ಮಕ್ಕಳ ಆಸೆಗಳನ್ನು ಈಡೇರಿಸಲು ಪೋಷಕರು ತಮ್ಮ ಕನಸುಗಳನ್ನು ತ್ಯಾಗ ಮಾಡುತ್ತಾರೆ. ಮಕ್ಕಳ ಏಳ್ಗೆಯಲ್ಲೇ ತಮ್ಮ ಕನಸನ್ನು ಕಾಣುತ್ತಾರೆ. ಮಕ್ಕಳ ನಗುವಿನಲ್ಲೇ ತಮ್ಮ ಕಷ್ಟಗಳನ್ನೆಲ್ಲಾ ಮರೆತು ಬಿಡುತ್ತಾರೆ. ಮಕ್ಕಳಿಗಾಗಿ ತಮ್ಮಿಂದ ಸಾಧ್ಯವಾಗುವ ಎಲ್ಲವನ್ನು ಮಾಡುತ್ತಾರೆ. ತಮ್ಮ ಕಾಲದಲ್ಲಿ ಸಿಗದ ಸೌಲಭ್ಯ ಅವಕಾಶಗಳನ್ನೆಲ್ಲಾ ಮಕ್ಕಳಿಗಾಗಿ ನಿರ್ಮಿಸುತ್ತಾರೆ. ಆದರೆ ಎಲ್ಲಾ ಮಕ್ಕಳು ಪೋಷಕರು ತಮ್ಮನ್ನು ನೋಡಿದಂತೆ ಪೋಷಕರನ್ನು ತಾವು ನೋಡುವುದು ತೀರಾ ಕಡಿಮೆ. ಕೆಲವರು ಅದೃಷ್ಟವಂತ ಪೋಷಕರಿಗೆ ಮಾತ್ರ ಈ ಅವಕಾಶವಿರುತ್ತದೆ. ಅಂತಹ ಅದೃಷ್ಟವಂತ ಪೋಷಕರು ಹಾಗೂ ಜಗ ಮೆಚ್ಚುವ ಮಗಳ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಿತ್ ಮುಂಬೈಕರ್ (Mith Indulkar) ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ (Instagram Page) ಈ ವಿಡಿಯೋ ಅಪ್‌ಲೋಡ್ ಮಾಡಲಾಗಿದ್ದು, ಮೂರು ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಮಗಳೊಬ್ಬಳು ತನ್ನ ದೃಷ್ಟಿಹೀನ ಪೋಷಕರ ಕಾಳಜಿ ಮಾಡುತ್ತಿದ್ದಾಳೆ. ಹಾಗಂತ ಈ ಮಗಳು ದೊಡ್ಡ ಮಹಿಳೆಯೇನಲ್ಲ. ಶಾಲೆಗೆ ಹೋಗುತ್ತಿರುವ ಪುಟ್ಟ ಬಾಲಕಿ.
ಹುಟ್ಟುಹಬ್ಬಕ್ಕೆ ಬೈಕ್ ಉಡುಗೊರೆ ನೀಡಿದ ಮಗ: ಭಾವುಕರಾದ ಅಪ್ಪ
ಈಕೆ ತನ್ನ ಪೋಷಕರನ್ನು ಬೀದಿ ಬದಿಯ (Streetfood) ಆಹಾರ ಮಳಿಗೆಯೊಂದಕ್ಕೆ ಕರೆದುಕೊಂಡು ಬಂದಿದ್ದು, ಅಲ್ಲಿ ಅವರನ್ನು ಕುರ್ಚಿಯಲ್ಲಿ ಕೂರಿಸಿ ಅವರಿಗೆ ರಸ್ತೆ ಬದಿ ಸಿಗುವ ಬಜ್ಜಿಯನ್ನು ತಿನ್ನಿಸುತ್ತಾಳೆ. ತಂದೆ ತಾಯಿ ಇಬ್ಬರನ್ನು ಕುರ್ಚಿಯಲ್ಲಿ ಕುಳ್ಳಿರಿಸಿದ ಬಾಲಕಿ ಬಜ್ಜಿಯನ್ನು ಪಡೆದು ಕುರ್ಚಿಯಲ್ಲಿ ಕುಳಿತಿದ್ದ ತಂದೆ ತಾಯಿಗೆ ನೀಡುತ್ತಾಳೆ. ಅವರು ಸಂತೋಷದಿಂದಲೇ ಮಗಳು ನೀಡಿದ ತಿನಿಸನ್ನು ಸವಿಯುತ್ತಾರೆ. ಇಬ್ಬರು ತಿಂದಾದ ಬಳಿಕ ಇಬ್ಬರನ್ನು ಕರೆದುಕೊಂಡು ಆಕೆ ಆ ಜಾಗದಿಂದ ಹೊರಲು ಹೋಗುತ್ತಾಳೆ. ಶಾಲಾ ಬಾಲಕಿ (School girl) ಸಮವಸ್ತ್ರ ಧರಿಸಿದ್ದು, ಬೆನ್ನಿನ ಮೇಲೆ ಶಾಲಾ ಬ್ಯಾಗ್ ನೇತು ಹಾಕಿಕೊಂಡಿದ್ದಾಳೆ. ಕತ್ತಿಗೆ ಐಡಿ ಕಾರ್ಡ್‌ನ್ನು ಕೂಡ ನೇತು ಹಾಕಿರುವ ಆಕೆ ತಂದೆಯ ಕೈ ಹಿಡಿದು ಮುಂದೆ ಸಾಗುತ್ತಾಳೆ. ಇತ್ತ ತಾಯಿ ತಂದೆಯ ಕೈ ಹಿಡಿದುಕೊಂಡಿದ್ದು, ಎಲ್ಲರೂ ಜೊತೆಯಾಗಿ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಭಲೇ ಜೋಡಿ..ಕೋಲ್ಕತ್ತಾ ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ವೃದ್ಧ ದಂಪತಿ
ಈ ವಿಡಿಯೋ ನೋಡಿದ ಅನೇಕರು ಭಾವುಕರಾಗಿದ್ದು, ಇದ್ದರೆ ನಿನ್ನಂತ ಮಗಳಿರಬೇಕು ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮುಂಬೈನ ಮೀರಾ ರಸ್ತೆಯಲ್ಲಿ ಸೆರೆಯಾದ ದೃಶ್ಯ ಇದಾಗಿದೆ. ಈ ವಿಡಿಯೋ ಪೋಸ್ಟ್ ಮಾಡಿರುವ ಮಿತ್ ಇಂದುಲ್ಕರ್, ಇವರನ್ನು ಮೊದಲ ಬಾರಿ ನೋಡಿದಾಗ ನಾನು ತುಂಬಾ ಭಾವುಕನಾದೆ. ಇವರು ಪ್ರತಿದಿನ ಮೀರಾ ರೋಡ್‌ನಲ್ಲಿರುವ ಈ ಶಾಪ್‌ಗೆ ಬರುತ್ತಿರುತ್ತಾರೆ. ಪೋಷಕರಿಗೆ ಕಣ್ಣಿಲ್ಲದಿದ್ದರೂ ಮಗಳ ಮೂಲಕ ಅವರು ಈ ಜಗತ್ತನ್ನು ನೋಡುತ್ತಿದ್ದಾರೆ. ಈ ಪುಟ್ಟ ಬಾಲಕಿ ನಮಗೆ ಸಾಕಷ್ಟು ಕಲಿಸಿದ್ದಾಳೆ. ನಮ್ಮ ಪೋಷಕರ ಹೊರತಾಗಿ ಬೇರಾರು ನಮಗೆ ಕಾಳಜಿ ತೋರಲು ಸಾಧ್ಯವಿಲ್ಲ ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ನಿಮ್ಮ ಸ್ನೇಹಿತರು ಹಾಗೂ ಪರಿಚಿತರ ಜೊತೆ ಹಂಚಿಕೊಂಡು ಈ ಬಾಲಕಿಯನ್ನು ವೈರಲ್ ಮಾಡಿ ಎಂದು ಅವರು ಮನವಿ ಮಾಡಿದ್ದಾರೆ.
ಆಕೆಗೆ ದೇವರು ಒಳ್ಳಯದು ಮಾಡಲಿ. ದೇವರು ಆಕೆಯನ್ನು ರಕ್ಷಣೆ ಮಾಡಲಿ. ದೊಡ್ಡವರು ಮಾಡಲಾಗದ್ದನ್ನು ಈ ಬಾಲಕಿ ಮಾಡುತ್ತಿದ್ದಾಳೆ. ಇಷ್ಟು ಎಳವೆಯಲ್ಲೇ ಈಕೆಗೆ ಎಂಥಾ ಪ್ರಬುದ್ಧತೆ ಇದೆ ಎಂದು ಅನೇಕರು ಶ್ಲಾಘನೆ ಮಾಡಿದ್ದಾರೆ. ಈಕೆಗೆ ದೊಡ್ಡ ಸೆಲ್ಯೂಟ್, ಈಕೆಗೆ ಒಳ್ಳೆಯದೇ ಆಗಲಿ ಎಂದು ಅನೇಕರು ಶುಭ ಹಾರೈಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.