
ಈಗಿನ ಕಾಲವೇ ಹಾಗೆ, ಮದುವೆಯಾಗುವುದೂ ದೊಡ್ಡ ಸದ್ದಿನಲ್ಲೇ, ವಿಚ್ಚೇದನವೂ ಅದರ ಬೆನ್ನಿಗೇ. ಯಾರಾದರೂ ಡಿವೋರ್ಸ್ ಆಗುತ್ತಿದ್ದಾರೆ ಎಂದರೆ ಅದೊಂದು ದೊಡ್ಡ ವಿಷಯವೇ ಅನಿಸದ ಕಾಲದಲ್ಲಿ ಇದ್ದೇವೆ. ದಂಪತಿಯ ನಡುವೆ ನಡೆವ ಪ್ರತಿ ಮಾತಿಗೂ ಸ್ವಾಭಿಮಾನ, ಸ್ವಾರ್ಥ, ಅಹಂಕಾರ, ಚುಚ್ಚುವುದು ಹೀಗೇ ಹುಡುಕಾಡಲಾಗುತ್ತದೆ. ಬಳಿಕ ಅದಕ್ಕಾಗಿ ಕೋಪತಾಪ, ಕಿರಿಕಿರಿ, ಜಗಳಗಳು.. ಕಡೆಗೆ ವಿಚ್ಚೇದನ. ಹೊಂದಿಕೊಂಡು ಹೋಗಿ ಎಂದು ಯಾರಾದರೂ ಎಂದರೆ ಇನ್ನೂ ಯಾವ ಕಾಲದಲ್ಲಿದ್ದೀರಾ ಎಂಬ ಮರುಮಾತು ಬರುವ ಘಟ್ಟದಲ್ಲಿದ್ದೇವೆ.
ಇವನ್ನೆಲ್ಲ ನೋಡುವಾಗ ವಿವಾಹವಾಗುವವರಿಗೆ ಮುಂಚಿತವಾಗಿಯೇ ಒಂದಿಷ್ಟು ತಿಳಿವಳಿಕೆ ಕೊಡುವುದು, ಅವರ ಸ್ವಭಾವವನ್ನು ತಿದ್ದಿ ತೀಡುವುದು ಅಗತ್ಯ ಎನಿಸುತ್ತದೆ. ವೈವಾಹಿಕ ಜೀವನ ಹಾಳು ಮಾಡುವ ಬಗ್ಗೆ ನೂರಾರು ವರ್ಷಗಳ ಹಿಂದೆ ಚಾಣಕ್ಯ ಹೇಳಿದ ಮಾತು ಇಂದಿಗೂ ಪ್ರಸ್ತುತವಾಗಿವೆ. ಚಾಣಕ್ಯನ ಪ್ರಕಾರ ಯಾವೆಲ್ಲ ವಿಷಯಗಳು ದಾಂಪತ್ಯವನ್ನು ಕೆಡವುತ್ತವೆ ಗೊತ್ತಾ?
ಕೋಪ(Anger)
ಕೋಪವು ವ್ಯಕ್ತಿಯನ್ನು ಹಾಳು ಮಾಡುವುದಷ್ಟೇ ಅಲ್ಲ, ಅದು ಬಹುತೇಕ ಎಲ್ಲ ಸಂಬಂಧಗಳು ಕೊನೆಯಾಗಲು ಕಾರಣವಾಗುತ್ತದೆ. ದಂಪತಿಯಲ್ಲಿ ಒಬ್ಬರು ಕೋಪಗೊಂಡರೂ ಇಬ್ಬರ ಜೀವನದಲ್ಲೂ ನೆಮ್ಮದಿ ಇರುವುದು ಸಾಧ್ಯವಿಲ್ಲ. ಇದರಿಂದ ಜಗಳಗಳು ಬೆಳೆಯುತ್ತಾ ಹೋಗಿ, ವೈವಾಹಿಕ ಜೀವನ ಹಾಳಾಗಲು ಶುರುವಾಗುತ್ತದೆ.
ಮೂರನೇ ವ್ಯಕ್ತಿ(third person)
ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಬೇಕೆಂದರೆ ಖಾಸಗಿ ವಿಷಯಗಳು ಯಾವಾಗಲೂ ಖಾಸಗಿಯಾಗಿಯೇ ಇರಬೇಕು. ಮೂರನೇ ವ್ಯಕ್ತಿಗೆ ನಿಮ್ಮ ವಿಷಯಗಳು ತಿಳಿಯಕೂಡದು. ಮೂರನೇ ವ್ಯಕ್ತಿಯ ಪ್ರವೇಶ ದಾಂಪತ್ಯದಲ್ಲಾಯಿತು, ನಿಮ್ಮ ದಾಂಪತ್ಯವನ್ನು ಮೂರನೆಯವರು ನಿಗ್ರಹಿಸುತ್ತಾರೆ ಎಂದರೆ ಮುಗಿಯಿತು, ಸಮಸ್ಯೆಗಳು ಮತ್ತಷ್ಟು ಹೆಚ್ಚುತ್ತವೆ.
ಸುಳ್ಳು(Lie)
ಗಂಡ ಹೆಂಡತಿಯ ಸಂಬಂಧ ಬಹಳ ಮೃದುವಾದುದು. ಅದು ಶುದ್ಧ ಹಾಲಿನಂತೆ ಇರಬೇಕೇ ಹೊರತು ಕಲಬೆರಕೆಯಾಗಿರಬಾರದು. ದಾಂಪತ್ಯದ ನಡುವೆ ಸುಳ್ಳುಗಳು ನುಸುಳಬಾರದು. ನೀವಾಡುವ ಒಂದು ಸುಳ್ಳು ಕೂಡಾ ಸಂಗಾತಿಯ ಸಂಪೂರ್ಣ ನಂಬಿಕೆಯ ಬುಡವನ್ನೇ ತಲೆ ಕೆಳಗು ಮಾಡಬಲ್ಲದು. ಯಾವುದೇ ಸುಳ್ಳಿಗೆ ಕೂಡಾ ಹೆಚ್ಚು ಆಯಸ್ಸಿರುವುದಿಲ್ಲ. ಒಂದಲ್ಲ ಒಂದು ದಿನ ಸತ್ಯ ಹೊರಗೆ ಬಂದೇ ಬರುತ್ತದೆ. ಅಲ್ಲಿಗೆ ದಾಂಪತ್ಯಗೀತೆಯ ಅಡಿಪಾಯ ಶಿಥಿಲಗೊಂಡಿರುತ್ತದೆ.
Chanakya Neeti: ಈ ನಾಲ್ಕು ವಿಷಯಗಳಿಗೆ ಎಂದಿಗೂ ಸಂಕೋಚ ಸಲ್ಲದು!
ಹಣಕಾಸು(Finance)
ಹಣಕಾಸಿನ ವಿಷಯದಲ್ಲಿ ಗಂಡ ಹೆಂಡತಿ ಇಬ್ಬರೂ ಪ್ರಾಮಾಣಿಕವಾಗಿರಬೇಕು. ಇಬ್ಬರ ಆದಾಯ ಇಬ್ಬರಿಗೂ ತಿಳಿದಿರಬೇಕು. ಹಾಗೂ ಖರ್ಚನ್ನು ಇಬ್ಬರೂ ನಿಭಾಯಿಸಬೇಕು. ಒಬ್ಬರು ದುಡಿಯುವುದು, ಮತ್ತೊಬ್ಬರು ಖರ್ಚು ಮಾಡುವುದು ಎಂದೋ ಅಥವಾ ದುಡಿದವರು, ತಾನು ದುಡಿದದ್ದು, ಹೇಗಾದರೂ ಖರ್ಚು ಮಾಡುತ್ತೇನೆ, ಕೇಳುವ ಹಾಗಿಲ್ಲ ಎಂಬ ಧೋರಣೆ ತಳೆದರೆ ಅಲ್ಲಿಗೆ ಸಂಬಂಧ ಹಾಳಾಗಲು ಶುರುವಾಯಿತೆಂದೇ ಅರ್ಥ. ಇಬ್ಬರೂ ಚೆನ್ನಾಗಿ ಯೋಜಿಸಿ ಹಣಕಾಸಿನ ನಿರ್ವಹಣೆ ಮಾಡಬೇಕು.
ಮಿತಿ(Limit)
ಪ್ರತಿಯೊಂದು ವಿಷಯಕ್ಕೂ ಮಿತಿ ಎಂಬುದಿರುತ್ತದೆ. ಅಂತೆಯೇ ದಾಂಪತ್ಯದಲ್ಲಿ ಕೂಡಾ ಎಲ್ಲ ಸಂಗತಿಗಳಿಗೂ ಮಿತಿ ಇರುತ್ತದೆ ಎಂಬ ಅರಿವು ಪತಿ ಪತ್ನಿ ಇಬ್ಬರಲ್ಲೂ ಇರಬೇಕು. ಹಣಕಾಸಿನ ಖರ್ಚು, ಪ್ರೀತಿ, ದ್ವೇಷ, ಕೋಪ, ಹಟಸಾಧನೆ, ಲೈಂಗಿಕ ಕಾಮನೆಗಳು, ನಿರೀಕ್ಷೆಗಳು ಸೇರಿದಂತೆ ಯಾವೊಂದು ವಿಷಯ ಮಿತಿ ಮೀರಿದರೂ ಅದರಿಂದ ಸಂಬಂಧ ಹಾಳಾಗುತ್ತದೆ. ಅದಕ್ಕೇ ಅಲ್ಲವೇ ಧರ್ಮೇಚ, ಅರ್ಥೇಚ, ಕಾಮೇಚ, ನಾತಿಚರಾಮಿ ಎನ್ನುವುದು.
Vastu Tips: ಗಂಡ-ಹೆಂಡತಿ ಮಧ್ಯೆ ಜಗಳ ತಂದಿಡುವ ವಾಸ್ತುದೋಷ!
ಪ್ರತಿಕೂಲತೆ(adversity)
ಪ್ರತಿಕೂಲ ಸನ್ನಿವೇಶಗಳು ಆಗಾಗ ಎಲ್ಲ ಸಂಬಂಧಗಳ ನಡುವೆಯೂ ಬರುತ್ತದೆ. ಅಂತೆಯೇ ದಾಂಪತ್ಯದಲ್ಲಿ ಕೂಡಾ. ಎಂಥದೇ ಪ್ರತಿಕೂಲ ಸನ್ನಿವೇಶಗಳು ಎದುರಾದರೂ, ಕಷ್ಟಕಾರ್ಪಣ್ಯ ಎದುರಿಸಬೇಕಾದರೂ ಆಗ ಪತಿ ಪತ್ನಿ ಇಬ್ಬರೂ ಅದಕ್ಕೆ ಹೆಗಲು ಕೊಡಬೇಕು. ಸಮಸ್ಯೆಯ ಭಾರವನ್ನು ಹಂಚಿಕೊಳ್ಳಬೇಕು. ಇಲ್ಲದಿದ್ದಲ್ಲಿ ಪರಿಸ್ಥಿತಿ ಹದಗೆಡುವುದು ಖಚಿತ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.