
ಬೆಂಗಳೂರು (ಜೂ.23): ತ್ರಿಪುರ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇಬ್, ಕರ್ನಾಟಕದ ಅಳಿಯನಾಗಿದ್ದಾರೆ. ಜೂನ್ 19 ರಂದು ಕರ್ನಾಟಕ ಮೂಲದ ನಟಿ ತ್ರಿವೇಣಿ ರಾವ್ ಅವರನ್ನು ಗುಟ್ಟಾಗಿ ವಿವಾಹವಾಗಿದ್ದಾರೆ. ಟಗರು ಸಿನಿಮಾದಲ್ಲಿ ಕಾನ್ಸ್‌ಟೇಬಲ್ ಸರೋಜ ಪಾತ್ರದಿಂದಲೇ ಜನಪ್ರಿಯವಾಗಿರುವ ತ್ರಿವೇಣಿ ರಾವ್, ಪುನೀತ್ ಜೊತೆ ಯುವರತ್ನ ಸಿನಿಮಾದಲ್ಲೂ ನಟಿಸಿದ್ದರು. 54 ವರ್ಷದ ಬಿಪ್ಲಬ್ ಕುಮಾರ್‌ಗೆ ಇದು 2ನೇ ಮದುವೆ. 2001ರಲ್ಲಿ ನೀತಿ ದೇಬ್‌ರನ್ನು ವಿವಾಹವಾಗಿದ್ದ ಬಿಪ್ಲಬ್ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ತಮ್ಮ ದೀರ್ಘಕಾಲದ ದಾಂಪತ್ಯವನ್ನು ವಿಚ್ಛೇದನದ ಮೂಲಕ ಕೊನೆ ಮಾಡಿದ್ದರು. ಈ ವಿವಾಹದಿಂದ ಆರ್ಯನ್ ದೇಬ್ ಹಾಗೂ ಶ್ರೇಯಾ ದೇಬ್ ಹೆಸರಿನ ಮಕ್ಕಳನ್ನೂ ಬಿಪ್ಲಬ್ ಹೊಂದಿದ್ದಾರೆ.
ಹಾಗಂತ ಇವರಿಬ್ಬರ ಸಂಸಾರ ಹಠಾತ್ ಆಗಿ ಮುರಿದುಬಿದ್ದಿದ್ದಲ್ಲ. 2019ರ ಏಪ್ರಿಲ್‌ನಲ್ಲೇ ಬಿಪ್ಲಬ್ ಕುಮಾರ್ ವಿರುದ್ಧ ಕಿರುಕುಳದ ಆರೋಪವನ್ನೂ ನೀತಿ ಮಾಡಿದ್ದರು. ಇದರ ಬೆನ್ನಲ್ಲಿಯೇ ಆಕೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ ಎಂದೂ ಸುದ್ದಿಯಾಗಿತ್ತು. ಅಂದು ಈ ವೈರಲ್ ನ್ಯೂಸ್‌ಅನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದ ನೀತಿ ದೇಬ್, 'ಗಾಸಿಪ್ ಅಥವಾ ವದಂತಿಗಳಿಗೆ ಸ್ವಂತ ಬಾಯಿ ಇರುವುದಿಲ್ಲ. ಕೇವಲ ಅಗ್ಗದ ಪ್ರಚಾರ ಮತ್ತು ಮೈಲೇಜ್ ಪಡೆಯುವುದಕ್ಕಾಗಿ ಕೆಲವೇ ಕೆಲವು ಕೊಳಕು, ವಿಕೃತ ಮತ್ತು ವಿಕಾರ ಮನಸ್ಸಿನ ಜನ ಇಂತಹ ವದಂತಿಗಳನ್ನು ಸೃಷ್ಟಿಸುತ್ತಾರೆ. ಅದರಲ್ಲೂ ಮುಖ್ಯವಾಗಿ, ಪ್ರಭಾವಿ ವ್ಯಕ್ತಿಗಳ ವಿರುದ್ಧ ರಾಜಕೀಯ ಲಾಭವನ್ನು ಪಡೆಯಲು ಮತ್ತು ಇಂತಹ ಗಲೀಜು ವದಂತಿಗಳನ್ನು ಹರಡಲು ದೊಡ್ಡ ಮಟ್ಟದ ಹಣವನ್ನು ಪಡೆದಾಗ ಇಂತಹ ಕೃತ್ಯವೆಸಗುತ್ತಾರೆ; ಇಲ್ಲದಿದ್ದರೆ ಇಂತಹ ಅಪರಾಧಿಗಳನ್ನು ಯಾರು ತಾನೇ ಫಾಲೋ ಮಾಡುತ್ತಾರೆ ಹೇಳಿ' ಎಂದು ಬರೆದುಕೊಂಡಿದ್ದರು.
ಆಕೆ ಈ ವಿಚಾರವನ್ನೂ ಅಲ್ಲಗಳೆದಿದ್ದರು. ಇದಾದ 6 ವರ್ಷಕ್ಕೆ ಅವರು ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಇನ್ನು ಬಿಪ್ಲಬ್ ಕುಮಾರ್‌ಗೆ ಮತ್ತೊಂದು ಮದುವೆಯಾಗುವ ಆಸೆಯೇ ಇರಲಿಲ್ಲ. ರಾಜಕೀಯ ಚಟುವಟಿಕೆಗಳಲ್ಲಿಯೇ ಅವರು ಬ್ಯುಸಿಾಗಿದ್ದರು. ಆದರೆ, ಕುಟುಂಬದವರು ಅದರಲ್ಲೂ ಬಿಪ್ಲಬ್ ಅವರ ತಾಯಿ ಪದೇ ಪದೇ ಬಿಪ್ಲಬ್‌ಗೆ ಮತ್ತೊಂದು ಮದುವೆಯಾಗುವಂತೆ ಒತತಾಯ ಮಾಡುತ್ತಿದ್ದರು. ಅದಾದ ಬಳಿಕವೇ ತಾಯಿಯ ಆಸೆಗೆ ಗೌರವ ನೀಡಿ ಮತ್ತೊಂದು ಮದುವೆಗೆ ಒಕೆ ಎಂದಿದ್ದರು.
ತ್ರಿಪುರ ರಾಜಕೀಯದಲ್ಲಿ ಫೇಮಸ್ ಹೆಸರಾಗಿರುವ ಬಿಪ್ಲಬ್ ದೇಬ್, ತಮ್ಮ ಜೀವನದ ಬಹುಪಾಲು ಸಮಯವನ್ನು ದೆಹಲಿಯಲ್ಲಿ ಕಳೆದಿದ್ದರು. ರಾಜಕೀಯಕ್ಕೆ ಬರುವ ಮುನ್ನ ಅವರು ದೆಹಲಿಯಲ್ಲಿ ಜಿಮ್ ಟ್ರೇನರ್ ಆಗಿ ಕೆಲಸ ಮಾಡಿದ್ದರು. ಅಲ್ಲಿಯೇ ಅವರು ಮೊದಲ ಪತ್ನಿ ನೀತಿಯನ್ನು ಭೇಟಿಯಾಗಿದ್ದರು. ಆರಂಭದಲ್ಲಿ ಸ್ನೇಹಿತರಿಂತಿದ್ದ ಇವರು 2001ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಇನ್ನು ತ್ರಿವೇಣಿ ರಾವ್ ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರೂ, ಟಗರು ಸಿನಿಮಾದಲ್ಲಿ ಅವರು ಮಾಡಿದ ಕಾನ್ಸ್‌ಟೇಬಲ್ ಸರೋಜ ಪಾತ್ರ ಸತ್ ಫೇಮಸ್ ಆಗಿತ್ತು.ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿರುವ ಶಿವಣ್ಣನ ಜೊತೆಗೆ 'ಕಾನ್ಸ್ ಟೇಬಲ್ ಸರೋಜ' ಕೆಲಸ ಮಾಡುತ್ತಿರುತ್ತಾಳೆ. ಪೊಲೀಸ್ ಕಾನ್ಸ್ ಟೇಬಲ್ ಆಗಿದ್ದರು ರೌಡಿ ಡಾಲಿಗೆ ಸಹಾಯ ಮಾಡುವ ಪಾತ್ರ ಇದಾಗಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.