ವಿಚ್ಛೇದನಕ್ಕಾಗಿ ಗಂಡನ ಸಹೋದರಿಯನ್ನೇ 'ಸವತಿ' ಮಾಡಿದ ಕಿಲಾಡಿ ಪತ್ನಿ! ಹೈಕೋರ್ಟ್ ಮೆಟ್ಟಿಲೇರಿದ ವಿಚಿತ್ರ ಕೇಸ್!

Published : Apr 29, 2026, 06:05 PM IST
Divorce Case

ಸಾರಾಂಶ

ಗ್ವಾಲಿಯರ್‌ನಲ್ಲಿ ಮಹಿಳೆಯೊಬ್ಬರು ವಿಚ್ಛೇದನ ಪಡೆಯಲು, ಪತಿಯ ತಂಗಿಯನ್ನೇ ಆತನ ಎರಡನೇ ಹೆಂಡತಿ ಎಂದು ಬಿಂಬಿಸಿ ನ್ಯಾಯಾಲಯಕ್ಕೆ ದಾರಿ ತಪ್ಪಿಸಿದ್ದಾರೆ. ಕೌಟುಂಬಿಕ ಫೋಟೋವನ್ನು ಸುಳ್ಳು ಸಾಕ್ಷ್ಯವಾಗಿ ಬಳಸಿ ಏಕಪಕ್ಷೀಯ ವಿಚ್ಛೇದನ ಪಡೆದಿದ್ದಾರೆ.

ಗ್ವಾಲಿಯರ್ (ಏ.29): ವಿಚ್ಛೇದನಕ್ಕಾಗಿ ದಂಪತಿಗಳು ನ್ಯಾಯಾಲಯದ ಮೆಟ್ಟಿಲೇರಿದಾಗ ಸಾಮಾನ್ಯವಾಗಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸೆ ಅಥವಾ ಪರಸ್ಪರ ಭಿನ್ನಾಭಿಪ್ರಾಯಗಳ ಆರೋಪ ಮಾಡುವುದು ಸಾಮಾನ್ಯ. ಆದರೆ, ಮಧ್ಯಪ್ರದೇಶದ ಮಹಿಳೆಯೊಬ್ಬರು ವಿಚ್ಛೇದನ ಪಡೆಯಲು ಯಾರೂ ಊಹಿಸಲೂ ಸಾಧ್ಯವಾಗದ ಮಾರ್ಗವೊಂದನ್ನು ಅನುಸರಿಸಿದ್ದಾರೆ. ತನ್ನ ಪತಿಯಿಂದ ದೂರವಾಗಲು ಪತಿಯ ತಂಗಿಯನ್ನೇ ಆತನ 'ಎರಡನೇ ಹೆಂಡತಿ' ಎಂದು ಬಿಂಬಿಸಿ ಕೋರ್ಟ್ ಹಾದಿ ತಪ್ಪಿಸಿದ್ದಾರೆ!

ಗ್ವಾಲಿಯರ್ ನಿವಾಸಿಯಾದ ಈ ಮಹಿಳೆ 1998ರಲ್ಲಿ ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ವಿವಾಹವಾಗಿದ್ದರು. ಪತಿಯ ಕೆಲಸದ ನಿಮಿತ್ತ ಆತ ಮನೆಯಿಂದ ದೂರವಿರುತ್ತಿದ್ದದ್ದು ದಂಪತಿಗಳ ನಡುವೆ ಜಗಳಕ್ಕೆ ಕಾರಣವಾಗಿತ್ತು. 2015 ರಿಂದ ಈ ಮಹಿಳೆ ಪತಿಯಿಂದ ಬೇರೆಯಾಗಿ ವಾಸಿಸಲು ಆರಂಭಿಸಿದ್ದರು.

ಹಠಕ್ಕೆ ಬಿದ್ದ ಪತ್ನಿ, ಒಪ್ಪದ ಪತಿ

ಮಹಿಳೆಗೆ ಯಾವುದೇ ಬೆಲೆ ತೆತ್ತಾದರೂ ವಿಚ್ಛೇದನ ಬೇಕಿತ್ತು. ಆದರೆ ಪತಿಗೆ ವಿಚ್ಛೇದನ ನೀಡಲು ಇಷ್ಟವಿರಲಿಲ್ಲ. ಹೀಗಾಗಿ, 2021ರಲ್ಲಿ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ ಮಹಿಳೆ, "ತನ್ನ ಪತಿ ಎರಡನೇ ಮದುವೆಯಾಗಿದ್ದಾನೆ" ಎಂಬ ಗಂಭೀರ ಆರೋಪ ಮಾಡಿದರು.

ತನ್ನ ಆರೋಪಕ್ಕೆ ಪುರಾವೆಯಾಗಿ ಮಹಿಳೆಯು ನ್ಯಾಯಾಲಯಕ್ಕೆ ಒಂದು ಕೌಟುಂಬಿಕ ಗ್ರೂಪ್ ಫೋಟೋವನ್ನು ಸಲ್ಲಿಸಿದರು. ಆ ಫೋಟೋದಲ್ಲಿ ಪತಿಯ ಪಕ್ಕದಲ್ಲಿ ನಿಂತಿದ್ದ ಮಹಿಳೆಯನ್ನು ಆತನ 'ಎರಡನೇ ಹೆಂಡತಿ' ಎಂದು ಗುರುತಿಸಿದರು. ಈ ಫೋಟೋವನ್ನೇ ಪ್ರಬಲ ಸಾಕ್ಷ್ಯ ಎಂದು ನಂಬಿದ ಕೌಟುಂಬಿಕ ನ್ಯಾಯಾಲಯವು ಮಹಿಳೆಯ ಪರವಾಗಿ ಏಕಪಕ್ಷೀಯ (One-sided) ವಿಚ್ಛೇದನ ಆದೇಶವನ್ನು ನೀಡಿತು. ಈ ಪ್ರಕ್ರಿಯೆಯಲ್ಲಿ ಪತಿಗೆ ತನ್ನ ವಾದ ಮಂಡಿಸಲು ಅವಕಾಶವೇ ಸಿಕ್ಕಿರಲಿಲ್ಲ.

ಸತ್ಯ ಬೆಳಕಿಗೆ ಬಂದಿದ್ದು ಹೇಗೆ?

ಏಪ್ರಿಲ್ ಮೊದಲ ವಾರದಲ್ಲಿ ಪತಿಗೆ ತನಗೆ ವಿಚ್ಛೇದನ ನೀಡಲಾಗಿರುವ ವಿಷಯ ತಿಳಿಯಿತು. ತಕ್ಷಣವೇ ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಿದ ಆತ ಬೆಚ್ಚಿಬಿದ್ದಿದ್ದಾನೆ. ತನ್ನ ಪತ್ನಿ ನೀಡಿದ ಫೋಟೋದಲ್ಲಿ 'ಎರಡನೇ ಹೆಂಡತಿ' ಎಂದು ಬಿಂಬಿತವಾಗಿದ್ದವರು ಬೇರಾರೂ ಅಲ್ಲ, ಆತನ ಸ್ವಂತ ಸಹೋದರಿ!

ಹೈಕೋರ್ಟ್ ಮೆಟ್ಟಿಲೇರಿದ ಪತಿ

ಸರ್ಕಾರಿ ವಕೀಲ ಧರ್ಮೇಂದ್ರ ಶರ್ಮಾ ಅವರು ತಿಳಿಸಿರುವಂತೆ, "ಪತ್ನಿಯು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ, ಸುಳ್ಳು ಪುರಾವೆಗಳ ಮೂಲಕ ವಿಚ್ಛೇದನ ಪಡೆದಿದ್ದಾರೆ" ಎಂದು ಆರೋಪಿಸಿ ಪತಿ ಈಗ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಬೆಂಚ್‌ನಲ್ಲಿ ಈ ಆದೇಶವನ್ನು ಪ್ರಶ್ನಿಸಿದ್ದಾರೆ. ಪತ್ನಿ ದಾರಿ ತಪ್ಪಿಸಿ ಪಡೆದ ಈ ವಿಚ್ಛೇದನ ಆದೇಶವನ್ನು ರದ್ದುಗೊಳಿಸುವಂತೆ ಪತಿ ಮನವಿ ಮಾಡಿದ್ದು, ಹೈಕೋರ್ಟ್ ಈಗ ಈ ವಿಚಿತ್ರ ಪ್ರಕರಣದ ವಿಚಾರಣೆ ನಡೆಸುತ್ತಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾಲ್ಕು ಹೆಂಡಿರ ಗಂಡನ ಜೊತೆ ಲಿವ್​-ಇನ್​: ಮಗುವಾದ್ಮೇಲೆ ರೇ*ಪ್​ ಕೇಸ್​- 'ಸುಪ್ರೀಂ' ಮಹತ್ವದ ತೀರ್ಪು
'ಆ ನಟನಿಗೆ ನನ್ನ ಹೃದಯದಲ್ಲಿ ಸ್ಪೆಷಲ್ ಸ್ಥಾನ ಇದೆ'.. ಸ್ವತಃ ತಾವೇ ಗುಟ್ಟು ಬಿಟ್ಟುಕೊಟ್ಟ ನಟಿ ಅನುಷ್ಕಾ ಶೆಟ್ಟಿ!