Cheating Partner: ಸಂಗಾತಿಯಿಂದ ಮೋಸ ಹೋದಿರಾ? ಒಂದು ಕ್ಷಣ ನಿಲ್ಲಿ

By Suvarna News  |  First Published Feb 28, 2022, 6:03 PM IST

ಸಂಗಾತಿಯಿಂದ ಮೋಸ ಹೋಗಿರುವ ಭಾವನೆ ಹಿಂಸೆ ನೀಡುತ್ತದೆ. ದುಡುಕಿನ ವರ್ತನೆಗೂ ಕಾರಣವಾಗಬಲ್ಲದು. ಅಂಥ ಸಮಯದಲ್ಲಿ ತಾಳ್ಮೆಯಿಂದ ವರ್ತಿಸಿ, ಪರಿಸ್ಥಿತಿ ನಿಭಾಯಿಸಬೇಕು. ಸೂಕ್ತ ನಿರ್ಧಾರ ಕೈಗೊಳ್ಳಬೇಕು.
 


'ಮೋಸ (Cheating) ಹೋದೆʼ ಎನ್ನುವ ಭಾವನೆ (Feeling) ನರಳಿಸುತ್ತದೆ. ಮೋಸ ಹೋಗುವ ಕಲ್ಪನೆಯೇ ಯಾರಿಗೂ ಇಷ್ಟವಾಗುವುದಿಲ್ಲ. ಹಣಕಾಸು ಹಾಗೂ ಇನ್ನಿತರ ವಿಚಾರಗಳಿಗಾದರೆ ಹೇಗೋ ನಿಯಂತ್ರಿಸಿಕೊಳ್ಳಬಹುದು. ಆದರೆ, ಸಂಗಾತಿಯ (Partner) ಅನೈತಿಕ ಸಂಬಂಧದ ಬಗ್ಗೆ ತಿಳಿದುಬಂದಾಗ ಇಂಥದ್ದೊಂದು ಭಾವನೆ ಕಾಡಿದರೆ ನಿಯಂತ್ರಿಸಿಕೊಳ್ಳುವುದು ಸುಲಭವಲ್ಲ. ಪತಿ (Husband) ತನಗೆ ಮೋಸ ಮಾಡಿದ ಎನ್ನುವ ಭಾವನೆ ಪತ್ನಿ(Wife)ಯನ್ನು ಇನ್ನಿಲ್ಲದಂತೆ ನೋಯಿಸುತ್ತದೆ. ಪತ್ನಿ ಮೋಸ ಮಾಡಿದ ಭಾವನೆ ಪತಿಯನ್ನು ಹಿಂಸಿಸುತ್ತದೆ. ಇಂಥ ಪರಿಸ್ಥಿತಿಗಳು ಎಂತೆಂಂಥಹ ದುರ್ಘಟನೆಗೂ ನಾಂದಿಯಾಗಬಲ್ಲವು. 

ಸಂಗಾತಿ ಮೋಸ ಮಾಡಿದ ಭಾವನೆಯಿಂದ ಹೊರಬರುವುದು ಸುಲಭವಲ್ಲ. ಆದರೂ ಜೀವನದಲ್ಲಿ ಅಂಥದ್ದೊಂದು ಸನ್ನಿವೇಶ ನಿರ್ಮಾಣವಾದರೆ ನಿಭಾಯಿಸಲೇಬೇಕಾಗುತ್ತದೆ. ವಾಸ್ತವವನ್ನು ಅರಿತು ಎದುರಿಸಬೇಕಾಗುತ್ತದೆ. 

•    ತಕ್ಷಣ (Immediate) ಯಾವುದೇ ಕೃತ್ಯಕ್ಕೆ ಇಳಿಯಬೇಡಿ
ಪತಿಯಾಗಲೀ, ಪತ್ನಿಯಾಗಲೀ ನಂಬಿಕೆಗೆ ದ್ರೋಹ ಬಗೆದಿದ್ದಾನೆ/ಳೆ ಎನ್ನುವುದು ತಿಳಿದ ತಕ್ಷಣ ಯಾವುದೇ ರೀತಿಯಲ್ಲಿ ದುಡುಕಬೇಡಿ. ಯಾವುದೊಂದೂ ನಿರ್ಧಾರಕ್ಕೆ ತಕ್ಷಣ ಬರಲೇಬೇಡಿ. ಮನಸ್ಥಿತಿ ಸಮಸ್ಥಿತಿಗೆ ಮರಳಿದಾಗಲೇ ಶಾಂತವಾಗಿ ಮುಂದಿನ ದಾರಿಗಳ ಬಗ್ಗೆ ಯೋಚಿಸಿ. 

•    ನಿಮ್ಮ ಹಿತದ (Self Care) ಬಗ್ಗೆ ಯೋಚಿಸಿ
ಯಾವುದಾದರೂ ವಿಚಾರದಲ್ಲಿ ಮೋಸ ಮಾಡಿದ ಸಂಗಾತಿಯೊಂದಿಗೆ ಬದುಕುವುದು ಕಷ್ಟದ ಕೆಲಸ. ಆದರೆ, ಆ ಸಮಯದಲ್ಲಿ ನೀವು ನಿಮ್ಮ ಆರೈಕೆಯತ್ತ, ಆರೋಗ್ಯದತ್ತ ಗಮನ ನೀಡಬೇಕು. ನಿಮ್ಮ ಬೇಕು-ಬೇಡಗಳ ಕುರಿತು ಆದ್ಯತೆ ನೀಡಿ. ಅವರು ವಿಶ್ವಾಸದ್ರೋಹ ಮಾಡಿದರು ಎಂದು ನೀವು ವಿಶ್ವಾಸಘಾತುಕರಾಗುವುದರಿಂದ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ನಿಮ್ಮ ಮೇಲೆ ನೀವು ಬೇಸರ ಮಾಡಿಕೊಳ್ಳುವುದಂತೂ ಈ ಸಮಯದಲ್ಲಿ ಕೂಡದು. ನಿಮ್ಮ ಬಗ್ಗೆ ನೀವೇ ಪ್ರೀತಿ (Love) ಕಳೆದುಕೊಳ್ಳುವುದು ಇನ್ನಷ್ಟು ಅನಾಹುತಗಳಿಗೆ ಕಾರಣವಾಗಬಲ್ಲದು. ಸೆಲ್ಫ್‌ ಕೇರ್‌ ತೆಗೆದುಕೊಳ್ಳಿ.

Sex Life : ಸಂಭೋಗದ ವೇಳೆ ಕಾಂಡೋಮ್ ಹರಿಯುತ್ತಾ? ಮಾಡ್ಬೇಡಿ ಈ ತಪ್ಪು

•    ದ್ವೇಷ, ಪ್ರತೀಕಾರದ (Revenge) ಭಾವನೆ ಮೂಡಿಸಿಕೊಳ್ಳಬೇಡಿ
ದ್ವೇಷದ ಭಾವನೆಯಿಂದ ನಾವೇ ಸ್ವತಃ ಹಾಳಾಗುತ್ತೇವೆ. ಅವರು ನಿಮಗೆ ಮೋಸ ಮಾಡಿದರು ಎಂದು ನೀವೂ ಪ್ರತೀಕಾರ ತೀರಿಸಿಕೊಳ್ಳುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ, ಇನ್ನಷ್ಟು ದೊಡ್ಡದಾಗುತ್ತದೆ. ನಿಮ್ಮ ಸಂಗಾತಿ ಮಾಡಿದಂತೆಯೇ ಅವರಿಗೆ ಮೋಸ ಮಾಡುವುದು ಸೇರಿದಂತೆ ಯಾವುದೇ ರೀತಿಯ ದ್ವೇಷ, ಪ್ರತೀಕಾರದ ಹಠ ಹೊರಬೇಡಿ. ಇದರಿಂದ ನಿಮ್ಮ ಕೋಪ (Angry) ಹಾಗೂ ಹತಾಶೆ ಹೆಚ್ಚು ಕಾಲ ನಿಮ್ಮನ್ನು ಕಾಡಲು ನೀವೇ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ಇದರ ಬದಲಾಗಿ, ನಿಮ್ಮ ಸಾಮರ್ಥ್ಯಗಳತ್ತ ಗಮನ ಕೊಡಿ. ಇಷ್ಟು ದಿನ ಮಾಡಬೇಕೆಂದುಕೊಂಡರೂ ಮಾಡಲು ಸಾಧ್ಯವಾಗದಿದ್ದ ಕೆಲಸಗಳನ್ನು ಪೂರೈಸಿ. ಕಾರ್ಯದಲ್ಲಿ ಮಗ್ನವಾದಾಗ ನಿಮ್ಮ ಅಂತಃಶಕ್ತಿಯ ಬಗ್ಗೆ ನಿಮಗೇ ಅಚ್ಚರಿಯಾಗುವಷ್ಟು ಆತ್ಮವಿಶ್ವಾಸ ನಿಮ್ಮದಾಗುತ್ತದೆ. 

Toxic Positivity: ಖುಷಿಯಾಗಿರಬೇಕೆಂಬುದೇ ಒತ್ತಡವಾಗಿ ನಿಮ್ಮನ್ನ ಕಾಡ್ತಾ ಇದ್ಯಾ?

•    ಮನೆಯ ಇತರ ಸದಸ್ಯರ ಎದುರು ಗಲಾಟೆ (Quarrel) ಮಾಡಿಕೊಳ್ಳಬೇಡಿ
ಮನೆಯಲ್ಲಿ ಮಕ್ಕಳಿದ್ದರೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಹ್ಯಾಂಡಲ್‌ ಮಾಡಬೇಕು ಎನ್ನುವುದು ನೆನಪಿರಲಿ. ಮನೆಯಲ್ಲಿ ಹಿರಿಯರಿದ್ದರೂ ಅವರನ್ನೂ ಆತಂಕಕ್ಕೆ ದೂಡುವ ಅಗತ್ಯವಿರುವುದಿಲ್ಲ. ನೀವಿಬ್ಬರೇ ಸಮಸ್ಯೆ ಬಗೆಹರಿಸಿಕೊಳ್ಳಲು ಎಷ್ಟೋ ಬಾರಿ ಸಾಧ್ಯವಾಗುತ್ತದೆ. ಆದರೆ, ನಿಮ್ಮಿಂದ ಸಮಸ್ಯೆ ಪರಿಹರಿಸಿಕೊಳ್ಳಲು ಆಗದಿದ್ದಾಗ ಹಿರಿಯರಿಗೆ ಪರಿಸ್ಥಿತಿಯನ್ನು ವಿವರಿಸಿ ಹೇಳುವುದು ಅಗತ್ಯ. ಕುಟುಂಬದಲ್ಲಿ ಆಪ್ತರಿದ್ದರೆ ಸಮಸ್ಯೆಯನ್ನು ಅವರ ಗಮನಕ್ಕೂ ತರುವುದು ಉತ್ತಮ. ಇದರಿಂದ ನಿಮ್ಮ ಸಂಗಾತಿ ರೊಚ್ಚಿಗೇಳಬಹುದು. “ಎಲ್ಲರಿಗೂ ವಿಷಯ ತಿಳಿಸಿ, ಮರ್ಯಾದೆ ಹಾಳು ಮಾಡಿದೆʼ ಎಂದು ಕೂಗಾಡಬಹುದು. ಆದರೆ, ಯಾವುದೇ ಕಾರಣಕ್ಕೂ ಮಕ್ಕಳ (Children) ಎದುರು ಗಲಾಟೆಗಳಾಗದಂತೆ ನೋಡಿಕೊಳ್ಳಿ. ನಿಮ್ಮ ಸಂಗಾತಿ ಮುಂದಿನ ಕೆಲವೇ ದಿನಗಳಲ್ಲಿ ನಿಮಗೆ ಮಾಜಿಯಾಗಬಹುದು, ಆದರೆ, ಆತ ಅಥವಾ ಆಕೆ ಮಕ್ಕಳಿಗೆ ಎಂದಿಗೂ ತಾಯಿಯೇ/ತಂದೆಯೇ ಆಗಿರುತ್ತಾರೆ ಎನ್ನುವುದು ನಿಮಗೆ ನೆನಪಿರಲಿ. 
   

click me!