ಆರೋಗ್ಯಕರವಾಗಿಯೂ ವಾದಿಸಲು ಸಾಧ್ಯವಿದೆ, ಎಲ್ಲವನ್ನೂ ಹೊರಹಾಕಲು ಸಾಧ್ಯವಿದೆ. ಸಮಸ್ಯೆ ಏನೆಂದರೆ, ನಮ್ಮಲ್ಲಿ ಬಹಳಷ್ಟು ಜನರಿಗೆ ಹೀಗೆ ಆರೋಗ್ಯಕರವಾಗಿ ವಾದಿಸುವ ಬಗ್ಗೆಯ ಉದಾಹರಣೆಗಳೇ ಕಣ್ಣಿಗೆ ಬಿದ್ದಿರುವುದಿಲ್ಲ.
ಬೆಸ್ಟ್ ಫ್ರೆಂಡ್, ಅಪ್ಪ, ಅಮ್ಮ, ಅಣ್ಣ, ಅಕ್ಕ, ತಂಗಿ, ತಮ್ಮ, ಸಹೋದ್ಯೋಗಿ, ಪತ್ನಿ, ಅತ್ತೆ- ಯಾರ ಜೊತೆಯೇ ಇರಬಹುದು, ಆಗಾಗ ಕೆಲವೊಂದು ವಾದಜಗಳಗಳಾಗುವುದು ಸಾಮಾನ್ಯ. ಆದರೆ, ಹೀಗಾಗುವ ಜಗಳಗಳೆಲ್ಲ ಮನಸ್ಸನ್ನು ಮುರಿಯುವಂತಿರಬಾರದು, ಮುಂದೆಂದೂ ಮುಖ ತಿರುಗಿಸಿಕೊಂಡು ಹೋಗುವಂತಿರಬಾರದು. ಬದಲಿಗೆ, ಇಬ್ಬರ ಅಭಿಪ್ರಾಯಗಳು ಪರಸ್ಪರ ಹೇಳಿಕೊಂಡಂತಿರಬೇಕು, ಮನಸ್ಸಿನ ಫ್ರಸ್ಟ್ರೇಶನ್ ಹೊರಹಾಕಿದಂತಿರಬೇಕು, ಎಲ್ಲ ಮುಗಿದ ಮೇಲೆ ಮತ್ತೆ ಮುಂಚಿನಂತೆಯೇ ಸಂಬಂಧ ಉಳಿದಿರಬೇಕು.
ಸಾಮಾನ್ಯವಾಗಿ ಬಹಳ ದಿನಗಳಿಂದ ಮನಸ್ಸಲ್ಲಿ ಬೆಳೆಸಿಕೊಂಡು ಬಂದ ಫ್ರಸ್ಟ್ರೇಶನ್ ಹಾಗೂ ಎಮೋಶನ್ಸ್ ಸೇರಿ ಸನ್ನಿವೇಶವನ್ನು ಸಂಕೀರ್ಣಗೊಳಿಸಬಹುದು. ಎಲ್ಲರೂ ಕೋಪದಲ್ಲಿ ಬಾಯಿಗೆ ಬಂದಂತೆ ಮಾತನಾಡುವವರೇ. ನಂತರದಲ್ಲಿ ಪಶ್ಚಾತ್ತಾಪ ಪಡುವವರು ಕೆಲವರು. ಆದರೆ, ಅದರಿಂದೇನೂ ಪ್ರಯೋಜನವಿಲ್ಲ. ಆದರೆ, ಆರೋಗ್ಯಕರವಾಗಿಯೂ ವಾದಿಸಲು ಸಾಧ್ಯವಿದೆ, ಎಲ್ಲವನ್ನೂ ಹೊರಹಾಕಲು ಸಾಧ್ಯವಿದೆ. ಸಮಸ್ಯೆ ಏನೆಂದರೆ, ನಮ್ಮಲ್ಲಿ ಬಹಳಷ್ಟು ಜನರಿಗೆ ಹೀಗೆ ಆರೋಗ್ಯಕರವಾಗಿ ವಾದಿಸುವ ಬಗ್ಗೆಯ ಉದಾಹರಣೆಗಳೇ ಕಣ್ಣಿಗೆ ಬಿದ್ದಿರುವುದಿಲ್ಲ. ವಾದಿಸುವಾಗ ಈ ತಪ್ಪುಗಳನ್ನು ಮಾಡದಿದ್ದರೆ, ಅದೊಂದು ಆರೋಗ್ಯಕರವಾದ ಚರ್ಚೆಯಾಗಿ ಬದಲಾಗಬಹುದು.
- ಪರಿಹಾರಕ್ಕಿಂತ ದೂರುಗಳ ಮೇಲೆಯೇ ಪೋಕಸ್ ಮಾಡುವುದು
ವಾದದಲ್ಲಿ ದೂರುಗಳು ಸಾಮಾನ್ಯ. ಆದರೆ ದೂರೊಂದೇ ಆಗಬಾರದು. ದೂರು ಹೇಳಿದ ಬಳಿಕ ಅದರಿಂದ ನಿಮಗೇನನ್ನಿಸುತ್ತದೆ, ಅದಕ್ಕೆ ಪರಿಹಾರವೇನು ಇವೆಲ್ಲವನ್ನೂ ಹೇಳಬೇಕು ಇಲ್ಲವೇ ಕೇಳಬೇಕು. ಒಮ್ಮೆ ಪರಿಹಾರದತ್ತ ಮಾತು ಹರಿದ ಮೇಲೆ ಇಬ್ಬರೂ ಕುಳಿತು ಯಾವೆಲ್ಲ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸಬಹುದು. ಅವುಗಳಲ್ಲಿ ಯಾವುದು ಇಬ್ಬರಿಗೂ ಸರಿ ಎನಿಸುತ್ತದೋ ಅದನ್ನೇ ಆಯ್ಕೆ ಮಾಡಿಕೊಂಡು ಅದರತ್ತ ಪ್ರಯತ್ನ ಹರಿಸಬೇಕು.
- ಯಾವಾಗಲೂ, ಎಂದೂ ಇಲ್ಲ ಎಂಬಂಥ ಪದಗಳ ಬಳಕೆ
ನೀನು ಯಾವಾಗಲೂ ಹೀಗೇ ಮಾಡುತ್ತೀ, ನೀನು ಯಾವತ್ತೂ ಹೀಗೆ ಮಾಡಲ್ಲ- ಇಂಥ ಮಾತುಗಳು ನಾಟಕೀಯವಷ್ಟೇ ಅಲ್ಲ, ಪೂರ್ಣ ಸತ್ಯವಾಗಿರಲು ಸಾಧ್ಯವಿಲ್ಲ. ಹೀಗೆಂದಾಗ ಮತ್ತೊಬ್ಬ ವ್ಯಕ್ತಿ ಸ್ವರಕ್ಷಣೆಯ ತಂತ್ರಗಳನ್ನು ಬಳಸುತ್ತಾ ವಾದಿಸತೊಡಗುತ್ತಾನೆ. ನೀವು ಹೇಳುವುದನ್ನು ಕೇಳುವ ಬದಲು, ನಿಮ್ಮ ಮಾತುಗಳಲ್ಲಿ ತಪ್ಪು ಕಂಡುಹಿಡಿಯಲು ಶುರು ಮಾಡುತ್ತಾನೆ. ಇದರ ಬದಲಿಗೆ ಕೆಲವೊಮ್ಮೆ ಎಂದೋ, ಅಥವಾ ಇಂಥಾ ದಿನ ಇಂಥಾ ಸಂದರ್ಭದಲ್ಲಿ ಎಂದು ನಿರ್ದಿಷ್ಟವಾಗಿ ಹೇಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಆಗ ಎದುರಿನ ವ್ಯಕ್ತಿ ನಿಮ್ಮ ಮಾತುಗಳನ್ನು ಕೇಳುವ ಜೊತೆಗೆ, ಅಂಥ ಸಂದರ್ಭದಲ್ಲಾಗಿಬಹುದಾದ ತಪ್ಪನ್ನು ಒಪ್ಪಿಕೊಳ್ಳುತ್ತಾನೆ.
- ನಾನು ಬದಲಿಗೆ ನೀನು ಎಂಬುದನ್ನೇ ಬಳಸುವುದು
ನೀನು ಎಂಬ ಪದಗಳು ತುಂಬಿದ ವಾಕ್ಯಗಳು ಎದುರಿನ ವ್ಯಕ್ತಿಯನ್ನು ವಾದಕ್ಕೆ, ಸ್ವರಕ್ಷಣಾ ತಂತ್ರಕ್ಕೆ ಮೊರೆ ಹೋಗಲು ಪ್ರೇರೇಪಿಸುತ್ತವೆ. ನೀನು ಎಲ್ಲವನ್ನೂ ಹಾಳು ಮಾಡಿದೆ, ನಿನ್ನಿಂದಲೇ ಹೀಗಾಯಿತು ಹೀಗೆಲ್ಲ ಆರೋಪಿಸುತ್ತಿದ್ದರೆ ಎದುರಿರುವವರು ನಿಮ್ಮ ತಪ್ಪುಗಳನ್ನೆತ್ತಿ ಆಡಲು ಶುರು ಮಾಡಬಹುದು. ಬದಲಿಗೆ ನೀನು ಹೀಗೆ ಮಾಡಿದಾಗ ನನಗೆ ಬೇಜಾರಾಗುತ್ತದೆ, ನೀನು ಹಾಗೆಂದದ್ದು ನನಗೆ ಇಷ್ಟವಾಗಲಿಲ್ಲ, ಇದು ನನ್ನ ಅಗತ್ಯ- ಹೀಗೆ ನಾನು ಪದಗಳ ಬಳಕೆಯಿಂದ ನೀವು ಆ ಸಂದರ್ಭದಲ್ಲಿ ಹೇಗೆ ನೊಂದಿದ್ದಿರಿ ಎಂಬುದನ್ನು ತಿಳಿಸಿದಂತೆಯೂ ಆಗುತ್ತದೆ, ಮತ್ತೊಬ್ಬರನ್ನು ದೂಷಿಸಿದಂತೆಯೂ ಇರುವುದಿಲ್ಲ. ನಿಮ್ಮ ಭಾವನೆಗಳನ್ನು ಅಲ್ಲಗೆಳೆಯುವುದು ಎದುರಿನ ವ್ಯಕ್ತಿಗೆ ಸಾಧ್ಯವಾಗುವುದಿಲ್ಲ. ಜೊತೆಗೆ, ಎಂಪತಿಯೂ ಸಾಧ್ಯವಾಗುತ್ತದೆ. ಆಗ ನಿಮ್ಮ ಸಮಸ್ಯೆಯತ್ತ ಅವರ ಗಮನ ಹೋಗುತ್ತದೆ.
- ಕೇಳುವ ಬದಲಿಗೆ ಮಾತಿನ ಹಪಹಪಿ
ಚರ್ಚಿಸುವಾಗ, ವಾದಿಸುವಾಗ, ಎದುರಿನವರು ಹೇಳುವುದಕ್ಕಿಂತಾ, ನಿಮ್ಮ ಮಾತುಗಳನ್ನು ಎಸೆಯಲೇ ಅರ್ಜೆಂಟ್ ಆಗಿದ್ದರೆ ಅದು ಜಗಳವನ್ನು ತಾರಕಕ್ಕೇರಿಸುತ್ತದೆ. ಸಾಮಾನ್ಯವಾಗಿ ಪೂರ್ತಿ ವಿಷಯ ಕೇಳುವ ಮೊದಲೇ ಸ್ವರಕ್ಷಣಾ ವಾದದಲ್ಲಿ ತೊಡಗುವವರು ಹೆಚ್ಚು. ಇದರಿಂದ ಎದುರಿನವರು ಹೇಳುವ ವಿಷಯದ ಸಣ್ಣ ಭಾಗಕ್ಕೆ ನಾವು ಪ್ರತಿಕ್ರಿಯಿಸಿದಂತಾಗುತ್ತದೆಯೇ ಹೊರತು, ಪೂರ್ತಿ ಮಾತಿಗಲ್ಲ. ಬದಲಿಗೆ ಅವರಿಗೆ ಏನೇನು ಹೇಳಲಿದೆಯೋ ಅವನ್ನೆಲ್ಲ ತಾಳ್ಮೆಯಿಂದ ಆಲಿಸಿ, ಅವರ ದೇಹಭಾಷೆ, ಎಮೋಶನ್ಸ್‌ನತ್ತ ಗಮನ ಹರಿಸಿ. ನೀವು ಅವರು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದೀರಿ ಎಂಬುದಕ್ಕೆ ಪಾಯಿಂಟ್‌ಗಳನ್ನು ಪುನರಾವರ್ತಿಸಿ. ನಂತರ ನಿಮ್ಮ ಪಾಯಿಂಟ್‌ಗಳನ್ನು ವಿವರಿಸಿ ಪರಿಹಾರದತ್ತ ಹೊರಳಿ.
- ಸಣ್ಣ, ವೇಗದ ಉಸಿರಾಟ
ಸಣ್ಣ ಉಸಿರಾಟ ಜಗಳವನ್ನು ಹೆಚ್ಚು ಮಾಡುತ್ತದೆ. ಏಕೆಂದರೆ ಅದರಿಂದ ದೇಹದಲ್ಲಿ ಸಿಂಪತೆಟಿಕ್ ನರ್ವಸ್ ಸಿಸ್ಟಂ ಆ್ಯಕ್ಟಿವೇಟ್ ಆಗುತ್ತದೆ. ಅದು ನಿಮ್ಮನ್ನು ಫೈಟ್ ಮಾಡಲು ತಯಾರಿಸುತ್ತದೆಯೇ ಹೊರತು ಲಾಜಿಕಲ್ ಆಗಿ ಯೋಚಿಸಲು ಬಿಡುವುದಿಲ್ಲ. ಬದಲಿಗೆ ಧೀರ್ಘ ಉಸಿರುಗಳನ್ನು ತೆಗೆದುಕೊಳ್ಳಿ. ಅದು ನಿಮಗೆ ಹೆಚ್ಚು ಸ್ಪಷ್ಟವಾಗಿ ಯೋಚಿಸಲು ಸಹಾಯ ಮಾಡುತ್ತದೆ. ಮನಸ್ಸನ್ನು ನಿರಾಳಗೊಳಿಸುತ್ತದೆ.
- ಪಾಸಿಟಿವ್ ಎಂಡಿಂಗ್ ಕೊಡದೆ ಪಲಾಯನ
ಯಾವುದೇ ವಾದಕ್ಕೆ ಪಾಸಿಟಿವ್ ಎಂಡಿಂಗ್ ಕೊಡದೆ ಅರ್ಧಕ್ಕೆ ನಿಲ್ಲಿಸುವುದು, ಬಿಟ್ಟು ಹೋಗುವುದು ಮಾಡಿದರೆ ಅಸಮಾಧಾನಗಳು ಹೆಚ್ಚುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ಬದಲಿಗೆ ವಾದದ ಕೊನೆಯಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳುವ, ತಪ್ಪನ್ನು ಸರಿಪಡಿಸುವ ಭರವಸೆ ನೀಡಿ. ಇಲ್ಲವೇ, ನೀವು ಹೇಳಿದ್ದನ್ನು ಕೇಳಿಸಿಕೊಳ್ಳುವ ವ್ಯವಧಾನ ತೋರಿದ್ದಕ್ಕೆ ಥ್ಯಾಂಕ್ಸ್ ಹೇಳಿ. ಕೆಲವೊಮ್ಮೆ ಕಡೆಗೊಮ್ಮೆ ಅಪ್ಪಿಕೊಳ್ಳುವುದು, ಹ್ಯಾಂಡ್‌ಶೇಕ್ ಮಾಡುವುದರಿಂದಲೂ ಹಲವಷ್ಟು ಸರಿಯಾಗುತ್ತವೆ. ವಾದವಿವಾದಗಳು ಏನೇ ಇದ್ದರೂ ನೀವು ಸಂಬಂಧಕ್ಕೆ ಬೆಲೆ ಕೊಡುವವರೆಂಬುದನ್ನು ಅವರಿಗೆ ಅರ್ಥ ಮಾಡಿಸಿ.