಾತ್ನ ಸೂರತ್ನಲ್ಲಿ ಕೆಲಸ ಮಾಡ್ತಿದ್ರೆ, ಸೋಹನ್, ಜೈಪುರದಲ್ಲಿ ಶಿಕ್ಷಕ ವೃತ್ತಿ ಪರೀಕ್ಷೆಗೆ ತಯಾರಿ ನಡೆಸಿದ್ದ. ಅಣ್ಣ- ತಮ್ಮನದ್ದು ಒಂದೇ ರೂಪ ಅಷ್ಟೇ ಅಲ್ಲ, ಗುಣವೂ ಒಂದೇ. ಚಿಕ್ಕಂದಿನಿಂದಲೂ ಇಬ್ಬರೂ ಒಟ್ಟಿಗೆ ಆಡಿ ಬೆಳೆದವರು. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ಇಬ್ಬರ ನಡುವಿನ ಸೋದರತ್ವ, ಬಾಂಧವ್ಯ ಕಂಡು ಹೆತ್ತವರಷ್ಟೇ ಅಲ್ಲ, ಇಡೀ ಊರಿನವರು ಅಚ್ಚರಿಪಡುತ್ತಿದ್ದರು.
ಸುಮರ್ ಓದಿನಲ್ಲಿ ಅಷ್ಟೊಂದು ಚುರುಕಿರಲಿಲ್ಲ, ಆದರೆ, ಸೋಹನ್ ಬುದ್ಧಿವಂತ, ಓದಿನಲ್ಲೂ ಸದಾ ಮುಂದು. ಇದನ್ನು ಅರಿತಿದ್ದ ಸುಮರ್, ತಮ್ಮ ಸೋಹನ್ನನ್ನು ಸದಾ ಬೆಂಬಲಿಸುತ್ತಿದ್ದ, ಓದುವಂತೆ ಪ್ರೋತ್ಸಾಹಿಸುತ್ತಿದ್ದ. ಇದೇ ಕಾರಣಕ್ಕೆ ಸುಮರ್ ಸೂರತ್ನಲ್ಲಿ ಕೆಲಸಕ್ಕೆ ಸೇರಿ ದುಡಿಯಲು ತೊಡಗಿದ್ದ. ತಮ್ಮನನ್ನ ಓದಿಸಲು ಹಂಬಲಿಸುತ್ತಿದ್ದ. ಸೋಹನ್ಗೆ ಶಿಕ್ಷಕ ಹುದ್ದೆ ಕೊಡಿಸಬೇಕೆಂದು ಪಣ ತೊಟ್ಟಿದ್ದ.
ಇದ್ದರೆ ಇರಬೇಕು ನಿನ್ನಂಥ ಅಪ್ಪ..!ಕಿಡ್ನ್ಯಾಪ್ ಆದ ಮಗನನ್ನೂ 24 ವರ್ಷದ ಬಳಿಕ ಮರಳಿ ಪಡೆದ!
ಅವಳಿ ಮಕ್ಕಳ ಅಪರೂಪದ ಪ್ರೀತಿ ನೋಡಿ ಹೆತ್ತವರು (Parents) ಸಂಭ್ರಮಿಸುತ್ತಿದ್ರು. ಆದರೆ, ವಿಧಿ ಬರಹ ಎಂಥ ಘೋರ ಅಲ್ವಾ ? ಈ ಅವಳಿ ಅಣ್ತಮ್ಮರ ಪ್ರೀತಿಗೆ ಅದ್ಯಾರ ಕೆಟ್ಟ ದೃಷ್ಟಿ ಬಿತ್ತೊ ? ಮೊನ್ನೆ, ಸೂರತ್ನಲ್ಲಿದ್ದ ಸುಮರ್, ಬುಧವಾರ ರಾತ್ರಿ ಮನೆಯ ಟೆರೆಸ್ ಮೇಲೆ ಫೋನ್ನಲ್ಲಿ ಮಾತನಾಡುತ್ತಿದ್ದ ವೇಳೆ, ಆಕಸ್ಮಿಕವಾಗಿ ಕಾಲು ಜಾರಿ ಮೇಲಿದ್ದು ಬಿದ್ದು ಮೃತಪಟ್ಟ. ಸುಮರ್ ಸಾವಿನ ಸುದ್ದಿ ಇಡೀ ಕುಟುಂಬಕ್ಕೆ ಬರಸಿಡಿಲಂತೆ ಬಡಿದ್ರೆ, ಅಣ್ಣ ಸೋಹನ್ ಕುಸಿದು ಬಿಟ್ಟ. ತಮ್ಮನ ಸಾವಿನ (Death) ಅರಗಿಸಿಕೊಳ್ಳಲಾಗದೇ ಒದ್ದಾಡಿ ಬಿಟ್ಟ. ಮನೆಯಿಂದ ಹೊರಬಿದ್ದ ಸೋಹನ್ ವಾಪಸ್ ಬರಲೇ ಇಲ್ಲ.
ಮಗನಿಗಾಗಿ ಅಪ್ಪ- ಅಮ್ಮ ಹುಡುಕತೊಡಗಿದಾಗ, ನೀರಿನ ಟ್ಯಾಂಕರ್ನಲ್ಲಿ ಸೋಹನ್ ಹೆಣವಾಗಿ ಸಿಕ್ಕ. ಒಬ್ಬ ಮಗ ಟೆರೆಸ್ನಿಂದ ಬಿದ್ದು ಸತ್ತ ಸಾವಿನ ಆಘಾತದಲ್ಲಿದ್ದ ಹೆತ್ತವರರಿಗೆ ಮತ್ತೊಬ್ಬ ಮಗನ ಸಾವೂ ಮತ್ತೊಂದು ಆಘಾತವನ್ನುಂಟು ಮಾಡಿತ್ತು. ತಮ್ಮನ (Brother) ಸಾವಿನಿಂದ ನೊಂದು ಅಣ್ಣ ಸೋಹನ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಪೊಲೀಸರು. ಇದ್ದರೆ ಇರಬೇಕು ಇಂತಹ ಅಣ್ತಮ್ಮ ಎಂದು ಕಣ್ಣೀರಿಡುತ್ತಿದ್ದ ಇಡೀ ಗ್ರಾಮ, ಇಬ್ಬರ ಸಾವಿನಿಂದ ಮಮ್ಮಲ ಮರುಗಿತ್ತು. ಇಬ್ಬರ ಅಂತ್ಯಕ್ರಿಯೆಯನ್ನೂ ಒಟ್ಟಾಗಿ ನೆರವೇರಿಸುವ ಮೂಲಕ, ಸಾವಿನಲ್ಲೂ ಅಣ್ತಮ್ಮರನ್ನು ಒಂದುಗೂಡಿಸಿದ್ರು. ಅವಳಿ ಜೀವಗಳು (Twins) ಒಟ್ಟಿಗೆ ಹುಟ್ಟಿದ್ದಷ್ಟೇ ಅಲ್ಲ, ಒಟ್ಟಿಗೆ ಸಾವು ಅಪ್ಪಿಕೊಂಡಿದ್ದು ಎಂಥ ಘೋರ..!
ಗಂಡಾಗಿ ಹುಟ್ಟಿ ಹೆಣ್ಣಾಗಿ, 11 ವರ್ಷಕ್ಕೆ ಅತ್ಯಾಚಾರದಲ್ಲಿ ಬೆಂದ ನಾಝಾಗೆ ಒಲಿದ ಅಂತಾರಾಷ್ಟ್ರೀಯ ಕಿರೀಟ!