ಐಕ್ಯೂ ಹೆಚ್ಚಿರುವವರಿಗಿಂತ ಎಮೋಶನಲ್ ಇಂಟಲಿಜೆನ್ಸ್ ಹೊಂದಿರುವವರೇ ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸುತ್ತಾರೆ.
ಯಾರಾದರೂ ತಮ್ಮ ಉದ್ಯೋಗದಲ್ಲಿ ಉನ್ನತಿ ಸಾಧಿಸುವಂತೆ ಮಾಡುವುದೇನು? ಜ್ಞಾನ, ಸ್ಮಾರ್ಟ್‌ನೆಸ್, ದೂರದೃಷ್ಟಿ ಎಲ್ಲವೂ ಸರಿ- ಆದರೆ ಜಗತ್ತಿನ ಅತಿ ಯಶಸ್ವೀ ನಾಯಕರನ್ನು ಇತರರಿಗಿಂತ ಭಿನ್ನವಾಗಿಸಿರುವುದು ಅವರ ಎಮೋಶನಲ್ ಇಂಟೆಲಿಜೆನ್ಸ್. ತಮ್ಮ ಹಾಗೂ ಇತರರ ಎಮೋಶನ್ಸ್‌ನ್ನು ಗುರುತಿಸುವ, ನಿಭಾಯಿಸುವ ಅವರ ಸಾಮರ್ಥ್ಯ.
ಇಂದಿನ ಕಂಪನಿಗಳು ಕೂಡಾ ಉದ್ಯೋಗಿಗಳನ್ನು ಆಯ್ಕೆ ಮಾಡುವಾಗ, ಪ್ರೊಮೋಶನ್ ಕೊಡುವಾಗ ಹಾಗೂ ಉದ್ಯೋಗಿಗಳಿಗೆ ಇತರೆ ಅವಕಾಶಗಳನ್ನು ನೀಡುವಾಗ ಅವರ ಎಮೋಶನಲ್ ಇಂಟೆಲಿಜೆನ್ಸ್ ಕಡೆ ಗಮನ ವಹಿಸುತ್ತವೆ. ಹೆಚ್ಚು ಇಕ್ಯೂ ಇದ್ದಷ್ಟೂ ಹೆಚ್ಚು ಉತ್ತಮ ಕಾರ್ಯಕ್ಷಮತೆ ವ್ಯಕ್ತಿಗಳದ್ದಾಗಿರುತ್ತದೆ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸುತ್ತವೆ. ಹಾಗಿದ್ದರೆ ಎಮೋಶನಲ್ ಇಂಟೆಲಿಜೆನ್ಸ್ ಹೊಂದಿರುವವರ ಗುಣಲಕ್ಷಣಗಳೇನು?
ಸ್ವಪ್ರಜ್ಞೆ
ಇದು ನಿಮ್ಮ ಭಾವನೆಗಳ ಬಗ್ಗೆ ನಿಮಗಿರುವ ಅರಿವನ್ನು ಸೂಚಿಸುತ್ತದೆ. ನೀವು ಯಾವ ಫೀಲಿಂಗ್ ಅನುಭವಿಸುತ್ತಿದ್ದೀರಿ, ಏತಕ್ಕಾಗಿ, ಆ ಫೀಲಿಂಗ್ಸ್ ನಿಮ್ಮ ವ್ಯಕ್ತಿತ್ವದ ಮೇಲೆ ಏನೆಲ್ಲ ಪರಿಣಾಮಗಳನ್ನು ಬೀರುತ್ತಿವೆ ಎಂಬ ಅರಿವು ಹೊಂದಿದ್ದರೆ ಸ್ವಪ್ರಜ್ಞೆ ಚೆನ್ನಾಗಿದೆ ಎಂದರ್ಥ. ಇವರಿಗೆ ತಮ್ಮ ಆದರ್ಶಗಳೇನು, ಉದ್ದೇಶವೇನು ಎಂಬುದರ ಅರಿವಿರುತ್ತದೆ. ಪ್ರತಿ ನಿಮಿಷವನ್ನೂ ಸ್ವಪ್ರಜ್ಞೆ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಬಹುದು. ನಿಮ್ಮ ವೀಕ್ನೆಸ್ ಏನು ಎಂಬುದು ತಿಳಿದು ಅದನ್ನು ಸ್ಟ್ರೆಂತ್ ಆಗಿಸುವತ್ತ ಕೆಲಸ ಮಾಡಬಹುದು.
ಸ್ವನಿಯಂತ್ರಣ
ಕಿರಿಕಿರಿ ಮಾಡುವ, ಮನಸ್ಸನ್ನು ಘಾಸಿ ಗೊಳಿಸುವ, ಇಂಪಲ್ಸ್‌ಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಇಕ್ಯೂ ಹೆಚ್ಚಿರುವವರಲ್ಲಿ ಇರುತ್ತದೆ. ಎಂಥ ಒತ್ತಡದಲ್ಲೂ ಕಾಮ್ ಆಗಿರುವ, ಮನಸ್ಸಿನ ನೋವುಗಳಿಂದ ಬೇಗ ರಿಕವರ್ ಆಗಲು ಇವರಿಗೆ ತಿಳಿದಿರುತ್ತದೆ. ಬದಲಾವಣೆಗೆ ಬೇಗ ಹೊಂದಿಕೊಳ್ಳುವ ಜೊತೆಗೆ ಅನಿರೀಕ್ಷಿತವಾದುದಕ್ಕೆ ಹೆದರದೆ ಎದೆ ಕೊಡಬಲ್ಲವರು. ನೆಗೆಟಿವ್ ಅಭಿಪ್ರಾಯಗಳನ್ನೂ ಸಕಾರಾತ್ಮಕವಾಗಿ ತೆಗೆದುಕೊಂಡು ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೆ. ಇವರಿಗೆ ಉತ್ತಮ ನಾಯಕರಾಗಲು ಸಾಧ್ಯವಾಗುತ್ತದೆ.
undefined
ಸಾಮಾಜಿಕ ಪ್ರಜ್ಞೆ
ಇತರರ ಭಾವನೆಗಳನ್ನು ಅವರು ಹೇಳದೆಯೇ ಅರ್ಥೈಸಿಕೊಳ್ಳುವ ಸಾಮರ್ಥ್ಯ, ಕೇಳುವ ಗುಣ, ಪರಿಣಾಮಕಾರಿಯಾಗಿ ಸಂವಹನ ನಡೆಸುವ ತಿಳಿವಳಿಕೆ ಇವರಲ್ಲಿರುತ್ತದೆ. ಮತ್ತೊಬ್ಬರನ್ನು ಎಂಪತಿಯಿಂದ ನೋಡುವ ಜೊತೆಗೆ, ಸಾಂಘಿಕವಾದ ಬೇಡಿಕೆಗಳನ್ನೂ ಅರ್ಥ ಮಾಡಿಕೊಳ್ಳುವ ಗುಣ ಸಾಮಾಜಿಕ ಪ್ರಜ್ಞೆ ಎನಿಸಿಕೊಳ್ಳುತ್ತದೆ.
ಸಂಬಂಧಗಳ ನಿರ್ವಹಣೆ
ಸಂಬಂಧಗಳ ನಿರ್ವಹಣೆ ಸುಲಭದ್ದಲ್ಲ ಎಂಬುದು ಹೆಚ್ಚಿನವರಿಗೆ ಅನುಭವದಿಂದ ಅರ್ಥವಾಗಿರುತ್ತದೆ. ಜೀವನದಲ್ಲಿ ಬಹುಮುಖ್ಯ ಸಂಬಂಧಗಳನ್ನೆಲ್ಲ ಉಳಿಸಿಕೊಳ್ಳುವುದು, ಬಂಧ ಗಟ್ಟಿಯಾಗಿಸುವುದು, ಹೊಸ ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳಬಲ್ಲ ಸಾಮರ್ಥ್ಯ, ಮತ್ತೊಬ್ಬರನ್ನು ಪ್ರೇರೇಪಿಸುವ ಶಕ್ತಿ, ಜಗಳಕದನಗಳನ್ನು ನಿಭಾಯಿಸುವ ಚತುರತೆ, ಗುಂಪಿನಲ್ಲಿ ಕೆಲಸ ಮಾಡುವ ಚಾಣಾಕ್ಷತೆ ಇವೆಲ್ಲವೂ ಉತ್ತಮವಾಗಿ ಸಂಬಂಧ ನಿರ್ವಹಿಸಲು ಬಲ್ಲವರ ಗುಣಗಳು.
ಕುತೂಹಲ
ನನ್ನಲ್ಲಿ ಯಾವುದೇ ವಿಶೇಷ ಪ್ರತಿಭೆಗಳಿಲ್ಲ. ಎಲ್ಲದರ ಬಗ್ಗೆ ಇರುವ ಕುತೂಹಲವಷ್ಟೇ ನನ್ನನ್ನು ಪ್ರೇರೇಪಿಸುವುದು ಎಂದಿದ್ದರು ಐನ್‌ಸ್ಟೀನ್. ಕುತೂಹಲವಿದ್ದರೆ ಹೊಸತನ್ನು ಕಲಿವ ಸ್ಪೂರ್ತಿ ಇರುತ್ತದೆ, ಕುತೂಹಲವೇ ಇನ್ನೋವೇಶನ್‌ಗಳಿಗೆ ದಾರಿ ಮಾಡುವುದು.