ಮೈಸೂರು: ಕರ್ನಾಟಕದ ಕಣ್ಣು ಸಿದ್ದು ಕ್ಷೇತ್ರ ವರುಣ ಮ್ಯಾಲೆ..!

Published : Apr 28, 2023, 10:16 AM IST
ಮೈಸೂರು: ಕರ್ನಾಟಕದ ಕಣ್ಣು ಸಿದ್ದು ಕ್ಷೇತ್ರ ವರುಣ ಮ್ಯಾಲೆ..!

ಸಾರಾಂಶ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಒಟ್ಟು 11 ಕ್ಷೇತ್ರಗಳಿದ್ದು, ಏಳು ಕಡೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಗೆಲುವಿಗಾಗಿ ತೀವ್ರ ಹಣಾಹಣಿ ಇದೆ. ಮೂರು ಕಡೆ ಬಿಜೆಪಿ, ಒಂದು ಕಡೆ ಎಸ್‌ಡಿಪಿಐ ತೀವ್ರ ಸ್ಪರ್ಧೆ ಒಡ್ಡಿವೆ. 

ಅಂಶಿ ಪ್ರಸನ್ನಕುಮಾರ್‌

ಮೈಸೂರು(ಏ.28): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಒಟ್ಟು 11 ಕ್ಷೇತ್ರಗಳಿದ್ದು, ಏಳು ಕಡೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಗೆಲುವಿಗಾಗಿ ತೀವ್ರ ಹಣಾಹಣಿ ಇದೆ. ಮೂರು ಕಡೆ ಬಿಜೆಪಿ, ಒಂದು ಕಡೆ ಎಸ್‌ಡಿಪಿಐ ತೀವ್ರ ಸ್ಪರ್ಧೆ ಒಡ್ಡಿವೆ. 2018ರ ಚುನಾವಣೆಯಲ್ಲಿ ಜೆಡಿಎಸ್‌-5, ಕಾಂಗ್ರೆಸ್‌-3, ಬಿಜೆಪಿ-3 ಸ್ಥಾನಗಳನ್ನು ಗಳಿಸಿದ್ದವು. ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರ ರಾಜೀನಾಮೆಯಿಂದ ಹುಣಸೂರಿನಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಹೀಗಾಗಿ ಕ್ಷೇತ್ರದಲ್ಲಿ ಪ್ರಸ್ತುತ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ತಲಾ 4, ಬಿಜೆಪಿ 3 ಸ್ಥಾನಗಳನ್ನು ಹೊಂದಿವೆ.

ಕೃಷ್ಣರಾಜ
ರಾಮ್‌ದಾಸ್‌ ಕ್ಷೇತ್ರದಲ್ಲಿ ತ್ರಿಕೋಸ್‌ ಸ್ಪರ್ಧೆ

ಕೃಷ್ಣರಾಜ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ (ಕಾಂಗ್ರೆಸ್‌), ನಗರಾಧ್ಯಕ್ಷ ಟಿ.ಎಸ್‌.ಶ್ರೀವತ್ಸ (ಬಿಜೆಪಿ), ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್‌ (ಜೆಡಿಎಸ್‌) ಅವರ ನಡುವೆ ತ್ರಿಕೋನ ಹೋರಾಟವಿದೆ. ಬ್ರಾಹ್ಮಣರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ವೀರಶೈವ-ಲಿಂಗಾಯತರು, ಪರಿಶಿಷ್ಟಜಾತಿಯವರು, ಒಕ್ಕಲಿಗರು, ಪರಿಶಿಷ್ಟಪಂಗಡವರು ಬರುತ್ತಾರೆ. ಬ್ರಾಹ್ಮಣರೇ ಇಲ್ಲಿ ಹೆಚ್ಚು ಬಾರಿ ಗೆದ್ದಿದ್ದಾರೆ. 1985ಕ್ಕಿಂತ ಮೊದಲು ತಲಾ 2 ಬಾರಿ ಒಕ್ಕಲಿಗರು, ವೀರಶೈವರು, ನಂತರ 2 ಬಾರಿ ಕುರುಬರು ಗೆದ್ದಿದ್ದಾರೆ. ಜೆಡಿಎಸ್‌ ಕಳೆದ ನವೆಂಬರ್‌ನಲ್ಲೇ ಮಲ್ಲೇಶ್‌ ಅವರಿಗೆ ಟಿಕೆಟ್‌ ಘೋಷಿಸಿತ್ತು. ಅವರು ಕಳೆದ ಬಾರಿಯೂ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್‌ನಲ್ಲಿ ಎನ್‌.ಎಂ.ನವೀನ್‌ಕುಮಾರ್‌, ಎಂ.ಪ್ರದೀಪ್‌ ಕುಮಾರ್‌ ಟಿಕೆಟ್‌ ಕೇಳಿದ್ದರೂ ಅಂತಿಮವಾಗಿ ಸಿದ್ದರಾಮಯ್ಯರ ಕಟ್ಟಾಬೆಂಬಲಿಗ ಸೋಮಶೇಖರ್‌ಗೆ ಟಿಕೆಟ್‌ ಎಂಬುದು ಖಚಿತವಾಗಿತ್ತು. ಆದರೆ ಬಿಜೆಪಿ ಟಿಕೆಟ್‌ಗೆ ಹೆಚ್ಚಿನ ಪೈಪೋಟಿ ಇತ್ತು. ರಾಮದಾಸ್‌ ಅವರಿಗೆ ಟಿಕೆಟ್‌ ನೀಡಬಾರದು ಎಂದು ಬ್ರಾಹ್ಮಣ ಸಂಘಟನೆಗಳು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದವು. ಆಕಾಂಕ್ಷಿಗಳ ಪೈಕಿ 2013ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿದ್ದ ಎಚ್‌.ವಿ.ರಾಜೀವ್‌ ಪ್ರಮುಖರಾಗಿದ್ದರು. ಆದರೆ ಇಬ್ಬರ ಜಗಳದಲ್ಲಿ ವರಿಷ್ಠರು ಶ್ರೀವತ್ಸರಿಗೆ ಮಣೆ ಹಾಕಿದರು. ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಬಲವಾಗಿದೆ. ಮುನಿಸು ಮರೆತು ರಾಮದಾಸ್‌ ಕೂಡ ಪ್ರಚಾರ ಮಾಡುತ್ತಿದ್ದಾರೆ. ಒಳೇಟು ಇಲ್ಲದಿದ್ದಲ್ಲಿ ಕಮಲ ಅರಳಬಹುದು. ಸೋಮಶೇಖರ್‌ ಕಳೆದ ಬಾರಿ ಸೋತರೂ ನಿರಂತರವಾಗಿ ಜನ ಸಂಪರ್ಕದಲ್ಲಿದ್ದು, ಈ ಬಾರಿ ಸಾಂಪ್ರದಾಯಿಕ ಎದುರಾಳಿ ರಾಮದಾಸ್‌ ಇಲ್ಲದಿರುವ ಲಾಭ ಪಡೆದು ಮೇಲುಗೈ ಸಾಧಿಸಲೆತ್ನಿಸುತ್ತಿದ್ದಾರೆ. ಜೆಡಿಎಸ್‌ನ ಮಲ್ಲೇಶ್‌ ಸತತ 10 ವರ್ಷ ಪಾಲಿಕೆ ಸದಸ್ಯರಾಗಿದ್ದವು. ಸರಳ, ಸಜ್ಜನ. ನಾಲ್ಕಾರು ತಿಂಗಳಿಂದ ಹತ್ತಾರು ಬಾರಿ ಕ್ಷೇತ್ರದ ಮನೆ ಮನೆ ಸುತ್ತುತ್ತಿದ್ದಾರೆ.

ಡಿಕೆಶಿಗೆ ಠಕ್ಕರ್‌ ಕೊಡಬಲ್ಲ ವ್ಯಕ್ತಿ ನಾನೇ ಆಗಿದ್ದು, ಕನಕಪುರ ಪಾರು ಮಾಡುವೆ: ಸಚಿವ ಅಶೋಕ್‌

ಚಾಮರಾಜ
ನಾಗೇಂದ್ರ, ಹರೀಶ್‌ಗೌಡ ಜಿದ್ದಾಜಿದ್ದಿ

ಚಾಮರಾಜ ಕ್ಷೇತ್ರದಲ್ಲಿ ಶಾಸಕ ಎಲ್‌.ನಾಗೇಂದ್ರ (ಬಿಜೆಪಿ), ಕೆ.ಹರೀಶ್‌ಗೌಡ (ಕಾಂಗ್ರೆಸ್‌) ನಡುವೆ ಜಿದ್ದಾಜಿದ್ದಿ ಇದೆ. ಮಾಜಿ ಶಾಸಕ ದಿ.ಎಚ್‌.ಕೆಂಪೇಗೌಡರ ಪುತ್ರ ಎಚ್‌.ಕೆ.ರಮೇಶ್‌ (ಜೆಡಿಎಸ್‌) ಹುರಿಯಾಳು. ಒಕ್ಕಲಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರ ರಚನೆಯಾದಾಗಿನಿಂದ ಅದೇ ಜನಾಂಗದವರೇ ಆಯ್ಕೆಯಾಗುತ್ತಾ ಬಂದಿದ್ದಾರೆ. 1994ಕ್ಕಿಂತ ಮೊದಲು 2 ಬಾರಿ ಹೊರತುಪಡಿಸಿ ಉಳಿದೆಲ್ಲಾ ಬಾರಿ ಜನತಾ ಪರಿವಾರದವರು ಗೆದ್ದಿದ್ದರು. ನಂತರ ಸತತ 4 ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿತ್ತು. ಇದಕ್ಕೆ ದಿವಂಗತ ಎಚ್‌.ಎಸ್‌.ಶಂಕರಲಿಂಗೇಗೌಡರ ವೈಯಕ್ತಿಕ ವರ್ಚಸ್ಸು ಕೂಡ ಕಾರಣವಾಗಿತ್ತು. ಆದರೆ ಅವರು 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ, ಸೋತರು. ಕಾಂಗ್ರೆಸ್‌ನ ವಾಸು ಗೆದ್ದರು. 2018ರಲ್ಲಿ ಪುನಃ ವಾಸು ಹಾಗೂ ನಾಗೇಂದ್ರರ ನಡುವೆ ಹೋರಾಟ ನಡೆಯಿತು. ನಾಗೇಂದ್ರ ಗೆದ್ದಿದ್ದರು. ಜೆಡಿಎಸ್‌ನಿಂದ ಪ್ರೊ.ಕೆ.ಎಸ್‌.ರಂಗಪ್ಪ ಕಣದಲ್ಲಿದ್ದರು. ಕೆ.ಹರೀಶ್‌ಗೌಡ ಜೆಡಿಎಸ್‌ ಬಂಡಾಯ ಅಭ್ಯರ್ಥಿಯಾಗಿದ್ದರು. ಈ ಬಾರಿ ವಾಸು ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಲಾಗಿದೆ. ಜೆಡಿಎಸ್‌ನಿಂದ ಬಂದ ಹರೀಶ್‌ಗೌಡರಿಗೆ ಅವಕಾಶ ಮಾಡಿಕೊಡಲಾಗಿದೆ. ಜೆಡಿಎಸ್‌ ಟಿಕೆಟ್‌ಗೆ ಕೆ.ವಿ.ಶ್ರೀಧರ್‌, ಎಸ್‌ಬಿಎಂ ಮಂಜು, ಸಿ.ಮಹದೇಶ ಇತರು ಆಕಾಂಕ್ಷಿಗಳಾಗಿದ್ದರು. ಆದರೆ ವರಿಷ್ಠರು ಎಚ್‌.ಕೆ.ರಮೇಶ್‌ಗೆ ಬಿ ಫಾರಂ ನೀಡಿದ್ದಾರೆ.

ನರಸಿಂಹರಾಜ
ತನ್ವೀರ್‌ಗೆ ಎಸ್ಡಿಪಿಐ, ಬಿಜೆಪಿ ಟಕ್ಕರ್‌

ನರಸಿಂಹರಾಜ ಕ್ಷೇತ್ರದಲ್ಲಿ ಹಾಲಿ ಶಾಸಕ, ಮಾಜಿ ಸಚಿವ ತನ್ವೀರ್‌ ಸೇಠ್‌ (ಕಾಂಗ್ರೆಸ್‌), ಅಬ್ದುಲ್‌ ಮಜೀದ್‌ (ಎಸ್‌ಡಿಪಿಐ), ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ (ಬಿಜೆಪಿ) ಅವರ ನಡುವೆ ತ್ರಿಕೋನ ಹೋರಾಟ ಇದೆ. ಇಲ್ಲಿ ಅಬ್ದುಲ್‌ ಖಾದರ್‌ ಜೆಡಿಎಸ್‌ ಅಭ್ಯರ್ಥಿ. ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿರುವ ನರಸಿಂಹರಾಜ ಅಘೋಷಿತ ಮುಸ್ಲಿಮರ ಕ್ಷೇತ್ರ. ತನ್ವೀರ್‌ ಸೇಠ್‌ ಈ ಕ್ಷೇತ್ರವನ್ನು 6 ಬಾರಿ ಪ್ರತಿನಿಧಿಸಿದ್ದ ಅಜೀಜ್‌ ಸೇಠ್‌ ಅವರ ಪುತ್ರ. ಅವರ ಕುಟುಂಬವೇ 12 ಬಾರಿ ಕ್ಷೇತ್ರ ಪ್ರತಿನಿಧಿಸಿದೆ. ಎರಡು ಬಾರಿ ಎಸ್‌ಡಿಪಿಐನಿಂದ ಪ್ರಬಲ ಪೈಪೋಟಿ ಎದುರಾಗಿದ್ದರೂ ತನ್ವೀರ್‌ಸೇಠ್‌ ಈಜಿ ದಡ ಸೇರಿದ್ದರು. ಈ ಬಾರಿ ಕೂಡ ಅದೇ ವಿಶ್ವಾಸದಲ್ಲಿದ್ದಾರೆ. ಆದರೆ ಎಸ್‌ಡಿಪಿಐ ಅಭ್ಯರ್ಥಿ ಅಬ್ದುಲ್‌ ಮಜೀದ್‌ 2 ಬಾರಿ ಸೋತರೂ ನಿರಂತರವಾಗಿ ಕ್ಷೇತ್ರದ ಸಂಪರ್ಕದಲ್ಲಿದ್ದು, ಮತದಾರರ ಮನಗೆಲ್ಲಲು ಯತ್ನಿಸಿದ್ದಾರೆ. 2013ರಲ್ಲಿ ಜೆಡಿಎಸ್‌, 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ ಈ ಬಾರಿ ಕೂಡ ಅಭ್ಯರ್ಥಿ. ಅಲ್ಪಸಂಖ್ಯಾತರ ಮತಗಳು ಮೂವರು ಅಭ್ಯರ್ಥಿಗಳ ನಡುವೆ ಹಂಚಿ ಹೋದಲ್ಲಿ 1994ರ ಮ್ಯಾಜಿಕ್‌ ಪುನಾರಾವರ್ತನೆ ಆಗಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.

ಚಾಮುಂಡೇಶ್ವರಿ
ಜಿ.ಟಿ.ದೇವೇಗೌಡ, ಸಿದ್ದೇಗೌಡ ಗುದ್ದಾಟ

ಕ್ಷೇತ್ರದಲ್ಲಿ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ (ಜೆಡಿಎಸ್‌), ಎಸ್‌.ಸಿದ್ದೇಗೌಡ (ಕಾಂಗ್ರೆಸ್‌), ವಿ.ಕವೀಶ್‌ಗೌಡ (ಬಿಜೆಪಿ) ಪ್ರಮುಖ ಸ್ಪರ್ಧಿಗಳು. ಆದರೆ ನೇರ ಸ್ಪರ್ಧೆ ಇರುವುದು ಮಾತ್ರ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ. ಕಾಂಗ್ರೆಸ್‌ನಲ್ಲಿ ಒಂದು ಡಜನ್‌ ಆಕಾಂಕ್ಷಿಗಳಿದ್ದರೂ ಜೆಡಿಎಸ್‌ನಿಂದ ಬಂದ ಮೈಮುಲ್‌ ಮಾಜಿ ಅಧ್ಯಕ್ಷ ಎಸ್‌. ಸಿದ್ದೇಗೌಡರಿಗೆ ಟಿಕೆಟ್‌ ನೀಡಲಾಗಿದೆ. ಅದೇ ರೀತಿ ಬಿಜೆಪಿಯಲ್ಲಿ ಹೇಮಂತ ಕುಮಾರ್‌ ಗೌಡ, ಅರುಣ್‌ಕುಮಾರ್‌ ಗೌಡ ಬಿಟ್ಟು ಕಾಂಗ್ರೆಸ್‌ನಿಂದ ಬಂದ ವಿ.ಕವೀಶ್‌ಗೌಡರಿಗೆ ಟಿಕೆಟ್‌ ನೀಡಲಾಗಿದೆ. ಇವರು ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಅವರ ಪುತ್ರ. ಚಾಮುಂಡೇಶ್ವರಿ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರ. ನಂತರದ ಸ್ಥಾನದಲ್ಲಿ ಎಸ್ಸಿ, ಎಸ್ಟಿ, ವೀರಶೈವ-ಲಿಂಗಾಯತರು, ಕುರುಬರು ಬರುತ್ತಾರೆ. ಸಿದ್ದರಾಮಯ್ಯ ಇಲ್ಲಿಂದ 8 ಬಾರಿ ಸ್ಪರ್ಧಿಸಿ, 5 ಬಾರಿ ಆಯ್ಕೆಯಾಗಿದ್ದರು. ಜಿ.ಟಿ.ದೇವೇಗೌಡರಿಗೆ ಈ ಕ್ಷೇತ್ರದಲ್ಲಿ 3ನೇ ಚುನಾವಣೆ. ಕಳೆದ ಬಾರಿ ಅಂದಿನ ಸಿಎಂ ಸಿದ್ದರಾಮಯ್ಯ ಅವರನ್ನೇ 36 ಸಾವಿರ ಮತಗಳ ಅಂತರದಿಂದ ಮಣಿಸಿದ ಆತ್ಮವಿಶ್ವಾಸ ಅವರಲ್ಲಿದೆ. ಕಳೆದ ಬಾರಿಯ ಸೋಲಿಗೆ ತಕ್ಕಪಾಠ ಕಲಿಸಲು ಅವರ ಹಳೆಯ ಸ್ನೇಹಿತರಾದ ಅಭ್ಯರ್ಥಿ ಸಿದ್ದೇಗೌಡ, ಜಿಪಂ ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಎಸ್‌.ಮಾದೇಗೌಡ, ಕೆಂಪನಾಯಕ ಮತ್ತಿತರರು ಓಡಾಡುತ್ತಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಸೇರಿ ಎಲ್ಲರೂ ಇದಕ್ಕೆ ಸಾಥ್‌ ನೀಡುತ್ತಿದ್ದಾರೆ. ಬಿಜೆಪಿ ಸಾಂಪ್ರದಾಯಿಕ ಮತಗಳಿಕೆಯ ಹೋರಾಟಕ್ಕೆ ಸೀಮಿತವಾಗಬಹುದು.

ವರುಣ
ಸಿದ್ದರಾಮಯ್ಯಗೆ ಸೋಮಣ್ಣ ಪೈಪೋಟಿ

ಕ್ಷೇತ್ರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(ಕಾಂಗ್ರೆಸ್‌), ವಸತಿ ಸಚಿವ ವಿ.ಸೋಮಣ್ಣ (ಬಿಜೆಪಿ), ಮಾಜಿ ಶಾಸಕ ಡಾ.ಎನ್‌.ಎಲ್‌.ಭಾರತೀಶಂಕರ್‌ (ಜೆಡಿಎಸ್‌), ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ (ಬಿಎಸ್ಪಿ) ಕಣದಲ್ಲಿರುವ ಪ್ರಮುಖರು. ಕೋಲಾರದಲ್ಲಿ ಸ್ಪರ್ಧಿಸಬಯಸಿದ್ದ ಸಿದ್ದರಾಮಯ್ಯ ಸುರಕ್ಷಿತ ಕ್ಷೇತ್ರ ಎಂಬ ಕಾರಣಕ್ಕಾಗಿ ಕೊನೇ ಕ್ಷಣದಲ್ಲಿ ಇಲ್ಲಿಗೆ ಬಂದಿದ್ದಾರೆ. ಬಿಜೆಪಿಯಲ್ಲೂ 10 ಆಕಾಂಕ್ಷಿಗಳಿದ್ದರು. ಸಿದ್ದರಾಮಯ್ಯ ಕಾರಣಕ್ಕೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರರನ್ನು ಕಣಕ್ಕಳಿಸಬೇಕೆಂಬ ಆಗ್ರಹ ಇತ್ತು. ಅವರು ಶಿಕಾರಿಪುರ ಆಯ್ಕೆ ಮಾಡಿಕೊಂಡಿದ್ದರಿಂದ ವರಿಷ್ಠರ ಸೂಚನೆ ಮೇರೆಗೆ ಸೋಮಣ್ಣರನ್ನು ಕಣಕ್ಕಿಳಿಸಲಾಗಿದೆ. ಜೆಡಿಎಸ್‌ ಮೊದಲ ಪಟ್ಟಿಯಲ್ಲೇ ಸಾಫ್‌್ಟವೇರ್‌ ಎಂಜಿನಿಯರ್‌ ಎಸ್‌.ಎಂ.ಅಭಿಷೇಕ್‌ರನ್ನು ಈ ಬಾರಿಯೂ ಅಭ್ಯರ್ಥಿ ಎಂದು ಪ್ರಕಟಿಸಿತ್ತು. ಆದರೆ ಅವರು ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆಂದು ಗೊತ್ತಾದ ನಂತರ ಹಿಂಜರಿದರು. ಹೀಗಾಗಿ ಕೊನೇ ಕ್ಷಣದಲ್ಲಿ ಮಾಜಿ ಶಾಸಕ ಡಾ.ಭಾರತೀಶಂಕರ್‌ ಅವರಿಗೆ ಟಿಕೆಟ್‌ ನೀಡಿದೆ. ಇಲ್ಲಿ ಯಾರು ಏನೇ ಹೇಳಿದರೂ ಕಾಂಗ್ರೆಸ್‌ ಕೈ ಮೇಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕಾರಣ. ವೀರಶೈವ-ಲಿಂಗಾಯತರು ಬಹುಸಂಖ್ಯಾತರಾದರೂ ಅಷ್ಟೇ ಪ್ರಮಾಣದಲ್ಲಿ ಅಹಿಂದ ವರ್ಗದ ಮತಗಳಿವೆ. ವೀರಶೈವ-ಲಿಂಗಾಯತ ಮತಗಳ ಕ್ರೋಡೀಕರಣ, ಜೆಡಿಎಸ್‌, ಬಿಎಸ್ಪಿಯಿಂದ ಸಾಂಪ್ರದಾಯಿಕ ಮತಗಳನ್ನು ಪಡೆಯುವುದು ಸಾಧ್ಯವಾದಲ್ಲಿ ಮಾತ್ರ ಸಿದ್ದರಾಮಯ್ಯ ಗೆಲ್ಲಲು ತಿಣುಕಾಡಬೇಕಾಗುತ್ತದೆ.

ನಂಜನಗೂಡು
ಅನುಕಂಪ ಅಲೆ ಎದ್ದರೆ ಧ್ರುವಗೆ ಹರ್ಷ!

ನಂಜನಗೂಡು ಕ್ಷೇತ್ರದಲ್ಲಿ ಹಾಲಿ ಶಾಸಕ ಬಿ.ಹರ್ಷವರ್ಧನ್‌ (ಬಿಜೆಪಿ) ಹಾಗೂ ಮಾಜಿ ಸಂಸದ ದಿವಂಗತ ಆರ್‌.ಧ್ರುವನಾರಾಯಣ ಅವರ ಪುತ್ರ ದರ್ಶನ್‌ (ಕಾಂಗ್ರೆಸ್‌) ಅವರ ನಡುವೆ ನೇರ ಹೋರಾಟವಿದೆ. ಇಲ್ಲಿ ಜೆಡಿಎಸ್‌ ಅಭ್ಯರ್ಥಿ ಕಣಕ್ಕಿಳಿಸದೆ ದರ್ಶನ್‌ಗೆ ಬೆಂಬಲ ಘೋಷಿಸಿದೆ. ಹರ್ಷವರ್ಧನ್‌ ಅವರು ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್‌ರ ಅಳಿಯ ಹಾಗೂ ಮಾಜಿ ಸಚಿವ ದಿವಂಗತ ಬಿ.ಬಸವಲಿಂಗಪ್ಪ ಅವರ ಮೊಮ್ಮಗ. ಎಸ್ಸಿ ಮತ್ತು ವೀರಶೈವ-ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ಗೆ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಕೂಡ ಆಕಾಂಕ್ಷಿಯಾಗಿದ್ದರು. ಆದರೆ ಧ್ರುವನಾರಾಯಣ ಅವರ ನಿಧನಾನಂತರ ಟಿಕೆಗ್‌ಗೆ ಪಟ್ಟು ಹಿಡಿಯದೇ ದರ್ಶನ್‌ಗೆ ಬೆಂಬಲ ಸೂಚಿಸಿದರು. ಇಲ್ಲಿ ಅಭಿವೃದ್ಧಿ ಹಾಗೂ ಅನುಕಂಪದ ನಡುವೆ ಹೋರಾಟ ನಡೆಯುತ್ತಿದೆ. ಅಭಿವೃದ್ಧಿ ಕಾರ್ಯಗಳು ಹಾಗೂ ಶ್ರೀನಿವಾಸಪ್ರಸಾದ್‌ ಅವರ ನಾಮಬಲದಿಂದ ಹರ್ಷವರ್ಧನ್‌ ಮತ್ತೊಮ್ಮೆ ಗೆಲ್ಲಲು ಯತ್ನಿಸುತ್ತಿದ್ದಾರೆ. ಆದರೆ ತಿಂಗಳ ಅವಧಿಯಲ್ಲಿ ತಂದೆ- ತಾಯಿ ಇಬ್ಬರನ್ನು ಕಳೆದುಕೊಂಡು ದರ್ಶನ್‌ ಪರವಾಗಿ ಅನುಕಂಪದ ಅಲೆ ಎದ್ದಿದೆ. ಇದು ಮತಗಳಾಗಿ ಪರಿವರ್ತನೆಯಾದಲ್ಲಿ ಕೈಮೇಲಾಗುತ್ತದೆ.

ಟಿ.ನರಸೀಪುರ
ಜೆಡಿಎಸ್‌ ವಿರುದ್ಧ ಕೈ, ಕಮಲ ವೈದ್ಯರ ಹೋರಾಟ

ಟಿ.ನರಸೀಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಎಂ.ಅಶ್ವಿನ್‌ಕುಮಾರ್‌ (ಜೆಡಿಎಸ್‌) ಹಾಗೂ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ (ಕಾಂಗ್ರೆಸ್‌) ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. ಬಿಜೆಪಿಯಿಂದ ಡಾ.ರೇವಣ್ಣ ಅವರು ಹುರಿಯಾಳು. ಪರಿಶಿಷ್ಟಜಾತಿ, ಒಕ್ಕಲಿಗರು, ವೀರಶೈವ-ಲಿಂಗಾಯತರು, ಪರಿಶಿಷ್ಟಪಂಗಡ ಮತ್ತು ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಡಾ.ಮಹದೇವಪ್ಪಗೆ ಇದು ಒಂಭತ್ತನೇ ಚುನಾವಣೆ. 5 ಬಾರಿ ಗೆದ್ದು, 3 ಬಾರಿ ಸೋತಿದ್ದಾರೆ. ಈ ಬಾರಿ ಅವರ ಪುತ್ರ ಸುನಿಲ್‌ ಬೋಸ್‌ಗೆ ಅವಕಾಶ ಮಾಡಿಕೊಟ್ಟು ಪಕ್ಕದ ನಂಜನಗೂಡು ಅಥವಾ ಬೆಂಗಳೂರಿನ ಸಿ.ವಿ.ರಾಮನ್‌ ನಗರಕ್ಕೆ ವಲಸೆ ಹೋಗುತ್ತಾರೆ ಎಂಬುದು ನಿಜವಾಗಲಿಲ್ಲ. ಕ್ಷೇತ್ರಕ್ಕೆ ಸಾಕಷ್ಟುಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಮತ್ತೊಂದು ಅವಕಾಶ ಕೊಡಿ ಎಂದು ಅಶ್ವಿನ್‌ಕುಮಾರ್‌ ಕೇಳುತ್ತಿದ್ದಾರೆ. 2013-18ರ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿ ಡಾ.ಮಹದೇವಪ್ಪ ಕೂಡ ಕಳೆದ ಬಾರಿಯ ಸೋಲು ಮರೆಸಿ, ಈ ಬಾರಿ ಗೆಲುವು ನೀಡಿ ಎಂದು ಕೋರುತ್ತಿದ್ದಾರೆ. ಡಾ.ರೇವಣ್ಣ ಅವರಿಗೆ ಉತ್ತಮ ವೈದ್ಯಎಂಬ ಹೆಸರು ಪ್ಲಸ್‌ ಪಾಯಿಂಟ್‌.

ಎಚ್‌.ಡಿ.ಕೋಟೆ
ಕೋಟೆಯಲ್ಲಿ ತ್ರಿಕೋನ ಸ್ಪರ್ಧೆ

ಕ್ಷೇತ್ರದಲ್ಲಿ ಹಾಲಿ ಶಾಸಕ ಅನಿಲ್‌ ಚಿಕ್ಕಮಾದು (ಕಾಂಗ್ರೆಸ್‌), ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಸಿ.ಜಯಪ್ರಕಾಶ್‌ (ಜೆಡಿಎಸ್‌), ಕೆ.ಎಂ. ಕೃಷ್ಣನಾಯಕ (ಬಿಜೆಪಿ) ಅವರ ನಡುವೆ ಹೋರಾಟವಿದೆ. ಚಿಕ್ಕಮಾದು 2013ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದರು. ಅವರ ಪುತ್ರ ಅನಿಲ್‌ ಕಳೆದ ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದು, ಕಳೆದ ಬಾರಿ ಸೋತಿದ್ದ ಚಿಕ್ಕಣ್ಣ ಈ ಬಾರಿ ಪುತ್ರನಿಗೆ ಟಿಕೆಟ್‌ ಕೊಡಿಸಿದ್ದಾರೆ. ಪರಿಶಿಷ್ಟಜಾತಿ ಮತ್ತು ಪಂಗಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಒಕ್ಕಲಿಗರು, ವೀರಶೈವ-ಲಿಂಗಾಯತರು, ಕುರುಬರು ಬರುತ್ತಾರೆ. ಕಳೆದ ಬಾರಿಯಂತೆ ಕಾಂಗ್ರೆಸ್‌-ಜೆಡಿಎಸ್‌ ನಡುವೆಯೇ ಗೆಲುವಿಗಾಗಿ ಹೋರಾಟ ನಡೆಯಬಹುದು.

ಹುಣಸೂರು
ಪ್ರತಿಸ್ಪರ್ಧಿಗಳ ಬೆವರಿಳಿಸುತ್ತಿರುವ ಜಿಡಿಟಿ ಪುತ್ರ

ಕ್ಷೇತ್ರದಲ್ಲಿ ಶಾಸಕ ಎಚ್‌.ಪಿ.ಮಂಜುನಾಥ್‌ (ಕಾಂಗ್ರೆಸ್‌), ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷ, ಜಿ.ಟಿ. ದೇವೇಗೌಡರ ಪುತ್ರ ಜಿ.ಡಿ.ಹರೀಶ್‌ಗೌಡ (ಜೆಡಿಎಸ್‌), ದೇವರಹಳ್ಳಿ ಸೋಮಶೇಖರ್‌ (ಬಿಜೆಪಿ) ಕಣದಲ್ಲಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಟಿಕೆಟ್‌ಗೆ ಯಾವುದೇ ಗೊಂದಲ ಇರಲಿಲ್ಲ. ಆದರೆ ಬಿಜೆಪಿ ಟಿಕೆಟ್‌ಗೆ ಮೂಲ ಬಿಜೆಪಿಯವರು ಮೂರು ಮಂದಿ ಇದ್ದರೂ ಜೆಡಿಎಸ್‌ನಿಂದ ಬಂದ ಸೋಮಶೇಖರ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಹುಣಸೂರಲ್ಲಿ ಎರಡು ಬಾರಿ ಬಿಜೆಪಿ ಗೆದ್ದಿತ್ತು. ಮತ್ತೊಮ್ಮೆ ಪ್ರಬಲ ಹೋರಾಟ ನೀಡಿತ್ತು. ಹೀಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಹೋರಾಟದ ಕಣವಾಗಿದೆ. ಒಕ್ಕಲಿಗರು, ಎಸ್ಸಿ, ಎಸ್ಟಿ, ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಳೆದೆರಡು ಬಾರಿ ಸುಲಭವಾಗಿ ಗೆದ್ದಿದ್ದ ಎಚ್‌.ಪಿ.ಮಂಜುನಾಥ್‌ ಈ ಬಾರಿ ಶ್ರಮ ಪಡುವಂತೆ ಮಾಡಿದ್ದಾರೆ ಹರೀಶ್‌ಗೌಡ. ಇಬ್ಬರಿಗೂ ಗೆಲುವಿಗೆ ಸಮಾನ ಅವಕಾಶಗಳಿವೆ.

25 ವರ್ಷ ಶಾಸಕನಾಗಿ ಪಿಕ್ನಿಕ್‌ಗೆ ಹೋಗಿದ್ದ ಅಪ್ಪಚ್ಚುರಂಜನ್: ಅಭಿವೃದ್ಧಿಯೇ ಮಾಡಿಲ್ಲ

ಪಿರಿಯಾಪಟ್ಟಣ
ಕಾಂಗ್ರೆಸ್‌, ಜೆಡಿಎಸ್‌ ಹಣಾಹಣಿ

ಕ್ಷೇತ್ರದಲ್ಲಿ ಶಾಸಕ ಕೆ.ಮಹದೇವ್‌ (ಜೆಡಿಎಸ್‌), ಮಾಜಿ ಸಚಿವರಾದ ಕೆ.ವೆಂಕಟೇಶ್‌ (ಕಾಂಗ್ರೆಸ್‌), ಸಿ.ಎಚ್‌.ವಿಜಯಶಂಕರ್‌ (ಬಿಜೆಪಿ) ಕಣದಲ್ಲಿದ್ದಾರೆ. ವೆಂಕಟೇಶ್‌ ಅವರಿಗೆ ಇದು ಒಂಭತ್ತನೇ ಚುನಾವಣೆ. ಅವರು ಐದು ಬಾರಿ ಗೆದ್ದು, ಮೂರು ಬಾರಿ ಸೋತಿದ್ದಾರೆ. ಈ ಬಾರಿ ಕೂಡ ಅವರಿಗೆ ಕೆ.ಮಹದೇವ್‌ ಅವರಿಂದ ಪ್ರಬಲ ಸ್ಪರ್ಧೆ ಇದೆ. 2008ರಲ್ಲಿ ಮಹದೇವ್‌ ಕಡಿಮೆ ಅಂತರದಲ್ಲಿ ಸೋತರು. 2013ರಲ್ಲಿ ಬಿಜೆಪಿ ಅಭ್ಯರ್ಥಿ ನಿಧನದಿಂದ ಚುನಾವಣೆ ಒಂದು ತಿಂಗಳು ಮುಂದೆ ಹೋಗಿದ್ದರಿಂದ ಅದರ ಲಾಭ ವೆಂಕಟೇಶ್‌ಗೆ ಆಯಿತು. ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಅವರು ಇಡೀ ಸಂಪುಟವನ್ನು ಅಲ್ಲಿಗೆ ಕರೆತಂದು ಪ್ರಚಾರ ಮಾಡಿ, 2,088 ಮತಗಳಿಂದ ಗೆಲ್ಲಿಸಿಕೊಂಡಿದ್ದರು. ಸತತ 2 ಬಾರಿ ಸೋತಿದ್ದ ಕೆ.ಮಹದೇವ್‌ ಕಳೆದ ಬಾರಿ ಗೆದ್ದರು. 25 ವರ್ಷಗಳ ನಂತರ ಮಾಜಿ ಸಂಸದ ಸಿ.ಎಚ್‌.ವಿಜಯಶಂಕರ್‌ ವಿಧಾನಸಭೆಗೆ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಒಕ್ಕಲಿಗರು, ಕುರುಬರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಗೆಲುವಿಗಾಗಿ ಹಣಾಹಣಿ ಇದೆ.

ಕೆ.ಆರ್‌.ನಗರ
4ನೇ ಬಾರಿ ಗೆಲ್ತಾರಾ ಸಾರಾ?

ಕೆ.ಆರ್‌.ನಗರ ಕ್ಷೇತ್ರದಲ್ಲಿ ಶಾಸಕ ಸಾ.ರಾ.ಮಹೇಶ್‌ (ಜೆಡಿಎಸ್‌), ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್‌ (ಕಾಂಗ್ರೆಸ್‌), ಹೊಸಹಳ್ಳಿ ವೆಂಕಟೇಶ್‌ (ಬಿಜೆಪಿ) ಕಣದಲ್ಲಿದ್ದಾರೆ. ಸಾ.ರಾ.ಮಹೇಶ್‌ಗೆ ಇದು ಸತತ 5ನೇ ಚುನಾವಣೆ. ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ವೀರ ಎನಿಸಿಕೊಂಡಿದ್ದಾರೆ. 2013ರಲ್ಲಿ ಕಾಂಗ್ರೆಸ್‌ನಿಂದ ದೊಡ್ಡಸ್ವಾಮೇಗೌಡ ಸ್ಪರ್ಧಿಸಿದ್ದರು. 2018ರಲ್ಲಿ ಅವರ ಪುತ್ರ, ಜಿಪಂ ಸದಸ್ಯ ಡಿ.ರವಿಶಂಕರ್‌ ಅಭ್ಯರ್ಥಿ. ಈ ಬಾರಿ ಕೂಡ ಅವರೇ ಅಭ್ಯರ್ಥಿ. ಸತತ 2 ಸೋಲನ್ನು ಅನುಕಂಪವಾಗಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಸಾ.ರಾ.ಮಹೇಶ್‌ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತಯಾಚಿಸುತ್ತಿದ್ದಾರೆ. ಒಕ್ಕಲಿಗರು ಮತ್ತು ಕುರುಬರು ಬಹುಸಂಖ್ಯಾತರಾಗಿರುವ ಈ ಕ್ಷೇತ್ರದಲ್ಲಿ ಸದಾ ಕಾಂಗ್ರೆಸ್‌ ಹಾಗೂ ಜನತಾ ಪರಿವಾರದ ನಡುವೆ ಜಿದ್ದಾಜಿದ್ದಿ. ಈ ಇಬ್ಬರನ್ನು ಹೊರತುಪಡಿಸಿ ಫಲಿತಾಂಶ ನಿರ್ಧರಿಸುವವರು ಇತರರೇ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ