Latest Videos

ಸತೀಶ್‌ ಜಾರಕಿಹೊಳಿ ಗೆಲುವಿನ ಓಟಕ್ಕೆ ಬಿಜೆಪಿ ಪಡೆ ಬ್ರೇಕ್‌ ಹಾಕುತ್ತಾ?

By Kannadaprabha NewsFirst Published Mar 11, 2023, 10:29 AM IST
Highlights

ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಯಮಕನಮರಡಿ, ಎಸ್ಟಿಮೀಸಲು ಕ್ಷೇತ್ರ. ತೀರಾ ಹಿಂದುಳಿದ ಕ್ಷೇತ್ರವೂ ಹೌದು. ಇಲ್ಲಿನ ರಾಜಕಾರಣವೇ ಬೇರೆ. ಇಲ್ಲಿ ಜಾತಿ, ಪಕ್ಷ ರಾಜಕಾರಣಕ್ಕಿಂತ ಬಣ ರಾಜಕೀಯ, ವೈಯಕ್ತಿಕ ಪ್ರತಿಷ್ಠೆಯೇ ಮೇಲು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರತಿನಿಧಿಸುತ್ತಿರುವ ಕ್ಷೇತ್ರವಿದು. 
 

ಶ್ರೀಶೈಲ ಮಠದ

ಬೆಳಗಾವಿ (ಮಾ.11): ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಯಮಕನಮರಡಿ, ಎಸ್ಟಿಮೀಸಲು ಕ್ಷೇತ್ರ. ತೀರಾ ಹಿಂದುಳಿದ ಕ್ಷೇತ್ರವೂ ಹೌದು. ಇಲ್ಲಿನ ರಾಜಕಾರಣವೇ ಬೇರೆ. ಇಲ್ಲಿ ಜಾತಿ, ಪಕ್ಷ ರಾಜಕಾರಣಕ್ಕಿಂತ ಬಣ ರಾಜಕೀಯ, ವೈಯಕ್ತಿಕ ಪ್ರತಿಷ್ಠೆಯೇ ಮೇಲು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರತಿನಿಧಿಸುತ್ತಿರುವ ಕ್ಷೇತ್ರವಿದು. ಸತತ 3 ಬಾರಿ ಅವರು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಇದೀಗ 4ನೇ ಬಾರಿಗೆ ತಮ್ಮ ರಾಜಕೀಯ ಅದೃಷ್ಟಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಕಳೆದ ಬಾರಿ, ಕ್ಷೇತ್ರದಲ್ಲಿ ಪ್ರಚಾರವನ್ನೇ ಮಾಡದಿದ್ದರೂ ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿ ವಿರುದ್ಧ 2,850 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಮತ್ತೊಮ್ಮೆ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿಯುವುದು ಬಹುತೇಕ ಗ್ಯಾರಂಟಿ.

ಅವರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಕಮಲ ಪಾಳೆಯದಲ್ಲಿ ಇನ್ನಿಲ್ಲದ ಕಸರತ್ತು ಶುರುವಾಗಿದೆ. ಬಿಜೆಪಿಗೆ ಈಗ ‘ಹಿಂದು’ ಪದವೇ ಚುನಾವಣಾ ಅಸ್ತ್ರವಾಗಲಿದೆ. ನಿಪ್ಪಾಣಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ ಮಾನವ ಬಂಧುತ್ವ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಸತೀಶ ಜಾರಕಿಹೊಳಿ ಅವರು ಹಿಂದು ಪದದ ಕುರಿತು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಅವರ ಹಿಂದು ಪದದ ವಿವಾದಾತ್ಮಕ ಹೇಳಿಕೆಯನ್ನೇ ತನ್ನ ಅಸ್ತ್ರವನ್ನಾಗಿಸುವ ಮೂಲಕ ಪ್ರಬಲ ಪೈಪೋಟಿ ನೀಡಲು ಬಿಜೆಪಿ ರಣತಂತ್ರ ಹೆಣೆಯುತ್ತಿದೆ.

400 ರೂಪಾಯಿ ಕುಕ್ಕರ್‌ಗೆ 1400 ರೂಪಾಯಿ ಸ್ಟಿಕ್ಕರ್‌, ಮತದಾರರನ್ನ ಕುರಿ ಮಾಡಿದ್ರಾ ರಾಜೇಗೌಡ್ರು!

ಸತೀಶ ಜಾರಕಿಹೊಳಿ ಈ ಬಾರಿ ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದರು. ಯಮಕನಮರಡಿ ಕ್ಷೇತ್ರವನ್ನು ತಮ್ಮ ಮಕ್ಕಳಿಗೆ ಬಿಟ್ಟು ಕೊಟ್ಟು, ಸವದತ್ತಿ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆಯಲ್ಲಿದ್ದರು. ಆದರೆ, ಬಿಜೆಪಿ, ಹಿಂದು ಸಂಘಟನೆಗಳು ಕ್ಷೇತ್ರದಲ್ಲಿ ನಿರಂತರವಾಗಿ ಅವರ ವಿರುದ್ಧ ಹಿಂದು ಜಾಗೃತಿ ಸಮಾವೇಶ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಕೊನೆಗೂ ಸತೀಶ ಅವರು ಕ್ಷೇತ್ರ ತೊರೆಯದೇ ಇಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಇನ್ನು, ಬಿಜೆಪಿಯಿಂದ ಮಾರುತಿ ಅಷ್ಟಗಿ ಮತ್ತು ಬಸವರಾಜ ಹುಂದ್ರಿ ನಡುವೆ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಯುತ್ತಿದೆ. ಪಕ್ಷ ಯಾರಿಗೆ ಟಿಕೆಟ್‌ ನೀಡುತ್ತದೆ ಎಂಬುದರ ಮೇಲೆ ಸತೀಶ ಜಾರಕಿಹೊಳಿಯ ರಾಜಕೀಯ ಭವಿಷ್ಯ ನಿಂತಿದೆ. ಸತತವಾಗಿ 2 ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಮಾರುತಿ ಅಷ್ಟಗಿ ಸ್ಪರ್ಧಿಸಿ, ಜಾರಕಿಹೊಳಿ ವಿರುದ್ಧ ಸೋಲು ಅನುಭವಿಸಿದ್ದಾರೆ. ಆದರೆ, ಕಳೆದ ಬಾರಿ ಜಾರಕಿಹೊಳಿಗೆ ಪ್ರಬಲ ಪೈಪೋಟಿ ನೀಡಿದ್ದರು. ಜಾರಕಿಹೊಳಿ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಈ ಬಾರಿ ಬಿಜೆಪಿಯ ಘಟಾನುಘಟಿ ನಾಯಕರೇ ಚುನಾವಣಾ ಅಖಾಡಕ್ಕಿಳಿದು ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಯಮಕನಮರಡಿ ಕ್ಷೇತ್ರಕ್ಕೆ ಒಳಪಟ್ಟಕೆಲವು ಗ್ರಾಮಗಳು ಹುಕ್ಕೇರಿ ಮತಕ್ಷೇತ್ರದ ಶಾಸಕರಾಗಿದ್ದ ದಿ.ಉಮೇಶ ಕತ್ತಿ ಅವರ ಹಿಡಿತದಲ್ಲಿದ್ದವು. ಆದರೆ, ಈ ಬಾರಿ ಉಮೇಶ ಕತ್ತಿ ಅವರು ಇಲ್ಲದ್ದರಿಂದ ಬಿಜೆಪಿಗೆ ಕಷ್ಟವಾಗಬಹುದು ಎಂಬ ಲೆಕ್ಕಾಚಾರ ಕೂಡ ಇದೆ. ಜೆಡಿಎಸ್‌ ಇಲ್ಲಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ ಎನ್ನುವಂತಾಗಿದೆ.

ಕ್ಷೇತ್ರದ ಹಿನ್ನೆಲೆ: ಈ ಮೊದಲು ಸಂಕೇಶ್ವರ ಕ್ಷೇತ್ರವಾಗಿದ್ದ ಯಮಕನಮರಡಿ, 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದಿದೆ. ಇದು ಎಸ್ಟಿಮೀಸಲು ಕ್ಷೇತ್ರ. ಈ ಕ್ಷೇತ್ರ ಬಹುಪಾಲು ಗುಡ್ಡಗಾಡು ಪ್ರದೇಶ ಹೊಂದಿದ್ದು, ಒಟ್ಟು 109 ಹಳ್ಳಿಗಳು ಈ ಕ್ಷೇತ್ರದ ವ್ಯಾಪ್ತಿಗೊಳಪಡುತ್ತವೆ. 1972ರಲ್ಲಿ ಸಂಕೇಶ್ವರ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಅಲ್ಲಿಂದ ಇಲ್ಲಿಯವರೆಗೆ 9 ಬಾರಿ ಕಾಂಗ್ರೆಸ್‌ ಜಯಶಾಲಿಯಾಗಿದ್ದರೆ, ಜನತಾದಳ ಮತ್ತು ದಳ ಇಬ್ಭಾಗದ ನಂತರ ಜೆಡಿಯು ತಲಾ ಒಂದೊಂದು ಬಾರಿ ಗೆದ್ದಿವೆ. ಆದರೆ, ಇಲ್ಲಿಯವರೆಗೆ ಬಿಜೆಪಿ ಗೆದ್ದಿರುವ ಇತಿಹಾಸವೇ ಇಲ್ಲ. ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಸತತವಾಗಿ 3 ಬಾರಿ ಗೆದ್ದಿದ್ದಾರೆ.

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಕೋಟೆ ಮೇಲೆ ಬಿಜೆಪಿ ಕಣ್ಣು

ಜಾತಿವಾರು ಲೆಕ್ಕಾಚಾರ: ಒಟ್ಟು 1,90,339 ಮತದಾರರ ಪೈಕಿ, ಪರಿಶಿಷ್ಟ ಪಂಗಡದವರು 57,546, ಪರಿಶಿಷ್ಟಜಾತಿಯವರು 15,250, ಲಿಂಗಾಯತರು 17,601, ಕುರುಬರು 5,550, ಮುಸ್ಲಿಮರು 9,485, ಮರಾಠರು 14,623, ಬ್ರಾಹ್ಮಣರು 4,450 ಇದ್ದಾರೆ. ಇಲ್ಲಿ ಪರಿಶಿಷ್ಟಪಂಗಡದ ಮತಗಳೇ ನಿರ್ಣಾಯಕ.

click me!