ಮರಿಗಳ ರಕ್ಷಣೆಗೆ ಇಲ್ಲೊಂದು ಹಕ್ಕಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಕಣ್ಣೀರು ತರಿಸುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಹೃದಯ ಭಾರವಾಗಿಸುತ್ತಿದೆ.
ಕೆನಡಾ: ಮಕ್ಕಳ ಉಳಿವು ಬೆಳವಿಗಾಗಿ ತಾಯಿ ಎಲ್ಲಾ ತ್ಯಾಗಗಳನ್ನು ಮಾಡುತ್ತಾಳೆ. ಮಕ್ಕಳಿಗೆ ಅಪಾಯ ಬಂದಾಗ ತನ್ನ ಜೀವದ ಹಂಗು ತೊರೆದು ಕಾಯಲು ಬರುವ ಆಕೆಯ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಇದೇ ಕಾರಣಕ್ಕೆ ತಾಯಿಗಿಂತ ದೇವರಿಲ್ಲ, ಎಂದು ತಾಯಿಯ ಗುಣಗಾನ ಮಾಡುವ ಹಲವು ಗಾದೆಗಳಿವೆ. ಮನುಷ್ಯರೇ ಆದರೂ ಪ್ರಾಣಿಗಳೇ ಆದರೂ ತಾಯಿ ಎಂದಿಗೂ ತಾಯಿ. ಮರಿಗಳ ರಕ್ಷಣೆಗೆ ಇಲ್ಲೊಂದು ಹಕ್ಕಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಕಣ್ಣೀರು ತರಿಸುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಹೃದಯ ಭಾರವಾಗಿಸುತ್ತಿದೆ.
ಪುಟ್ಟ ಹಕ್ಕಿಗಳು ಅವುಗಳ ಚಿಲಿಪಿಪಿ ಹಾಗೂ ಸುಂದರವಾದ ಬಣ್ಣ ಬಣ್ಣದ ರೆಕ್ಕೆಗೆ ಮಾತ್ರ ಫೇಮಸ್ ಅಲ್ಲ, ಅವುಗಳು ತಮ್ಮ ಒಳ್ಳೆಯ ಪೇರೆಂಟಿಗ್ ಕಾರಣಕ್ಕೂ ಅಷ್ಟೇ ಫೇಮಸ್, ಗೂಡು ಕಟ್ಟುವುದರಿಂದ ಹಿಡಿದು ಮೊಟ್ಟೆ ಇಟ್ಟು ಮರಿ ಮಾಡಿ ಅವುಗಳನ್ನು ದೊಡ್ಡದು ಮಾಡುವವರೆಗೂ ಈ ಹಕ್ಕಿಗಳ ಕಾಳಜಿ ಅಪಾರ, ತಮ್ಮ ಮರಿಗಳಿಗೆ ಏನಾದರೂ ಆದರೆ ಈ ಪುಟಾಣಿ ಹಕ್ಕಿಗಳಿಗೆ ಸಹಿಸಲು ಸಾಧ್ಯವಿಲ್ಲ, ಮರಿಗಳ ರಕ್ಷಣೆಗಾಗಿ ಅವರು ಜೀವವನ್ನೇ ಪಣಕ್ಕಿಡುತ್ತವೆ. ಹಾವು ಹದ್ದುಗಳ ಅಪಾಯ ಈ ಪುಟ್ಟ ಹಕ್ಕಿಗಳಿಗೆ ಸಾಮಾನ್ಯವಾಗಿದ್ದು, ಇದೇ ಕಾರಣಕ್ಕೆ ಪುಟ್ಟ ಹಕ್ಕಿಗಳು ಬಹಳ ಜೋಪಾನವಾಗಿ ಯಾರಿಗೂ ಕಾಣದ ಸ್ಥಳದಲ್ಲಿ ಗೂಡು ಕಟ್ಟಿ ಮೊಟ್ಟೆ ಇಡುತ್ತವೆ. ಆದರೆ ದೂರಾದೃಷ್ಟವಶಾತ್ ಹಾವುಗಳು ಅಲ್ಲಿಗೂ ದಾಂಗುಡಿ ಇಡುತ್ತವೆ.
ಅದೇ ರೀತಿ ಇಲ್ಲೊಂದು ಹಕ್ಕಿ ಗೂಡಿಗೆ ಹಾವೊಂದು ಕನ್ನ ಹಾಕಿದ್ದು, ಅದನ್ನು ಓಡಿಸುವ ಪ್ರಯತ್ನದಲ್ಲಿ ಪುಟ್ಟ ಹಕ್ಕಿ ತನ್ನ ಉಸಿರು ಚೆಲ್ಲಿದೆ. ಈ ವೀಡಿಯೋ ನೋಡುಗರ ಕಣ್ಣಲ್ಲಿ ನೀರು ತರಿಸುತ್ತಿದೆ. ವೀಡಿಯೋದಲ್ಲಿ ಕಾಣಿಸುವಂತೆ ಟೊಂಗೆಗಳನ್ನು ಕತ್ತರಿಸಿದ ಒಣಗಿದ ಮರದ ಪೊಟರೆಯಲ್ಲಿ ಹಕ್ಕಿಯೊಂದು ಮೊಟ್ಟೆ ಇಟ್ಟು ಮರಿ ಮಾಡಿದೆ. ಆಹಾರ ಅರಸಿ ಹೊರಟ ಹಾವು ಪೊಟರೆಯೊಳಗೆ ನುಗ್ಗಿದೆ. ಇದನ್ನು ನೋಡಿದ ತಾಯಿ ಹಕ್ಕಿ ಹಾವನ್ನು ಓಡಿಸುವುದಕ್ಕಾಗಿ ಹಾವಿಗೆ ಕುಕ್ಕುತ್ತಾ ಗೂಡಿನ ಸುತ್ತಮುತ್ತ ಹಾರುತ್ತಿದೆ. ಆದರೆ ಹಾವು ಸಂಪೂರ್ಣವಾಗಿ ಪೊಟರೆಯೊಳಗೆ ನುಗ್ಗಿ ಅಲ್ಲಿದ್ದವುಗಳನ್ನು ಸ್ವಾಹಃ ಮಾಡಿಯೇ ಹೊರಬಂದಂತೆ ಕಾಣುತ್ತಿದೆ. ಹೊರಬಂದ ವೇಳೆ ಈ ಹಾವು ತಾಯಿ ಹಕ್ಕಿಗೂ ಬಾಯಿ ಹಾಕಿದ್ದು, ಅದನ್ನು ಹಿಡಿದುಕೊಂಡೆ ಮರದಿಂದ ಕೆಳಗೆ ಜಾರಿದೆ. ಹಕ್ಕಿಯ ಜೊತೆಗೆ ಕೆಳಗೆ ಬಿದ್ದ ಹಾವು ಹಕ್ಕಿಯನ್ನು ಸಂಪೂರ್ಣವಾಗಿ ಸುತ್ತಿಕೊಂಡಿದೆ.
ಈ ವೀಡಿಯೋವನ್ನು Nature Is Metal ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ವೀಡಿಯೋ ಶೇರ್ ಮಾಡಿ ಅವರು ಹೀಗೆ ಬರೆದುಕೊಂಡಿದ್ದಾರೆ. ಈ ಹಕ್ಕಿ (northern flicker)ಕ್ರೂರಿ ಬುಲ್ ಹಾವಿನಿಂದ ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು, ಪ್ರಯತ್ನಿಸುತ್ತಿದೆ. ಹಾವುಗಳು ಪುಟ್ಟ ಮರಿಗಳನ್ನು ಹಾಗೂ ಹಕ್ಕಿಗಳ ಮೊಟ್ಟೆಗಳನ್ನು ಹುಡುಕಿಕೊಂಡು ಬಂದು ತಿನ್ನುವುದೇನು ಅಚ್ಚರಿ ಅಲ್ಲ, ಏಕೆಂದರೆ ಹಾವುಗಳಿಗೆ ಇವು ಸುಲಭವಾಗಿ ಸಿಗುವ ಆಹಾರವಾಗಿದೆ. ಆದರೆ ಹಾವು ಹಕ್ಕಿಯ ಗೂಡಿರುವ ಮರದ ಪೊಟರೆಯನ್ನು ಪ್ರವೇಶಿಸಿದನ್ನು ಗಮನಿಸಿದ ಹಕ್ಕಿ 20 ನಿಮಿಷಗಳ ಕಾಲ ತನ್ನ ಮರಿಗಳ ರಕ್ಷಣೆಗೆ ನಿರಂತರ ಹೋರಾಡಿದೆ. ನಂತರ ಹಾವಿನ ಸೆರೆಯಲ್ಲಿ ಸಿಲುಕಿದ ಹಕ್ಕಿಯನ್ನು ರಕ್ಷಿಸಿ ಕಾಪಾಡಲಾಗಿದೆ ಎಂದು ವೀಡಿಯೋ ಮಾಡಿದವರು ಹೇಳಿದ್ದಾರೆ ಎಂದು ಬರೆಯಲಾಗಿದೆ. ಕೆನಡಾದ ಆಲ್ಬರ್ಟಾದಲ್ಲಿರುವ ಡೈನೋಸಾರ್ ಪ್ರಾಂತೀಯ ಉದ್ಯಾನವನದಲ್ಲಿ ಜೂನ್ 9 ರಂದು ಈ ವೀಡಿಯೋವನ್ನು ಸೆರೆ ಹಿಡಿಯಲಾಗಿದೆ.
ಸಾವಿನ ಕದ ತಟ್ಟುತ್ತಿದ್ದ ಮಗುವನ್ನು ಕಾಪಾಡಿದ ಅಮ್ಮ!
ಸುಮಾರು 20 ನಿಮಿಷಗಳ ಹೋರಾಟದ ಬಳಿಕ ಈ ಹಕ್ಕಿಯನ್ನು ವೀಡಿಯೋ ಮಾಡುತ್ತಿದ್ದವರು ರಕ್ಷಣೆ ಮಾಡಿದ್ದು ಮಾತ್ರ ಖುಷಿಯ ವಿಚಾರವೇ. ಆದರೆ ಈ ವೀಡಿಯೋದಲ್ಲಿ ಹಕ್ಕಿಯ ರಕ್ಷಣೆಯ ದೃಶ್ಯವಿಲ್ಲ. ವೀಡಿಯೋ ನೋಡಿದ ಒಬ್ಬರು ತಾಯಿ ಪ್ರೀತಿ ಎಂದಿಗೂ ತಾಯಿ ಪ್ರೀತಿಯೇ ಅದು ಪ್ರಾಣಿ ಪಕ್ಷಿಗಳಾದರೂ ಸರಿ ಮನುಷ್ಯರಾದರೂ ಸರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ತಾಯಿ ತನ್ನ ಮಕ್ಕಳ ರಕ್ಷಣೆಯ ವಿಚಾರದಲ್ಲಿ ಎಂಥಹಾ ತ್ಯಾಗ ಹಾಗೂ ಧೈರ್ಯ ಶೌರ್ಯಕ್ಕೆ ಸಿದ್ದಳಾಗಿರುತ್ತಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ತಾಯಿ ಪ್ರೀತಿಗೆ ಬೆಲೆ ಕಟ್ಟಲಾಗದು ಎಂಬುದನ್ನು ತೋರಿಸುತ್ತಿದೆ.