
ಇಟಾ (ಜನವರಿ 29, 2023) : ಪ್ರೀತಿಗೆ ಯಾವುದೇ ಗಡಿಗಳಿಲ್ಲ ಎಂದು ಹೇಳಲಾಗುತ್ತದೆ. ಅದೇ ರೀತಿ, ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ವಿದೇಶಿ ವ್ಯಕ್ತಿಗಳನ್ನು ಮದುವೆಯಾಗೋ ಟ್ರೆಂಡ್ ಶುರುವಾಗಿದೆ. ಅದೇ ರೀತಿ, ಇತ್ತೀಚೆಗೆ ಸ್ವೀಡನ್ ಮಹಿಳೆಯೊಬ್ಬರು ಭಾರತದ ಯುವಕನೊಬ್ಬನನ್ನು ವಿವಾಹವಾಗಿದ್ದಾರೆ. ಉತ್ತರ ಪ್ರದೇಶದ ಇಟಾ ಜನರು ಈ ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದ್ದಾರೆ. ಕ್ರಿಸ್ಟನ್ ಲೀಬರ್ಟ್ ಎಂಬ ಸ್ವೀಡನ್ ಮಹಿಳೆ ಶುಕ್ರವಾರ ಉತ್ತರ ಪ್ರದೇಶದ ಇಟಾಹ್‌ನಲ್ಲಿರುವ ಶಾಲೆಯೊಂದರಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ಫೇಸ್‌ಬುಕ್‌ನಲ್ಲಿ ಭೇಟಿಯಾದ ಪವನ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ. ಯೂರೋಪ್‌ನಿಂದ ಭಾರತಕ್ಕೆ ಹಾರಿ ಬಂದಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಎಎನ್‌ಐ ಹಂಚಿಕೊಂಡ ಮದುವೆಯ ವಿಡಿಯೋದಲ್ಲಿ ಕ್ರಿಸ್ಟನ್ ಲೀಬರ್ಟ್ (Christen Lieber), ಭಾರತೀಯ (Indian) ವಧುವಿನ (Bride) ಹಾಗೆ ಮದುವೆಯ ಡ್ರೆಸ್ ಧರಿಸಿ ವರಮಾಲಾ ಸಮಾರಂಭದಲ್ಲಿ ವರನ ಕುತ್ತಿಗೆಗೆ ಹಾರವನ್ನು ಹಾಕಿದ್ದಾರೆ. ಕ್ರಿಸ್ಟನ್ ಲೀಬರ್ಟ್ 2012 ರಲ್ಲಿ ಪವನ್ ಕುಮಾರ್ (Pawan Kumar) ಅವರನ್ನು ಫೇಸ್‌ಬುಕ್‌ನಲ್ಲಿ (Facebook) ಭೇಟಿಯಾಗಿದ್ದರು ಎಂದು ವರದಿಯಾಗಿದೆ. ಈಗ ದಂಪತಿಯಾಗಿರುವ ಪವನ್ ಕುಮಾರ್ ಹಾಗೂ ಕ್ರಿಸ್ಟನ್ ಲೀಬರ್ಟ್, 2012 ರಲ್ಲಿ ಫೇಸ್‌ಬುಕ್ ಸ್ನೇಹಿತರಾದರು, ಬಳಿಕ ಫೋನ್ ಮತ್ತು ವಿಡಿಯೋ ಕಾಲ್‌ಗಳ ಮೂಲಕ ಸಂಪರ್ಕದಲ್ಲಿದ್ದರು. ಅವರ ಸ್ನೇಹ ಕ್ರಮೇಣ ಪ್ರೀತಿಯಾಗಿ ಅರಳಿತು. ಅಲ್ಲದೆ, ಪವನ್ ಕುಮಾರ್ ಒಂದು ವರ್ಷದ ಹಿಂದೆ ಉತ್ತರ ಪ್ರದೇಶದ ಆಗ್ರಾಕ್ಕೆ ಬಂದಿದ್ದ ಕ್ರಿಸ್ಟನ್ ಲೀಬರ್ಟ್ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ಒಟ್ಟಿಗೆ ತಾಜ್ ಮಹಲ್‌ಗೆ ಭೇಟಿ ಮಾಡಿದ ನಂತರ, ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿದರು ಎಂದೂ ತಿಳಿದುಬಂದಿದೆ.
ಇದನ್ನು ಓದಿ: ನೋಟು ಎಣಿಸಲು ಪೇಚಾಡಿದ ವರ, ಇವನೆಂಥಾ ಬೆಪ್ಪ ಅಂತ ಮದ್ವೆ ಕ್ಯಾನ್ಸಲ್ ಮಾಡಿದ ವಧು
ಇನ್ನು, ಭಾರತೀಯ ಯುವಕನನ್ನು ಮದುವೆಯಾಗಿರುವುದು ನನಗೆ ಸಂತೋಷವಾಗಿದೆ, ತಾನು ಭಾರತವನ್ನು ಪ್ರೀತಿಸುತ್ತೇನೆ ಎಂದು ಕ್ರಿಸ್ಟನ್ ಲೀಬರ್ಟ್ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ಉಲ್ಲೇಖಿಸಿದೆ. ಡೆಹ್ರಾಡೂನ್‌ನಲ್ಲಿ ಬಿ.ಟೆಕ್ ಮುಗಿಸಿರುವ ಪವನ್ ಕುಮಾರ್, ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಈ ಅಪರೂಪದ ಮದುವೆಗೆ ವರನ ಮನೆಯವರು ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ ಎಂದೂ ತಿಳಿದುಬಂದಿದೆ. ಮಕ್ಕಳ ಸಂತೋಷದಲ್ಲಿ ತಮ್ಮ ಸಂತೋಷ ಅಡಗಿದೆ ಎಂದು ವರನ ತಂದೆ ಗೀತಮ್ ಸಿಂಗ್ ಹೇಳಿದ್ದಾರೆ. ಈ ಮದುವೆಗೆ ನಾವು ಸಂಪೂರ್ಣವಾಗಿ ಒಪ್ಪಿದ್ದೇವೆ ಎಂದೂ ಅವರು ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಇನ್ನು, ಇಂಟರ್ನೆಟ್ ಪ್ರೇಮದ ಮತ್ತೊಂದು ಪ್ರಕರಣದಲ್ಲಿ, ಕಳೆದ ವಾರ ಪಾಕಿಸ್ತಾನದ ಅಪ್ರಾಪ್ತ ಬಾಲಕಿ, ತನ್ನ ಗುರುತನ್ನು ನಕಲು ಮಾಡಿ ಬೆಂಗಳೂರಿನಲ್ಲಿ ಅಕ್ರಮವಾಗಿ ತಂಗಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. ವೈಟ್‌ಫೀಲ್ಡ್ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಎಸ್ ಗಿರೀಶ್, ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ ಎಂದು ಗುರುತಿಸಲ್ಪಟ್ಟ 26 ವರ್ಷದ ವ್ಯಕ್ತಿ ಮದುವೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವಮುಲಾಯಂ ಸಿಂಗ್ ಯಾದವ್ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್ ಲೂಡೋ ಮೂಲಕ ಪಾಕಿಸ್ತಾನದ ಹೈದರಾಬಾದ್‌ನ ಹುಡುಗಿಯನ್ನು ಭೇಟಿಯಾಗಿದ್ದಾನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 93ನೇ ವಯಸ್ಸಿನಲ್ಲಿ 4ನೇ ಮದುವೆಯಾದ ಅಮೆರಿಕಾದ ಚಂದ್ರಯಾನಿ... ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ
ಅಲ್ಲದೆ, ಅವಳನ್ನು ಮದುವೆಯಾಗಲು ಬೆಂಗಳೂರಿಗೆ ಬರುವಂತೆ ಉತ್ತರ ಪ್ರದೇಶ ಮೂಲದ ವ್ಯಕ್ತಿ ಹೇಳಿದರು. 2022ರ ಸೆಪ್ಟೆಂಬರ್‌ನಲ್ಲಿ ಆಕೆಯನ್ನು ನೇಪಾಳದ ಮೂಲಕ ಭಾರತಕ್ಕೆ ಕರೆತರುವ ಯೋಜನೆ ರೂಪಿಸಿದ್ದರು ಎಂದೂ ಡಿಸಿಪಿ ತಿಳಿಸಿದ್ದಾರೆ. ಇಬ್ಬರೂ ನೇಪಾಳದಲ್ಲಿ ವಿವಾಹವಾದರು ಮತ್ತು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದರು. ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಲಿ ಕಾರ್ಮಿಕರ ವಸತಿ ಗೃಹದಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ, ಅವಳನ್ನು FRRO (ವಿದೇಶಿಗಳ ಪ್ರಾದೇಶಿಕ ನೋಂದಣಿ ಕಚೇರಿ) ಗೆ ಹಸ್ತಾಂತರಿಸಲಾಗಿದೆ ಮತ್ತು ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಆತನನ್ನು ಬಂಧಿಸಲಾಗಿದೆ' ಎಂದೂ ಡಿಸಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಅನಂತ್ ಅಂಬಾನಿ ನಿಶ್ಚಿತಾರ್ಥದಲ್ಲಿ ಮೀಡಿಯಾದಿಂದ ತಪ್ಪಿಸಿಕೊಂಡ ಶಾರುಖ್; ಮಗನ ಜೊತೆ ಪೋಸ್ ನೀಡಿದ ಗೌರಿ ಖಾನ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.