ಕೆಲವರಿರ್ತಾರೆ, ಅವರಿಗೆ ಸುಸ್ಥಿತಿಯಲ್ಲಿ ಬದುಕುವುದಕ್ಕೆ ಸಾಕಾಗುವಷ್ಟು ಹಣವಾಗಲಿ, ತಿನ್ನಲು ಸಾಕಾಗುವಷ್ಟು ಆಹಾರವಾಗಲಿ, ದುಡಿದು ತಿನ್ನಲು ಆರೋಗ್ಯವಾಗಲಿ, ತಲೆಯ ಮೇಲೆ ಸೂರಾಗಲಿ ಇರುವುದಿಲ್ಲ. ಆದರೂ ಅವರು ತಮ್ಮ ಕೆಲ ಕರ್ಮಗಳಿಂದ ಅತ್ಯಂತ ಹೃದಯ ಶ್ರೀಮಂತಿಗಳೆನಿಸುತ್ತಾರೆ.
ಕೆಲವರಿರ್ತಾರೆ, ಅವರಿಗೆ ಸುಸ್ಥಿತಿಯಲ್ಲಿ ಬದುಕುವುದಕ್ಕೆ ಸಾಕಾಗುವಷ್ಟು ಹಣವಾಗಲಿ, ತಿನ್ನಲು ಸಾಕಾಗುವಷ್ಟು ಆಹಾರವಾಗಲಿ, ದುಡಿದು ತಿನ್ನಲು ಆರೋಗ್ಯವಾಗಲಿ, ತಲೆಯ ಮೇಲೆ ಸೂರಾಗಲಿ ಇರುವುದಿಲ್ಲ. ಆದರೂ ಅವರು ತಮ್ಮ ಕೆಲ ಕರ್ಮಗಳಿಂದ ಅತ್ಯಂತ ಹೃದಯ ಶ್ರೀಮಂತಿಗಳೆನಿಸುತ್ತಾರೆ. ಪ್ರೀತಿಯಲ್ಲಿ ಸಿರಿವಂತರೆನಿಸಿದ ಇಂತಹ ಕೆಲವರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಯುವಕನ ವೀಡಿಯೋವೊಂದು ವೈರಲ್ ಆಗಿದ್ದು, ಹೃದಯ ಶ್ರೀಮಂತಿಕೆಗೆ ಕಳಸವಿಟ್ಟಂತಿದೆ.
ಸಹಾರ್ ಬೈ ಮಾನ್ಸಿ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, ವೀಡಿಯೋದಲ್ಲಿ ನಿರಾಶ್ರಿತ ಯುವಕನೋರ್ವ ರಸ್ತೆ ಬದಿ ಕುಳಿತುಕೊಂಡು ನಾಯಿಗಳಿಗೆ ಸ್ವಲ್ಪ ಸ್ವಲ್ಪವೇ ಆಹಾರವನ್ನು ತಿನ್ನಿಸುತ್ತಿದ್ದಾನೆ. ನಾಯಿಗಳು ಆತನ ಮಕ್ಕಳಂತೆ ಬಹಳ ಖುಷಿಯಿಂದ ಆತನ ಸುತ್ತಲೂ ಕೆಲವು ಕುಳಿತುಕೊಂಡು ಮತ್ತೆ ಕೆಲವು ನಿಂತುಕೊಂಡು ಸಂತೋಷದಿಂದ ಆಹಾರವನ್ನು ಸೇವಿಸುತ್ತಿವೆ. ಆತ ತನಗೆ ನೀಡಿದ ಆಹಾರವನ್ನು ತಾನು ತಿನ್ನದೆ ತನ್ನ ಸುತ್ತ ಇರುವ ಶ್ವಾನಗಳಿಗೆ ಹಂಚುತ್ತಿದ್ದಾನೆ. ಆತನ ಸುತ್ತಲೂ ನಾಯಿಗಳು ಕಾವಲಾಗಿ ನಿಂತಿದ್ದು, ಈತ ನೀಡುವ ಬಿಸ್ಕೆಟ್‌ನ್ನು ಒಂದೊಂದಾಗಿ ತಿನ್ನುತ್ತಿವೆ.
ಬಡವನಾದರೇನು ಪ್ರಿಯೆ.... ಬಾನಡಿಗಳ ಹೊಟ್ಟೆ ತುಂಬಿಸುವ ಸಹೃದಯಿ: ವಿಡಿಯೋ ವೈರಲ್
ಈ ವೀಡಿಯೋ ಪೋಸ್ಟ್ ಮಾಡಿರುವ ಮಾನ್ಸಿ ಗುಪ್ತಾ ಅವರು ಈ ಹೃದಯದ ಶ್ರೀಮಂತನ ಬಗ್ಗೆ ಬರೆದುಕೊಂಡಿದ್ದು, ಇಂದು ನಾನು ನಂಬಲಸಾಧ್ಯವಾದಂತಹ ಶ್ರೀಮಂತ ವ್ಯಕ್ತಿಯನ್ನು ನೋಡಿದೆ. ಜೀವನದ ಬಗೆಗಿನ ದೃಷ್ಟಿಕೋನದಿಂದ ಆತ ಶ್ರೀಮಂತ, ಈತ ನಿಮಗೆ ಗುರುಗ್ರಾಮದ ಇಫ್ಕೋ ಚೌಕ್ ಮೆಟ್ರೋ ಸ್ಟೇಷನ್‌ನಿಂದ ತಿರುವು ಪಡೆದು ಪಾದಾಚಾರಿ ಮಾರ್ಗದಲ್ಲಿ ಸಾಗಿದರೆ ಕಾಣ ಸಿಗುತ್ತಾನೆ. ಅಲ್ಲಿ ಆತ ತನ್ನ ಪ್ರೀತಿಯ ಸ್ನೇಹಿತರಿಗೆ ಆಹಾರ ನೀಡುವುದನ್ನು ಕಾಣಬಹುದು. ನಾವು ಆತನಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದೇವೆ ಮತ್ತು ಮಾಡುತ್ತಿದ್ದೇವೆ. ಈ ವೀಡಿಯೋವನ್ನು ರೀಪೋಸ್ಟ್ ಮಾಡುವ ಮೂಲಕ ಮತ್ತಷ್ಟು ಜನರು ಆತನಿಗೆ ಸಹಾಯ ಮಾಡುವಂತಾಗಲಿ ಎಂದು ಬರೆದುಕೊಂಡಿದ್ದಾರೆ.
ವೀಡಿಯೋದಲ್ಲಿ ಕಾಣಿಸುವಂತೆ ಈ ಯುವಕನ ಕಾಲುಗಳು ಪೋಲೀಯೋ ಪೀಡಿತವಾದಂತೆ ಕಾಣುತ್ತಿದ್ದು, ದುಡಿದು ತಿನ್ನುವಷ್ಟು ಸಶಕ್ತನಂತೆ ಕಾಣುತ್ತಿಲ್ಲ, ಆದಾಗ್ಯೂ ಆತ ಯಾರು ದಾನ ನೀಡಿದ್ದನ್ನು ತನಗೆ ಎಂದು ಇರಿಸಿಕೊಳ್ಳುತ್ತಿಲ್ಲ, ತನ್ನ ಪ್ರೀತಿಯ ಶ್ವಾನ ಸ್ನೇಹಿತರಿಗೆ ಆತ ಅದನ್ನು ನೀಡಿ ಅವುಗಳ ಹೊಟ್ಟೆ ತುಂಬಿಸಲು ಮುಂದಾಗುತ್ತಿದ್ದಾನೆ. ವೀಡಿಯೋ ನೋಡಿದ ಅನೇಕರು ಈತನ ಹೃದಯ ಶ್ರೀಮಂತಿಕೆಗೆ ಭಾವುಕರಾಗಿದ್ದಾರೆ, ದೇವರು ಆತನನ್ನು ಆಶೀರ್ವದಿಸಲಿ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಆತನಿಗೆ ಒಳ್ಳೆಯ ಬದುಕು ಸಿಗುವುದಕ್ಕಾಗಿ ಎಲ್ಲರೂ ದಾನ ಮಾಡಬೇಕು ಎಂದು ಒಬ್ಬರು ಮನವಿ ಮಾಡಿದ್ದಾರೆ.
ಒಂದು ಕೋಟಿ ರೂಪಾಯಿ ದಾನ ಮಾಡಿದ ಕೂಲಿ ಕಾರ್ಮಿಕ, ಇದು ಹೃದಯ ಶ್ರೀಮಂತನ ಕಥೆ
ಒಟ್ಟಿನಲ್ಲಿ ತನಗಿಲ್ಲದಿದ್ದರೂ ಪರವಾಗಿಲ್ಲ ಬೇರೆಯವರು ಚೆನ್ನಾಗಿರಬೇಕು ಎಂಬ ಹೃದಯ ವೈಶಾಲ್ಯತೆ ಇರುವವರು ತೀರಾ ಕಡಿಮೆ. ಇಲ್ಲಿ ನಿರಾಶ್ರಿತನಂತೆ ಕಾಣುವ ಈ ಯುವಕನಿಗೆ ಮನೆ ಇದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ, ಆದರೆ ಆತನಿಗೆ ಬೀದಿನಾಯಿಗಳ ಮೇಲಿರುವ ಪ್ರೇಮವನ್ನು ವಿವರಿಸಲು ಪದಗಳೇ ಇಲ್ಲ. ತನಗಿಲ್ಲದಿದ್ದರೂ ಅವುಗಳಿಗೆ ತಿನಿಸುವ ಆತನ ಉದಾರ ಮನೋಭಾವದಿಂದ ಆತ ಪ್ರೀತಿಯ ವಿಚಾರದಲ್ಲಿ ತಾನು ಅತ್ಯಂತ ಶ್ರೀಮಂತ ಎಂಬುದನ್ನು ಸಾಬೀತುಪಡಿಸಿದ್ದಾನೆ.