
ಮುಂಬೈ: ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಪುತ್ರಿ ಇಶಾ ಡಿಯೋಲ್ ಜೊತೆಗಿನ ವಿಚ್ಛೇದನದ ನಂತರ ಆಕೆಯ ಮಾಜಿ ಪತಿ ಭರತ್ ತಖ್ತಾನಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಉದ್ಯಮಿಯಾಗಿರುವ ಭರತ್ ಅವರು ಇತ್ತೀಚೆಗೆ ಹೊಸ ಯುವತಿಯ ಜೊತೆಗಿರುವ ಫೋಟೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ಭರತ್ ತಖ್ತಾನಿ ಆ ಯುವತಿಯನ್ನು ಹಿಡಿದುಕೊಂಡಿರುವ ಫೋಟೋವಿದೆ. ಯುವತಿ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಭರತ್ ತಖ್ತಾನಿ ಕುಟುಂಬಕ್ಕೆ ಸ್ವಾಗತ, ಇದು ಅಧಿಕೃತ ಎಂದು ಬರೆದುಕೊಂಡಿದ್ದಾರೆ. ಮೇಘ್ನಾ ಲಖನಿ ಅವರು ಕೂಡ ಈ ಫೋಟೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ರಿ ಶೇರ್ ಮಾಡಿದ್ದಾರೆ.
2024ರಲ್ಲಿ 9 ವರ್ಷಗಳ ದಾಂಪತ್ಯಕ್ಕೆ ಗುಡ್‌ಬೈ ಹೇಳಿದ್ದ ಇಶಾ -ಭರತ್
ಭರತ್ ತಖ್ತಾನಿ ಹಾಗೂ ಇಶಾ ಡಿಯೋಲ್ ಅವರು 2012 ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಆದರೆ 11 ವರ್ಷಗಳ ದಾಂಪತ್ಯದ ನಂತರ 2024 ರಲ್ಲಿ ಪರಸ್ಪರ ವಿಚ್ಛೇದನ ಪಡೆದುಕೊಂಡು ದೂರಾಗಿದ್ದಾರೆ. ಇಬ್ಬರಿಗೂ ರಾಧ್ಯಾ (6) ಮತ್ತು ಮಿರಾಯಾ (4) ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. 2024ರಲ್ಲಿ ಇಬ್ಬರು ಜಂಟಿಯಾಗಿ ಹೇಳಿಕೆ ನೀಡುವ ಮೂಲಕ ವಿಚ್ಛೇದನ ಘೋಷಿಸಿದ್ದರು. ನಾವು ಪರಸ್ಪರ ಮತ್ತು ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಜೀವನದಲ್ಲಿ ಈ ಬದಲಾವಣೆಯ ಮೂಲಕ, ನಮ್ಮ ಇಬ್ಬರು ಮಕ್ಕಳ ಹಿತಾಸಕ್ತಿ ಮತ್ತು ಕಲ್ಯಾಣವು ನಮಗೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಇರುತ್ತದೆ. ನಮ್ಮ ಗೌಪ್ಯತೆಯನ್ನು ಗೌರವಿಸುವುದನ್ನು ನಾವು ಪ್ರಶಂಸಿಸುತ್ತೇವೆ ಎಂದು ಅವರು ಹೇಳಿಕೆ ಬಿಡುಗಡೆ ಮಾಡಿದ್ದರು.
ಮಗಳ ವಿಚ್ಛೇದನದಿಂದ ಬೇಸರಗೊಂಡಿದ್ದ ಧರ್ಮೇಂದ್ರ:
ಮಗಳ ವಿಚ್ಛೇದನಕ್ಕೆ ಧರ್ಮೇಂದ್ರ ಆ ಸಮಯದಲ್ಲಿ ಬಹಳ ಬೇಸರ ವ್ಯಕ್ತಪಡಿಸಿದ್ದರು. ಯಾವುದೇ ಪೋಷಕರು ತಮ್ಮ ಮಕ್ಕಳ ಕುಟುಂಬವು ಮುರಿದುಹೋಗುವುದನ್ನು ನೋಡಿ ಸಂತೋಷಪಡಲು ಸಾಧ್ಯವಿಲ್ಲ ಹಾಗೆಯೇ ಧರ್ಮೇಂದ್ರ ಕೂಡ ಒಬ್ಬ ತಂದೆ, ತಾನು ತಮ್ಮ ಮಗಳ ಬೇರ್ಪಡುವ ನಿರ್ಧಾರವನ್ನು ವಿರೋಧಿಸುವುದಿಲ್ಲ, ಆದರೆ ಆಕೆ ಅದರ ಬಗ್ಗೆ ಪುನರ್ವಿಮರ್ಶಿಸಬೇಕೆಂದು ಬಯಸುತ್ತೇನೆ ಎಂದು ಅವರು ಹೇಳಿಕೊಂಡಿದ್ದರು ಬಾಲಿವುಡ್ ಲೈಫ್ ವರದಿ ಮಾಡಿತ್ತು.
ವಿಚ್ಛೇದನದಿಂದ ಮಕ್ಕಳ ಮೇಲಾಗುವ ಪರಿಣಾಮದ ಬಗ್ಗೆ ಧರ್ಮೇಂದ್ರ ಚಿಂತಿತರಾಗಿದ್ದರು. ಮಕ್ಕಳು ನಿಜಕ್ಕೂ ಬೇಸರ ಪಡುತ್ತಾರೆ. ಅದಕ್ಕಾಗಿಯೇ ಅವರು ಬೇರ್ಪಡುವುದನ್ನು ಮರುಪರಿಶೀಲಿಸಬೇಕೆಂದು ಬಯಸುವುದಾಗಿ ಧರ್ಮೇಂದ್ರ ಹೇಳಿದ್ದರು. ಇಶಾ ಮತ್ತು ಭರತ್‌ಗೆ ಇಬ್ಬರು ಹೆಣ್ಣುಮಕ್ಕಳಾದ ರಾಧ್ಯಾ ಮತ್ತು ಮಿರಾಯಾ ಇದ್ದಾರೆ. ಅವರು ತಮ್ಮ ಅಜ್ಜಿಯರಿಗೆ, ತಂದೆ ಮತ್ತು ತಾಯಿಯೊಂದಿಗೆ ತುಂಬಾ ಹತ್ತಿರವಾಗಿದ್ದಾರೆ. ಬೇರ್ಪಡುವಿಕೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಹೀಗಾಗಿ ಮದುವೆಯನ್ನು ಉಳಿಸಲು ಸಾಧ್ಯವಾದರೆ ಅವರು ಅದನ್ನು ಮಾಡಬೇಕೆಂದು ಧರ್ಮೇಂದ್ರ ಬಯಸಿದ್ದರು ಎಂದು ಬಾಲಿವುಡ್ ಲೈಫ್ ವರದಿ ಮಾಡಿತ್ತು.
ಭರತ್ ತಖ್ತಾನಿ ಬದುಕಿಗೆ ಕಾಲಿಟ್ಟ ಹೊಸ ಚೆಲುವೆ ಯಾರು?
ಅಂದಹಾಗೆ ಫೋಟೋದಲ್ಲಿರುವ ಯುವತಿ ಮೇಘ್ನಾ ಲಖನಿ ಆಗಿದ್ದು, ಆಕೆಯೂ ಓರ್ವ ಮಹಿಳಾ ಉದ್ಯಮಿ ಎಂದು ತಿಳಿದು ಬಂದಿದೆ. ಅವರ ಲಿಂಕ್ಡಿನ್ ಪ್ರೊಫೈಲ್ ಪ್ರಕಾರ ಅವರೊಬ್ಬ ಉದ್ಯಮಿ. ಅವರು 2019 ರಲ್ಲಿ ಸ್ಥಾಪನೆಯಾದ ಯುಎಇ ಮೂಲದ ವ್ಯವಹಾರವಾದ ಒನ್ ಮಾಡರ್ನ್ ವರ್ಲ್ಡ್‌ನ ಸಂಸ್ಥಾಪಕಿಯಾಗಿದ್ದಾರೆ. ಅವರ ಕಂಪನಿಯು ಪ್ರೀಮಿಯಂ ಸುಸ್ಥಿರ ಉತ್ಪನ್ನಗಳು ಮತ್ತು ಪ್ಯಾಕೇಜಿಂಗ್ ಸಲಹಾ ಸೇವೆಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದು, ಒಮ್ಮೆ ಬಳಸುವ ಪ್ಲಾಸ್ಟಿಕ್‌ಗೆ ಪ್ರತಿಯಾಗಿ ಪರಿಸರ ಸ್ನೇಹಿ ಪರ್ಯಾಯಗಳನ್ನು ನೀಡುತ್ತದೆ.
ಅವರು ಇಂಗ್ಲೆಂಡ್‌ನ ಕೊಲ್ಚೆಸ್ಟಾರ್‌ನಲ್ಲಿರುವ ಸಿಕ್ತ್ ಫಾರ್ಮ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು,ಲಂಡನ್‌ನ ಆರ್ಟ್ಸ್ ವಿಶ್ವವಿದ್ಯಾಲಯದಲ್ಲಿ ಕಲೆ ಮತ್ತು ಪ್ರಮೋಷನ್‌ಗೆ ಸಂಬಂಧಿಸಿ ಪದವಿ ಪಡೆದಿದ್ದಾರೆ. ನಂತರ ಐಇ ಬಿಸಿನೆಸ್ ಶಾಲೆಯಿಂದ ಎಂಬಿಎ ಪಡೆದಿದ್ದಾರೆ. .ಮೇಘನಾ ಲಖಾನಿ 2007 ರಲ್ಲಿ ವಾಯುಯಾನ ಉದ್ಯಮದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಅಲ್ಲಿ ಅವರು ಜೆಟ್ ಏರ್‌ವೇಸ್‌ನ ಮಾರಾಟ ವ್ಯವಸ್ಥಾಪಕರಾಗಿ ಮತ್ತು ನಂತರ ಎಮಿರೇಟ್ಸ್‌ನಲ್ಲಿ ಪ್ರಾದೇಶಿಕ ವಾಯುಯಾನಾ ಲಾಟಮ್‌ನ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದಾರೆ. 2015 ರಲ್ಲಿ ಅವರು ವಿಎಫ್‌ಎಸ್ ಗ್ಲೋಬಲ್‌ನಲ್ಲಿ ವ್ಯವಹಾರ ಅಭಿವೃದ್ಧಿಯ ಜನರಲ್ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದಾರೆ. ನಂತರ ಸ್ಪೇನ್‌ನಲ್ಲಿ ಸಿಸಿಮೋಲ್ ಎಂದು ಕರೆಯಲ್ಪಡುವ ಸುಸ್ಥಿರ ಫ್ಯಾಷನ್ ಮಾರುಕಟ್ಟೆಯನ್ನು ಸಹ ಸ್ಥಾಪಿಸಿದ್ದಾರೆ. ಹಾಗೆಯೇ ಎಂಟಿಎಲ್ ವರ್ಲ್ಡ್‌ವೈಡ್ ಮತ್ತು ಆಪ್ಟಾಸ್ ಆಪ್‌ನಂತಹ ಇತರ ವ್ಯಾಪಾರ ಉದ್ಯಮವನ್ನು ಪ್ರಾರಂಭಿಸಿದ್ದು ಅವರೊಬ್ಬ ಯಶಸ್ವಿ ಮಹಿಳಾ ಉದ್ಯಮಿಯಾಗಿದ್ದಾರೆ.
ಇದನ್ನೂ ಓದಿ: ಹಾರ್ಟ್ ಡಾಕ್ಟರೇ ಹಾರ್ಟ್ ಅಟ್ಯಾಕ್‌ಗೆ ಬಲಿ: ಡ್ಯೂಟಿ ರೌಂಡ್ಸ್ ವೇಳೆಯೇ ದುರಂತ
ಇದನ್ನೂ ಓದಿ ಪ್ರೇಮಿಯ ಮದ್ವೆಯಾಗಲು ಓಡಿಹೋದ ಹುಡುಗಿ ಮದ್ವೆಯಾಗಿದ್ದು ಬೇರೆಯವನ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.