ಸುಂದರ ಪ್ರೇಮಕಥೆಗಳು ಯಾವಾಗಲೂ ಹಾಗೆಯೇ, ದುರಂತ ಅಂತ್ಯವನ್ನು ಕಾಣುತ್ತವೆ. ಪ್ರೀತಿಸಿ, ಎಲ್ಲಾ ಸಮಸ್ಯೆಯನ್ನು ಎದುರಿಸಿ ಒಂದಾಗಬೇಕೆಂದು ಬಯಸಿದವರು ವಿಧಿಯಾಟದಿಂದ ದೂರವಾಗಿಬಿಡುತ್ತಾರೆ. ಕೇರಳದ ತ್ರಿಶ್ಯೂರ್‌ನಲ್ಲೂ ಇಂಥಹದ್ದೇ ಘಟನೆ ನಡೆದಿದೆ. ಜೀವನದುದ್ದಕ್ಕೂ ಜೊತೆಯಾಗಿ ನಡೆಯುವೆನೆಂದು ಕೈ ಹಿಡಿದ ಯುವಕ ಸಾವನ್ನಪ್ಪಿದ್ದಾನೆ.
ತ್ರಿಶ್ಯೂರ್: ಪ್ರೀತಿ ಅದೊಂದು ಸುಂದರ ಭಾವನೆ. ನಿಷ್ಕಲ್ಮಶ ಪ್ರೀತಿಗೆ ಜಾತಿ-ಧರ್ಮ, ಅಂತಸ್ತು, ಬಣ್ಣ, ವೈಕಲ್ಯ ಯಾವುದೂ ಅಡ್ಡಿಯಾಗುವುದಿಲ್ಲ. ಪ್ರೀತಿಸಿದವರ ಜೊತೆ ಖುಷಿಯಿಂದ ಜೀವನ ನಡೆಸುವುದಷ್ಟೇ ಜೀವನದ ಗುರಿಯಾಗಿರುತ್ತದೆ. ಆಕೆಯೂ ಅಷ್ಟೇ ಕನಸು ಕಂಡಿದ್ದಳು. ಪಾರ್ಶ್ವವಾಯುವಿಗೆ ತುತ್ತಾಗಿದ್ದ ಪ್ರಿಯಕರನನ್ನು ಮನೆಯವರನನ್ನು ವಿರೋಧದ ನಡುವೆಯೂ ಮದುವೆಯಾದಳು. ಜೀವನದುದ್ದಕ್ಕೂ ನಾನಿರುತ್ತೇನೆ ಎಂಬ ಭರವಸೆ ಕೊಟ್ಟಳು. ಆದರೆ ವಿಧಿಯಾಟ ಮಾತ್ರ ಬೇರೆಯೇ ಇತ್ತು. ಪ್ರೀತಿಯ ಮೇಲೆ ಅದ್ಯಾರ ಕಣ್ಣು ಬಿತ್ತೋ, ವೈಕಲ್ಯವಿದ್ದರೇನಂತೆ ಪ್ರೀತಿಸಿದ ಹುಡುಗಿ ಜೊತೆಗಿದ್ದಾಳಲ್ಲ ಅನ್ನೋ ಖುಷಿಯಲ್ಲಿ ಜೀವನ ನಡೆಸುತ್ತಿದ್ದ ಯುವಕ ಸಾವನ್ನಪ್ಪಿದ್ದಾನೆ.
ಅಪಘಾತದ ಬಳಿಕ ಪಾರ್ಶ್ವವಾಯುವಿಗೆ (Paralysed) ಒಳಗಾಗಿದ್ದ ಕೇರಳ ಮೂಲದ ಪ್ರಣವ್ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಪ್ರಣವ್‌ಗೆ 31 ವರ್ಷ ವಯಸ್ಸಾಗಿತ್ತು. ಈ ಜೋಡಿ ತಮ್ಮ ಪ್ರೇಮ ವಿವಾಹ (Love marriage)ದಿಂದಲೇ ಕೇರಳದಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಸುದ್ದಿ ಮಾಡಿದ್ದರು. ತ್ರಿಶ್ಯೂರ್‌ನ ಕನ್ನಿಕ್ಕರ ಮೂಲದ ನಿವಾಸಿ ಪ್ರಣವ್. ಶುಕ್ರವಾರ ಬೆಳಗ್ಗೆ ರಕ್ತ ವಾಂತಿ ಮಾಡಿಕೊಂಡ ಪ್ರಣವ್ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ (Treatment) ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
Valentines Day: ಟ್ವಿಟರ್‌ನಲ್ಲಿ ಹುಟ್ಟಿಕೊಂಡ ಪತ್ರಕರ್ತೆಯ ಪ್ರೇಮಕಥೆ ವೈರಲ್
ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದ ಪ್ರಣವ್-ಶಹಾನಾ
ಪ್ರಣವ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದರು. 8 ವರ್ಷಗಳ ಹಿಂದೆ ನಡೆದ ಅಪಘಾತ (Accident)ವೊಂದರಲ್ಲಿ ಪ್ರಣವ್ ಗಂಭೀರವಾಗಿ ಗಾಯಗೊಂಡರು. ಇದಾದ ಬಳಿಕ ಅವರಿಗೆ ಸೊಂಟದಿಂದ ಕೆಳಗಿನ ಭಾಗ ಪಾರ್ಶ್ವವಾಯುವಿಗೆ ಒಳಗಾಗಿತ್ತು. ನಿಯಂತ್ರಣ ಕಳೆದುಕೊಂಡ ಬೈಕ್ ಗೋಡೆ ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು. ಇದನ್ನು ಸಾಮಾಜಿಕ ಜಾಲತಾಣ (Social media)ದಲ್ಲಿ ಪ್ರಣವ್ ಹಂಚಿಕೊಂಡಿದ್ದರು. ಅಲ್ಲದೆ, ರಸ್ತೆ ಸುರಕ್ಷತೆ ಬಗ್ಗೆ ಜಾಲತಾಣದಲ್ಲಿ ಸದಾ ಜಾಗೃತಿ ಮೂಡಿಸುತ್ತಿದ್ದರು.
ಪ್ರಣವ್ ಪಾರ್ಶ್ವವಾಯುವಿಗೆ ತುತ್ತಾಗಿದ್ದರು ಜೀವನವನ್ನು ಹೆಚ್ಚು ಪ್ರೀತಿಸುತ್ತಿದ್ದರು. ಸ್ನೇಹಿತರ ಜೊತೆ ಊರಿನ ಹಬ್ಬ, ಜಾತ್ರೆಗಳಿಗೆ ತಪ್ಪದೇ ಹೋಗಿ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಹೀಗೆ ತಿರುವನಂತಪುರದ ಶಹಾನಾಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಣವ್ ಪರಿಚಯವಾಗಿತ್ತು. ಪ್ರಣವ್‌ಗೆ ಲೈಫ್ ಮೇಲಿರುವ ಪಾಸಿಟಿವ್ ಥಿಂಕಿಂಗ್ ಶಹಾನಾಗೆ ಇಷ್ವವಾಯಿತು. ಇಬ್ಬರೂ ಭೇಟಿಯಾಗಲು ನಿರ್ಧರಿಸಿದರು. ಆ ನಂತರ ಶಹಾನಾ, ತಾನು ಜೀವನನುದ್ದಕ್ಕೂ ಪ್ರಣವ್ ಜೊತೆ ಇರಲು ಬಯಸುವುದಾಗಿ ಹೇಳಿದಳು. ಅದಂತೆ ಇಬ್ಬರೂ ಮದುವೆ (Marriage)ಯಾಗುವ ನಿರ್ಧಾರ ಮಾಡಿದ್ದರು.
ವೇದಮಂತ್ರಘೋಷಗಳ ನಡುವೆ ಭಾರತೀಯ ಯುವಕನನ್ನು ವರಿಸಿದ ರಷ್ಯನ್ ಬೆಡಗಿ
ಶಹಾನಾ ಮುಖವನ್ನು ತನ್ನ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ ಪ್ರಣವ್
ಪ್ರಣವ್ ಅವರನ್ನು ಮದುವೆಯಾಗಲು ಶಹಾನಾ ತನ್ನ ಮನೆಯಿಂದ ಹೊರಟು 250 ಕಿಲೋಮೀಟರ್ ಪ್ರಯಾಣಿಸಿ ತಿರುವನಂತಪುರಂನಿಂದ ತ್ರಿಶೂರ್ ತಲುಪಿದ್ದಳು . ಧರ್ಮ, ಪ್ರದೇಶ ಮತ್ತು ಇತರ ಹಲವು ಅಡೆತಡೆಗಳನ್ನು ಮುರಿದು ಮದುವೆಯಾಗುವ ಶಹಾನಾ ಆಲೋಚನೆಗೆ ಅವರ ಕುಟುಂಬವು ಸಂತೋಷವಾಗಿರಲಿಲ್ಲ. ಮತ್ತೊಂದೆಡೆ, ಪ್ರಣವ್ ಮತ್ತು ಅವನ ಕುಟುಂಬದವರು ಸಹ ಶಹಾನಾ ಅವರ ನಿರ್ಧಾರವನ್ನು ಬದಲಾಯಿಸುವಂತೆ ಮನವೊಲಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಶಹಾನಾಳನ್ನು ತಡೆಯುವ ಸಲುವಾಗಿ ಪ್ರಣವ್ ತನ್ನ ಸ್ನೇಹಿತರ ಬಳಿ ಬೇರೆ ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ಸುಳ್ಳು ಸಹ ಹೇಳಿದ್ದನು. ಆದರೆ ಶಹಾನಾ ಇದಕ್ಕೂ ಹಿಂದೆ ಸರಿಯಲಿಲ್ಲ.
ಶಹಾನಾ ತನ್ನ ಮನೆಯವರ ವಿರೋಧದ ನಡುವೆಯೂ ಪ್ರಣವ್ ಕೈಹಿಡಿಯುವ ಮೂಲಕ ನಿಜವಾದ ಪ್ರೀತಿಗೆ ಜ್ವಲಂತ ಉದಾಹರಣೆಯಾದರು. 2020ರ ಮಾರ್ಚ್ ತಿಂಗಳಲ್ಲಿ ನಡೆದ ಇವರಿಬ್ಬರ ಮದುವೆ ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು. ಶಹಾನಾ ಜೊತೆಗಿನ ಸಂತಸದ ಕ್ಷಣಗಳನ್ನು ಪ್ರಣವ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗಷ್ಟೇ ಶಹಾನಾ ಮುಖವನ್ನು ತನ್ನ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು ಮತ್ತು ಅದನ್ನು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಇಬ್ಬರು ಸಂತೋಷದ ಜೀವನವನ್ನೂ ನಡೆಸುತ್ತಿದ್ದರು. ಆದರೆ, ವಿಧಿಯಾಟ ಇಂದು ಇಬ್ಬರನ್ನು ಬೇರೆ ಮಾಡಿದೆ.