ಸಾಮಾನ್ಯವಾಗಿ ಉದ್ಯೋಗಿಗಳು ಯಾವೆಲ್ಲ ಕಾರಣಕ್ಕಾಗಿ ರಜೆ ಕೇಳಬಹುದು ಎನ್ನುವ ಅಂದಾಜು ಎಲ್ಲರಿಗೂ ಇದೆ. ಆದರೆ, ಇಲ್ಲೊಬ್ಬ ಕಂಪೆನಿ ಉದ್ಯೋಗಿ ತನ್ನ ಸಿಇಒ ಬಳಿ ಲೇಟ್ ನೈಟ್ ಪಾರ್ಟಿ ರಜೆ ಕೇಳಿರುವುದು ಇದೀಗ ಮೋಜಿನ ಸುದ್ದಿಯಾಗಿದೆ.
ಕಚೇರಿಗಳಲ್ಲಿ ಅಥವಾ ಕೆಲಸ ಮಾಡುವ ಯಾವುದೇ ಸ್ಥಳದಲ್ಲಿ ಸಾಮಾನ್ಯವಾಗಿ ಯಾವುದಕ್ಕೆಲ್ಲ ರಜೆ ಕೇಳಬಹುದು? ಉದ್ಯೋಗಿಯೊಬ್ಬ ಹೊಂದಿರುವ ಅಧಿಕೃತ ರಜೆಗಳನ್ನು ಹೊರತುಪಡಿಸಿ ಕೆಲವೊಮ್ಮೆ ಬೇರೆ ಬೇರೆ ಕಾರಣಕ್ಕಾಗಿ ಅನಿವಾರ್ಯವಾಗಿ ರಜೆ ಕೇಳಬೇಕಾಗುತ್ತದೆ. ಆಗ ಅದಕ್ಕೆ ಕಾರಣವನ್ನೂ ನೀಡಬೇಕಾಗುತ್ತದೆ. ಮನೆಯಲ್ಲಿ ಸಮಾರಂಭವೋ, ಮದುವೆಯೋ ಅಥವಾ ಸಮೀಪದವರ ಸಾವೋ, ಅನಾರೋಗ್ಯವೋ ಏನೋ ಒಂದು ಕಾರಣ ನೀಡುವುದು ಸಹಜ. ಏನೊಂದೂ ಕಾರಣವನ್ನೇ ಹೇಳದೆ ರಜೆ ಹಾಕುವುದು ಅಧಿಕಪ್ರಸಂಗಿತನ ಎಂಬಂತೆ ಭಾಸವಾಗಬಹುದು. ಹೀಗಾಗಿ, ಕಾರಣ ನೀಡುವುದು ಅನಿವಾರ್ಯ. ಆದರೆ, ಇಲ್ಲೊಬ್ಬ ಉದ್ಯೋಗಿ ಭಾರೀ ವಿಶಿಷ್ಟ ಕಾರಣಕ್ಕಾಗಿ ರಜೆಯನ್ನು ಕೇಳಿದ್ದಾನೆ. ತನ್ನ ಸಿಇಒ ಜತೆಗೆ ಆತ ನಡೆಸಿದ ವಾಟ್ಸಾಪ್ ಚಾಟ್ ನಲ್ಲಿ ಉದ್ಯೋಗಿ ರಜೆ ಕೇಳಿರುವ ಕಾರಣ ಮಜವಾಗಿದೆ.
ಈ ಹಿಂದೆ, ಅನೇಕ ವಿಚಿತ್ರ ಕಾರಣಗಳಿಗಾಗಿ ರಜೆ (Leave) ಕೇಳಿದ ಅನೇಕ ಸನ್ನಿವೇಶಗಳ ಬಗ್ಗೆ ಕೇಳಿದ್ದೇವೆ. ಅದರಲ್ಲಿ ಹೆಂಡತಿ ಬೈಯ್ಯುತ್ತಾಳೆ ಎನ್ನುವುದರಿಂದ ಹಿಡಿದು ಕಟಿಂಗ್ ಮಾಡಿಸಿಕೊಳ್ಳುವುದಕ್ಕೂ ರಜೆ ಕೇಳಿದ ಪ್ರಸಂಗಗಳಿವೆ. ಆದರೆ, ಈ ಉದ್ಯೋಗಿ (Employee), ಲೇಟ್ ನೈಟ್ ಪಾರ್ಟಿ (Late Night Party) ಮಾಡುವುದಕ್ಕೋಸ್ಕರ ರಜೆಯನ್ನು ಕೇಳಿದ್ದಾರೆ. ಅನ್ ಸ್ಟಾಪ್ (Unstop) ಎನ್ನುವ ಕಂಪನಿ ಸಿಇಒ ಆಗಿರುವ ಅಂಕಿತ್ ಅಗರ್ವಾಲ್ ಅವರು ಈ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ. ಅಷ್ಟೇ ಅಲ್ಲ, ಇದು ಕಂಪೆನಿಗಳ ರಜೆ ನೀತಿ (Policy) ಹಾಗೂ ಉದ್ಯೋಗ ಸಂಸ್ಕೃತಿಯ ಬಗ್ಗೆ ಮಗದೊಮ್ಮೆ ಚರ್ಚೆಯನ್ನೂ ಹುಟ್ಟುಹಾಕಿದೆ.
ಅಂಕಿತ್ ಅಗರ್ವಾಲ್ (Ankit Agarwal), ತಮ್ಮ ಲಿಂಕ್ಡೆನ್ ಖಾತೆಯಲ್ಲಿ ರಜೆಯ ಕುರಿತು ವಾಟ್ಸಾಪ್ ನಲ್ಲಿ ನಡೆದ ಚಾಟ್ ಅನ್ನು ಹಂಚಿಕೊಂಡಿದ್ದಾರೆ. “ಇಂದು ಬೆಳಗ್ಗೆ ನನ್ನ ವಾಟ್ಸಾಪ್ ನಲ್ಲಿ ಈ ಮೇಸೇಜ್ ಲ್ಯಾಂಡ್ ಆಯ್ತು. ಉದ್ಯೋಗಿಯೊಬ್ಬ ಲೇಟ್ ನೈಟ್ ಪಾರ್ಟಿ ರಜೆಯನ್ನು ಕೇಳಿದ್ದಾನೆ. ಬಳಿಕ, ಹೀಗೆ ಕೇಳಿರುವುದಕ್ಕೆ ಆತನೇ ಸಾರಿ ಎಂದೂ ಹೇಳಿದ್ದು, ತನ್ನ ತಂಡದ ಸದಸ್ಯರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾನೆ’ ಎಂದವರು ತಿಳಿಸಿದ್ದಾರೆ.
ಕೋಟಿಗಟ್ಟಲೆ ಸಂಪಾದಿಸೋ ಸ್ಟಾರ್ಟ್ ಅಪ್ ಬಗ್ಗೆ ಕೇಳಿ, ಬ್ಯುಸಿನೆಸ್ ಶುರು ಮಾಡೋರು ನೀವಾಗಿದ್ದರೆ!?
ಕಚೇರಿಯಲ್ಲಿ ಬೇಕು ಮುಕ್ತ ವಾತಾವರಣ: ಕಂಪೆನಿ ಸಿಇಒ ಆಗಿರುವ ಅಂಕಿತ್ ಅಗರ್ವಾಲ್ ಹಾಗೂ ಅವರದ್ದೇ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಯ ನಡುವೆ ನಡೆದಿರುವ ಈ ಮುಕ್ತ ಮಾತುಕತೆ (Open Conversation) ಇದೀಗ ಎಲ್ಲರ ಗಮನ ಸೆಳೆದಿದೆ. ಜತೆಗೆ, ಕಚೇರಿಯಲ್ಲಿ ಮುಕ್ತ ಮಾತುಕತೆ ನಡೆಯುವ ಸಂಸ್ಕೃತಿ (Culture) ಇರಬೇಕಾದ ಅಗತ್ಯವನ್ನು ಅಂಕಿತ್ ಕೂಡ ಪ್ರತಿಪಾದಿಸಿದ್ದಾರೆ. “ಕಚೇರಿಯಲ್ಲಿ ಮುಕ್ತವಾದ ವಾತಾವರಣ ಇರುವುದು ಅತ್ಯಂತ ಅಗತ್ಯ. ಉದ್ಯೋಗಿ ಕಂಫರ್ಟ್ (Comfort) ಆಗಿದ್ದಾಗ, ಮುಕ್ತವಾಗಿದ್ದಾಗ, ಪರಸ್ಪರ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿದ್ದಾಗ ಅಲ್ಲಿ ವಿಶ್ವಾಸದ (Trust) ತಳಹದಿ ರೂಪುಗೊಳ್ಳುತ್ತದೆ. ಆಗ ಉತ್ತಮ ಸಂವಹನ ಸಾಧ್ಯವಾಗುತ್ತದೆ, ಉತ್ತಮ ಸಹಯೋಗದೊಂದಿಗೆ ಒಟ್ಟಾರೆ ಯಶಸ್ಸಿನಲ್ಲಿ (Success) ನಡೆಯಲು ಅನುಕೂಲವಾಗುತ್ತದೆ’ ಎಂದು ಅವರು ಬರೆದುಕೊಂಡಿದ್ದಾರೆ.
ಆನ್‌ಲೈನ್ ಫುಡ್ ಬುಕ್ಕಿಂಗ್ ಇನ್ನು ದುಬಾರಿ, ಫ್ಲಾಟ್‌ಫಾರ್ಮ್ ಫೀ ಏರಿಸಿದ Zomato!
ವಾಟ್ಸಾಪ್ ಚಾಟ್ ನಲ್ಲಿ ಉದ್ಯೋಗಿ ಲೇಟ್ ನೈಟ್ ಪಾರ್ಟಿ ರಜೆಯನ್ನು ಕೇಳಿದಾಗ ಕೂಲ್ (Cool) ಆಗಿ ಉತ್ತರಿಸಿರುವುದು ಸಹ ಎಲ್ಲರ ಗಮನ ಸೆಳೆದಿದೆ. ಉದ್ಯೋಗಿ ಸಾರಿ ಕೇಳಿದಾಗ ಇವರು “ಕೂಲ್, ನೀವು ಉತ್ತಮ ಸಂಗೀತ ಕಛೇರಿ ಹೊಂದಿದ್ದೀರಿ ಎಂದು ಭಾವಿಸುತ್ತೇನೆ. ಕೆಲವೊಮ್ಮೆ ನಮ್ಮನ್ನೂ ಕರೆದೊಯ್ಯಿರಿ’ ಎಂದು ತಮಾಷೆ ಮಾಡಿದ್ದಾರೆ. ಈ ವಾಟ್ಸಾಪ್ ಮಾತುಕತೆ ಪೋಸ್ಟ್ ಆದ ಕೆಲವೇ ಸಮಯದಲ್ಲಿ ಸಾಕಷ್ಟು ಪ್ರತಿಕ್ರಿಯೆ (Reactions) ಪಡೆದುಕೊಂಡಿದೆ.