ಪ್ರಕರಣವೊಂದರಲ್ಲಿ ಕೋಲ್ಕತ್ತಾ ಹೈಕೋರ್ಟ್ 13 ವರ್ಷದ ಬಾಲಕನಿಗೆ ಯಾರು ಬೇಕು ಅಥವಾ ಯಾರ ಜೊತೆ ಇರಲು ಬಯಸುವೆ ಎಂಬುದನ್ನು ನೀನೆ ಆಯ್ಕೆ ಮಾಡು ಎಂದು ಬಾಲಕನಿಗೆ ಆಯ್ಕೆಯ ಅವಕಾಶ ನೀಡಿತ್ತು. ಈ ವೇಳೆ ಬಾಲಕ ತಾಯಿಯ ಬದಲಾಗಿ ತಂದೆ ಹಾಗೂ ಅವರ ಜೊತೆಗಿದ್ದ ಅವಿಭಕ್ತ ಕುಟುಂಬವನ್ನು ಆಯ್ಕೆ ಮಾಡಿದ್ದಾನೆ.
ಕೋಲ್ಕತ್ತಾ: ವಿಚ್ಛೇದನ ಬಯಸಿದ ದಂಪತಿಗೆ ಮಕ್ಕಳಿದ್ದಲ್ಲಿ ಅವರು ಅಪ್ರಾಪ್ತರಾಗಿದ್ದಲ್ಲಿ ಅವರು ಯಾರ ಜೊತೆ ಇರಬೇಕು ಎಂಬುದನ್ನು ಸಾಮಾನ್ಯವಾಗಿ ನ್ಯಾಯಾಲಯ ನಿರ್ಧರಿಸುತ್ತದೆ. ಆದರೆ ಪ್ರಕರಣವೊಂದರಲ್ಲಿ ಕೋಲ್ಕತ್ತಾ ಹೈಕೋರ್ಟ್ 13 ವರ್ಷದ ಬಾಲಕನಿಗೆ ಯಾರು ಬೇಕು ಅಥವಾ ಯಾರ ಜೊತೆ ಇರಲು ಬಯಸುವೆ ಎಂಬುದನ್ನು ನೀನೆ ಆಯ್ಕೆ ಮಾಡು ಎಂದು ಬಾಲಕನಿಗೆ ಆಯ್ಕೆಯ ಅವಕಾಶ ನೀಡಿತ್ತು. ಈ ವೇಳೆ ಬಾಲಕ ತಾಯಿಯ ಬದಲಾಗಿ ತಂದೆ ಹಾಗೂ ಅವರ ಜೊತೆಗಿದ್ದ ಅವಿಭಕ್ತ ಕುಟುಂಬವನ್ನು ಆಯ್ಕೆ ಮಾಡಿದ್ದಾನೆ.
ಬಾಲಕನ ಕಸ್ಟಡಿಗಾಗಿ ಪೋಷಕರಿಬ್ಬರ ಪರಸ್ಪರ ತೀವ್ರ ಹೋರಾಟದ ನಂತರ ಕೋರ್ಟ್ ಈ ನಿರ್ಧಾರ ಮಾಡಿದೆ. ಈ ಬಗ್ಗೆ ನಿರ್ಧರಿಸುವಷ್ಟು ಬಾಲಕ ಬುದ್ಧಿವಂತ ಹಾಗೂ ಪಕ್ವತೆಯನ್ನು (matured)ಹೊಂದಿದ್ದಾನೆ ಎಂದು ನಿರ್ಧರಿಸಿದ ಕೋರ್ಟ್ ಆಯ್ಕೆಗೆ ಬಾಲಕನಿಗೆ ಅವಕಾಶ ನೀಡಿತ್ತು. ಈ ವೇಳೆ ಬಾಲಕ ಅಪ್ಪ ಅಮ್ಮ ಜೊತೆಗಿದ್ದರೆ ಚೆಂದ ಎಂದು ,ಮೊದಲಿಗೆ ಕೋರ್ಟ್‌ಗೆ ಹೇಳಿದ್ದ ನಂತರ ಕೋರ್ಟ್ ಕೂಡ ಈ ಮದುವೆಯನ್ನು ಉಳಿಸಿಕೊಳ್ಳುವ ಸಲುವಾಗಿ ದಂಪತಿಗೆ ಜೊತೆಗಿರುವಂತೆ ಸಂಧಾನ ನಡೆಸಿತ್ತು. ಆದರೆ ಈ ಸಂಧಾನವೂ ಕೂಡ ವಿಫಲವಾಯಿತು. ಇದಾದ ಬಳಿಕ ಕೋ ಪೇರೆಂಟಿಂಗ್ ಮಾಡುವಂತೆಯೂ ಕೋರ್ಟ್ ದಂಪತಿಗೆ ಸೂಚಿಸಿತ್ತು. ಇದಕ್ಕೂ ದಂಪತಿ ಒಪ್ಪದ ಹಿನ್ನೆಲೆಯಲ್ಲಿ ಕೊನೆಯದಾಗಿ ವಿಚ್ಛೇದನಕ್ಕೆ ಮುಂದಾಗಿತ್ತು. ಇದಾದ ಬಳಿಕ ಮಗುವಿನ ಪಾಲನೆಯ ಹಕ್ಕಿಗಾಗಿ ದಂಪತಿ ಮಧ್ಯೆ ಸಮರ ನಡೆಯುತ್ತಿತ್ತು.
Parallel Parenting: ಮಾತನಾಡ್ದೆ ಮಗು ನೋಡಿಕೊಳ್ಳುವ ವಿಧಾನ ಇದು
ಮಗುವಿನ ತಂದೆ ಕಳೆದ ಆರು ವರ್ಷಗಳಿಂದ ಮಗನನ್ನು ನೋಡಲು ಬಿಡುತ್ತಿಲ್ಲ ಎಂದು ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ 13 ವರ್ಷದ ಮಗನಿಗೆ ಯಾರು ಬೇಕು ಯಾರನ್ನು ಆಯ್ಕೆ ಮಾಡುವೆ ಎಂದಾಗ ಬಾಲಕ ತಂದೆ ಹಾಗೂ ತಂದೆಯ ಕಡೆಯ ಅವಿಭಕ್ತ ಕುಟುಂಬವನ್ನು ಆಯ್ಕೆ ಮಾಡಿದ್ದ.
ಹಿನ್ನೆಲೆ
2008ರಲ್ಲಿ ಈ ಜೋಡಿ ಮದ್ವೆಯಾಗಿತ್ತು. 2010ರಲ್ಲಿ ಈ ದಂಪತಿಗೆ ಮಗ ಜನಿಸಿದ್ದ. ಇದಾದ ಬಳಿಕ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 2017ರಲ್ಲಿ ಈ ಮದುವೆ ಮುರಿದು ಬಿದ್ದಿತ್ತು. ಗಂಡನ ಮನೆಯವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಪತ್ನಿ ತನ್ನ ಪುತ್ರನೊಂದಿಗೆ ಗಂಡನ ಮನೆ ತೊರೆದು ಹೋಗಿದ್ದಳು. ಇದಾದ ನಂತರ ಕಳೆದ ಆರು ವರ್ಷಗಳಿಂದ ಮಗುವಿನ ಕಸ್ಟಡಿಗಾಗಿ ದಂಪತಿ ಮಧ್ಯೆ ಕಾನೂನು ಹೋರಾಟ ನಡೆಯುತ್ತಿತ್ತು. ಕಳೆದ ಆರು ವರ್ಷಗಳಿಂದ ಒಮ್ಮೆಯೂ ಮಗನನ್ನು ಭೇಟಿ ಮಾಡಲು ಹೆಂಡತಿ ಅವಕಾಶ ನೀಡಿಲ್ಲ ಎಂದು ಗಂಡ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲದೇ ಹೆಂಡತಿ ನೀಡಿದ ದೂರಿನ ಬಳಿಕ ಗಂಡನ ಸಹೋದರರು ಸೇರಿದಂತೆ ಎಲ್ಲರೂ ಜಾಮೀನು ಪಡೆದು ಹೊರಗಿದ್ದಾರೆ.
ತನ್ನ ಪಾಲನೆಯನ್ನು ಯಾರು ಮಾಡಬೇಕು ಎಂಬುದನ್ನು ನಿರ್ಧರಿಸುವಷ್ಟು ಬಾಲಕ ಬುದ್ಧಿವಂತ ಹಾಗೂ ಪಕ್ವತೆ ಹೊಂದಿದ್ದಾನೆ ಎಂದು ಕೋರ್ಟ್ ನಿರ್ಧರಿಸಿತು. ಕೋಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಾಧೀಶರಾದ ಸೌಮೇನ್ ಸೇನ್ (Soumen Sen) ಹಾಗೂ ಉದಯ್‌ಕುಮಾರ್ (Uday Kumar) ಫೆ.28 ರಂದು ಈ ತೀರ್ಪು ನೀಡಿದ್ದಾರೆ. ತಾನು ತನ್ನ ತಂದೆಯ ಮನೆಯಲ್ಲಿ ಅವಿಭಕ್ತ ಕುಟುಂಬದ ಜೊತೆ ತುಂಬಾ ಖುಷಿಯಾಗಿರುವುದಾಗಿ ಹಾಗೆಯೇ ಮಾಲ್ಡದಲ್ಲಿರುವ ತಾಯಿ ಮನೆಯಲ್ಲಿ ನನಗೆ ಶಾಲೆಯಿಂದ ಬಂದ ನಂತರ ಒಂಟಿತನ ಕಾಡುತ್ತೆ ಎಂದು ನ್ಯಾಯಾಲಯಕ್ಕೆ ಬಾಲಕ ಹೇಳಿದ್ದ.
ಪ್ರಣಯವಿಲ್ಲದ Co-Parenting ಜೀವನ ಹೇಗಿರುತ್ತೆ ಗೊತ್ತಾ?
ಪೋಷಕರ ನಡುವಿನ ಈ ಕಲಹ ಮಗುವಿನ ಮೇಲೆ ಯಾವುದೇ ಪರಿಣಾಮ ಬೀರಬಾರದು. ಅಪ್ರಾಪ್ತ ಮಗುವಿನ ಪಾಲನೆಗೆ ಸಂಬಂಧಿಸಿದ ಹೋರಾಟದಲ್ಲಿ ಕಾನೂನಿಗಿಂತ ಮಗುವಿನ ಹಕ್ಕು ಮೇಲುಗೈ ಸಾಧಿಸುತ್ತದೆ ಎಂದು ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ ಕೋಲ್ಕತ್ತಾ ಹೈಕೋರ್ಟ್ ಈ ತೀರ್ಪು ನೀಡಿತ್ತು. ಪಾಲನೆಯ ಸಮಸ್ಯೆಯನ್ನು ನಿರ್ಧರಿಸುವಾಗ, ಕಾನೂನಿಗಿಂತ ಹೆಚ್ಚು , ಮಗುವಿನ ಯೋಗಕ್ಷೇಮವನ್ನೇ ಅತ್ಯಂತ ಪ್ರಮುಖವಾಗಿ ಪರಿಗಣಿಸಬೇಕು ಎಂದು ಕೋರ್ಟ್ ಹೇಳಿತು.
ಮಗುವಿನ ತಾಯಿ ಎಂಬ ಒಂದೇ ಕಾರಣದಿಂದ ಮಗುವನ್ನು ತಂದೆಯಿಂದ ದೂರ ಮಾಡುವುದನ್ನು ಕೋರ್ಟ್ ಪ್ರೋತ್ಸಾಹಿಸುವುದಿಲ್ಲ. ತಾಯಿಯ ಸ್ಥಾನವನ್ನು ತಂದೆಯೇ ತುಂಬಿದ ಹಲವು ನಿದರ್ಶನಗಳು ನಮ್ಮಲ್ಲಿವೇ ಎಂದು ಕೋರ್ಟ್ ಹೇಳಿತು. ಇದರ ಜೊತೆಗೆ ಮಗುವಿನ ಶಾಲೆಯನ್ನು ಆಗಾಗ ಬದಲಾಯಿಸಿದ ತಾಯಿಯ ನಿರ್ಧಾರವನ್ನು ಕೂಡ ಟೀಕಿಸಿದ ಕೋರ್ಟ್ ಹೀಗೆ ಮಾಡುವುದರಿಂದ ಮಗುವಿನ ವಿದ್ಯಾಭ್ಯಾಸದ ಮೇಲೆಯೂ ಪರಿಣಾಮ ಬೀರುವುದು ಎಂದು ಹೇಳಿತು.
ಇಲ್ಲಿ ತಂದೆಯ ಪೋಷಕರ ಕಡೆ ಗಂಡನ ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಗಂಡನ ತಂದೆ ಶಾಲೆಯಲ್ಲಿ ನಿವೃತ್ತ ಗುಮಾಸ್ತರಾಗಿದ್ದರು. ಇತ್ತ ಹೆಂಡತಿ ಕಡೆಯ ಪೋಷಕರು ಶಾಲೆಯ ಪ್ರಿನ್ಸಿಪಾಲ್ ಆಗಿದ್ದು, ಈ ಕಾರಣಕ್ಕೆ ಪತ್ನಿ ಗಂಡನ ಕಡೆ ಮಗುವಿಗೆ ಉತ್ತಮ ಶಿಕ್ಷಣ ಸಿಗಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ಹೆಂಡತಿ ಕಡೆಯ ಈ ವಾದವನ್ನು ಕೂಡ ಕೋರ್ಟ್ ಗಣನೆಗೆ ತೆಗೆದುಕೊಳ್ಳದೇ ತಳ್ಳಿ ಹಾಕಿತ್ತು.
ಅಲ್ಲದೇ ಮಗು ಎಲ್‌ಕೆಜಿ ಶಿಕ್ಷಣ ಪಡೆದ ಖಾಸಗಿ ಶಾಲೆಯ ಪ್ರಾಂಶುಪಾಲರಿಗೆ ಕೋರ್ಟ್ ಈತನನ್ನು ಮತ್ತೆ ದಾಖಲಿಸಿಕೊಳ್ಳುವಂತೆ ಹೇಳಿತು.