
ಉತ್ತರ ಪ್ರದೇಶ ಇತ್ತೀಚೆಗೆ ಕೆಲವೊಂದು ವಿಚಿತ್ರ ಸಂಬಂಧಗಳ ಕಾರಣಕ್ಕೆ ಸುದ್ದಿಯಾಗುತ್ತಿದೆ. ಕೆಲ ದಿನಗಳ ಹಿಂದಷ್ಟೆ ಅಲಿಘರ್‌ನಲ್ಲಿ ಮಹಿಳೆಯೊಬ್ಬಳು ತನ್ನ ಭಾವಿ ಅಳಿಯನ ಜೊತೆ ಮಗಳ ಮದುವೆಗೆ 10 ದಿನಗಳ ಮೊದಲು ಓಡಿ ಹೋದಂತಹ ಘಟನೆ ನಡೆದಿತ್ತು. ಆ ಘಟನೆ ಮಾಸುವ ಮೊದಲೇ ಮಹಿಳೆಯೊಬ್ಬಳು ತನ್ನ ಮಗಳ ಮಾವನ ಜೊತೆ(ಬೀಗ ಅಥವಾ ಮಗಳ ಗಂಡನ ಅಪ್ಪ) ಓಡಿ ಹೋದಂತಹ ಘಟನೆ ನಡೆದಿತ್ತು. ಈ ಎರಡೂ ವಿಚಿತ್ರ ಘಟನೆಗಳು ಮಾಸುವ ಮೊದಲೇ ಈಗ ಅಲ್ಲಿ ಮತ್ತೊಂದು ವಿಚಿತ್ರ ಘಟನೆ ನಡೆದಿದೆ. 50 ವರ್ಷದ ಮಹಿಳೆಯೊಬ್ಬರು ತಮ್ಮ 30 ವರ್ಷದ ಮೊಮ್ಮಗನನ್ನೇ ಮದುವೆಯಾಗಿದ್ದಾರೆ. ಬರೀ ಇಷ್ಟೇ ಅಲ್ಲ ತನ್ನ ಗಂಡ ಹಾಗೂ ನಾಲ್ವರು ಮಕ್ಕಳ ಕೊಲೆಗೂ ಈಕೆ ಮೊಮ್ಮಗನ ಜೊತೆ ಸೇರಿ ಸಂಚು ರೂಪಿಸಿದ್ದಾಳೆ. ಉತ್ತರ ಪ್ರದೇಶದಲ್ಲೇ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
30 ವರ್ಷದ ಮೊಮ್ಮಗನನ್ನು ದೇಗುಲದಲ್ಲಿ 50 ವರ್ಷದ ಮಹಿಳೆ ಮದುವೆಯಾಗಿದ್ದಾಳೆ. ಈ 50 ವರ್ಷದ ಮಹಿಳೆಗೆ ಇಬ್ಬರು ಹೆಣ್ಣು ಇಬ್ಬರು ಗಂಡು ಒಟ್ಟು 4 ಮಕ್ಕಳಿದ್ದಾರೆ. ಆದರೆ ಆಕೆ ಮೊಮ್ಮಗನನ್ನು ಮದುವೆಯಾಗುವುದಕ್ಕಾಗಿ ತನ್ನ ತುಂಬು ಸಂಸಾರವನ್ನು ಬಿಟ್ಟು ಬಂದು ದೇಗುಲದಲ್ಲಿ ಮದುವೆಯಾಗಿದ್ದಾಳೆ. ಅಂದಹಾಗೆ ಹೀಗೆ ಮೊಮ್ಮಗನನ್ನೇ ಮದುವೆಯಾದ ಮಹಿಳೆಯನ್ನು ಇಂದ್ರಾವತಿ ಎಂದು ಗುರುತಿಸಲಾಗಿದೆ.
ಈ ಇಂದ್ರಾವತಿ ಹಾಗೂ ಆಕೆಗೆ ಸಂಬಂಧದಲ್ಲಿ ಮೊಮ್ಮಗನಾಗಬೇಕಿರುವ ಅಜಾದ್ ಇಬ್ಬರೂ ಅಂಬೇಡ್ಕರ್ ನಗರದಲ್ಲಿ ಅಕ್ಕಪಕ್ಕದ ಮನೆಯಲ್ಲೇ ವಾಸ ಮಾಡುತ್ತಾರೆ. ಕೆಲ ದಿನಗಳಿಂದ ಇವರ ಮಧ್ಯೆ ಪ್ರೇಮ ಸಂಬಂಧ ಬೆಳೆದಿದೆ. ಇವರು ಆಗಾಗ ಭೇಟಿಯಾಗುತ್ತಿದ್ದರೂ ಕೂಡ ಕೌಟುಂಬಿಕ ಸಂಬಂಧಗಳ ಕಾರಣದಿಂದ ಇವರ ಬಗ್ಗೆ ಯಾರಿಗೂ ಸಣ್ಣ ಸಂಶಯವೂ ಇರಲಿಲ್ಲ.
ಆದರೆ 4 ದಿನದ ಹಿಂದೆ ಇಂದ್ರಾವತಿ ಹಾಗೂ ಅಜಾದ್ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಇತ್ತ ಇಂದ್ರಾವತಿಯ ಗಂಡ ಚಂದ್ರಶೇಖರ್ ಇವರಿಬ್ಬರೂ ರಹಸ್ಯವಾಗಿ ಮಾತನಾಡುವುದನ್ನು ನೋಡಿದ್ದರಂತೆ ಅಲ್ಲದೇ ಅನುಮಾನ ಬಂದು ಅವರಿಗಿಬ್ಬರಿಗೆ ಅಕ್ರಮ ಸಂಬಂಧವಿದೆ ಎಂದು ತಿಳಿದ ಚಂದ್ರಶೇಖರ್ ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಇಬ್ಬರಿಗೂ ಈ ಸಂಬಂಧವನ್ನು ಮುಂದುವರೆಸದಂತೆ ಕರೆದು ಬುದ್ಧಿ ಹೇಳಿದ್ದಾರೆ. ಆದರೆ ಮಹಿಳೆ ಇಂದ್ರಾವತಿ ಹಾಗೂ ಅಜಾದ್ ಈ ಮಾತನ್ನು ಕೇಳಲು ಸಿದ್ಧವಿಲ್ಲದೆ ಓಡಿ ಹೋಗಿದ್ದಾರೆ. ಘಟನೆಯ ಬಳಿಕ ಚಂದ್ರಶೇಖರ್ ಪೊಲೀಸರಿಗೂ ವಿಚಾರ ತಿಳಿಸಿ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದಾರೆ.
ಆದರೆ ಇಂದ್ರಾವತಿ ಮತ್ತು ಆಜಾದ್ ಇಬ್ಬರೂ ವಯಸ್ಕರಾಗಿದ್ದರಿಂದ ಮತ್ತು ಅವರ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ಪೊಲೀಸರು ದೂರು ದಾಖಲಿಸಲು ನಿರಾಕರಿಸಿದರು.
ಇತ್ತ ಅಜಾದ್ ಮೇಲೆ ವಿಪರೀತ ವ್ಯಾಮೋಹಕ್ಕೆ ಒಳಗಾಗಿದ್ದ ಇಂದ್ರಾವತಿ ತನ್ನ ಪತಿ ಮತ್ತು ಮಕ್ಕಳ ಕತೆ ಮುಗಿಸಲು ಆಜಾದ್ ಜೊತೆ ಸೇರಿ ವಿಷಪ್ರಾಶನ ಮಾಡಲು ಸಂಚು ರೂಪಿಸಿದಳು ಎಂಬ ಆರೋಪ ಕೇಳಿ ಬಂದಿದೆ. ಅಂದಹಾಗೆ ಚಂದ್ರಶೇಖರ್‌ಗೆ ಈ ಇಂದ್ರಾವತಿ 2ನೇ ಪತ್ನಿಯಾಗಿದ್ದು, ಕೆಲಸದ ಕಾರಣಕ್ಕೆ ದಿನವಿಡೀ ಮನೆಯಿಂದ ಹೊರಗಿರುತ್ತಿದ್ದಿದ್ದರಿಂದ ಈಕೆಗೂ ಸಂಬಂಧದಲ್ಲಿ ಮೊಮ್ಮಗನೂ ಆಗಬೇಕಿದ್ದ ಅಜಾದ್ ನಡುವೆ ಸಂಬಂಧ ಬೆಳೆಯಿತು ಎಂದು ಅವರು ಪೊಲೀಸರಿಗೆ ಹೇಳಿದ್ದಾರೆ. ಇತ್ತ ಪತ್ನಿಯ ದ್ರೋಹದಿಂದ ಬೇಸತ್ತ ಚಂದ್ರಶೇಖರ್ ತನ್ನ ಹೆಂಡತಿ ತನ್ನ ಪಾಲಿಗೆ ಸತ್ತಿದ್ದಾಳೆ ಎಂದು ಘೋಷಿಸಿದ್ದು, 13ನೇ ದಿನ ಆಕೆಯ ತಿಥಿ ಮಾಡುವುದಾಗಿಯೂ ಹೇಳಿದ್ದಾನೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.