
ತೆಲಂಗಾಣ: ದಾಂಪತ್ಯ ಸರಿ ಇಲ್ಲದೇ ಹೋದರೆ ಅದರ ಪರಿಣಾಮ ದಂಪತಿಗೆ ಜನಿಸಿದ ಮಕ್ಕಳ ಮೇಲೆ ಅದೆಂತಹ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದಕ್ಕೆ ಹೈದರಾಬಾದ್‌ನಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಗಂಡ ಹೆಂಡತಿ ಜಗಳದಿಂದ ಕೂಸು ಬಡವಾಯ್ತು ಎಂಬ ಗಾದೆಯಂತೆ ಇಲ್ಲಿ ಗಂಡ ಹೆಂಡತ ಜಗಳದಿಂದ ಮಕ್ಕಳು ಅನಾಥರಾಗಿದ್ದು, ಮಕ್ಕಳ ಸ್ಥಿತಿಗೆ ಪೊಲೀಸರೇ ಮರುಗಿದ್ದಾರೆ. ನೆರೆಯ ತೆಲಂಗಾಣ ರಾಜ್ಯದ ಕರೀಂನಗರ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಆಗಿದ್ದೇನು?
ಅಂಗಡಿಯೊಂದನ್ನು ಹೊಂದಿದ್ದ ರವಿಕುಮಾರ್ ಹಾಗೂ ನರ್ಸಿಂಗ್ ವಿದ್ಯಾರ್ಥಿಯಾಗಿದ್ದ ಲಲಿತಾ ಎಂಬುವವರು ದಶಕಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಾಂಪತ್ಯದಲ್ಲಿ ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಆದರೆ ವರ್ಷಗಳುರುಳುತ್ತಿದ್ದಂತೆ ಇಬ್ಬರ ಮಧ್ಯೆ ಗಲಾಟೆಗಳಾಗುವುದಕ್ಕೆ ಶುರುವಾಗಿದೆ. ಅವರ ಸಂಬಂಧ ಹದಗೆಡುತ್ತಾ ಬಂದಿದ್ದು, ಜಗಳಗಳು ಪ್ರತಿದಿನ ಸಾಮಾನ್ಯ ಎಂಬಂತಾಗಿತ್ತು. ಇಬ್ಬರ ಮಧ್ಯೆ ಸಣ್ಣಪುಟ್ಟ ವಿಚಾರಗಳಿಗೆ ಜಗಳಗಳು ನಡೆಯುತ್ತಲೇ ಇದ್ದವು.
ಹೀಗಾಗಿ ಕೆಲ ಸಮಯದ ಹಿಂದೆ ಲಲಿತಾ ಅವರು ಗಂಡ ರವಿಕುಮಾರ್ ವಿರುದ್ಧ ಕೌಟುಂಬಿಕ ಕಲಹದ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹೀಗಾಗಿ ಪೊಲೀಸರು ದಂಪತಿಯನ್ನು ಕರೆಸಿ ಕೌನ್ಸೆಲಿಂಗ್(ಸಂಧಾನ) ಮಾಡುವುದಕ್ಕೆ ಇದು ಕಾರಣವಾಗಿತ್ತು. ಅದೇ ರೀತಿ ಗಂಡ ಹೆಂಡತಿ ಮಧ್ಯೆ ಏಪ್ರಿಲ್ 28ರಂದು ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಲಲಿತಾ ತನ್ನ ಕತ್ತಿನಲ್ಲಿದ್ದ ತಾಳಿ ಹಾಗೂ ಕಾಲುಂಗುರವನ್ನು ಬಿಚ್ಚಿ ಟೇಬಲ್ ಮೇಲೆ ಇರಿಸಿದ್ದಾಳೆ. ಬಳಿಕ ತಾನು ಯಾವುದೇ ಕಾರಣಕ್ಕೂ ಈ ಸಂಬಂಧದಲ್ಲಿ ಮುಂದುವರೆಯುವುದಿಲ್ಲ ಹಾಗೂ ಮಕ್ಕಳ ಆರೈಕೆ ಮಾಡುವುದಿಲ್ಲ ಎಂದು ಹೇಳಿ ಠಾಣೆಯಿಂದ ಹೊರಟು ಹೋಗಿದ್ದಾರೆ.
ಇದನ್ನೂ ಓದಿ: ಅತ್ಯಂತ ವೇಗದ ಪ್ರಾಣಿ ಚೀತಾ ಜೀವಿತಾವಧಿಯ ಶೇಕಡಾ 90ರಷ್ಟು ಕಾಲ ವಿಶ್ರಾಂತಿಯಲ್ಲೇ ಕಳೆಯೋದೇಕೆ?
ಆಕೆ ಹೋದ ನಂತರ ರವಿ ಕೂಡ ಆಕೆಯ ದಾರಿಯನ್ನೇ ಹಿಡಿದಿದ್ದಾನೆ. ಮಕ್ಕಳನ್ನು ಠಾಣೆಯಲ್ಲೇ ಬಿಟ್ಟು ಆತ ಹೊರ ನಡೆದಿದ್ದಾನೆ. ಕರೀಂ ನಗರ ಜಿಲ್ಲೆಯ ಲೋವರ್ ಮನೈರ್ ಡ್ಯಾಮ್ ಪೊಲೀಸ್ ಠಾಣೆಯೊಳಗೆ ಈ ಘಟನೆ ನಡೆದಿದೆ. ಅಪ್ಪ ಅಮ್ಮ ತಮ್ಮನ್ನು ಠಾಣೆಗೆ ಕರೆದುಕೊಂಡು ಹೋಗಿ ಅಲ್ಲೇ ಬಿಟ್ಟು ಒಬ್ಬರಾದ ಮೇಲೆ ಒಬ್ಬರು ಹೋಗಿದ್ದರಿಂದ ಆಘಾತಗೊಂಡ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಭಯ ಆತಂಕದಿಂದ ಕಣ್ಣೀರಿಟ್ಟಿದ್ದಾರೆ. ಪೊಲೀಸರು ಕರೆ ಮಾಡಿದರೆ ಗಂಡನಾಗಲಿ ಅಥವಾ ಹೆಂಡತಿಯಾಗಲಿ ಪೊಲೀಸರ ಕರೆ ಸ್ವೀಕರಿಸಿಲ್ಲ.
ನಂತರ ಪೊಲೀಸ್ ಸಿಬ್ಬಂದಿ ಹಾಗೂ ಸಬ್ ಇನ್ಸ್‌ಪೆಕ್ಟರ್ ಅನ್ವರ್ ಅವರು ಮಕ್ಕಳಿಗೆ ಸುರಕ್ಷತೆಯ ಭರವಸೆ ನೀಡಿ ಅವರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದ್ದಾರೆ. ಮಕ್ಕಳ ಪೋಷಕರನ್ನು ವಾಪಸ್ ಕರೆಸುವುದಕ್ಕೆ ಪೊಲೀಸರು ಮಾಡಿದ ಹಲವು ಪ್ರಯತ್ನಗಳು ವಿಫಲಗೊಂಡ ನಂತರ ಪೊಲೀಸ್ ಅಧಿಕಾರಿಗಳು ಮಕ್ಕಳ ತಂದೆಯ ಕಡೆಯ ಅಜ್ಜಿಯನ್ನು ಸಂಪರ್ಕಿಸಿದ್ದಾರೆ. ಬಳಿಕ ಅವರು ಬಂದು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ಪ್ರಕರಣ ದಾಖಲಿಸಿದ್ದು, ಅವರು ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ ಗಮನಿಸುತ್ತಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ಕೈದಿ ಸಾವು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೇರ್ ಟೇಕರ್ ಮಹಿಳೆಯಿಂದ ಹನಿಟ್ರ್ಯಾಪ್ ಆರೋಪ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.