ಲೈಫ್‌ ಸ್ಕ್ರಿಪ್ಟೆಡ್‌ ಅನಿಸ್ತಿದೆಯಾ? ನಂಗೊತ್ತಿತ್ತು ಹೀಗೇ ಆಗುತ್ತೆ ಅಂತ!

By Suvarna News  |  First Published Jan 7, 2020, 2:52 PM IST

ಏರು ದಾರಿ ಬಂತೆಂದು ವಾಹನವನ್ನು ಅಲ್ಲಿಯೇ ನಿಲ್ಲಿಸಲು ಸಾಧ್ಯವಿಲ್ಲ,ಗೇರ್ ಬದಲಾಯಿಸಿಯಾದರೂ ಮುಂದೆ ಸಾಗಲೇ ಬೇಕಲ್ವೆ!


ಕೃಷ್ಣಮೋಹನ್ ತಲೆಂಗಳ

ಎಷ್ಟೋ ದಿನಗಳ ಬಳಿಕ ನಿಮಗೊಂದು ರಜೆ ಸಿಕ್ಕಿದೆ. ಸಂಜೆ ಪುರಭವನ ದಲ್ಲೊಂದು ಚೆಂದದ ನಾಟಕ ಅಪರೂಪಕ್ಕೆ ನೋಡಲು ಅವಕಾಶ ಇದೆ, ಇನ್ನೇನು ಕುಟುಂಬ ಸಮೇತ ಹೋಗ ಬೇಕೆನ್ನುವಷ್ಟರಲ್ಲಿ ಧಾರಾಕಾರ ಮಳೆ... ಅಂಗಳಕ್ಕೆ ಕಾಲಿಡಲಾಗದಷ್ಟು ತೀವ್ರ ಗಾಳಿ. ಕಾರ್ಯಕ್ರಮರದ್ದು, ಜೊತೆಗೊಂದು ಪುಟ್ಟ ಆಕ್ರೋಶ, ನನಗೆ ಮೊದಲೇ ಗೊತ್ತಿತ್ತು.. ನಾನಿವತ್ತು ಮನೆಯಲ್ಲೇ ಕೂರೋ ಥರ ಏನೋ ಆಗುತ್ತದೆ ಅಂತ!

Tap to resize

Latest Videos

* * *

ತುಂಬ ವರ್ಷಗಳ ಕನಸು, ಹಿಮಾಲಯ ಟ್ರೆಕ್ಕಿಂಗ್ ಮಾಡಬೇಕು ಅಂತ. ರಜೆ ಕೂಡಾ ಬುಕ್ ಆಗಿತ್ತು. ಇನ್ನೇನು ನಾಳೆ ಹೊರಡಬೇಕು ಅನ್ನುವಷ್ಟರಲ್ಲಿ ಕಚೇರಿಯಿಂದ ಕರೆ. ಸಹೋದ್ಯೋಗಿಗೆ ಆರಾಮಿಲ್ಲ, ನೀವು ರಜೆ ಕ್ಯಾನ್ಸಲ್ ಮಾಡಿ ಕೆಲಸಕ್ಕೆ ಬರಲೇಬೇಕಾಗುತ್ತದೆ ಅಂತ...

ಮೊದಲೇ ಗೊತ್ತಿತ್ತು ನನಗೆ, ಈ ಥರ ಏನೋ ಆಗುತ್ತದೆ ಅಂತ.!

* * *

ಯಾರೋ ಬರೆದಿಟ್ಟ ಕತೆಯಾ?

ಬದುಕಿನಲ್ಲಿ ಹೀಗೆ ಎಷ್ಟೊಂದು ಬಾರಿ ಆಗಿಲ್ಲ ಹೇಳಿ? ಎಲ್ಲವೂ, ಎಲ್ಲೋ ಒಂದು ಕಡೆ, ಯಾರೋ ನಿರ್ಧರಿಸಿದಂತೆಯೋ, ಬರೆದಿಟ್ಟಂತೆಯೋ ಘಟನೆಗಳು ಸಂಭವಿಸುವುದು. ಇದು ಕಾಕತಾಳೀಯವೇ ಇರಬಹುದು. ಅಥವಾ ತೀರಾ ಆಕಸ್ಮಿಕವೂ ಇರಬಹುದು. ಅಥವಾ ಎಲ್ಲವನ್ನೂ ಮೀರಿದ ಯಾವುದೋ ಒಂದು ನಿಯಮ ಇಡೀ ವ್ಯವಸ್ಥೆಯನ್ನು ರೂಪಿಸುವುದೂ ಇರಬಹುದು. ಇದನ್ನೇ ಅಲ್ಲವೆ ಹಣೆಬರಹ, ಅದೃಷ್ಟ, ಯೋಗ ಇತ್ಯಾದಿ ಹೆಸರುಗಳಿಂದ ಆಸ್ತಿಕರು ಕರೆಯುವುದು? ಬರೆದಿಟ್ಟಂತೆ ಬದುಕಲು ಅಸಾಧ್ಯ. ಬದುಕು ಸಿನಿಮೀಯವಾಗಬಹುದು. ಆದರೆ ಸಿನಿಮಾದ ತರ ದೃಶ್ಯಗಳನ್ನು ರಚಿಸಿ, ಅದೇ ಪ್ರಕಾರ ಬದುಕಲು ಸಾಧ್ಯವೇ ಇಲ್ಲ. ಯಾಕೆಂದರೆ ವರ್ತಮಾನ ಮಾತ್ರ ನಮ್ಮದು, ಕಳೆದುಹೋದ ನಿನ್ನೆಯ ಕಡೆಗೆ ರಿವೈಂಡ್ ಆಗಲು, ಕಾಣದಿರುವ ನಾಳಿನ ಕಡೆಗೆ ಫಾರ್ವರ್ಡ್ ಆಗಲು ಎರಡೂ ನಮ್ಮ ಕೈಯ್ಯಿಂದ ಸಾಧ್ಯವಿಲ್ಲ. ಈ ಕ್ಷಣ, ಈ ಹೊತ್ತು ಮಾತ್ರ ನಮ್ಮದು. ಅಲ್ಲಿ ಸಿಕ್ಕಿದ ಅವಕಾಶದಲ್ಲಿ ಬದುಕನ್ನು ರೂಪಿಸಲು, ಕೈಗೆ ಸಿಕ್ಕಿದ ಹೊತ್ತನ್ನು ಚೆಂದಕೆ ಕಳೆಯುವ ಹಕ್ಕನ್ನು ಮಾತ್ರ ಸೃಷ್ಟಿ ನಮಗೆ ಕಲ್ಪಿಸಿದೆ. ಮೇಲೆ ಹೇಳಿದೆ ಎರಡೂ ಉದಾಹರಣೆಗಳು ದೃಷ್ಟಾಂತ ಮಾತ್ರ.

ಪುತ್ತೂರಿನಲ್ಲಿ ಶ್ರೀಗಂಧಕ್ಕಿಂತಲೂ ಲಾಭದಾಯಕ ಈ ಅಗರ್‌ವುಡ್!

ಇಷ್ಟೇ ಬಿಡು ಲೈಫ್ ಅನಿಸೋದ್ಯಾಕೆ..

ಊಹಿಸಿಯೇ ಇರದ ರೀತಿ ಬಂದು ಅಪ್ಪಳಿಸುವ ಕಷ್ಟಗಳು, ಅನಾರೋಗ್ಯ, ಅಪಘಾತ, ಸಾವು, ನೋವು, ಸವಾಲು, ಅಪವಾದ... ಇವೆಲ್ಲ ಬದುಕಿನ ಉತ್ಸಾಹಕ್ಕೆ, ಧನಾತ್ಮಕ ಶಕ್ತಿಗೆ ಏಟು ಕೊಡುವ ಸಂದರ್ಭಗಳು. ಸಾಲು ಸಾಲಾಗಿ ಸಂಕಷ್ಟಗಳು ಕಾಡಿದಾಗಲೆಲ್ಲ ಯಾರೋ ನನಗೋಸ್ಕರ ಈ ಥರ ಬರೆದಿಟ್ಟಿದ್ದಾರೆ ಗ್ರಹಚಾರವನ್ನು, ಯಾವುದೋ ಕಾಲದ ಪಾಪ ನನ್ನನ್ನು ಕಾಡುತ್ತಿದೆ, ಮುಂದೆ ನಡೆಯುವ ಇನ್ಯಾವುದೋ ದೊಡ್ಡ ದುರಂತಕ್ಕೆ ನನ್ನನ್ನು ಒಡ್ಡಿಕೊಳ್ಳಲು ಇದು ಸತ್ವಪರೀಕ್ಷೆ.. ಇತ್ಯಾದಿ ಆತಂಕಗಳು ಸಹಜವಾಗಿ ಕಾಡುತ್ತದೆ. ಮನಸ್ಸು ದುರ್ಬಲವಾಗುತ್ತದೆ. ಇಡೀ ಜಗತ್ತು ನನಗೆ ಎದುರಾಗಿ ನಿಂತಿದೆಯೋ, ಇಡೀ ವ್ಯವಸ್ಥೆಯೇ ನನ್ನನ್ನು ತಡೆಯಲು ಯತ್ನಿಸುತ್ತಿದೆಯೋ ಎಂಬಿ ತ್ಯಾದಿ ಆತಂಕಗಳು ಸುತ್ತಲೂ ನರ್ತಿಸುತ್ತಿರುತ್ತವೆ. ಪರಿಸ್ಥಿತಿ ಮನುಷ್ಯನನ್ನು ಕುಗ್ಗಿಸುವ ಹಂತಗಳಿವು. ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬನ ಬದುಕಿನಲ್ಲೂ ಒಂದಲ್ಲ ಒಂದು ಸಂದರ್ಭಗಳಲ್ಲಿ ಕಾಡುವ ಪರೀಕ್ಷೆಗಳೇ ಇವು. ಯಾರೂ ಚಿರಂಜೀವಿಗಳು, ಪರಿಪೂರ್ಣರು, 365 ದಿನಗಳೂ ಸುಖಿಗಳಾಗಿ ಬದುಕಲು ಸಾಧ್ಯವಿಲ್ಲ. ಎಷ್ಟೇ ಸಂಪತ್ತು, ಆಳುಕಾಳು, ಅಧಿಕಾರ ಇದ್ದರೂ ನಮ್ಮನ್ನು ನಾವು ಒಂದು ದಿನ ಕಳೆದುಕೊಳ್ಳಲೇ ಬೇಕು. ಇದೆಲ್ಲ ಗೊತ್ತಿದ್ದರೂ ಕಷ್ಟಗಳು  ಬಂದಾಗ ಅಧೀರತೆ ಕಾಡುತ್ತದೆ.

ನಮ್ಮ ನಮ್ಮ ಮೂಗಿನ ನೇರಕ್ಕೆ..

ಸವಾಲು, ಅಪಮಾನ, ಹಾಗೂ ಹಿನ್ನಡೆಗಳನ್ನು ನಾವು ಸ್ವೀಕರಿಸುವುದು ಹಾಗೂ ಭಾವಿಸುವುದರಲ್ಲಿ ಇದೆ. ಜಗತ್ತಿನಲ್ಲೇ ಇದುವೇ ಅಂತಿಮ ಸತ್ಯ ಅಥವಾ ಇದಮಿತ್ಥಂ ಇರುವುದೇ ಬದುಕು ಎಂದು ಬರೆದಿಟ್ಟದ್ದಿಲ್ಲ. ಅದೆಲ್ಲ ಅವರವರ ಅದೃಷ್ಟ, ಪರಿಸ್ಥಿತಿ ಹಾಗೂ ಪರಿಸರಕ್ಕೆ ಪೂರಕವಾಗಿ ಬದುಕಲು ಸಾಧ್ಯವಾಗುವುದು ಅಷ್ಟೇ... ಒಂದು ಅಪಘಾತದಲ್ಲಿ ವ್ಯಕ್ತಿ ಗಾಯಗೊಂಡರೆ, ಗಾಯಾಳುವಿನ ಸಂಬಂಧಿಗೆ ಆತ ನೊಂದಿರುವ ವ್ಯಕ್ತಿ, ಆಸ್ಪತ್ರೆಯ ವೈದ್ಯರ ಪಾಲಿಗೆ ರೋಗಿ, ಮಾಧ್ಯಮಗಳ ಪಾಲಿಗೆ ಅಪಘಾತ ಒಂದು ಸುದ್ದಿ, ಪೊಲೀಸರ ಪಾಲಿಗೆ ಅಪಘಾತ ಒಂದು ಪ್ರಕರಣ, ನ್ಯಾಯಲಯದ ಪಾಲಿಗೆ ಅಪಘಾತವೊಂದು ವ್ಯಾಜ್ಯ. ಹೀಗೆ ಘಟನೆ ಒಂದೇ ಆದರೂ ಅವರವರ ಪರಿಮಿತಿಗೆ ಅದು ಮಜಲುಗಳನ್ನು ಪಡೆ ಯುತ್ತದೆ. ಪ್ರತಿಯೊಬ್ಬನಿಗೂ ತಾನು ಘಟನೆ ಯನ್ನು
ನೋಡುವ ದೃಷ್ಟಿಯೇ ಸರಿ ಎಂದು ಅನ್ನಿಸುತ್ತದೆ.

ಜಗತ್ತು ಕಂಡ ಜೀನಿಯಸ್ , ಇಬ್ಬರಿಗೆ ಹಂಚಿದರೂ IAS ಪಾಸ್ ಮಾಡಿಸುವಷ್ಟಿತ್ತು ಇವರ IQ!

ಮೀರಲು ಟ್ರೈ ಮಾಡಿ

ಯಾವುದೇ ಪರಿಸ್ಥಿತಿ ಎದುರಿಸಲು ಸಮಚಿತ್ತ, ಸಹನೆ ಹಾಗೂ ಪರಿಸ್ಥಿತಿಯಿಂದ ಹೊರಗೆ ನಿಂತು ಯೋಚಿಸಲು ಸಾಧ್ಯವಾಗುವ ಮನಸ್ಥಿತಿ ರೂಢಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ನೋಯುವುದು, ಕುಗ್ಗುವುದು ಮನುಷ್ಯ ಸಹಜ ಭಾವ, ತಪ್ಪಲ್ಲ. ಆದರೆ, ಅಧೀರತೆಯೇ ಸ್ವಭಾವವಾದರೆ ಯಾವುದೋ ನೋವುಗಳಿಂದ ಹೊರಬರಲು ಸಾಧ್ಯವಿಲ್ಲ. ಮನುಷ್ಯ ಪ್ರಯತ್ನಗಳಿಗೆ ಹೊರತಾದ ಎಷ್ಟೋ ವಿಚಾರಗಳು ಜಗತ್ತಿನಲ್ಲಿ ಆಗಿಂದಾಗ್ಗೆ ಅನುಭವಕ್ಕೆ ಬರುತ್ತಲೇ ಇರುತ್ತವೆ. ಅವನ್ನೆಲ್ಲ ವೈಜ್ಞಾನಿಕವಾಗಿ ರುಜುವಾತು ಪಡಿಸಲು ಕಷ್ಟಸಾಧ್ಯ. ಹಣೆಬರಹವೆಂದೋ, ಅದೃಷ್ಟವೆಂದೋ ನಾವದನ್ನು ಕರೆಯಬಹುದು. ಅವನ್ನು ಮೀರಿ ಬದುಕಲು ನಮಗೆ ಸಾಧ್ಯವಾಗದಿರಬಹುದು. ಆದರೆ ಯಾರೋ ಬರೆದಿಟ್ಟಂತೆ ಥಟ್ಟನೆ ಎದುರಾಗುವ ಪರಿಸ್ಥಿತಿಗಳನ್ನು ಎದುರಿಸಲು, ಅದನ್ನು ದಾಟಿ ಬರಲು ಸಾಧ್ಯವಿದೆ. ಧ್ಯಾನಸ್ಥ ಮನಸ್ಸು, ನಿರ್ಲಿಪ್ತ ನಿರ್ಧಾರಗಳು ಮತ್ತು ಹಂತವನ್ನು ದಾಟುವ ಧೈರ್ಯ ಇದ್ದರೆ ಕೊನೆಯ ಹಂತದವರೆಗೂ ಉತ್ಸಾಹವನ್ನು ಕಾಪಿಟ್ಟುಕೊಳ್ಳಬಹುದು.

ಏರು ದಾರಿ ಬಂತೆಂದು ವಾಹನವನ್ನು ಅಲ್ಲಿಯೇ ನಿಲ್ಲಿಸಲು ಸಾಧ್ಯವಿಲ್ಲ, ಗೇರ್ ಬದಲಾಯಿಸಿಯಾದರೂ ಮುಂದೆ ಸಾಗಲೇ ಬೇಕಲ್ವೆ!

 

click me!