
ಸಾವು ಎಲ್ಲರಿಗೂ ಬಹಳ ನೋವು ಕೊಡುತ್ತದೆ. ಅದು ಮನುಷ್ಯರಾದರೂ ಸರಿ ಪ್ರಾಣಿಗಳಾದರೂ ಸರಿ, ಅತೀ ಆಪ್ತರ ಸಾವಿನ ನೋವಿನಿಂದ ಹೊರ ಬರಲಾಗದೇ ಅನೇಕರು ಖಿನ್ನತೆಗೆ ಜಾರುತ್ತಾರೆ. ಆ ಸಾವಿನ ನಷ್ಟದಿಂದ ಹೊರಗೆ ಬಂದು ಜೀವಿಸುವುದಕ್ಕೆ ವರ್ಷಗಳೇ ಹಿಡಿಯುತ್ತವೆ. ಬರೀ ಮನುಷ್ಯರಿಗೆ ಮಾತ್ರವಲ್ಲ, ಮೂಕ ಪ್ರಾಣಿಗಳಿಗೂ ಈ ಆಪ್ತರ ಸಾವು ಬಹಳ ಕಾಡುತ್ತದೆ. ಕೆಲವು ಮನೆಗಳಲ್ಲಿ ಮಾಲೀಕರ ನಿಧನದ ನಂತರ ಪ್ರಾಣಿಗಳು ಕೂಡ ಆ ನೋವಿನಿಂದ ಹೊರಬರಲಾಗದೇ ಆಹಾರ ತ್ಯಜಿಸಿ ಮಾಲೀನ ಹಾದಿ ಹಿಡಿಯುವುದನ್ನು ಕಾಣಬಹುದು. ಇನ್ನೂ ಕೆಲ ಪ್ರಾಣಿಗಳು ತಮ್ಮ ಮರಿಗಳ ಸಾವಿನ ನಂತರ ಅವುಗಳ ಶವ ಇರುವ ಸ್ಥಳದಿಂದ ಕದಲದೇ ದಿಗ್ಭ್ರಾಂತವಾಗಿ ನಿಂತಿರುವುದು ಅಥವಾ ಅವುಗಳನ್ನು ಮೇಲೇಳಿಸುವುದಕ್ಕೆ ಪ್ರಯತ್ನಿಸಿ ಸೋತು ನಿರಾಶರಾಗುವ ಘಟನೆಯನ್ನು ನೀವು ನೋಡಿರಬಹುದು. ಹೀಗೆ ಸಾವಿಗೆ ಎಲ್ಲರೂ ಒಂದೇ ಹಾಗೆಯೇ ಸಾವಿನ ಬಗ್ಗೆ ಎಲ್ಲರ ಭಾವನೆಯೂ ಒಂದೇ. ಅದೇ ರೀತಿ ಇಲ್ಲೊಂದು ಕಡೆ ಆನೆಯೊಂದು ಮತ್ತೊಂದು ಆನೆಯ ಅಸ್ಥಿಪಂಜರವನ್ನು ನೋಡಿ ಆತಂಕಗೊಳ್ಳುವುದರ ಜೊತೆಗೆ ರೋದಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮತ್ತೊಂದು ಆನೆಯ ತಲೆಬುರುಡೆ ನೋಡಿ ರೋದಿಸಿದ ಆನೆ:
ಅಂದಹಾಗೆ ದಕ್ಷಿಣ ಆಫ್ರಿಕಾದ ಗ್ರೇಟರ್ ಕ್ರುಗರ್‌ನ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಯಾದ ದೃಶ್ಯ ಇದಾಗಿದೆ. ಸಫಾರಿಗೆ ತೆರಳಿದವರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ವೀಡಿಯೋದಲ್ಲಿ ಕಾಣುವಂತೆ ಆನೆಯೊಂದು ಮತ್ತೊಂದು ಆನೆಯ ಅಸ್ಥಿಪಂಜರವನ್ನು ಅಚಾನಕ್ ಆಗಿ ಗಮನಿಸಿದ್ದು, ಅಸ್ಥಿಪಂಜರ ನೋಡಿ ಆನೆ ಸ್ಪಂದಿಸಿದ ರೀತಿ ಈಗ ಭಾರಿ ವೈರಲ್ ಆಗಿದೆ. ಆನೆ ಮತ್ತೊಂದು ಅಸ್ಥಿಪಂಜರ ವಿಶೇಷವಾಗಿ ತಲೆಬುರುಡೆಯೊಂದನ್ನು ನೋಡಿ ಸುಮಾರು 15 ನಿಮಿಷಗಳ ಕಾಲ ಅದನ್ನು ಸೊಂಡಿಲಿನಲ್ಲಿ ಮುಟ್ಟಿ ಮೂಸಿನೋಡುತ್ತಾ ಗಮನಿಸಿದೆ. ಇದಾದ ನಂತರ ಆ ಹೆಣ್ಣಾನೆ ಒಮ್ಮೆಲೇ ಭಾವುಕಳಾಗಿದ್ದು,ಸೊಂಡಿಲು ಹಾಗೂ ಬಾಲವನ್ನು ಜೊತೆಗೆ ಎತ್ತುತ್ತಾ ಜೋರಾಗಿ ಘೀಳಿಡುವ ಜೊತೆ ನೆಲವನ್ನು ಕಾಲಿಂದ ತುಳಿದಿದೆ. ಅಲ್ಲದೇ ಅಲ್ಲಿಂದ ದೂರ ಓಡುವುದಕ್ಕೆ ಶುರು ಮಾಡಿದೆ. ವೇಗವಾಗಿ ನಡೆಯುತ್ತಾ ನೀರಿನ ತೊರೆಯೊಂದನ್ನು ದಾಟಿ ಅದು ಪೊದೆಯೊಂದರ ಒಳಗೆ ಸಾಗಿ ಕಣ್ಣಿಂದ ಮರೆಯಾಗಿದೆ.
ಆಫ್ರಿಕಾದ ಕಾಡಿನಲ್ಲಿ ಸೆರೆಯಾದ ಅಪರೂಪದ ದೃಶ್ಯ:
ಈ ವೀಡಿಯೋವನ್ನು readysetsafari and klaseriedrift_safari_camps ಎಂಬ ಇನ್ಸ್ಟಾ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. ಆಫ್ರಿಕನ್ ಪೊದೆಗಳಲ್ಲಿ ಲೆಕ್ಕವಿಲ್ಲದಷ್ಟು ಗಂಟೆಗಳನ್ನು ಕಳೆದ ನಂತರ, ಹೊಸದನ್ನು ನೋಡಿದಾಗ ಅದು ಯಾವಾಗಲೂ ಅದ್ಭುತವಾಗಿರುತ್ತದೆ. ಆನೆಗಳು ಆನೆಯ ತಲೆಬುರುಡೆಗಳಿಗೆ ಪ್ರತಿಕ್ರಿಯಿಸುತ್ತವೆ ಎಂದು ನಾವು ಕೇಳಿದ್ದೆವು ಆದರೆ ಅದನ್ನು ಎಂದಿಗೂ ನೇರವಾಗಿ ನೋಡಿರಲಿಲ್ಲ. ಆದರೆ @klaseriedrift_safari_camps ಮಿಸಾವಾ ಸಫಾರಿ ಕ್ಯಾಂಪ್‌ನಲ್ಲಿ ಈ ಅದ್ಭುತವಾದ ದೃಶ್ಯ ಕಾಣ ಸಿಕ್ಕಿತ್ತು. ಅವಳ(ಆನೆಯ) ಪ್ರತಿಕ್ರಿಯೆಯು ಭಾವನಾತ್ಮಕವಾಗಿತ್ತು ಮತ್ತು ಅನಿರೀಕ್ಷಿತವಾಗಿತ್ತು. ಅದಕ್ಕಾಗಿಯೇ ಆಫ್ರಿಕಾ ತುಂಬಾ ಅದ್ಭುತವಾಗಿದೆ. ಮುಂದೆ ನೀವು ಏನು ನೋಡುತ್ತೀರಿ ಎಂದು ನಿಮಗೆ ತಿಳಿದಿರುವುದಿಲ್ಲ. ಆದರೆ ಅದು ವಿಶೇಷವಾಗಿರುತ್ತದೆ ಎಂದು ನಿಮಗೆ ತಿಳಿದಿರುತ್ತದೆ ಎಂದು ವೀಡಿಯೋ ಪೋಸ್ಟ್ ಮಾಡಿ ಬರೆಯಲಾಗಿದೆ.
ಬುದ್ಧಿವಂತ ಹಾಗೂ ಭಾವಜೀವಿ ಆನೆಗಳ ಜೀವನಶೈಲಿ
ಅಂದಹಾಗೆ ಆನೆಗಳು ಬಹಳ ಬುದ್ಧಿವಂತ ಹಾಗೂ ಭಾವುಕ ಪ್ರಾಣಿಗಳಾಗಿವೆ. ಹಿಂಡಿನಲ್ಲಿಯೇ ಅವುಗಳು ಹೆಚ್ಚಾಗಿ ವಾಸ ಮಾಡುತ್ತವೆ. ತಮ್ಮ ಹಿಂಡಿನಲ್ಲಿ ಮರಿಗಳಿದ್ದಾಗ ಬಹಳವೇ ಜಾಗರೂಕವಾಗಿರುವ ಈ ಆನೆಗಳು ಆ ಮರಿಗಳಿಗೆ ಎಲ್ಲೂ ಅನಾಹುತವಾಗದಂತೆ ಬಹಳ ಜತನದಿಂದ ಕಾಪಾಡುತ್ತವೆ. ಮರಿಗಳ ಜೊತೆ ಸಾಗುವ ವೇಳೆ ಹಿಂದೆ ಮುಂದೆ ಅಕ್ಕ ಪಕ್ಕ ಇತರ ದೊಡ್ಡ ಆನೆಗಳಿದ್ದು, ಒಂದು ರೀತಿಯ ಜೆಡ್ ಪ್ಲಸ್ ಭದ್ರತೆಯನ್ನು ಮರಿಗಳಿಗೆ ಒದಗಿಸುತ್ತವೆ. ಆನೆಗಳು ಒಂದು ವ್ಯವಸ್ಥಿತ ಸಾಮಾಜಿಕ ಕಟ್ಟಳೆಯಡಿ ಬಾಳುತ್ತವೆ.
ಗಂಡಾನೆ ಮತ್ತು ಹೆಣ್ಣಾನೆಯ ಸಾಮಾಜಿಕ ಜೀವನಗಳು ಬಲು ಭಿನ್ನವಾಗಿದೆ. ಹೆಣ್ಣಾನೆಗಳು ತಮ್ಮ ಸಂಪೂರ್ಣ ಜೀವನವನ್ನು ಒಂದು ನಿಕಟವಾಗಿ ಬಂಧಿಸಲ್ಪಟ್ಟ ಕುಟುಂಬದಲ್ಲಿಯೇ ಕಳೆಯುತ್ತವೆ. ಈ ಕುಟುಂಬವು ಕೇವಲ ಹೆಣ್ಣಾನೆಗಳನ್ನು ಮಾತ್ರ ಒಳಗೊಂಡಿದ್ದು ತಾಯಿ, ಮಗಳು, ಸಹೋದರಿಯರು, ಸೋದರತ್ತೆ ಮತ್ತು ಚಿಕ್ಕಮ್ಮಂದಿರನ್ನು ಒಳಗೊಂಡಿರುತ್ತದೆ. ಗುಂಪಿನಲ್ಲಿ ಅತಿ ಹೆಚ್ಚು ವಯಸ್ಸಾದ ಆನೆಯು ಈ ಕುಟುಂಬದ ಯಜಮಾನಿಯಾಗಿ ಪ್ರಧಾನ ಮಾತೃವಿನ ಸ್ಥಾನದಲ್ಲಿರುತ್ತಾಳೆ. ಇದಕ್ಕೆ ವ್ಯತಿರಿಕ್ತವಾಗಿ ವಯಸ್ಕ ಗಂಡಾನೆಗಳು ಸಾಮಾನ್ಯವಾಗಿ ಒಂಟಿಯಾಗಿಯೇ ಬಾಳುತ್ತವೆ. ಹೆಣ್ಣಾನೆಯ ಸಾಮಾಜಿಕ ವಲಯವು ತನ್ನ ಸಣ್ಣ ಕುಟುಂಬಕ್ಕೇ ಸೀಮಿತವಾಗಿರುವುದಿಲ್ಲ. ತನ್ನ ಗುಂಪಿನ ಆಸುಪಾಸಿನಲ್ಲಿ ಸುಳಿದಾಡುವ ಗಂಡಾನೆಗಳು ಮತ್ತು ಇತರ ಗುಂಪುಗಳು ಇವುಗಳೊಡನೆಯೂ ಸಂಪರ್ಕವಿರಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಹೆಣ್ಣಾನೆಗಳ ಕುಟುಂಬವು 5 ರಿಂದ 15 ವಯಸ್ಕ ಹೆಣ್ಣಾನೆಗಳು ಮತ್ತು ಅನೇಕ ಎಳೆಯ ಮಕ್ಕಳನ್ನು (ಗಂಡು ಮತ್ತು ಹೆಣ್ಣು) ಒಳಗೊಂಡಿರುತ್ತದೆ.
ಕುಟುಂಬವು ಬಲು ದೊಡ್ಡದಾಗಿ ಬೆಳೆದಾಗ ಕೆಲ ಹೆಣ್ಣು ಆನೆಗಳು ಗುಂಪಿನಿಂದ ಹೊರಬಂದು ತಮ್ಮದೇ ಆದ ಹೊಸ ಕುಟುಂಬವನ್ನು ರೂಪಿಸಿಕೊಳ್ಳುತ್ತವೆ. ಈ ಕುಟುಂಬಗಳಿಗೆ ಸುತ್ತಲಿನ ಹಿಂಡುಗಳಲ್ಲಿ ಯಾವುವು ತಮ್ಮ ಬಂಧುಗಳು ಹಾಗೂ ಯಾವುವು ಅಲ್ಲವೆಂಬ ಅರಿವಿರುತ್ತದೆ. ಗಂಡಾನೆಯ ಜೀವನವು ಇದಕ್ಕಿಂತ ಸಂಪೂರ್ಣವಾಗಿ ಬೇರೆಯಾಗಿರುತ್ತವೆ. ತನ್ನ ತಾಯಿಯ ಗುಂಪಿನಲ್ಲಿ ಬೆಳೆಯುವ ಇದು ವಯಸ್ಸಾದಂತೆ ಕ್ರಮೇಣ ಗುಂಪಿನ ಅಂಚಿಗೆ ಸರಿಯತೊಡಗಿ ಕೆಲವೊಮ್ಮೆ ಗಂಟೆಗಳವರೆಗೆ ಯಾ ದಿನಗಳವರೆಗೆ ಕುಟುಂಬದಿಂದ ದೂರವುಳಿಯಲಾರಂಭಿಸುತ್ತದೆ. ಕಾಲ ಸರಿದಂತೆ ಹೀಗೆ ಕುಟುಂಬದ ಹೊರಗಿರುವ ಅವಧಿ ಹೆಚ್ಚಾಗತೊಡಗಿ 14ನೆಯ ವಯಸ್ಸಿನ ಸುಮಾರಿಗೆ ಗಂಡಾನೆ ತನ್ನ ಕುಟುಂಬವನ್ನು ಸಂಪೂರ್ಣ ತೊರೆಯುತ್ತದೆ. ಹೆಚ್ಚೂಕಡಿಮೆ ಒಂಟಿಯಾಗಿಯೇ ಬಾಳುವ ಗಂಡಾನೆಗಳು ಆಗಾಗ ತಮ್ಮದೇ ಹಿಂಡನ್ನು ರೂಪಿಸುವುದೂ ಇದೆ. ಇಂತಹ ಹಿಂಡನ್ನು ಬ್ರಹ್ಮಚಾರಿ ಹಿಂಡು ಎಂದು ಕರೆಯಲಾಗುತ್ತದೆ. ಗಂಡಾನೆಗಳು ಹೆಚ್ಚಿನ ಸಮಯವನ್ನು ತಮ್ಮ ಪ್ರಾಬಲ್ಯ ಸಾಧಿಸುವುದಕ್ಕಾಗಿ ಇತರ ಗಂಡಾನೆಗಳೊಡನೆ ಕಾದಾಡುವುದರಲ್ಲಿಯೇ ಕಳೆಯುವುವು.
ಇದನ್ನೂ ಓದಿ: ಪತ್ನಿಯ ತಂಗಿ ಜೊತೆ ಮದ್ವೆಗೆ ಒತ್ತಾಯಿಸಿ ವಿವಾಹಿತನ ಹೈಡ್ರಾಮಾ: ಮದುವೆಯ ಭರವಸೆ ನೀಡಿ ಕೆಳಗಿಳಿಸಿದ ಪೊಲೀಸರು!
ಇದನ್ನೂ ಓದಿ: ಕಾರಿನಿಂದ ಇಳಿದು ನಡುರಸ್ತೆಯಲ್ಲಿ ತಲವಾರ್ ಝಳಪಿಸುತ್ತಿದ್ದ ಸಿಖ್ ವ್ಯಕ್ತಿಗೆ ಗುಂಡಿಕ್ಕಿದ ಯುಎಸ್ ಪೊಲೀಸರು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.