ಯಾವುದೇ ವಿಚಾರದಲ್ಲಿ ತಮ್ಮ ವಾದವೇ ಸರಿಯೆಂದು ವಾಗ್ವಾದಕ್ಕಿಳಿಯುವುದು ಪತಿ-ಪತ್ನಿಯರ ಸಾಮಾನ್ಯ ಅಭ್ಯಾಸ. ಆದರೆ, ಈ ರೂಢಿಯಿಂದ ಸಂಬಂಧದಲ್ಲಿ ಬಿರುಕಾಗದಂತೆ ನೋಡಿಕೊಳ್ಳಬೇಕು. ಮುಕ್ತವಾಗಿ ಮಾತನಾಡಿಕೊಂಡು ಪರಸ್ಪರರ ಇಷ್ಟಾನಿಷ್ಟಗಳನ್ನು ಅರಿತುಕೊಂಡು ಸಾಗಿದರೆ ಜೀವನ ಹಾಯಾಗಿರುತ್ತದೆ.
ಸಂಬಂಧ(Relationship)ಗಳೇ ಮನುಷ್ಯನ ನೆಮ್ಮದಿಯ ಮೂಲ. ಸಂಬಂಧಗಳು ಮನುಷ್ಯನ ಮನಸ್ಸನ್ನು ಕೆಡಿಸಲೂಬಹುದು, ಅವನನ್ನು ಉನ್ನತಿಗೇರಿಸಲೂಬಹುದು. ಅದರಲ್ಲೂ ಪತಿ-ಪತ್ನಿಯರ (Marital) ಸಂಬಂಧಕ್ಕೆ ಇನ್ನೂ ಹೆಚ್ಚಿನ ತೂಕವುಂಟು. ಜೀವನವಿಡೀ ಜತೆಗೆ ಸಾಗುವ ವಚನದೊಂದಿಗೆ ಶುರುವಾಗುವ ಈ ಸಂಬಂಧ ಚೆನ್ನಾಗಿದ್ದರೆ ಬದುಕು (Life) ಸುಂದರ.
ಆದರೆ, ಯಾವುದೇ ಸಂಬಂಧವಾದರೂ ಅದರಷ್ಟಕ್ಕೇ ಅದು ಸುಧಾರಿಸುವುದಿಲ್ಲ ಅಥವಾ ಚೆನ್ನಾಗಿರುವುದಿಲ್ಲ. ನಮ್ಮ ಪ್ರಯತ್ನವೂ ಸಾಕಷ್ಟಿರಬೇಕಾಗುತ್ತದೆ. ಸಂಗಾತಿ(Partner)ಯೊಂದಿಗೆ ಖುಷಿಯಾಗಿರಬೇಕು ಎಂದಾದರೆ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು.
ದೈಹಿಕ (Physical) ಸಾಮೀಪ್ಯಕ್ಕೆ ಆದ್ಯತೆ
ಮನೋತಜ್ಞರ ಪ್ರಕಾರ, ಪತಿ-ಪತ್ನಿಯರ ಸಂಬಂಧದಲ್ಲಿ ದೈಹಿಕ ಸಾಮೀಪ್ಯವೂ ಪ್ರಮುಖ ಪಾತ್ರ ವಹಿಸುತ್ತದೆ. ಸದಾಕಾಲ ಕೆಲಸ, ಕೆಲಸವೆಂದು ಮನೆಯಿಂದ ಹೊರಗಿರುವ ಪುರುಷರು (Men) ಅಥವಾ ಮಹಿಳೆಯರು (Women) ಸಂಗಾತಿಗೆ ತಮ್ಮ ಅಗತ್ಯವಿದೆ ಎನ್ನುವುದನ್ನು ಅರಿತುಕೊಳ್ಳಬೇಕು. ಉದ್ಯೋಗದ ಸಮಯ ಹೊರತುಪಡಿಸಿ ಉಳಿದಂತೆ ಜತೆಯಾಗಿರಲು ಯತ್ನಿಸಬೇಕು. ಮನೆಗೆ ಬಂದರೂ ತಮ್ಮ ಪಾಡಿಗೆ ತಾವು ಮೊಬೈಲ್ ಪ್ರಪಂಚದಲ್ಲಿ ಮುಳುಗದೆ ಜತೆಯಾಗಿ ಎಲ್ಲ ಕೆಲಸ ಮಾಡಿಕೊಳ್ಳಬಹುದು. ಮುಖ್ಯವಾಗಿ, ಇಬ್ಬರೂ ಲೈಂಗಿಕ ಕ್ರಿಯೆ (Sex)ಯನ್ನು ಆಸ್ವಾದಿಸಬೇಕು, ಪರಸ್ಪರ ಪೂರಕವಾಗಿ ವರ್ತಿಸಬೇಕು. ಒಬ್ಬರಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯೇ ಇಲ್ಲದಿದ್ದರೆ, ಮತ್ತೊಬ್ಬರಿಗೆ ಅತಿಯಾದ ಆಸಕ್ತಿ ಇದ್ದರೆ ಹೊಂದಾಣಿಕೆಯಲ್ಲೂ ಏರುಪೇರಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳುವುದು ಇಬ್ಬರ ಜವಾಬ್ದಾರಿ (Responsibility).
ಸಂಗಾತಿಯನ್ನು ಒಪ್ಪಿಕೊಳ್ಳಿ
ನಿಮ್ಮ ಸಂಗಾತಿಯನ್ನು ಅವರ ಗುಣ ಮತ್ತು ಅವಗುಣಗಳೊಂದಿಗೆ ಒಪ್ಪಿಕೊಳ್ಳುವುದು ಮುಖ್ಯ. ಮನಸಾರೆ ಅವರನ್ನು ಪ್ರೀತಿಸಿ. ಮನುಷ್ಯರೆಂದ ಮೇಲೆ ಏನಾದರೊಂದು ಕುಂದುಕೊರತೆಗಳಿರುವುದು ಸಹಜ. ಯಾರೂ ಪರಿಪೂರ್ಣರಲ್ಲ. ಪರಿಪೂರ್ಣತೆ ಬಯಸುತ್ತ ಸಾಗಿದರೆ ಸಂಬಂಧದಲ್ಲಿ ನಿರೀಕ್ಷೆಗಳೇ ಹೆಚ್ಚಾಗಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗುತ್ತದೆ. ಸ್ವಭಾವದಲ್ಲಿ ಸಮಸ್ಯೆಗಳಿದ್ದರೆ ಪರಿಹರಿಸಲು ಯತ್ನಿಸಬೇಕು. ಒಂದೋ ಮನಸಾರೆ ಅವರನ್ನು ಪ್ರೀತಿಸಿ, ಇಲ್ಲವೇ ಶಾಶ್ವತವಾಗಿ ದೂರವಾಗಿ. ದಿನದಿನವೂ ಅಸಮಾಧಾನದೊಂದಿಗೆ ಬದುಕುವುದು ಬದುಕಲ್ಲ. ಒಬ್ಬರನ್ನೊಬ್ಬರು ಕ್ಷಮಿಸುವ ಗುಣವನ್ನು ಇಬ್ಬರೂ ಬೆಳೆಸಿಕೊಳ್ಳಬೇಕು. ಒಬ್ಬರು ತಪ್ಪು ಮಾಡಿದಾಗ ಮತ್ತೊಬ್ಬರು ಕ್ಷಮಿಸುವ (Forgive) ದೊಡ್ಡತನ ತೋರಬೇಕು.
ಸಂಬಂಧದಲ್ಲಿ ನಿಮ್ಮ ಸ್ಥಾನ ನಿಭಾಯಿಸಿ
ಸಂಬಂಧಗಳಲ್ಲಿ ಪಾತ್ರಕ್ಕೆ ತಕ್ಕಂತೆ ನಿಭಾಯಿಸುವುದನ್ನು ಕಲಿತುಕೊಳ್ಳಬೇಕು. ಪತಿ-ಪತ್ನಿ ಹೊಂದಾಣಿಕೆಯಿಂದ ಈ ಜವಾಬ್ದಾರಿ ನಿಭಾಯಿಸಬೇಕಾಗುತ್ತದೆ. ಜವಾಬ್ದಾರಿ ಹಂಚಿಕೊಳ್ಳುವ ಕುರಿತು ಯಾವತ್ತಾದರೂ ಸಂಗಾತಿಯೊಂದಿಗೆ ಮಾತನಾಡಿದ್ದೀರಾ? ನೀವು ನಿಮ್ಮ ಸ್ಥಾನವನ್ನು ನಿಭಾಯಿಸುವ ರೀತಿಯಿಂದ ಸಂಗಾತಿ ಸಂತೃಪ್ತಿ ಹೊಂದಿದ್ದಾರೆಯೇ ಅಥವಾ ಇಷ್ಟಪಡುತ್ತಿಲ್ಲವೇ ಎನ್ನುವುದರ ಬಗ್ಗೆ ಮುಕ್ತವಾಗಿ, ಆತ್ಮೀಯವಾಗಿ ಮಾತನಾಡಿಕೊಳ್ಳಿ.
Love Affair: ನಿಮ್ಮ ಪ್ರೇಮಿಗೆ ಆಬ್ಸೆಸ್ಸಿವ್ ಲವ್ ಡಿಸಾರ್ಡರ್ ಇರಬಹುದಾ?
ಜಗಳವನ್ನು ಪರಿಹರಿಸಿಕೊಳ್ಳುವ ವಿಧಾನ ಗೊತ್ತಿರಲಿ
ಒತ್ತಡದಲ್ಲಾಡುವ ಯಾವುದೋ ಒಂದು ಮಾತಿನಿಂದ, ಸನ್ನಿವೇಶದಿಂದ ದಂಪತಿ ನಡುವೆ ಜಗಳವೇ ಆರಂಭವಾಗಿಬಿಡಬಹುದು. ಆದರೆ, ಅದನ್ನು ಮುಗಿಸಲು ಹಾಗೂ ಪರಿಹರಿಸಿಕೊಳ್ಳುವ ವಿಧಾನವನ್ನೂ ನೀವು ಅರಿತುಕೊಂಡಿರಬೇಕು. “ಈಗೋ’ (Ego)ಕ್ಕೆ ಬಲಿಯಾದರೆ ಸಂಬಂಧದಲ್ಲೂ ಹುರುಳಿರುವುದಿಲ್ಲ. ರೇಗಾಡದೆ, ಕೆಟ್ಟ ಮಾತುಗಳನ್ನಾಡದೆ ಭಿನ್ನಾಭಿಪ್ರಾಯ(Difference)ಗಳನ್ನು ಬಗೆಹರಿಸಿಕೊಳ್ಳಬೇಕು. ಹೀಗಾಗಿ, ಸಂಗಾತಿಯೊಂದಿಗೆ ಮುಕ್ತವಾಗಿ ಮಾತುಕತೆ (Talk) ನಡೆಸುವುದು ಮುಖ್ಯ.
Gray Hair: ನಿಮ್ಮ ತಲೆಕೂದಲೇಕೆ ಬೇಗನೆ ಬೆಳ್ಳಗಾಗುತ್ತದೆ? ತಡೆಯುವುದು ಹೇಗೆ?
ಮಾನಸಿಕ (Mental) ಆರೋಗ್ಯದ ಕಡೆಗೆ ಗಮನ ನೀಡಿ
ಪರಸ್ಪರರ ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡಿ. ಹಿಂದಿನ ವರ್ಷ ಕೋವಿಡ್ ಪೀಡಿತರಾಗಿದ್ದರೆ ದೈಹಿಕವಾಗಿ ಇನ್ನೂ ಏನಾದರೂ ಸಮಸ್ಯೆಗಳಿರಬಹುದು. ಅದರಿಂದಾಗಿ ಅವರು ದಿನವೂ ಕಿರಿಕಿರಿಗೆ ಒಳಗಾಗುತ್ತಿರಬಹುದು. ಅವರು ಯಾವ ವಿಚಾರಕ್ಕಾಗಿ ಚಿಂತಿತರಾಗುತ್ತಾರೆ ಅಥವಾ ಅಗಿದ್ದಾರೆ ಎನ್ನುವುದನ್ನು ಅರಿತುಕೊಳ್ಳಿ. ಧೈರ್ಯ ನೀಡಿ. ಮಾನಸಿಕವಾಗಿ ಆರೋಗ್ಯವಾಗಿದ್ದರೆ ಸಂಬಂಧವೂ ಚೆನ್ನಾಗಿರುತ್ತದೆ. ಆರೋಗ್ಯಕರ (Healthy) ದಿನಚರಿ ರೂಢಿಸಿಕೊಳ್ಳಿ. ಸಂಗಾತಿ ಹಾಗೂ ಮಕ್ಕಳೊಂದಿಗೆ ತಿಂಡಿ ಸೇವಿಸುವುದು, ರಾತ್ರಿ ಊಟ ಮಾಡುವ ಅಭ್ಯಾಸವಿರಲಿ. ಜತೆಯಾಗಿ ಕೆಲವು ಚಟುವಟಿಕೆಗಳನ್ನು ಮಾಡಿ. ಆಂತರಿಕವಾಗಿ ಪರಸ್ಪರರ ಗೌರವ(Respect), ಆದರ, ಪ್ರೀತಿ (Love) ಸ್ಥಿರವಾಗಿರಲು ಇವು ಸಹಕಾರಿಯಾಗುತ್ತವೆ.