ಇವರು ಚಾಡಿ ಹೇಳ್ತಾರೆ, ಹುಷಾರ್!

By Suvarna NewsFirst Published Sep 14, 2020, 5:56 PM IST
Highlights

ನಿಮ್ಮ ಬಗ್ಗೆ ಬಾಸ್‌ ಹತ್ತಿರ, ಹಾಸ್ಟಲ್‌ ವಾರ್ಡನ್ ಹತ್ತಿರ ಚಾಡಿ ಹೇಳುವ ಕೆಲವರು ಇದ್ದೇ ಇರುತ್ತಾರೆ. ಆದರೆ ಅಂಥವರು ಯಾರೆಂದು ಪತ್ತೆ ಹಚ್ಚುವುದು ಸವಾಲು. ಈ ಕೆಳಗಿನ ಲಕ್ಷಣಗಳ ಮೂಲಕ ಅವರನ್ನು ನೀವು ಗುರುತಿಸಬಹುದು.

ಕೆಲವರು ಆಫೀಸ್‌ನಲ್ಲೋ, ಹಾಸ್ಟೆಲ್‌ನಲ್ಲೋ ಅಥವಾ ನೀವಿರುವ ಪಿಜಿಯಲ್ಲೋ ನಿಮ್ಮ ಅತ್ಯಂತ ಆತ್ಮೀಯರೆಂದು ನಟಿಸುತ್ತಾರೆ. ಆದರೆ ಆತ್ಮೀಯರಿಗೂ ನಯವಂಚಕರಿಗೂ ವ್ಯತ್ಯಾಸ ಗುರುತಿಸುವುದು ಸುಲಭವಲ್ಲ. ನಿಮ್ಮ ಬಳಿ ಆತ್ಮೀಯರಂತೆ ನಟಿಸಿ, ನಿಮ್ಮ ಒಳಗುಟ್ಟುಗಳನ್ನು ತಿಳಿದುಕೊಂಡು ಬಾಸ್‌ ಹತ್ತಿರ ಚಾಡಿ ಹೇಳುವವರೇ ಹೆಚ್ಚಿರುತ್ತಾರೆ. ಅಂಥವರು ಯಾರೆಂದು ಗುರುತಿಸುವುದು ಸವಾಲೇ ಆದರೂ ಕೆಲವು ಗುಣಲಕ್ಷಣಗಳ ಮೂಲಕ ಅವರನ್ನು ಗುರುತಿಸಬಹುದು.

- ಇವರು ನಿಮ್ಮ ಹತ್ತಿರ ಇರುವಾಗ ಇನ್ನೊಬ್ಬರ ಬಗ್ಗೆ ಸಿಕ್ಕಾಪಟ್ಟೆ ಚಾಡಿ ಹೇಳುತ್ತಿರುತ್ತಾರೆ. ಅದನ್ನು ನೀವೂ ಹೌದು ಹೌದು, ಈತ/ಈಕೆ ಎಲ್ಲವನ್ನೂ ನನ್ನ ಬಳಿ ಹೇಳುತ್ತಾಳ/ನಲ್ಲ, ಎಷ್ಟೊಂದು ಪ್ರಾಮಾಣಿಕ ವ್ಯಕ್ತಿ ಎಂದು ತಿಳಿಯುತ್ತಿರಬಹುದು. ಆದರೆ ಅವರು ನಿಮ್ಮ ಬಗ್ಗೆಯೂ ಇನ್ನೊಬ್ಬ ವ್ಯಕ್ತಿಯ ಬಳಿ ಅದೇ ರೀತಿ ಚಾಡಿ ಹೇಳುತ್ತಿರುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಆತ್ಮೀಯತೆ ವ್ಯಕ್ತಪಡಿಸುವುದು ಬೇರೆ, ಚಾಡಿ ಹೇಳುವುದು ಬೇರೆ.
- ಗೈರುಹಾಜರಾದ ದಿನ ಹಾಜರಿ ಹಾಕುವುದು, ಕೆಲಸ ಮುಗಿಸದಿದ್ದರೂ ಮುಗಿಸಿದ್ದೇನೆಂದು ಸುಳ್ಳು ಹೇಳುವುದು- ಮೊದಲಾದ ಸಣ್ಣಪುಟ್ಟ ಸಾಹಸಗಳನ್ನು ಮಾಡುವಂತೆ ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. ಆದರೆ ನೀವೆಲ್ಲಾದರೂ ಸಿಕ್ಕಿಬಿದ್ದರೆ, ನಿಮ್ಮ ಬೆಂಬಲಕ್ಕೆ ನಿಲ್ಲುವುದಿಲ್ಲ, ಬದಲಾಗಿ ನಗುವವರ ಸರದಿಯಲ್ಲಿ ನಿಂತಿರುತ್ತಾರೆ.
- ಇವರು ಯಾರನ್ನೂ ಬಿಡುವುದಿಲ್ಲ. ತಮ್ಮ ಹೆಂಡತಿ, ಗಂಡ, ಅತ್ತೆ- ಮಾವ, ಅಪ್ಪ- ಅಮ್ಮ, ಮಕ್ಕಳ ಬಗ್ಗೆಯೂ ಚಾಡಿ ಹೇಳುತ್ತಿರುತ್ತಾರೆ. ದಿನನಿತ್ಯ ಕುಟುಂಬದರ ನಿಷ್ಕರುಣೆಯ ಬಗ್ಗೆ ಹೇಳಲು ಏನಾದರೊಂದು ಕತೆ ಇವರ ಬಳಿ ಇದ್ದೇ ಇರುತ್ತದೆ. 

ಭೂಮಿ ಮೇಲಿರುವ ಯಾವ ಗಂಡೂ ಶ್ರೀ ರಾಮಚಂದ್ರನಾಗಿರೋಲ್ಲ: ಅಧ್ಯಯನ 
- ನಿಮ್ಮ ಹತ್ತಿರ ಯಾವುದಾದರೊಂದು ಸುಳ್ಳು ಅಥವಾ ಚಾಡಿ ಹೇಳುತ್ತಿರುವಾಗ ಅವರ ಮುಖಭಾವ, ದೇಹಭಂಗಿ ಗಮನಿಸಿ. ಉಗುರು ಕಚ್ಚುವುದು, ಮೂಗು ತಿಕ್ಕಿಕೊಳ್ಳುವುದು, ಕಿವಿ ತಿಕ್ಕಿಕೊಳ್ಳುತ್ತಾ ಇರುವುದು, ನಿಮ್ಮ ಕಣ್ಣು ತಪ್ಪಿಸುವುದು, ಹೆಚ್ಚಾಗಿ ನಿಮ್ಮ ಮುಖ ನೋಡದೆ ಮೊಬೈಲ್ ನೋಡುತ್ತಾ ಇರುವುದು, ಕಾಲಿನ ಬೆರಳುಗಳು ನೆಲದಲ್ಲಿ ಗೀಚುತ್ತಾ ಇರುವುದು, ಒಂದು ಕೈಯ ಬೆರಳುಗಳಿಂದ ಇನ್ನೊಂದು ಕೈ ಬೆರಳುಗಳನ್ನು ಹಿಸುಕುತ್ತಾ ಇರುವುದು, ಅಂಗಿ ಬಟನ್‌ ತಿರುಗಿಸುವುದು, ಕಾಲರ್ ಎಗರಿಸುವುದು... ಇದೆಲ್ಲ ಮಾಡುತ್ತಿರುತ್ತಾರೆ. 
- ನಿಮಗೆ ಏನಾದರೂ ಸಮಸ್ಯೆ ಆದರೆ ಅವರು ಅಲ್ಲಿ ಇರುವುದೇ ಇಲ್ಲ. 
- ನಿಮ್ಮ ಎಲ್ಲ ವಿಚಾರಗಳಲ್ಲೂ ಮೂಗು ತೂರಿಸುತ್ತಾ ಇರುತ್ತಾರೆ. ಇನ್ನೊಬ್ಬರ ರಹಸ್ಯಗಳನ್ನು ತಿಳಿಯುವುದು ಎಂದರೆ ಭಯಂಕರ ಪ್ರೀತಿ ಇವರಿಗೆ. 

ಉದ್ಯೋಗ ಸಂದರ್ಶನ ಎದುರಿಸುವುದೊಂದು ಕಲೆ, ಇಲ್ಲಿ ಗೆಲ್ಲೋದು ಹೇಗೆ? 
- ಬ್ಲ್ಯಾಕ್‌ಮೇಲ್‌ ಮಾಡುವುದೂ ಇಷ್ಟ ಇವರಿಗೆ. ಸಣ್ಣಪುಟ್ಟ ವಿಷಯಕ್ಕೆಲ್ಲ ಬ್ಲ್ಯಾಕ್‌ಮೇಲ್‌ ಮಾಡುತ್ತಿರುತ್ತಾರೆ.
- ಕೆಲವೊಮ್ಮೆ ಇವರು ಹೇಳುತ್ತಿರುವುದರಲ್ಲಿ ಸತ್ಯವೂ ಇರಬಹುದು. ಕೆಲವೊಮ್ಮೆ ತಾವು ಹೇಳುತ್ತರುವುದು ಸುಳ್ಳಿದ್ದರೂ ಸತ್ಯವೆಂದೇ ಬಿಂಬಿಸುವ ಚಾಕಚಕ್ಯತೆ ಇವರಿಗಿರುತ್ತದೆ. 
ಕೆಲವರು ಉತ್ತಮ ಮಾತುಗಾರರು, ಪ್ರೋತ್ಸಾಹಕರು ಹಾಗೂ ಸ್ಫೂರ್ತಿ ತುಂಬುವವರಾಗಿರುತ್ತಾರೆ. ಆದರೆ ಇವರು ಮಾತುಗಾರರಾಗಿದ್ದರೂ ಸ್ಫೂರ್ತಿ ತುಂಬುವವರು ಆಗಿರುವುದಿಲ್ಲ. ಇವರು ಬಂದು ಹೋದ ಬಳಿಕ ನಿಮ್ಮ ತಲೆ ಧಿಂ ಎನ್ನುತ್ತದೆ. ಒಂದು ಬಗೆಯ ನಿರಾಶಾವಾದ, ಋಣಾತ್ಮಕ ಭಾವನೆ ಮೂಡುತ್ತಿರುತ್ತದೆ. 

- ಇವರನ್ನು ಪತ್ತೆ ಹಚ್ಚಿದ ಬಳಿಕ ನಿಮ್ಮ ಕೆಲಸ ಸುಲಭವೇನಲ್ಲ. ಇವರ ಚಾಡಿಗೆ ತುತ್ತಾಗದಂತೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಒಂದು ಆವರಣ ಸೃಷ್ಟಿಸಿಕೊಳ್ಳಿ. ನಿಮಗೆ ಸಮಸ್ಯೆ ತಂದೊಡ್ಡಬಹುದಾದ ಏನನ್ನೂ ಇವರ ಬಳಿ ಹೇಳಬೇಡಿ.

ಕೇಳಿದ್ರೆ ಕರಗ್ತೀರಿ; ಮಗಳು ಹಂಚಿಕೊಂಡ ಅಪ್ಪಅಮ್ಮನ ಅಚ್ಚಳಿಯದ ಪ್ರೀತಿ 

click me!