
ಮಗ ಪ್ರೀತಿಸುತ್ತಿದ್ದ ಸ್ಯಾಂಡ್‌ವಿಚ್ ಮಾರುವ ಹುಡುಗಿಯನ್ನು ಪ್ರತಿಷ್ಠೆಯ ಕಾರಣಕ್ಕೆ ತಾಯಿ ನಿರಾಕರಿಸುತ್ತಾಳೆ. ಕಾರಿನಲ್ಲಿ ಆರಂಭವಾದ ಈ ಗಲಾಟೆ ಬೀದಿಯಲ್ಲಿ ಮಗ ಪ್ರೇಯಸಿಗೆ ಪ್ರಪೋಸ್ ಮಾಡುವುದರೊಂದಿಗೆ ತಾರಕಕ್ಕೇರುತ್ತದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪೋಷಕರ ಹಠ ಮತ್ತು ಪ್ರೇಮದ ಕುರಿತು ದೊಡ್ಡ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.
ಭಾರತದಲ್ಲಿ ಬಹುತೇಕ ಪೋಷಕರು ಮಕ್ಕಳ ಪ್ರೇಮವನ್ನು ಒಪ್ಪುವುದೇ ಇಲ್ಲ, ಈ ವೇಳೆ ಪೊಷಕರು ಸಾವಿರ ಕಾರಣಗಳನ್ನು ನೀಡುತ್ತಾರೆ. ಮಕ್ಕಳ ಪ್ರೇಮವನ್ನು ಒಪ್ಪದ ಕಾರಣಕ್ಕೆ ಸಮಾಜದಲ್ಲಿ ನಡೆಯುವ ಹಲವು ಅನಾಹುತಗಳಿಂದಲೂ ಪೋಷಕರು ಎಚ್ಚೆತ್ತುಕೊಳ್ಳುವುದಿಲ್ಲ, ಪ್ರೇಮ ಹಾಗೂ ಮದುವೆಯ ವಿಚಾರದಲ್ಲಿ ಬಹುತೇಕ ಪೋಷಕರು ಅವರದ್ದೇ ಹಠ ಸಾಧಿಸುತ್ತಾರೆ ನಂತರ ಮಕ್ಕಳು ಪೋಷಕರ ಒತ್ತಡ ತಾಳಲಾರದೇ ಏನಾದರೂ ಮಾಡಿಕೊಂಡಾಗ ತೀವ್ರ ಪಶ್ಚಾತಾಪ ಪಟ್ಟುಕೊಳ್ಳುತ್ತಾರೆ. ಅಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ. ಮಕ್ಕಳ ಮದುವೆಯನ್ನು ಬಹುತೇಕ ಪೋಷಕರು ಒಂದು ಸಂಬಂಧ ಎನ್ನುವುದಕ್ಕಿಂತ ಹೆಚ್ಚಾಗಿ ಮಾನ ಸನ್ಮಾನ ಘನತೆ ಪ್ರತಿಷ್ಠೆಯ ಸಂಕೇತವಾಗಿ ನೋಡುವುದರಿಂದ ಈ ರೀತಿಯ ಅವಾಂತರಗಳಾಗುತ್ತವೆ. ಅದೇ ರೀತಿ ಇಲ್ಲೊಬ್ಬರು ತಾಯಿ ಮಗನ ಪ್ರೇಮವನ್ನು ನಿರಾಕರಿಸಿದ್ದು, ಕಾರಿನೊಳಗೆ ನಡೆದ ಕುಟುಂಬದೊಳಗಿನ ಪ್ರಹಸನದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಅನೇಕರು ಈ ಬಗ್ಗೆ ತಮ್ಮದೇ ಅಭಿಪ್ರಾಯ ತಿಳಿಸುತ್ತಿದ್ದಾರೆ.
ಮಗನ ಪ್ರೇಮ ನಿರಾಕರಿಸಿದ ತಾಯಿ:
ಹುಡುಗನೋರ್ವ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ತಾಯಿಗೆ ಪರಿಚಯಿಸುವುದಕ್ಕಾಗಿ ಕರೆದುಕೊಂಡು ಬಂದಿದ್ದಾನೆ. ಆದರೆ ತನ್ನ ಮಗ ಸಣ್ಣದೊಂದು ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಚಾರ ತಿಳಿದ ತಾಯಿ ಆಕೆಯನ್ನು ಭೇಟಿಯಾಗುವುದಕ್ಕೆ ಒಪ್ಪುವುದಿಲ್ಲ, ನನಗೆ ಆಕೆಯನ್ನು ಭೇಟಿ ಆಗುವುದಕ್ಕೆ ಇಷ್ಟವಿಲ್ಲ, ಇಲ್ಲಿಂದ ಕರೆದುಕೊಂಡು ಹೋಗು ಎಂದು ಅವರು ಹೇಳುತ್ತಾರೆ. vibes_of_people ಎಂಬ ಖಾತೆಯಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೀಡಿಯೋದ ಆರಂಭದಲ್ಲಿ ತಾಯಿಯೊಬ್ಬಳು, ನಿನಗೆ ಕೈ ಮುಗಿಯುತ್ತೇನೆ ಹೋಗಿ ಕುಳಿತುಕೋ, ನಿನ್ನ ಅಪ್ಪ ಏನ್ ಹೇಳ್ತಾರೆ ಏನ್ ಬಿಡ್ತಾರೆ ಅಂತ ನಂಗೆ ಗೊತ್ತಿಲ್ಲ ಎಂದು ಮಗನ ಮುಂದೆ ಅಳುತ್ತಿದ್ದಾಳೆ. ಹುಡುಗನ ಸ್ನೇಹಿತನೂ ಕೂಡ ಜೊತೆಗೆ ಇದ್ದು, ಆತ ಹೇಳಿದ್ದಕ್ಕಾಗಿ ಈ ದೃಶ್ಯವನ್ನು ನಾನು ವೀಡಿಯೋ ಮಾಡುತ್ತಿದ್ದೇನೆ ಎಂದು ಹೇಳುತ್ತಾ ಈ ಘಟನೆಯ ವೀಡಿಯೋ ಮಾಡಿದ್ದಾನೆ.
ಇದನ್ನೂ ಓದಿ: ತುಮಕೂರು: 6 ವರ್ಷದ ಪ್ರೀತಿಗೆ ವಿಲನ್ ಆದ ಹುಡುಗಿ ಕಡೆಯವರು: ಪ್ರೇಮ ವಿವಾಹವಾಗಿ ಪೊಲೀಸ್ ರಕ್ಷಣೆ ಕೋರಿದ ಜೋಡಿ
ಅಲ್ಲದೇ ಆಂಟಿಜೀ ಅವನು ಕಳೆದೊಂದುವರೆ ವರ್ಷಗಳಿಂದ ನಿಮ್ಮ ಮಗ ಆ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂದು ಯುವಕನ ಸ್ನೇಹಿತ ಆ ತಾಯಿಗೆ ಹೇಳಿದ್ದಾನೆ. ಈ ವೇಳೆ ಕ್ಯಾಮರಾ ಏಕೆ ಆನ್ ಇಟ್ಟಿದ್ದೀಯಾ ಕ್ಯಾಮರಾ ಬಂದ್ ಮಾಡು ಎಂದು ಆ ತಾಯಿ ಹೇಳುತ್ತಾರೆ. ಈ ವೇಳೆ ಆ ಮಗ ಅಜ್ಜ ನಿಮ್ಮ ಪ್ರೀತಿಯನ್ನು ಒಪ್ಪದಿದ್ದರೆ ನೀವು ಮದುವೆಯಾಗಿ ಖುಷಿಯಾಗಿರಲು ಸಾಧ್ಯವಾಗುತ್ತಿತ್ತಾ ಎಂದು ಆ ತಾಯಿಯನ್ನು ಮಗ ಕೇಳಿದ್ದಾನೆ. ಅದಕ್ಕೆ ಆ ತಾಯಿ ನಾನು ಬೀದಿಯಲ್ಲಿ ಇರಲಿಲ್ಲ, ಮನೆಯಲ್ಲಿದ್ದೆ, ಈ ರೀತಿ ಸ್ಯಾಂಡ್‌ವಿಚ್ ಮಾರಾಟ ಮಾಡ್ತಿರಲಿಲ್ಲ ಎಂದು ಹೇಳುತ್ತಾರೆ. ಸ್ಯಾಂಡ್‌ವಿಚ್ ಮಾರಾಟ ಮಾಡಿದ್ರೆ ಏನಾಯ್ತು ಅವಳ ಜೀವನಕ್ಕಾಗಿ ಅವಳು ಆ ಕೆಲಸ ಮಾಡುತ್ತಿದ್ದಾಳೆ ಎಂದು ಮಗ ತಾನು ಪ್ರೀತಿಸುತ್ತಿರುವ ಹುಡುಗಿಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ ಈ ವೇಳೆ ತಾಯಿ ಬಾಯಿಮುಚ್ಚುವಂತೆ ಅವನಿಗೆ ಹೇಳಿದ್ದು, ನಾನು ಈ ರೀತಿ ಬೀದಿಯಲ್ಲಿ ಸ್ಯಾಂಡ್‌ವಿಚ್ ಮಾರುತ್ತಿರಲಿಲ್ಲ, ಸ್ಯಾಂಡ್‌ವಿಚ್ ಮಾರುವವಳನ್ನು ಸೊಸೆ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ, ನಾನು ಸಮಾಜದ ಮುಂದೆ ಹೋಗಿ ಆಕೆಯನ್ನು ಸೊಸೆ ಎಂದು ಹೇಳಿಕೊಳ್ಳಲಾಗುವುದಿಲ್ಲ ಎಂದೆಲ್ಲಾ ಹೇಳುತ್ತಾರೆ.
ಇದನ್ನೂ ಓದಿ: ಪಕ್ಷ ಬೇಧವಿಲ್ಲದೇ ಎಲ್ಲಾ ರಾಜಕಾರಣಿಗಳ ಮನಗೆದ್ದ ಗಿಲ್ಲಿ: ಮನೆಗೆ ಕರೆಸಿ ಬೆನ್ನುತಟ್ಟಿದ ಗಾಲಿ
ಎಲ್ಲದಕ್ಕೂ ಸಮಾಜ ಸಮಾಜ ಎಂದು ಹೇಳುತ್ತಿರುವ ಅಮ್ಮನನ್ನು ನೋಡಿ ಮಗ ಕಾರಿನಿಂದ ಸೀದಾ ಇಳಿದು ಹೋಗಿ ನಡುರಸ್ತೆಯಲ್ಲೇ ಆಕೆಗೆ ಹೂವಿನ ದಳಗಳನ್ನು ಅವಳ ತಲೆಯ ಮೇಲೆ ಸುರಿಯುತ್ತಾನೆ. ಇತ್ತ ತಾಯಿ ಕಾರಿನಿಂದ ಇಳಿದು ಹೋಗಿ ಆ ಪುಟ್ಟ ಅಂಗಡಿಯಲ್ಲಿದ್ದ ಮತ್ತೊಬ್ಬ ಯುವಕನಿಗೆ ನಿಮ್ಮ ಸೋದರಿಯನ್ನು ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಇತ್ತ ವಾಪಸ್ ಬಂದ ಮಗ ಈಗ ನಿನ್ನ ಸಮಾಜ ನೋಡುವುದಿಲ್ಲವೇ ಎಂದು ತಾಯಿಯನ್ನು ಪ್ರಶ್ನೆ ಮಾಡಿದ್ದಾನೆ. ನೀನು ಬೀದಿಯಲ್ಲಿ ನನ್ನ ಮರ್ಯಾದೆ ಕಳೆಯುತ್ತಿದ್ದೀಯಾ ನಿನ್ನಿಂದಾಗಿ ನನ್ನ ಹಾಗೂ ಅಪ್ಪನ ಮರ್ಯಾದೆ ಹೋಗುತ್ತಿದೆ. ಈ ಹುಡುಗಿಗಾಗಿ ನಮಗೆ ಈ ರೀತಿ ಹಿಂಸೆ ನೀಡುತ್ತಿದ್ದೀಯಾ ಎಂದು ತಾಯಿ ಮಗನನ್ನು ಪ್ರಶ್ನೆ ಮಾಡಿದ್ದಾರೆ ಇದರೊಂದಿಗೆ ವೀಡಿಯೋ ಮುಕ್ತಾಯವಾಗಿದೆ.
ಈ ವೀಡಿಯೋ ಈಗ ಭಾರಿ ಚರ್ಚೆಯಾಗಿದ್ದು, ಕೆಲವರು ತಾಯಿಯನ್ನು ಸಮರ್ಥಿಸಿಕೊಂಡರೆ ಇನ್ನೂ ಕೆಲವರು ಆ ಯುವತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಒಬ್ಬರು ಆಂಟಿಗಿಂತ ಹೆಚ್ಚು ಹಣ ಗಳಿಕೆ ಮಾಡ್ತಿದ್ದೀರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನಿಜವಾದ ವಾಸ್ತವ ಯಾರೂ ಕೂಡ ಮನುಷ್ಯತ್ವವನ್ನು ನೋಡುವುದಿಲ್ಲ, ಅವರು ಮಾಡುವ ಉದ್ಯೋಗವನ್ನು ನೋಡುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಯಾಕೆ ಪೋಷಕರು ಬರೀ ಸಮಾಜದ ಬಗ್ಗೆ ಯೋಚನೆ ಮಾಡ್ತಾರೆ ಎಂದು ಇನ್ನೊಬ್ಬರು ಕೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.