ಮಧ್ಯ ವಯಸ್ಸು ಕೇವಲ ಬಿಕ್ಕಟ್ಟು ಎದುರಿಸುವ ಸಮಯವಲ್ಲ. ವಯಸ್ಸಾಗುತ್ತಿದೆ ಎನ್ನುವ ಭಾವನೆಯಿಂದ ಮೂಲೆಗುಂಪಾಗುವ ಸಮಯವೂ ಅಲ್ಲ. ಇದು ನಮ್ಮಲ್ಲಿ ಸ್ವಯಂ ಅರಿವು ಹೆಚ್ಚಿಸುವ ಹಂತ. ಜೀವನದ ಪ್ರಾಮುಖ್ಯತೆ, ನಮ್ಮ ಇಷ್ಟಾನಿಷ್ಟಗಳನ್ನು ಅರಿತುಕೊಂಡು ನಿರ್ಭಯವಾಗಿ ಜೀವಿಸುವ ಹಂತ. ಹೊಸತನ್ನು ಅಪ್ಪಿಕೊಳ್ಳಿ.
ಮಧ್ಯವಯಸ್ಸು... ಅಂದಾಕ್ಷಣ ಹಲವು ಬಿಕ್ಕಟ್ಟುಗಳನ್ನು ಹೊಂದಿರುವ ಹಂತ ಎನ್ನುವ ತೀರ್ಮಾನಕ್ಕೆ ಬಂದುಬಿಡುತ್ತೇವೆ. ಅನೇಕರು ಈ ಹಂತವನ್ನು, “ಆಯಿತು, ಇನ್ನೇನು ವಯಸ್ಸಾಗುತ್ತಿದೆ, ಜೀವನವನ್ನು ಹೇಗಾದರೂ ನಡೆಸಿಕೊಂಡು ಹೋಗುವುದೇ ಈ ಹಂತದಲ್ಲಿರುವ ಅಂತಿಮ ಆಯ್ಕೆ’ ಎಂಬುದಾಗಿ ನೋಡುತ್ತಾರೆ. ಆದರೆ, ಇದೇ ಹಂತ ನಮ್ಮ ಜೀವನದಿಂದ ಇನ್ನೇನನ್ನೋ ಬೇಡುತ್ತಿರುತ್ತದೆ. ನಮ್ಮೊಳಗು ಬೇರೆಯ ದನಿಯನ್ನೇ ಹೊರಡಿಸಲು ಶುರು ಮಾಡುತ್ತದೆ. ಅನೇಕರು ಇದಕ್ಕೆ ಕಿವಿಯಾಗದೇ ಹೋಗಬಹುದು. ಇಷ್ಟು ದಿನ ರೂಢಿಸಿಕೊಂಡು ಬಂದ ಅಭ್ಯಾಸಗಳನ್ನು ಕೈಬಿಟ್ಟು ಈ ದನಿಯನ್ನು ಕೇಳಿಸಿಕೊಳ್ಳಲು ಹಿಂದೇಟು ಹಾಕಬಹುದು. ಆದರೆ, ಸಾಮಾಜಿಕ ಒತ್ತಡವನ್ನು ಮೀರಿ ಸ್ವ ಅರಿವು ಮೂಡಿಸಿಕೊಳ್ಳುವುದಕ್ಕೂ ಇದು ಅತ್ಯಂತ ಪ್ರಶಸ್ತ ಸಮಯ. ಈ ಸಮಯದಲ್ಲಿ ಯಾವುದೇ ವ್ಯಕ್ತಿಗೆ ತನ್ನ ಆಸೆ-ಆಕಾಂಕ್ಷೆಗಳು, ಇಷ್ಟಾನಿಷ್ಟಗಳ ಕುರಿತು ಗಮನ ಹರಿಯಬಹುದು. ಅವುಗಳನ್ನು ಇನ್ನಾದರೂ ಕಳೆದುಕೊಳ್ಳಬಾರದು ಎನ್ನುವ ತುಡಿತ ಉಂಟಾಗಬಹುದು. ಇವೆಲ್ಲ ಮಧ್ಯವಯಸ್ಸಿನ ಬಿಕ್ಕಟ್ಟುಗಳಲ್ಲ. ಸ್ವ ಅರಿವು ಹೆಚ್ಚುತ್ತಿರುವ ಸಂಕೇತ.
ಜೀವನದ (Life) ಮೊದಲ ಹಂತ ಶಿಕ್ಷಣ, ವೃತ್ತಿ, ಕುಟುಂಬ, ಸಾಮಾಜಿಕವಾಗಿ ಗುರುತಿಸಿಕೊಳ್ಳುವಿಕೆ ಇವುಗಳಲ್ಲಿ ಕಳೆದು ಹೋಗುತ್ತದೆ. ಆದರೆ, ಜೀವನದ ಎರಡನೇ ಅರ್ಧಭಾಗ ಇದೆಯಲ್ಲ, ಅದು ನಮ್ಮ ಪಾತ್ರದ ಹೊರತಾಗಿಯೂ ನಮ್ಮನ್ನು ನಾವು ಹೆಚ್ಚು ಅರ್ಥಮಾಡಿಕೊಳ್ಳುವ ಹಂತ. ಈ ಹಂತದಲ್ಲಿ ಕೆಲವು ಅನಿಸಿಕೆಗಳು ನಿಮಗೆ ಉಂಟಾಗುತ್ತಿದ್ದರೆ ಅವು ಜೀವನದ ಏಕತಾನತೆ ಅಥವಾ ಬೇಸರದಿಂದ ಉಂಟಾಗುತ್ತಿವೆ ಎಂದು ತಿಳಿದುಕೊಳ್ಳುವ ಅಗತ್ಯವಿಲ್ಲ. ಅವು ನಿಮ್ಮಲ್ಲಿ ಅರಿವು ಮೂಡಿಸುತ್ತಿರಬಹುದು.
ಇಂಥ ಮಹಿಳೆಯರನ್ನು ಎಂದೂ ಮರೆಯಲ್ಲ ಗಂಡಸ್ರು!
• ಅನಿಶ್ಚಿತತೆ (Uncertainty) ಒಪ್ಪಿಕೊಳ್ಳುವ ಮನಸ್ಸು
ಮಧ್ಯವಯಸ್ಸಿನಲ್ಲಿ ನಿಮ್ಮಲ್ಲಿ ಜೀವನದ ಅನಿಶ್ಚಿತತೆ ಒಪ್ಪಿಕೊಳ್ಳುವ ಮನೋಭಾವ ಮೂಡಿತೆಂದರೆ, ಅದು ವಯಸ್ಸಾಗುತ್ತಿರುವ ಕುರುಹಲ್ಲ. ಜೀವನ ನಿಮಗೆ ಅರ್ಥವಾಗುತ್ತಿದೆ ಎಂದರ್ಥ. ಇದು ಹಲವರಿಗೆ ಆತಂಕದಂತೆ ಅಥವಾ ಬಿಕ್ಕಟ್ಟಿನಂತೆ (Crisis) ಕಾಣಬಹುದು. ಆದರೆ, ಈ ಭಾವನೆ ನಿಜಕ್ಕೂ ವ್ಯಕ್ತಿಗತ ಒಳಿತಿಗೆ, ಪ್ರಗತಿಗೆ ಬಂದಿರುವಂಥದ್ದು. ಜೀವನವಿಡೀ ನಾವು ಸುರಕ್ಷತೆ (Security), ನಿಖರತೆಗೆ ಆದ್ಯತೆ ನೀಡುತ್ತೇವೆ. ಯೋಜನೆ, ಗುರಿ ಹೊಂದಿ ವಾತಾವರಣವನ್ನು ನಿಯಂತ್ರಣ ಮಾಡುವ ಧೋರಣೆ ಹೊಂದಿರುತ್ತೇವೆ. ಆದರೆ, ಪರಿಸ್ಥಿತಿಯನ್ನು (Situation) ನಿಯಂತ್ರಣ ಮಾಡಲು ಸಾಧ್ಯವಿಲ್ಲ ಎನ್ನುವ ಅರಿವು ಈಗ ಮೂಡುತ್ತದೆ. ಇದನ್ನು ಆತಂಕವನ್ನಾಗಿ ತೆಗೆದುಕೊಳ್ಳಬಾರದು, ಸಂಕೋಲೆಗಳಿಂದ ಬಿಡುಗಡೆಯೂ ಆಗಬಹುದು.
• ಪ್ರಶ್ನಿಸುವ (Questioning) ಮನೋಭಾವ
ಜೀವನದ ಶೈಲಿಯನ್ನು, ನೀವು ನೀಡುತ್ತಿರುವ ಆದ್ಯತೆಗಳನ್ನು ಪ್ರಶ್ನಿಸಿಕೊಳ್ಳಲು ಆರಂಭಿಸಿದ್ದೀರಿ ಎಂದರೆ, ಅದು ನಿಮ್ಮಲ್ಲಿ ಅರಿವು (Awakening) ಮೂಡುತ್ತಿರುವ ಸಂಕೇತ. ಅದುವರೆಗಿನ ಜೀವನ ದುಡಿಮೆ, ಮಕ್ಕಳು, ಕುಟುಂಬ, ಪತಿ-ಪತ್ನಿಯ ಆರೈಕೆಗಳಲ್ಲಿ ಕಳೆದುಹೋಗಿರುತ್ತದೆ. ಈಗ ನಿಮ್ಮಲ್ಲಿ “ಇದಕ್ಕೂ ಇನ್ನೇನೋ ಇದೆ’ ಎನ್ನುವ ಭಾವನೆ ಹೆಚ್ಚಾಗಿ ಪ್ರಶ್ನೆ ಮಾಡುವ ಬುದ್ಧಿ ಜಾಗ್ರತವಾಗಬಹುದು. ಪ್ರಸ್ತುತ ಬದುಕನ್ನು ತಿರಸ್ಕರಿಸುತ್ತೀರಿ ಎಂದಲ್ಲ, ಕ್ರಾಂತಿಕಾರಕ ಮನಸ್ಥಿತಿಯೂ ಅಲ್ಲ. ಆದರೆ, ನಿಮ್ಮ ಆಯ್ಕೆಗಳನ್ನು ಮರುವಿಮರ್ಶೆ ಮಾಡುವ ಮೂಲಕ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳಲು ನಿಮಗೆ ನೀವು ಅನುಮತಿ ಕೊಟ್ಟುಕೊಳ್ಳುತ್ತೀರಿ. ಅಸ್ತಿತ್ವದ ಬಗ್ಗೆ ಅರಿವಾಗುವಾಗ ನಮ್ಮ ಬಗ್ಗೆಯೇ ನಮ್ಮಲ್ಲಿ ಪ್ರಶ್ನೆಗಳೇಳುತ್ತವೆ.
• ಭಾವನಾತ್ಮಕ ಸಮತೋಲನ (Emotional Balance)
ಮಧ್ಯವಯಸ್ಸಿನಲ್ಲಿ ಭಾವನಾತ್ಮಕ ಸಮತೋಲನ, ಸಹಾನುಭೂತಿ, ತಾಳ್ಮೆ ಹೆಚ್ಚುತ್ತದೆ. ಇದು ಕೈಲಾಗದ ಸ್ಥಿತಿಯಿಂದ ಉಂಟಾಗಿರುವಂಥದ್ದಲ್ಲ. ನೀವು ಹೆಚ್ಚು ಮಾನವೀಯ ಗುಣಗಳನ್ನು ಹೊಂದುತ್ತಿದ್ದೀರಿ ಎಂದರ್ಥ. ಇವು ನಿಮ್ಮನ್ನು ದುರ್ಬಲರನ್ನಾಗಿಸುವುದಿಲ್ಲ. ಇನ್ನಷ್ಟು ದೃಢಪಡಿಸುತ್ತವೆ.
ಗಂಡ-ಹೆಂಡತಿಯಾದ್ರೂ ಭಾವನೆ ಶೇರ್ ಮಾಡಿಕೊಳ್ಳದೇ ಹೋದ್ರೆ, ಸಂಬಂಧ ಸ್ಟೇಬಲ್ ಆಗಿರೋಲ್ಲ!
• ಈ ಕ್ಷಣದ ಅನುಭವ (Experience)
ಇಷ್ಟು ದಿನ ಓಡಿದ್ದೇ ಓಡಿದ್ದು, ಸವಾಲುಗಳನ್ನು ಎದುರಿಸಲು, ಗುರಿ ತಲುಪಲು. ಆ ಕ್ಷಣಗಳನ್ನು ಆಸ್ವಾದಿಸಿದ್ದೇ ಕಡಿಮೆ. ಆದರೆ, ಮಧ್ಯವಯಸ್ಸಿನಲ್ಲಿ ಹಾಲಿ ಕ್ಷಣಗಳನ್ನು ಅನುಭವಿಸುವ ಮನೋಭಾವ ಹೆಚ್ಚುತ್ತದೆ. ಜೀವನದ ಪಯಣಕ್ಕೆ ಹೆಚ್ಚು ತಾಳ್ಮೆ (Patience) ಜತೆಯಾಗುತ್ತದೆ. ಇದೊಂದು ಶಕ್ತಿ.
• ಹಳೆಯ ಹವ್ಯಾಸಗಳು (Passions)
ಮಧ್ಯವಯಸ್ಸಿನಲ್ಲಿ ಹಳೆಯ ಹವ್ಯಾಸಗಳನ್ನು ಮರು ಆರಂಭಿಸುವ ಮನಸ್ಸಾಗಬಹುದು. ನಿರ್ಭಯವಾಗಿ ಕಾರ್ಯಗತಗೊಳಿಸಿ. ಇದರಿಂದ ಜೀವನಕ್ಕೆ ಹೊಸ ಹುರುಪು ತುಂಬಿಕೊಳ್ಳುತ್ತದೆ.