ದೆಹಲಿಯಲ್ಲಿ ಸೋದರ ಸಂಬಂಧಿ ಜೊತೆ ರಹಸ್ಯವಾಗಿ ಮದುವೆಯಾಗಿದ್ದ 18 ವರ್ಷದ ಯುವತಿ ಸಾವಿಗೆ ಶರಣಾಗಿದ್ದಾಳೆ. ಪ್ರಿಯಕರನಿಂದ ದೂರವಾದ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ತಿಳಿದು ಬಂದಿದೆ.
ನವದೆಹಲಿ: ಸೋದರ ಸಂಬಂಧಿ ಜೊತೆ ರಹಸ್ಯವಾಗಿ ಮದುವೆಯಾಗಿದ್ದ 18 ವರ್ಷದ ಹುಡುಗಿಯೊಬ್ಬಳು, ಮನೆಯವರು ಯಾರು ಮನೆಯಲ್ಲಿಲ್ಲದ ವೇಳೆ ಸಾವಿಗೆ ಶರಣಾದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರೀತಿ ಕುಶ್ವಾಹ್ ಸಾವಿಗೆ ಶರಣಾದ ಯುವತಿ. ತನ್ನ ಅಣ್ಣ ಹಾಗೂ ಅಕ್ಕ ಪೋಷಕರು ಹೊರಗಡೆ ಹೋಗಿದ್ದ ವೇಳೆ ಪ್ರೀತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಹೊರಗಡೆ ಹೋಗಿದ್ದ ಪ್ರೀತಿಯ ತಾಯಿಗೆ ಪ್ರೀತಿ ಸಂಜೆ ವೇಳೆ ಕರೆ ಮಾಡಿದ್ದು, ನಿನಗಾಗಿ ತಾನು ಚಪಾತಿ ಮಾಡಿದ್ದೇನೆ ಮನೆಗೆ ಬಂದ ಮೇಲೆ ಅದನ್ನು ತಿನ್ನುವಂತೆ ಹೇಳಿದ್ದಾಳೆ. ಆದರೆ ಮರಳಿ ಮನೆಗೆ ಬಂದ ತಮಗೆ ಪ್ರೀತಿಯ ಮೃತದೇಹ ನೋಡಲು ಸಿಗಬಹುದು ಎಂದು ಅವರು ಊಹೆಯೂ ಮಾಡಿರಲಿಲ್ಲ, ಮಗಳ ಸಾವಿನ ನಂತರ ಆಕೆಯ ರಹಸ್ಯ ಮದುವೆಯ ಬಗ್ಗೆ ಪೋಷಕರಿಗೆ ತಿಳಿದಿದ್ದು, ದೂರದ ಸಂಬಂಧಿಯ ಮೇಲೆ ಆರೋಪ ಮಾಡಿದ್ದಾರೆ.
ನೇಣಿಗೆ ಶರಣಾದ ಪ್ರೀತಿ ದೆಹಲಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಎರಡು ವರ್ಷದ ಹಿಂದೆ ಪ್ರೀತಿ ಕುಶ್ವಾಹ್ ಕುಟುಂಬವೂ ಅವರ ಕುಟುಂಬವೂ ಅವರ ಊರಿಗೆ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ಹೋಗಿದ್ದರು. ಅಲ್ಲಿ ಪ್ರೀತಿಗೆ ದೂರದ ಸಂಬಂಧಿ ಹುಡುಗನೋರ್ವನ ಪರಿಚಯವಾಗಿತ್ತು. ಕ್ರಮೇಣ ಇಬ್ಬರ ನಡುವಿನ ಒಡನಾಟ ತೀವ್ರವಾಗಿದ್ದು, ಇಬ್ಬರೂ ರಹಸ್ಯವಾಗಿ ಮದುವೆಯನ್ನು ಆಗಿದ್ದರು.
ಆದರೆ ಮಗಳು ಸಾವಿಗೀಡಾದ ನಂತರವೇ ಪೋಷಕರಿಗೆ ಮಗಳ ಈ ರಹಸ್ಯ ಮದುವೆಯ ಬಗ್ಗೆ ತಿಳಿದು ಬಂದಿದೆ. ಪ್ರೀತಿಯ ಆತ್ಮೀಯ ಸ್ನೇಹಿತೆಯೊಬ್ಬಳು ಅವರಿಬ್ಬರ ನಡುವಿನ ಮಾತುಕತೆಯ ಸ್ಕ್ರೀನ್‌ಶಾಟನ್ನು ಪ್ರೀತಿಯ ಪೋಷಕರ ಜೊತೆ ಹಂಚಿಕೊಂಡ ನಂತರವೇ ಪ್ರಕರಣ ಬೆಳಕಿಗೆ ಬಂದಿದೆ. ಈ ಚಾಟ್‌ನಲ್ಲಿ ಪ್ರೀತಿ ಆ ವ್ಯಕ್ತಿಯನ್ನು ಹಸ್ಬೆಂಡ್‌ಜೀ ಎಂದು ಕರೆಯುತ್ತಿದ್ದಳು ಏಪ್ರಿಲ್ 2023ರ ಚಾಟ್‌ನಲ್ಲಿ ಆಕೆ ಆತನನ್ನು ರಿಂಕು ಜೀ ಎಂದು ಕರೆದಿದ್ದಳು. ಪ್ರೀತಿಯ ಗೆಳತಿ ಹಂಚಿಕೊಂಡ ಫೋಟೋದಲ್ಲಿ ಪ್ರೀತಿಯ ಹಣೆಗೆ (ಬೈತಲೆ) ಆತ ಸಿಂಧೂರವನ್ನು ಇಡುವ ಫೋಟೋ ಕೂಡ ಇದೆ.
ತಲೆ ಬೋಳಿಸಿಕೊಂಡಿದ್ದ ಪ್ರೀತಿ
ಈ ಮಧ್ಯೆ ಪ್ರೀತಿ ತನ್ನ ಉದ್ದನೇಯ ಸೊಂಪಾದ ಕೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಂಡಿದ್ದಳು. ಇದನ್ನು ಆಕೆ ತನ್ನ ಪ್ರಿಯಕರನಿಗಾಗಿ ಮಾಡಿದ್ದಳು. ಸೊಂಪಾದ ಕೂದಲನ್ನು ಕತ್ತರಿಸುವ ಬಯಕೆ ವ್ಯಕ್ತಪಡಿಸಿದ್ದ ಪ್ರೀತಿಯ ನಿರ್ಧಾರವನ್ನು ಆಕೆಯ ಸೋದರಿ ಹಿಮಾನಿ ಇಷ್ಟಪಟ್ಟಿರಲಿಲ್ಲ. ಇದಕ್ಕಾಗಿ ಜಗಳವೂ ಆಗಿತ್ತು. ತನ್ನ ಕೂದಲನ್ನು ತೆಗೆಯುವ ಬಗ್ಗೆ ಹಠ ಹಿಡಿದ ಪ್ರೀತಿ, ಸಲೂನ್‌ಗೆ ಹೋಗುವುದಾಗಿ ಬೆದರಿಕೆ ಹಾಕಿದಳು. ಮುಜುಗರಕ್ಕೆ ಹೆದರಿದ ಪ್ರೀತಿ ಸಹೋದರ ಆ ಕೋರಿಕೆಗೆ ಮಣಿದು ಮನೆಯಲ್ಲಿಯೇ ತನ್ನ ಸಹೋದರಿಯ ತಲೆ ಬೋಳಿಸಿದ್ದ. ಆದರೆ ಪ್ರೀತಿಯ ಪ್ರಿಯಕರ ನೀನು ತುಂಬಾ ಸುಂದರಿ ಬೇರೆ ಯಾರಾದರೂ ನಿನ್ನ ಇಷ್ಟಪಟ್ಟರೇ ನಾನು ಏನು ಮಾಡಲಿ ಎಂದು ಕೇಳುತ್ತಿದ್ದನಂತೆ, ಇದೇ ಕಾರಣಕ್ಕೆ ಪ್ರೀತಿ ಕೂದಲನ್ನು ಕತ್ತರಿಸಿಕೊಂಡಿದ್ದಳು ಎಂಬ ವಿಚಾರ ಸಾವಿನ ನಂತರ ಬಯಲಾಗಿದೆ.
ಆದರೆ ಈ ನಡುವೆ ಇವರಿಬ್ಬರ ನಡುವೆ ಬ್ರೇಕಪ್ ಆಗಿತ್ತು. ಪ್ರೀತಿಯ ಜೊತೆ ಎಲ್ಲಾ ಸಂಪರ್ಕಗಳನ್ನು ಕಡಿದುಕೊಂಡ ಗೆಳೆಯ ಆಕೆಯ ನಂಬರನ್ನು ಬ್ಲಾಕ್ ಮಾಡಿದ್ದ. ಇದರಿಂದ ಪ್ರೀತಿ ಡಿಪ್ರೆಶನ್‌ಗೆ ಜಾರಿದ್ದಳು. ಪ್ರೀತಿಯ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಆಕೆ ಮಾನಸಿಕವಾಗಿ ಸಾಕಷ್ಟು ದುರ್ಬಲವಾಗಿದ್ದಾಳೆ. ಖಿನ್ನತೆಗೆ ಜಾರಿದ್ದಾಳೆ ಎಂಬುದನ್ನು ಸೂಚಿಸುತ್ತಿದ್ದವು. ಮಾರ್ಚ್ 13 ರಂದು ಆಕೆ ಆತ ನನಗೆ ಸಂದೇಶ ಕಳುಹಿಸದಿದ್ದರೆ ಏನು ಆತ ನನ್ನನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಬರೆದುಕೊಂಡಿದ್ದಳು. ಮಾರ್ಚ್19ರಂದು ಪೋಸ್ಟ್ ಮಾಡಿದ ಮತ್ತೊಂದು ವೀಡಿಯೋದಲ್ಲಿ, ಮೊದಲೆಲ್ಲಾ ಇದು ಬದಲಾವಣೆ ಉಂಟು ಮಾಡುತ್ತಿತ್ತು, ಆದರೆ ಈಗ ನಾವು ಅದರ ಬಗ್ಗೆ ನೋಡುವುದೇ ಇಲ್ಲ ಎಂದು ಬರೆದುಕೊಂಡಿದ್ದಳು.
ಇತ್ತ ಸಾವಿಗೂ ಮೊದಲು ಪ್ರೀತಿ ಫಿಜ್ಜಾ ಹಾಗೂ ಕೋಲ್ಡ್ ಡ್ರಿಂಕ್‌ನ್ನು ಆರ್ಡರ್ ಮಾಡಿದ್ದಾಳೆ. ಅಲ್ಲದೇ ತಾಯಿಗೆ ಕರೆ ಮಾಡುವ ಮೊದಲು ತನ್ನ ಗೆಳೆಯನಿಗೂ ಆಕೆ ಕರೆ ಮಾಡಿದ್ದು, ಆದರೆ ಆತ ಕರೆ ಸ್ವೀಕರಿಸಿಲ್ಲ. ಇತ್ತ ಪ್ರೀತಿ ಸಾವಿಗೀಡಾಗಿ 10 ದಿನಗಳೇ ಕಳೆದಿದ್ದು, ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಇತ್ತ ಮಗಳ ಸಾವಿಗೆ ನ್ಯಾಯಕ್ಕಾಗಿ ಪ್ರೀತಿಯ ಕುಟುಂಬ ಕಾದಿದೆ.
ನೋಡಿದ್ರಲ್ಲ, ಟೀನೇಜ್ ಪ್ರೀತಿಯೊಂದು ಹೇಗೆ ಸಾವಿನೊಂದಿಗೆ ಅಂತ್ಯವಾಯ್ತು ಅಂತ. ದಯವಿಟ್ಟು ಪೋಷಕರಾದವರು ಮಕ್ಕಳ ಆಗುಹೋಗುಗಳನ್ನು ಚಲನವಲನಗಳನ್ನು ದಯವಿಟ್ಟು ಗಮನಿಸಿ, ಹದಿಹರೆಯದ ಮಕ್ಕಳನ್ನು ಮನೆಯಲ್ಲೇ ಒಂಟಿಯಾಗಿ ಬಿಟ್ಟು ಹೋಗಬೇಡಿ, ಏಕೆಂದರೆ ಇದು ಸೋಶಿಯಲ್ ಮೀಡಿಯಾ ಯುಗ, ಯುವ ಸಮೂಹದ ಮೇಲೆ ಸಾಕಷ್ಟು ಪ್ರಭಾವ ಬೀರುವ ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇದ್ದು, ಮಕ್ಕಳು ಹಾದಿ ತಪ್ಪದಂತೆ ಹದ್ದಿನ ಕಣ್ಣಿನಲ್ಲಿ ಕಾಯುವ ಜವಾಬ್ದಾರಿ ಪೋಷಕರಿಗಿದೆ. ಸ್ವಾತಂತ್ರ ಅಥವಾ ಖಾಸಗಿತನದ ಹೆಸರಿನಲ್ಲಿ ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟರೆ ಮುಂದೆ ಒಬ್ಬರೇ ಕುಳಿತು ಅಳುವ ದಿನ ದೂರ ಇಲ್ಲ ಏನಂತೀರಿ?