
ಹೊಸ ವರ್ಷದ ಶುಭಾಶಯ ಕೋರಿ ವಾಟ್ಸ್ಆಪ್ ತುಂಬಾ ತುಂಬಿದ ಮೆಸೇಜ್‍ಗಳನ್ನು ಒಂದೊಂದೇ ತೆರೆಯುತ್ತ ಹೋದಂತೆ ಮರೆತು ಹೋಗಿದ್ದ ಸ್ನೇಹ-ಸಂಬಂಧಗಳು ಮನಸ್ಸಿನ ಪರದೆ ಮೇಲೆ ನೆನಪುಗಳ ಮೆರವಣಿಗೆ ಹೊರಟವು. ಪ್ರೈಮರಿಯಲ್ಲಿ ನನ್ನೊಂದಿಗೆ ಬೆಂಚು ಹಂಚಿಕೊಂಡಿದ್ದ ಸ್ನೇಹಿತೆ, ಹೈಸ್ಕೂಲ್‍ಗೆ ಹೋಗುವಾಗ ಕಾಲ್ನಡಿಗೆಯ ಹಾದಿಯಲ್ಲಿ ಸಾಥ್ ನೀಡುತ್ತಿದ್ದ ನಮ್ಮೂರಿನ ಹುಡುಗಿ, ಶನಿವಾರಗಳಂದು ಕಾಲೇಜ್‍ನಲ್ಲಿ ಎನ್‍ಸಿಸಿ ಪೆರೇಡ್ ಮುಗಿಸಿ ತಡರಾತ್ರಿ ನಮ್ಮೂರಿನ ಬಸ್ ಹತ್ತುವಾಗ ಬಾಡಿಗಾರ್ಡ್‍ನಂತೆ ನನಗೆ ಸದಾ ರಕ್ಷಣೆ ಒದಗಿಸುತ್ತ ಒಂದು ಗಂಟೆಯ ಪಯಣದುದ್ದಕ್ಕೂ ಎಲ್ಲಿಯೂ ಭಯ ಕಾಡದಂತೆ ಸೇಫಾಗಿ ಊರು ಸೇರಿಸುತ್ತಿದ್ದ ಸಹಪಾಠಿ…...ಹೀಗೆ ಎಷ್ಟೋ ವರ್ಷಗಳ ಹಳೆಯ ಸಂಬಂಧಗಳ ನೆನಪುಗಳು ಅಣೆಕಟ್ಟಿನ ಕಿಂಡಿ ತೆರೆದಾಗ ಒಮ್ಮೆಲೆ ಧುಮ್ಮಿಕ್ಕುವ ನೀರಿನಂತೆ ಒತ್ತರಿಸಿ ಬಂದವು. ಕೆಲವರ ಮೊಬೈಲ್ ನಂಬರ್‍ಗಳೇ ನನ್ನ ಬಳಿಯಿರಲಿಲ್ಲ. ವಾಟ್ಸ್ಆಪ್‍ನಲ್ಲಿ ಅವರು ಹಾಕೊಂಡಿದ್ದ ಪ್ರೊಫೈಲ್ ಫೋಟೋಗಳೇ ಗುರುತು ಸಾರಿದ್ದವು. ಇವರಲ್ಲಿ ಅನೇಕರ ಬಳಿ ಮಾತನಾಡದೆ ಎಷ್ಟೋ ವರ್ಷಗಳೇ ಸರಿದಿವೆ. ಹೀಗಿರುವಾಗ ಹೊಸ ವರ್ಷದ ನೆಪದಲ್ಲಿ ಅವರು ಕಳುಹಿಸಿದ ಪ್ರೀತಿಯ ಸಂದೇಶಗಳು ಮತ್ತೊಮ್ಮೆ ಬಾಂಧವ್ಯ ಬೆಸೆಯಲು ಮುನ್ನುಡಿ ಬರೆದವು. ಎಷ್ಟೋ ವರ್ಷಗಳಿಂದ ಸಂಪರ್ಕದಲ್ಲೇ ಇರದ ಮಾವನ ಮಗ, ಅಪ್ಪನ ದೂರದ ಸಂಬಂಧಿ ಕರೆ ಮಾಡಿ ಹೊಸ ವರ್ಷದ ಶುಭಾಶಯ ಕೋರಿದಾಗ ಮನಸ್ಸು ಹಿರಿ ಹಿರಿ ಹಿಗ್ಗಿತ್ತು. ಹೀಗೆಯೇ ಹೊಸ ವರ್ಷದ ಶುಭಾಶಯ ಹೊತ್ತ ಸಂದೇಶಗಳು, ಕರೆಗಳು ಅನೇಕರ ಬಾಳಿನ ಹಳೆಯ ನೆನಪುಗಳಿಗೆ ಸೇತುವೆ ಬೆಸೆದಿರಬಹುದು. ಹೊಸ ನೀರು ಬಂದಾಗ ಹಳೆಯ ನೀರು ಕೊಚ್ಚಿಕೊಂಡು ಹೋಗುತ್ತದೆ ಎಂಬ ಮಾತಿದೆ. ಆದರೆ, ಸ್ನೇಹ ಸಂಬಂಧಗಳ ವಿಷಯದಲ್ಲೂ ನಾವು ಇಂಥ ಧೋರಣೆ ತಳೆಯುವುದು ಸರಿಯೇ?
ಸಂಬಂಧ ಬೆಸೆಯುವಲ್ಲಿ ನಾವೇಕೆ ಸೋಲುತ್ತಿದ್ದೇವೆ?: ನೀವೊಮ್ಮೆ ನಿಮ್ಮ ಮೊಬೈಲ್‍ನಲ್ಲಿರುವ ಕಾಂಟ್ಯಾಕ್ಟ್ ನಂಬರ್‍ಗಳನ್ನು ಪರಿಶೀಲಿಸಿ. ಅಲ್ಲಿ ನಿಮ್ಮ ದೊಡ್ಡಮ್ಮನ ಮಗ, ಅತ್ತೆಯ ಮಗಳು, ಚಿಕ್ಕಪ್ಪ, ದೊಡ್ಡಪ್ಪ.....ಹೀಗೆ ಹತ್ತಿರದ ಸಂಬಂಧಿಗಳ ಹೆಸರಿರುತ್ತದೆ. ಒಂದು ಕಾಲದಲ್ಲಿ ನಿಮಗೆ ಅತ್ಯಂತ ಆತ್ಮೀಯರಾದ ಸ್ನೇಹಿತರ ನಂಬರ್‍ಗಳೂ ಇರುತ್ತವೆ. ಇವರೊಂದಿಗೆ ನೀವು ಕೊನೆಯದಾಗಿ ಮಾತನಾಡಿದ್ದು ಯಾವಾಗ ಎಂದು ಒಮ್ಮೆ ಯೋಚಿಸಿ. ನಿಮಗೇ ಅಚ್ಚರಿಯಾಗುತ್ತದೆ! ಏಕೆಂದರೆ ಕೆಲವರ ಬಳಿ ನೀವು ಮಾತನಾಡಿ ವರ್ಷಗಳೇ ಕಳೆದಿರಬಹುದು. ನಾವು ತಂತ್ರಜ್ಞಾನ ಅತ್ಯಂತ ಮುಂದುವರಿದ ಯುಗದಲ್ಲಿದ್ದೇವೆ. ನಮ್ಮ ಬಳಿ ಕ್ಷಣಾರ್ಧದಲ್ಲಿ ಇನ್ನೊಬ್ಬರೊಂದಿಗೆ ಸಂಪರ್ಕ ಸಾಧಿಸಿ ಮಾತನಾಡಲು ಅನುವು ಮಾಡಿಕೊಡುವ ಮೊಬೈಲ್‍ಯಿದೆ, ಮನಸ್ಸಿನ ಮಾತುಗಳಿಗೆ ಅಕ್ಷರ ರೂಪ ನೀಡಿ ಸಂದೇಶಗಳನ್ನು ರವಾನಿಸುವ ವಾಟ್ಸ್ಆಪ್, ಫೇಸ್‍ಬುಕ್ ಎಂಬ ಸೋಷಿಯಲ್ ಮೀಡಿಯಾಗಳಿವೆ. ಆದರೂ ನಾವು ಸಂಪರ್ಕ ಸಾಧಿಸುವಲ್ಲಿ, ಸಂಬಂಧ ಬೆಸೆಯುವಲ್ಲಿ ಸೋಲುತ್ತಿದ್ದೇವೆ.
ಈ ಅಭ್ಯಾಸಗಳು ನಿಮಗಿದ್ದರೆ ಸೆಕ್ಸ್ ಲೈಫ್ ಹಾಳಾಗೋದು ಗ್ಯಾರಂಟಿ
ಆ ಕಾಲದಲ್ಲಿ ಹೀಗಿರಲಿಲ್ಲ: ನಮ್ಮ ಅಜ್ಜ-ಅಜ್ಜಿ ಕಾಲದಲ್ಲಿ ಮೊಬೈಲ್ ಇರಲಿಲ್ಲ. ಆಗ ಈಗಿನಂತೆ ಸಾರಿಗೆ ಸಂಪರ್ಕವೂ ಉತ್ತಮವಾಗಿರಲಿಲ್ಲ. ಆದರೆ, ಸಂಬಂಧಿಗಳೊಂದಿಗಿನ ಅವರ ನಂಟು ಅದೆಷ್ಟ್ಟು ಗಟ್ಟಿಯಾಗಿತ್ತು! ಮೈಲಿಗಟ್ಟಲೆ ದೂರದಲ್ಲಿರುವ ಸಂಬಂಧಿ ಮನೆಗೆ ಹೋಗಲು ಅವರಿಗೆ ಯಾವುದೇ ನೆಪ ಬೇಕಿರಲಿಲ್ಲ. ಅಲ್ಲಿ 5-6 ದಿನಗಳ ಕಾಲ ಠಿಕಾಣಿ ಹೂಡಲು ಯಾವ ಅಳುಕೂ ಇರಲಿಲ್ಲ. ಇನ್ನು ಇವರ ಮನೆಗೂ ಸಂಬಂಧಿಗಳ ದಂಡೇ ಬರುತ್ತಿತ್ತು. ಚಿಕ್ಕಪ್ಪನ ಮಗ, ಅತ್ತೆ ಮಗ ಎಂಬ ಸಂಬಂಧದೊಂದಿಗೆ ಬಹುದೂರದ ನೆಂಟರು ಆಗಮಿಸಿ ನಾಲ್ಕೈದು ದಿನ ಉಳಿದು ಹೋಗುತ್ತಿದ್ದರು. ಅವರು ಬಂದರೆಂದು, ಉಳಿದರೆಂದು ಅಜ್ಜಿ ಎಂದೂ ಗೊಣಗುತ್ತಿರಲಿಲ್ಲ. ಅದೆಷ್ಟೇ ಜನರಿದ್ದರೂ ಖುಷಿ ಖುಷಿಯಿಂದ ಊಟ ಬಡಿಸಿ ಧನ್ಯತೆ ಅನುಭವಿಸುತ್ತಿದ್ದಳು. ಆದರೆ, ಇಂದು? ಊರು ಬಿಟ್ಟು ನಗರಗಳಲ್ಲಿ ಗೂಡು ಕಟ್ಟಿಕೊಂಡಿರುವ ನಾವು ಅಲ್ಲಿಂದ ಒಂದೆರಡು ದಿನಗಳ ಮಟ್ಟಿಗೆ ಯಾರಾದರೂ ಬರುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಆಕಾಶವೇ ತಲೆ ಮೇಲೆ
ಬಿದ್ದವರಂತೆ ಆಡುತ್ತೇವೆ. ಏನೋ ಹೆಚ್ಚುವರಿ ಕೆಲಸಗಳ ಹೊರೆ ಹೆಗಲೇರಿದಂತೆ ಚಡಪಡಿಸುತ್ತೇವೆ.
ಸಂಬಂಧ ಬೆಸೆಯಲು ಮನಸ್ಸು ಬೇಕು: ಮೊಬೈಲ್ ಇರಲಿ ಅಥವಾ ಅದಕ್ಕಿಂತಲೂ ಮುಂದುವರಿದ ಟೆಕ್ನಾಲಜಿ ಬರಲಿ, ನಮ್ಮ ಮನಸ್ಸು ಸಂಕೋಚಿತಗೊಂಡಿದ್ದರೆ ಯಾವ ಸಂಬಂಧವನ್ನೂ ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಹಿರಿಯರ ಬಳಿ ಈ ಆಧುನಿಕ ಸಾಧನಗಳಾವುವೂ ಇರಲಿಲ್ಲ. ಆದರೆ, ಅವರ ಹೃದಯ ವಿಶಾಲವಾಗಿತ್ತು. ಮೊಗೆದಷ್ಟೂ ಪ್ರೀತಿ ಚಿಮ್ಮುವ ಒರತೆಯಾಗಿತ್ತು. ಹೀಗಾಗಿಯೇ ಅವರು ಸಂಬಂಧಗಳನ್ನು ಭದ್ರವಾಗಿಸಿಕೊಂಡಿದ್ದರು. ಆದರೆ ನಾವು?
ಹುಡುಗಿಯರು ಇಷ್ಟ ಪಡೋ ಹುಡುಗರ ಆ ಸ್ವಭಾವ ಯಾವುದು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.