
ಸಾಮಾನ್ಯವಾಗಿ ಮನುಷ್ಯರಲ್ಲಿ ಕೈಕಾಲುಗಳು ಸರಿ ಇದ್ದಾಗ, ಆರೋಗ್ಯ ಸಂಪತ್ತು ಇದ್ದಾಗ ಎಲ್ಲರೂ ನಮ್ಮವರೆನಿಸುತ್ತಾರೆ. ಆದರೆ ಮನುಷ್ಯನಿಗೆ ನಿಜವಾಗಿಯೂ ಯಾರು ನಮ್ಮವರು ಎಂಬುದು ಅರಿವಾಗುವುದು ಇದ್ಯಾವುದು ಇಲ್ಲದೇ ಹೋದಾಗಲೇ. ತಾವು ಮುದ್ದಾಗಿ ಸಾಕಿದ, ತಮ್ಮ ಆಸೆಗಳನ್ನೆಲ್ಲಾ ತ್ಯಾಗ ಮಾಡಿ ಮಕ್ಕಳ ಕನಸುಗಳನ್ನು ಈಡೇರಿಸುವುದಕ್ಕಾಗಿ ತಮ್ಮ ಆಯಸ್ಸನ್ನೇ ಕಳೆದ ಅನೇಕ ಪೋಷಕರಿಗೆ ತಮ್ಮ ಇಳಿವಯಸ್ಸಿನಲ್ಲಿ ನೋಡುವವರು ಯಾರು ಇಲ್ಲದೇ ಕಷ್ಟಪಡುತ್ತಾರೆ. ಆರೋಗ್ಯ ಕೈಕೊಟ್ಟು ಹಾಸಿಗೆ ಹಿಡಿದಾಗ ಮಕ್ಕಳಾರು ಸಮೀಪವೂ ಸುಳಿಯದೇ ನೆರೆಹೊರೆಯ ಮನೆಯವರು ನೋಡಿಕೊಂಡಂತಹ ಹಲವು ನಿದರ್ಶನಗಳಿವೆ. ಬುದ್ಧಿವಂತರೆನಿಸಿಕೊಂಡಿರುವ ಮನುಷ್ಯರೇ ಇಳಿವಯಸ್ಸಿನಲ್ಲಿ ಕೈಲಾಗದ ಪೋಷಕರನ್ನು ದೂರ ಮಾಡುವ ಹೀಯಾಳಿಸುವ ನಿಂದಿಸುವ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತಿವೆ. ಹೀಗಿರುವಾಗ ಬುದ್ಧಿ ಇಲ್ಲದ(ಬಹುಶಃ ಬುದ್ಧಿ ಇಲ್ಲ ಎಂದು ಮನುಷ್ಯ ಅಂದುಕೊಂಡಿರು) ಕಾಡುಪ್ರಾಣಿಗಳು ತಮ್ಮ ಅನಾರೋಗ್ಯಪೀಡಿತ ತಾಯನ್ನು ಮನುಷ್ಯನಿಗಿಂತಲೂ ಚೆನ್ನಾಗಿ ನೋಡಿಕೊಂಡಂತಹ ಘಟನೆಯೊಂದು ದಕ್ಷಿಣ ಆಫ್ರಿಕಾದ ಕಾಡೊಂದರಲ್ಲಿ ನಡೆದಿದ್ದು, ಇದು ಪ್ರಾಣಿಗಳಲ್ಲೂ ಮಾನವೀಯತೆ, ಅಮ್ಮ ಎಂಬ ಮಮಕಾರ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಚೈನೀಸ್ ಲುಕ್ ಕಾರಣಕ್ಕೆ ಹೊಡೆದು ಕೊಲೆ: ನಾನು ಭಾರತೀಯ ಎಂದು ಹೇಳಿ ಕೊನೆಯುಸಿರೆಳೆದ ತ್ರಿಪುರಾದ ತರುಣ
ಹೌದು 5 ವರ್ಷಗಳ ಹಿಂದೆ ಕಣ್ಣಿನ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದರೂ 17 ವರ್ಷದ ಸಿಂಹಿಣಿಯೊಂದು ಐದು ವರ್ಷಗಳ ಕಾಲ ಬದುಕಿತ್ತು. ಮನುಷ್ಯರಿಗೆ ಕಣ್ಣು ಕಾಣದೇ ಹೋದರೆ ಬದುಕುವುದು ಬಹಳ ಕಷ್ಟ ಹೀಗಿರುವಾಗ ಕಾಡುಪ್ರಾಣಿಯೊಂದು ಕಣ್ಣು ಕಾಣದೇ ಅಷ್ಟೊಂದು ವರ್ಷಗಳನ್ನು ಸುಗಮವಾಗಿ ಕಳೆಯುವುದು ಸುಲಭದ ಮಾತಲ್ಲ, ಆದರೂ ಆ ಸಿಂಹಿಣಿ 5 ವರ್ಷಗಳನ್ನು ಕಳೆಯಿತು. ಇದರ ಹಿಂದೆ ಇರುವುದು ಅದೃಷ್ಟವಲ್ಲ, ಆ ಸಿಂಹಿಣಿ ತಾನು ಹೆತ್ತ ಹೆಣ್ಣು ಮಕ್ಕಳಿಂದ. ಹೌದು ಇದನ್ನು ಕೇಳುವುದಕ್ಕೆ ನಿಮಗೆ ಅಚ್ಚರಿ ಎನಿಸಬಹುದು. ದಕ್ಷಿಣ ಆಫ್ರಿಕಾದ ಸವನ್ನಾದಲ್ಲಿ ಈ ಘಟನೆ ನಡೆದಿದೆ. ತಮ್ಮ ತಾಯಿಗೆ ಕಣ್ಣು ಕಾಣದೇ ಹೋದರೂ, ಆ ಸಿಂಹಿಣಿಯ ಹೆಣ್ಣು ಮಕ್ಕಳು ಅವಳನ್ನು ತೊರೆಯುವ ಮನಸ್ಸು ಮಾಡಿಲ್ಲ. ಪ್ರಾಣಿ ಜಗತ್ತಿನಲ್ಲಿ ಸ್ವತಃ ತಾಯಿಯೇ ಮರಿಯೊಂದು ಆರೋಗ್ಯವಾಗಿಲ್ಲವೆಂದು ತಿಳಿದರೆ ಅದನ್ನು ಹತ್ತಿರವೂ ಸೇರಿಸುವುದಿಲ್ಲ, ದುರ್ಬಲ ಮರಿಯನ್ನು ಅದು ತೊರೆದು ಹೋಗುತ್ತದೆ. ಹೀಗಿರುವಾಗ ಇಲ್ಲಿ ಮಕ್ಕಳೇ ತಮ್ಮ ತಾಯಿಗೆ ಕಣ್ಣು ಕಾಣದೇ ಹೋದರೂ ಅವಳನ್ನು ತೊರೆಯುವುದಕ್ಕೆ ನಿರಾಕರಿಸಿವೆ. ಪರಿಣಾಮ ಕಣ್ಣು ಕಾಣದೇ ಹೋದರು ಆ ತಾಯಿ ಬರೋಬ್ಬರಿ ಐದು ವರ್ಷಗಳ ಕಾಲ ಬದುಕುಳಿದಿದೆ.
ಅರಣ್ಯ ವೀಕ್ಷಕರ ಪ್ರಕಾರ, ವಯಸ್ಸಿಗೆ ಸಂಬಂಧಿಸಿದ ಕಾರಣದಿಂದ ಈ ಸಿಂಹಿಣಿ ಕಣ್ಣಿನ ದೃಷ್ಟಿ ಕಳೆದುಕೊಂಡಿತ್ತು. ಕಣ್ಣಿನ ದೃಷ್ಟಿ ಹೋಗಿದ್ದರಿಂದ ಆಕೆಗೆ ಬೇಟೆಯಾಡುವುದು ಸಾಧ್ಯವಿರಲಿಲ್ಲ. ಈ ಸಮಯದಲ್ಲಿ ಆಕೆಯನ್ನು ತೊರೆಯುವ ಬದಲು ಆಕೆಯ ಹೆಣ್ಣು ಮಕ್ಕಳು ಆಕೆಗಾಗಿ ಬೇಟೆಯಾಡಿ ತಂದು ನೀಡುತ್ತಿದ್ದರು. ಅವರು ಅವಳ ಹತ್ತಿರವೇ ಇರಲು ತಮ್ಮ ಚಲನೆಯ ವೇಗವನ್ನು ಸರಿ ಹೊಂದಿಸುತ್ತಿದ್ದರು. ಅವರು ಇತರ ಪರಭಕ್ಷಕ ಕಾಡುಪ್ರಾಣಿಗಳ ಬೆದರಿಕೆಯಿಂದ ಆಕೆಗೆ ರಕ್ಷಣೆ ನೀಡಿದವು. ಪರಿಣಾಮ ಆ ಸಿಂಹಿಣಿ 5 ವರ್ಷಗಳ ಕಾಲ ಬದುಕಿತು. ವನ್ಯಲೋಕದಲ್ಲಿ ದುರ್ಬಲ ಪ್ರಾಣಿಯೊಂದಕ್ಕೆ ಅಂತಹ ಕಾಳಜಿ ಸಿಗುವುದು ಬಹಳ ವಿರಳ. ಇಲ್ಲಿ ಪ್ರಾಣಿಗಳ ಬದುಕುಳಿಯುವಿಕೆಯು ಸಾಮಾನ್ಯವಾಗಿ ವೈಯಕ್ತಿಕ ಶಕ್ತಿಯನ್ನು ಅವಲಂಬಿಸಿರುತ್ತದೆ. ಪ್ರಸ್ತುತ ಆ ತಾಯಿ ಸಿಂಹಿಣಿ ಜೀವಂತವಾಗಿಲ್ಲ. ವಯೋಸಹಜವಾಗಿ ಅದು ಪ್ರಾಣ ಬಿಟ್ಟಿದೆ. ಆದರೆ ಸಾಯುವ ವೇಳೆ ಒಂಟಿಯಾಗಿ ಸಾಯಲಿಲಲ್ಲ. ತನ್ನ ಕೊನೆಯ ಕ್ಷಣಗಳನ್ನು ಅದು ಮಕ್ಕಳ ಪ್ರೀತಿ ಆರೈಕೆಯಿಂದಾಗಿ ಗೌರವ ಘನತೆಯಿಂದ ಕಳೆದಿದೆ. ಏಕೆಂದರೆ ಆಕೆಯ ಹೆಣ್ಣು ಮಕ್ಕಳು ಆಕೆಯನ್ನು ತೊರೆದು ಹೋಗುವ ಬದಲು ಆಕೆಯನ್ನು ತಮ್ಮೊಂದಿಗೆ ಕರೆದೊಯ್ಯುವ ಹಾಗೂ ಕಾಳಜಿ ಮಾಡುವುದನ್ನು ಆಯ್ಕೆ ಮಾಡಿಕೊಂಡವು. ಹೀಗಿರುವಾಗ ಈ ವನ್ಯಲೋಕದ ಈ ಕತೆ ಮಾನವರಿಗೆ ಮಾನವೀಯತೆಯ ಪಾಠ ಮಾಡುವಂತಿದೆ.
ಇದನ್ನೂ ಓದಿ: ಮದುವೆ ದಿನವೇ ವರನಿಗೆ ಮುತ್ತು ಕೊಡಲು ಬಂದ ಮಾಜಿ ಗೆಳತಿ: ನೆಲಕ್ಕೆ ಕೆಡವಿ ಬಾರಿಸಿದ ವಧು: ವೀಡಿಯೋ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.