
ಕೆಲವರ ಜೀವನವೇ ಸಿನಿಮಾದಂತಿರುತ್ತದೆ. ಊಹಿಸಲಾಗದ ತಿರುವುಗಳು ಜೀವನದಲ್ಲಿ ಬಂದು ಬಿಡುತ್ತವೆ. ಯಾರನ್ನೋ ಮದುವೆಯಾಗಬೇಕು ಎಂದು ಬಯಸಿದವರು ಇನ್ಯಾರನ್ನೋ ಮದುವೆಯಾಗುತ್ತಾರೆ. ಮದುವೆ ಮಂಟಪದಲ್ಲೇ ವರ /ವಧು ಬದಲಾಗುತ್ತಾರೆ. ಮದುವವೆಗೆ ನಿಮಿಷಗಳಿರುವಾಗ ವಧು ಮದುವೆ ಒಲ್ಲೆ ಎನ್ನುತಾಳೆ. ಹೀಗೆ ಕೆಲವು ನಿರೀಕ್ಷಿಸದ ಘಟನೆಗಳು ಜೀವನದಲ್ಲಿ ನಡೆದು ಬಿಡುತ್ತವೆ. ಪ್ರೀತಿಸಿದವ ನಡುದಾರಿಯಲ್ಲಿ ಕೈ ಕೊಟ್ಟು ಬಿಡುತ್ತಾನೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಲವ್ವರ್ ಜೊತೆ ಓಡಿ ಹೋಗುವುದಕ್ಕಾಗಿ ಮನೆ ಬಿಟ್ಟು ಬಂದವಳು ಬೇರೆಯವನನ್ನು ಮದುವೆಯಾಗಿ ಮರಳಿ ಮನೆಗೆ ಬಂದಿದ್ದಾಳೆ.
ಇಂದೋರ್‌ನಲ್ಲಿ ನಡಿತು ಬಾಲಿವುಡ್ ಸಿನಿಮಾ ಜಬ್ ವಿ ಮೆಟ್ ಸ್ಟೈಲ್ ಘಟನೆ
ಬಾಲಿವುಡ್‌ನಲ್ಲಿ ಶಹೀದ್ ಕಪೂರ್ ಹಾಗೂ ಕರೀನಾ ಕಪೂರ್ ನಟನೆಯ 2007ರ ಸಿನಿಮಾ 'ಜಬ್ ವಿ ಮೆಟ್' ಸಿನಿಮಾ ಕತೆಯಂತಿದೆ ಇಲ್ಲೊಬ್ಬಳು ಹುಡುಗಿಯ ಲವ್ ಸ್ಟೋರಿ. ಅಂದಹಾಗೆ ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶ್ರದ್ಧಾ ತಿವಾರಿ ಎಂಬ ಯುವತಿ ತನ್ನ ಗೆಳೆಯ ಸಾರ್ಥಕ್ ಎಂಬಾತನನ್ನು ಮದುವೆಯಾಗುವುದಕ್ಕಾಗಿ ಮನೆಬಿಟ್ಟು ಓಡಿ ಹೋಗಿದ್ದಳು. ಆದರೆ ಆಕೆ ರೈಲು ನಿಲ್ದಾಣವನ್ನು ತಲುಪಿದಾಗ ಸಾರ್ಥಕ್ ಅಲ್ಲಿರಲಿಲ್ಲ. ತಾನು ಮದುವೆಯಾಗಬೇಕಾದ ಹುಡ್ಗ ಕಾಣಿಸದೇ ಆತಂಕಗೊಂಡ ಆಕೆ ಆತನಿಗೆ ಕರೆ ಮಾಡಿದಾಗ ಆತ ತಾನು ಬರುವುದಿಲ್ಲ ಹಾಗೂ ತನಗೆ ನಿನ್ನನ್ನು ಮದುವೆಯಾಗುವುದಕ್ಕೆ ಇಷ್ಟವಿಲ್ಲ ಎಂದು ಹೇಳಿದ್ದಾನೆ.
ಕೈಕೊಟ್ಟ ಪ್ರಿಯಕರ ಸಾರ್ಥಕ್: ಗೊತ್ತುಗುರಿ ಇಲ್ಲದೇ ರೈಲೇರಿದ ಯುವತಿ:
ತಾನು ಮದುವೆಯಾಗಬೇಕಿದ್ದ ಪ್ರೇಮಿ ಹಠಾತ್ ಆಗಿ ಕೈಕೊಟ್ಟಿದ್ದರಿಂದ ದುಃಖಿತಳಾದ ಶ್ರದ್ಧಾ ತಿವಾರಿ ಕುಳಿತುಕೊಂಡು ಅಳಲಿಲ್ಲ. ಗೊತ್ತುಗುರಿ ಇಲ್ಲದೇ ಆಕೆ ರೈಲೊಂದನ್ನು ಏರಿದ್ದಾಳೆ. ತನ್ನ ಭವಿಷ್ಯದ ಬಗ್ಗೆ ಗೊಂದಲ ಹಾಗೂ ಪ್ರಿಯಕರನಿಂದ ಆದ ಮೋಸದ ಬಗ್ಗೆ ಚಿಂತಿಸುತ್ತಾ ಕೆಲ ಗಂಟೆಗಳ ಪ್ರಯಾಣ ಮಾಡಿದ ಆಕೆ ನಂತರ ರತ್ಲಮ್ ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿದಿದ್ದಾಳೆ. ಅಚ್ಚರಿ ಎಂದರೆ ಜಬ್ ವಿ ಮೆಟ್ ಸಿನಿಮಾದಿಂದ ಈ ಸ್ಥಳ ಪ್ರಸಿದ್ಧಿಯಾಗಿದೆ.
ರತ್ಲಮ್‌ನಲ್ಲಿ ಸಿಕ್ಕ ಕರಣ್‌ದೀಪ್:
ಇದೇ ರತ್ಲಮ್ ರೈಲು ನಿಲ್ದಾಣದಲ್ಲಿ ಆಕೆ ಕರಣ್‌ದೀಪ್ ಎಂಬಾತನನ್ನು ಭೇಟಿಯಾಗಿದ್ದಾಳೆ. ಕರಣ್‌ದೀಪ್ ಇಂದೋರ್‌ನಲ್ಲಿ ಶ್ರದ್ಧಾ ಓದುತ್ತಿದ್ದ ಕಾಲೇಜಿನಲ್ಲೇ ಇಲೆಕ್ಟ್ರಿಷಿನ್ ಆಗಿ ಕೆಲಸ ಮಾಡುತ್ತಿದ್ದ. ರೈಲು ನಿಲ್ದಾಣದಲ್ಲಿ ಒಬ್ಬಳೇ ಕುಳಿತಿದ್ದ ಆಕೆಯನ್ನು ಕರಣ್‌ದೀಪ್ ಪರಿಚಯದ ಕಾರಣಕ್ಕೆ ಮಾತನಾಡಿಸಿದ್ದಾನೆ. ಏನಾಯಿತು ಎಂದು ಪ್ರಶ್ನಿಸಿದ್ದಾನೆ. ನಂತರ ಆಕೆಯ ಕತೆ ಕೇಳಿದ ಕರಣ್‌ದೀಪ್ ಮನೆಗೆ ಮರಳಿ ಈ ವಿಚಾರವನ್ನು ಪೋಷಕರಿಗೆ ತಿಳಿಸುವಂತೆ ಹೇಳಿದ್ದಾರೆ. ಆದರೆ ಶ್ರದ್ಧಾ ಮಾತ್ರ ಮನೆಗೆ ಮರಳುವುದಾದರೆ ಮದುವೆಯಾಗಿಯೇ ಮರಳಬೇಕು ಎಂಬ ಧೃಡ ನಿರ್ಧಾರಕ್ಕೆ ಬಂದಿದ್ದಳು. ಹೀಗಾಗಿ ಆಕೆ ಕರಣ್‌ದೀಪ್ ಮಾತು ಕೇಳುವುದಕ್ಕೆ ಸಿದ್ಧಳಿರಲಿಲ್ಲ, ನಾನು ಮದುವೆಯಾಗುವುದಕ್ಕಾಗಿ ಮನೆ ಬಿಟ್ಟಿದ್ದೆ. ನಾನು ಮದುವೆಯಾಗದೆ ಹಿಂತಿರುಗಿದರೆ, ನಾನು ಬದುಕಲು ಸಾಧ್ಯವಿಲ್ಲ ಎಂದು ಶ್ರದ್ಧಾ ಕರಣ್‌ದೀಪ್‌ಗೆ ಹೇಳಿದ್ದಾಳೆ. ಈ ವೇಳೆ ಕರಣ್‌ದೀಪ್ ಅವಳನ್ನು ಮನವೊಲಿಸಲು ಪದೇ ಪದೇ ಪ್ರಯತ್ನಿಸಿದರೂ, ಶ್ರದ್ಧಾ ತನ್ನ ನಿರ್ಧಾರ ಬದಲಿಸಲಿಲ್ಲ. ಕೊನೆಗೆ ಕರಣ್‌ದೀಪ್ ಅವಳಿಗೆ ಪ್ರಪೋಸ್ ಮಾಡಿದ್ದಾನೆ. ಇತ್ತ ಪ್ರೇಮಿ ಕೈಕೊಟ್ಟು ನಡುರಸ್ತೆಯಲ್ಲಿ ನಿಂತಿದ್ದ ಶ್ರದ್ಧಾಳು ಇದಕ್ಕೆ ಒಪ್ಪಿಕೊಂಡಿದ್ದಾನೆ.
ಮಹೇಶ್ವರ ಮಂಡಲೇಶ್ವರಕ್ಕೆ ತೆರಳಿ ದಾಂಪತ್ಯಕ್ಕೆ ಕಾಲಿಟ್ಟ ಶ್ರದ್ಧಾ, ಕರಣ್‌ದೀಪ್
ಇದಾದ ನಂತರ ಶ್ರದ್ಧಾ ಮತ್ತು ಕರಣ್‌ದೀಪ್ ಮಹೇಶ್ವರ ಮಂಡಲೇಶ್ವರಕ್ಕೆ ಪ್ರಯಾಣ ಬೆಳೆಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್ಲಿಂದ ಅವರು ಮಂದಸೌರ್‌ಗೆ ಹೋಗಿದ್ದಾರೆ. ಈ ನಡುವೆ ಶ್ರದ್ಧಾಳ ತಂದೆ ಅನಿಲ್ ತಿವಾರಿ ಮಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ತನ್ನ ಮಗಳ ಬಗ್ಗೆ ಮಾಹಿತಿ ನೀಡುವವರಿಗೆ 51,000 ರೂ.ಗಳ ಬಹುಮಾನವನ್ನು ಅವರು ಘೋಷಿಸಿದ್ದರು. ಅಲ್ಲದೇ ಆಕೆಯ ಬಗ್ಗೆ ಏನಾದರೂ ಸುದ್ದಿ ಸಿಗುವ ಭರವಸೆಯಿಂದ ಸಾರ್ವಜನಿಕರ ಗಮನ ಸೆಳೆಯಲು ಅವರು ತಮ್ಮ ಮನೆಯ ಹೊರಗೆ ಆಕೆಯ ಚಿತ್ರವನ್ನು ತಲೆಕೆಳಗಾಗಿ ನೇತು ಹಾಕಿದ್ದರು.
ಈ ಮಧ್ಯೆ ಗುರುವಾರ, ಶ್ರದ್ಧಾ ಕೊನೆಗೂ ತನ್ನ ತಂದೆಗೆ ಕರೆ ಮಾಡಿ ಮಂದ್ಸೌರ್‌ನಲ್ಲಿ ತಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾಳೆ. ಸಮಾಧಾನಗೊಂಡ ಆಕೆಯ ತಂದೆ ರಾತ್ರಿ ಹೋಟೆಲ್‌ನಲ್ಲಿ ಉಳಿದು ಮರುದಿನ ಬೆಳಗ್ಗೆ ಮನೆಗೆ ಮರಳುವಂತೆ ಹೇಳಿದ್ದಾರೆ. ಆದರೆ ಕೆಲವು ಹೋಟೆಲ್‌ಗಳು ನವಜೋಡಿಗೆ ಕೊಠಡಿ ನೀಡಲು ನಿರಾಕರಿಸಿದಾಗ, ಅವರು ರೈಲು ಟಿಕೆಟ್ ಖರೀದಿಸಲು ತನ್ನ ಮಗಳು ಮದುವೆಯಾದ ಹುಡುಗ ಕರಣ್‌ದೀಪ್‌ಗೆ ಹಣವನ್ನು ವರ್ಗಾಯಿಸಿದ್ದಾರೆ.
ನಂತರ ಮರುದಿನ ನಗರಕ್ಕೆ ಹಿಂತಿರುಗಿದ, ಶ್ರದ್ಧಾ ಮತ್ತು ಕರಣ್‌ದೀಪ್ ಎಂಐಜಿ ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ಶ್ರದ್ಧಾ ತನ್ನ ಹೇಳಿಕೆ ದಾಖಲಿಸಿದ್ದಾರೆ. ಈಗ ಶ್ರದ್ಧಾ ಮತ್ತು ಕರಣ್‌ದೀಪ್ ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಇಂದೋರ್‌ನ ಹೆಚ್ಚುವರಿ ಡಿಸಿಪಿ ರಾಜೇಶ್ ದಂಡೋಟಿಯಾ ಹೇಳಿದ್ದಾರೆ. ಮಗಳು ಮರಳಿ ಬಂದಿರುವುದರಿಂದ ತಮಗೆ ನೆಮ್ಮದಿಯಾಗಿದ್ದರೂ, ಕುಟುಂಬವು ಶ್ರದ್ಧಾ ಮತ್ತು ಕರಣ್‌ದೀಪ್ ಅವರನ್ನು 10 ದಿನಗಳ ಕಾಲ ದೂರವಿಡಲಿದೆ ಎಂದು ಅನಿಲ್ ತಿವಾರಿ ಹೇಳಿದ್ದಾರೆ. ಅದಾದ ನಂತರವೂ ಶ್ರದ್ಧಾ, ಕರಣ್‌ದೀಪ್ ಜೊತೆ ವಾಸಿಸಲು ಒತ್ತಾಯಿಸಿದರೆ, ಕುಟುಂಬವು ಮದುವೆಯನ್ನು ಒಪ್ಪಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಾವು ಎಲ್ಲರಿಗೂ ನೋವೇ.. ಮತ್ತೊಂದು ಆನೆಯ ಅಸ್ಥಿಪಂಜರ ನೋಡಿ ಬಿಕ್ಕಳಿಸಿದ ಆನೆ: ವೀಡಿಯೋ
ಇದನ್ನೂ ಓದಿ: ಕರೆಂಟ್ ಟವರ್ ಏರಿ ವಿವಾಹಿತನ ಹೈಡ್ರಾಮಾ: ಪತ್ನಿಯ ತಂಗಿ ಜೊತೆ ಮದ್ವೆ ಮಾಡುವಂತೆ ಒತ್ತಾಯ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.