ಈ ಟೀಚರ್ ಅನಾರೋಗ್ಯದಿಂದ ಐಸಿಯುಗೆ ಹೋಗಬೇಕಾಗಿ ಬಂದರೂ, ಅಲ್ಲಿಯೂ ತಮ್ಮ ವಿದ್ಯಾರ್ಥಿಗಳ ಅಸೈನ್‌ಮೆಂಟ್‌ಗಳನ್ನು ನೋಡುತ್ತಾ, ಗ್ರೇಡ್ ನೀಡುತ್ತಾ ತಮ್ಮ ಕೊನೆಯ ಕ್ಷಣಗಳನ್ನು ಕಳೆದಿದ್ದಾರೆ.
ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಅವರು ಕಲಿಸುತ್ತಾರೆ, ಪ್ರೇರೇಪಿಸುತ್ತಾರೆ, ಪೋಷಿಸುತ್ತಾರೆ ಮತ್ತು ತಮ್ಮ ವಿದ್ಯಾರ್ಥಿಗಳನ್ನು ಅವರ ಅತ್ಯುತ್ತಮ ಆವೃತ್ತಿಯಾಗಿ ಬೆಳೆಸುತ್ತಾರೆ. ಕೆಲವು ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಲು ಹಾಗೂ ಅವರ ಏಳ್ಗೆಗಾಗಿ ಇತರ ಎಲ್ಲರಿಗಿಂತ ಹೆಚ್ಚು ಶ್ರಮ ಹಾಕುತ್ತಾರೆ. ಅವರ ಬದ್ಧತೆ ಮತ್ತು ಅವರ ವಿದ್ಯಾರ್ಥಿಗಳ ಮೇಲಿನ ಪ್ರೀತಿ ಎಂಥವರಿಗೂ ಸ್ಪೂರ್ತಿಯ ಸೆಲೆಯಾಗಿರುತ್ತದೆ. ಅಂಥದೇ ಒಬ್ಬ ಶಿಕ್ಷಕರ ಕತೆ ಇದು.
ಈ ಶಿಕ್ಷಕರು ತಾವು ಸಾಯುವ ಗಂಟೆಗಳ ಮೊದಲು ಕೂಡಾ ತನ್ನ ಎಲ್ಲ ವಿದ್ಯಾರ್ಥಿಗಳ ಅಸೈನ್‌ಮೆಂಟ್‌ಗೆ ಗ್ರೇಡ್ ನೀಡಲಾಗಿದೆ ಎಂದು ಖಚಿತಪಡಿಸಿಕೊಂಡಿದ್ದಾರೆ. ಆಸ್ಪತ್ರೆಯ ಐಸಿಯು ಒಳಗೆ ಕೂಡಾ, ಗಂಭೀರ ಅನಾರೋಗ್ಯದ ನಡುವೆಯೂ ವಿದ್ಯಾರ್ಥಿಗಳ ಪೇಪರ್‌ಗಳನ್ನು ಓದುತ್ತಾ ಕಳೆದಿದ್ದಾರೆ.
ತನ್ನ ಆಸ್ಪತ್ರೆಯ ಹಾಸಿಗೆಯಿಂದ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕನ ಚಿತ್ರವನ್ನು ಅವರ ಮಗಳು ಸಾಂಡ್ರಾ ವೆನೆಗಾಸ್ ಹಂಚಿಕೊಂಡಿದ್ದಾರೆ. ಈ ಚಿತ್ರ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಅಧ್ಯಾಪಕರಿಗೆ ಆರೋಗ್ಯ ಸಮಸ್ಯೆ ಇದ್ದು, ತುರ್ತು ಚಿಕಿತ್ಸಾ ಕೊಠಡಿಗೆ ಹೋಗುತ್ತಿರುವುದು ಗೊತ್ತಿದ್ದರೂ ಅವರು ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಅವರ ಲ್ಯಾಪ್‌ಟಾಪ್ ಮತ್ತು ಚಾರ್ಜರ್ ತರುವ ಪ್ರಯತ್ನ ಮಾಡಿದರು. ಅವರು ಪ್ರತಿ ವಿದ್ಯಾರ್ಥಿಯ ಗ್ರೇಡಿಂಗ್ ಮುಗಿಸಿದರು ಮತ್ತು ಮರುದಿನ ಸಾವನ್ನಪ್ಪಿದರು.
ಇದನ್ನು ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಪುಟ 'ನಾಟ್ ಸೋ ಕಾಮನ್ ಫ್ಯಾಕ್ಟ್ಸ್' ಹಂಚಿಕೊಂಡಿದೆ. ಈ ಪೋಸ್ಟ್‌ಗೆ ಇನ್ಸ್ಟಾ ಬಳಕೆದಾರರು ಅಪಾರ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದು, 'ಇದು ನನ್ನ ಹೃದಯವನ್ನು ಒಡೆಯುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು, 'ಶಿಕ್ಷಕರು ನಮ್ಮ ಗೌರವ ಮತ್ತು ಮೆಚ್ಚುಗೆಗೆ ಅರ್ಹರು. ನಾವೆಲ್ಲರೂ ನಮ್ಮನ್ನು ಎಂದಿಗೂ ಬಿಟ್ಟುಕೊಡದ ಒಬ್ಬ ಶಿಕ್ಷಕರನ್ನು ಹೊಂದಿರುತ್ತೇವೆ. ಈ ಮನುಷ್ಯನಿಗೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.
ಮೂರನೇ ಬಳಕೆದಾರರೊಬ್ಬರು, 'ನನ್ನ ಪೋಷಕರು ಇಬ್ಬರೂ ಶಿಕ್ಷಕರು, ಅವರು ತಮ್ಮ ವಿದ್ಯಾರ್ಥಿಗಳಿಗಾಗಿ ಮಾಡಿದ ಅಪಾರ ಪ್ರಮಾಣದ ಕೆಲಸವನ್ನು ನಾನು ನೋಡುತ್ತೇನೆ. ಅದರಲ್ಲಿ ಹೆಚ್ಚಿನವು ಗುರುತಿಸಲ್ಪಡುವುದಿಲ್ಲ. ಅವರು ವಿದ್ಯಾರ್ಥಿಗಳ ಜೀವನದ ಬಗ್ಗೆ ನಿಜವಾದ ಕಾಳಜಿಯನ್ನು ಹೊಂದಿದ್ದಾರೆ. ಎಲ್ಲಾ ಶಿಕ್ಷಕರಿಗೂ ನನ್ನ ನಮಸ್ಕಾರ. ಈ ಮನುಷ್ಯನು ಶಾಂತಿಯಿಂದ ವಿಶ್ರಾಂತಿ ಪಡೆಯಲಿ' ಎಂದಿದ್ದಾರೆ.