ವಯಸ್ಕರು ಅವರು ಆಯ್ಕೆ ಮಾಡಿದ ಸ್ಥಳಕ್ಕೆ ಹೋಗುವುದನ್ನು, ಅವರ ಆಯ್ಕೆಯ ವ್ಯಕ್ತಿಯೊಂದಿಗೆ ಇರುವುದು ಅಥವಾ ಅವರ ಇಚ್ಛೆಗೆ ಅನುಗುಣವಾಗಿ ಮದುವೆಯಾಗುವುದನ್ನು ಯಾರೂ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈ ಕೋರ್ಟ್ ಹೇಳಿದೆ.
ವಯಸ್ಕರು ತಮಗಿಷ್ಟ ಬಂದಲ್ಲಿ ಹೋಗಬಹುದು, ತಮಗಿಷ್ಟ ಬಂದವರೊಂದಿಗೆ ಮದುವೆಯಾಗಬಹುದು, ಇಷ್ಟ ಬಂದವರೊಡನೆ ಇರಬಹುದು- ಇದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈ ಕೋರ್ಟ್ ಹೇಳಿದೆ.
ಜಸ್ಟಿಸ್ ಜೆಜೆ ಮುನೀರ್ ಮತ್ತು ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರ ವಿಭಾಗೀಯ ಪೀಠವು ಕೌಟುಂಬಿಕ ಇಚ್ಛೆಗೆ ವಿರುದ್ಧವಾಗಿ ವಿವಾಹವಾದ ದಂಪತಿಯ ಮನವಿಯನ್ನು ಮನ್ನಿಸುತ್ತಾ ಸಂವಿಧಾನದ 21 ನೇ ವಿಧಿ(ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು)ಯನ್ನು ಎತ್ತಿ ಹಿಡಿದಿದೆ.
ಜೂನ್ 7ರ ತೀರ್ಪಿನಲ್ಲಿ, ಓಡಿ ಹೋದ ದಂಪತಿ ವಿರುದ್ಧ ಪತ್ನಿಯ ಚಿಕ್ಕಪ್ಪ ದಾಖಲಿಸಿದ ಕ್ರಿಮಿನಲ್ ಮೊಕದ್ದಮೆಯನ್ನು ನ್ಯಾಯಾಲಯ ರದ್ದುಗೊಳಿಸಿತು.
ಅಲಹಾಬಾದ್ ಹೈಕೋರ್ಟ್, 'ಅರ್ಜಿದಾರರು ಒಬ್ಬರನ್ನೊಬ್ಬರು ಮದುವೆಯಾಗದಿದ್ದರೂ ಸಹ, ವಯಸ್ಕರು ತನಗೆ ಇಷ್ಟವಾದ ಸ್ಥಳಕ್ಕೆ ಹೋಗುವುದನ್ನು, ಅವನ / ಅವಳ ಆಯ್ಕೆಯ ವ್ಯಕ್ತಿಯೊಂದಿಗೆ ಇರುವುದನ್ನು ಅಥವಾ ಅವನ / ಅವಳ ಪ್ರಕಾರ ವಿವಾಹವಾಗುವುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದು ಸಂವಿಧಾನದ 21 ನೇ ವಿಧಿ' ಎಂದು ಹೇಳಿದೆ.
21 ವರ್ಷದ ಯುವತಿ ತನ್ನ ಚಿಕ್ಕಪ್ಪ ದಾಖಲಿಸಿದ ಪ್ರಕರಣವನ್ನು ಸುಳ್ಳು ಪ್ರಕರಣ ಎಂದು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿದ್ದಾಳೆ ಮತ್ತು ಈಗ ತನ್ನ ಪ್ರಿಯಕರನೊಂದಿಗೆ ಹೋಗಿದ್ದಕ್ಕಾಗಿ ಅವನು ತನಗೆ ಜೀವ ಬೆದರಿಕೆಯನ್ನೂ ಹಾಕಿದ್ದಾನೆ ಎಂದಿದ್ದಾಳೆ ಎಂಬುದನ್ನು ಅಲಹಾಬಾದ್ ನ್ಯಾಯಾಲಯವು ಉಲ್ಲೇಖಿಸಿದೆ. ವಯಸ್ಕರನ್ನು ಇನ್ನೊಬ್ಬರ ಬಂಧನಕ್ಕೆ ಕಳುಹಿಸಲಾಗುವುದಿಲ್ಲ ಮತ್ತು ಅವನ/ಅವಳೊಂದಿಗೆ ಇರುವಂತೆ ಒತ್ತಾಯಿಸಲಾಗುವುದಿಲ್ಲ, ಎಂದು ಹೈಕೋರ್ಟ್ ಹೇಳಿದೆ.