ತಿಮ್ಮಪ್ಪನ ಹುಂಡಿಗೆ ವಾಚು, ಎಸ್‌ಎಂಕೆಗೆ ಮಂತ್ರಿ ಹುದ್ದೆ!

By Shrilakshmi ShriFirst Published Dec 26, 2019, 3:52 PM IST
Highlights

ರಾಜಕೀಯ ಮುತ್ಸದ್ಧಿ, ಹಿರಿಯ ರಾಜಕಾರಣಿ ಎಸ್‌ ಎಂ ಕೃಷ್ಣ ಸ್ಮೃತಿ ವಾಹಿನಿ ಬಿಡುಗಡೆಗೆ ಸಿದ್ಧವಾಗಿದೆ. ರಾಜಕೀಯದಲ್ಲಿ ಹಿಂದೆಂದೂ ಕೇಳಿರದ ಅಪರೂಪದ ಘಟನಗೆಗಳನ್ನು ಹಂಚಿಕೊಂಡಿದ್ದಾರೆ. ಆ ಘಟನೆಗಳೆಲ್ಲವುಗಳ ಸಾರಾಂಶ ಇಲ್ಲಿದೆ ನೋಡಿ. 

ಹೈಕೋರ್ಟ್‌ಗೆ ರಜೆ ಘೋಷಿಸಿ ಜೈಲು ತಪ್ಪಿಸಿಕೊಂಡ ಕೆಂಗಲ್‌!

50 ರ ದಶಕ. ಮೇದಪ್ಪ ಕರ್ನಾಟಕದ ಉಚ್ಚ ನ್ಯಾಯಾಲಯದ ಮುಖ್ಯನಾಯಮೂರ್ತಿಗಳು. ಕೆಂಗಲ್‌ ಹನುಮಂತಯ್ಯ ಮುಖ್ಯಮಂತ್ರಿ. ಮೇದಪ್ಪನವರಿಗೆ ಮೊದಲಿನಿಂದಲೂ ಕೆಂಗಲ್‌ ಬಗ್ಗೆ ಸದಭಿಪ್ರಾಯ ಇರಲಿಲ್ಲ. ಇಬ್ಬರೂ ಹಟವಾದಿಗಳು. ಮುಖ್ಯ ನಾಯಮೂರ್ತಿಗಳು ಅನೇಕ ವಿಷಯಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಅದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿಗಳು ಮುಖ್ಯ ನ್ಯಾಯಮೂರ್ತಿಗಳ ಸಲಹೆಗೆ ವಿರುದ್ಧವಾಗಿ ಮುನ್ಸಿಪಲ್‌ ಮ್ಯಾಜಿಸ್ಪ್ರೇಟ್‌ಗಳನ್ನು ವರ್ಗ ಮಾಡುತ್ತಿದ್ದರು.

ಯಾವುದೋ ಒಂದು ಪ್ರಕರಣದಲ್ಲಿ ಮೇದಪ್ಪ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಮುಖ್ಯಮಂತ್ರಿ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ದಾಖಲಿಸಿದರು. ಮುಖ್ಯಮಂತ್ರಿಯೇ ಜೈಲಿಗೆ ಹೋಗುವಂತಹ ಪ್ರಕರಣ ಅದು. ಅದರ ತೀರ್ಪು ಶುಕ್ರವಾರ ಬರುವುದಿತ್ತು. ಮೇದಪ್ಪನವರು ಶುಕ್ರವಾರ ತಾವು ತೀರ್ಪು ಕೊಟ್ಟರೆ ಮುಖ್ಯಮಂತ್ರಿಗಳು ಸುಪ್ರೀಂಕೋರ್ಟಿಗೆ ಅಪೀಲು ಸಲ್ಲಿಸಲು ಅವಕಾಶವಿಲ್ಲದೆ ಜೈಲಿಗೆ ಹೋಗಬಹುದು ಎಂದು ಪ್ಲಾನ್‌ ಮಾಡಿದ್ದರು.

'ಕೃಷ್ಣ ಸಿಎಂ ಆಗಲು ಗೌಡರ ಮನೆ ಮುಂದೆ ನಿಂತಿದ್ದರು'

ಇದು ಕೆಂಗಲ್‌ ಹನುಮಂತಯ್ಯ ಅವರಿಗೆ ಗೊತ್ತಿತ್ತು. ಹೀಗಾಗಿ ಅವರು ಹೈಕೋರ್ಟಿಗೆ ಶುಕ್ರವಾರ ದಿಢೀರನೆ ರಜಾ ಘೋಷಿಸಿಬಿಟ್ಟರು. ಹೈಕೋರ್ಟಿಗೆ ರಜೆ ಘೋಷಿಸುವ ಅಧಿಕಾರ ಆಗ ಸರ್ಕಾರಕ್ಕಿತ್ತು. ಮುಖ್ಯ ನ್ಯಾಯಮೂರ್ತಿ ಮೇದಪ್ಪ ಶನಿವಾರ ನಿವೃತ್ತರಾದರು. ಅನಂತರ ಬಂದ ನ್ಯಾಯಮೂರ್ತಿಗಳು ಈ ಪ್ರಕರಣದ ಬಗ್ಗೆ ಆಸಕ್ತಿ ವಹಿಸದ ಕಾರಣ ಅದು ಸಹಜವಾಗಿ ಅಂತ್ಯ ಕಂಡಿತು.

ನಾನು ಗೆದ್ದೆ, ನನ್ನನ್ನು ಗೆಲ್ಲಿಸಿದವರು ಮೃತಪಟ್ಟರು

1962ರ ಚುನಾವಣೆಯಲ್ಲಿ ಘಟಾನುಘಟಿಗಳಾದ ಕಾಂಗ್ರೆಸ್‌ನ ವೀರಣ್ಣಗೌಡ ವಿರುದ್ಧ ನಿಲ್ಲುವಂತೆ ಒತ್ತಾಯಿಸಿದ ಕಾರಣ ಪಿಎಸ್‌ಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಮದ್ದೂರಿನಿಂದ ಸ್ಪರ್ಧಿಸಿದ್ದೆ. ನನ್ನ ಚುನಾವಣೆಗೆ ಸಹಾಯ ಮಾಡಿದವರಲ್ಲಿ ತಿರುಮಲೇಗೌಡರೂ ಒಬ್ಬರು. ಅವರು ಶಿವಪುರ ಕಾಂಗ್ರೆಸ್‌ ಅಧಿವೇಶನ ನಡೆಯಲು ಕಾರಣೀಭೂತರಾಗಿದ್ದರು. ಫಲಿತಾಂಶದ ದಿನ ಮತ ಎಣಿಕೆ ನಡೆಯುತ್ತಿದ್ದ ಮಳವಳ್ಳಿ ಸರ್ಕಾರಿ ಕಚೇರಿ ಎದುರಿನ ಮೈದಾನದಲ್ಲಿ ಮಿತ್ರರ ಜೊತೆಗೆ ಕುಳಿತಿದ್ದರು.

ಪ್ರತಿ ಬೂತಿನಲ್ಲಿ ನನಗೆ ಓಟು ಹೆಚ್ಚಿಗೆ ಬರುತ್ತಾ ಬರುತ್ತಾ ಅವರ ಮುಖದಲ್ಲಿ ಸಂತೋಷ ಅರಳುತ್ತಿತ್ತು. ಚುನಾವಣೆ ಫಲಿತಾಂಶ ಘೋಷಿಸಿದ ತಕ್ಷಣ ‘ಕೃಷ್ಣ ಗೆದ್ದ, ನನ್ನ ಜೀವನ ಸಾರ್ಥಕವಾಯಿತು’ ಎನ್ನುತ್ತಾ ಕುಸಿದು ಬಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ಸಾವನ್ನಪ್ಪಿದರು.

ಇಂದಿರಾ ಮುಂದೆ ಮೂತ್ರ ಮಾಡಿಕೊಂಡ ಸಾಹುಕಾರ್‌!

ಶ್ರೀಮತಿ ಇಂದಿರಾಗಾಂಧಿ ಅವರಿಗೆ ಹಳೆಯ ಮೈಸೂರಿನ ಪ್ರಭಾವಶಾಲಿ ನಾಯಕರಾಗಿದ್ದ, ಮೈಸೂರು ಕಾಂಗ್ರೆಸ್ಸನ್ನು ಬೆಳೆಸಿದ ಕೀರ್ತಿಗೆ ಭಾಜನರಾಗಿದ್ದ ಸಾಹುಕಾರ ಚೆನ್ನಯ್ಯ ಅವರನ್ನು ಕಂಡರೆ ತುಂಬಾ ಗೌರವ. ಒಂದು ದಿನ ನಾನು ಮತ್ತು ಚೆನ್ನಯ್ಯ ಅವರು ಇಂದಿರಾ ಅವರ ಭೇಟಿಗೆ ಹೋದೆವು. ಚೆನ್ನಯ್ಯನವರು ತಮ್ಮದೇ ಆದ ಇಂಗ್ಲಿಷ್‌ನಲ್ಲಿ ‘ಮೇಡಂಜೀ, ದೇವರಾಜ ಅರಸುರವರನ್ನು ಕಂಟಿನ್ಯೂ ಮಾಡಿ’ ಎಂದು ಕೂಗಿ ಹೇಳಿ ನೆಲಕ್ಕೆ ಬೆತ್ತ ಕುಟ್ಟಿದರು.

ಡಯಾಬಿಟೀಸ್‌ ಮುಂತಾದ ಹತ್ತಾರು ಕಾಯಿಲೆಯಿಂದ ಶರೀರ ಜರ್ಝರಿತವಾಗಿತ್ತು. ಅವರಿಗೆ ಅರಿವಿಲ್ಲದೆ ಮೂರ್ತ ವಿಸರ್ಜನೆಯಾಯಿತು. ಆದರೆ ಇಂದಿರಾಗಾಂಧಿ ಅವರು ಸ್ವಲ್ಪವೂ ಸಂಕೋಚಪಡದೆ ಅವರನ್ನು ಆದರಿಸಿ ಪಕ್ಕದ ಕೋಣೆಯಲ್ಲಿ ಕುಳ್ಳಿರಿಸಿ ಎಲ್ಲಾ ಅನುಕೂಲ ಮಾಡಿಕೊಟ್ಟರು. ಸಾಹುಕಾರ ಚೆನ್ನಯ್ಯನವರ ಮಾತಿನಂತೆ ದೇವರಾಜು ಅರಸು ಅವರನ್ನು ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮುಂದುವರಿಸಿದರು.

ಕಾಂಗ್ರೆಸ್‌ ಸೇರಲು ಮುಂದಾಗಿದ್ದ ದೇವೇಗೌಡ!

ಮೋಟಮ್ಮ ಮದುವೆಯಲ್ಲಿ ದಿಗ್ಗಜರ ಜೂಟಾಟ

ಮೂಡಿಗೆರೆ ಎಂಎಲ್‌ಎ ಮೋಟಮ್ಮನವರ ಮದುವೆಗೆ ಇಂದಿರಾಗಾಂಧಿ ಬರುತ್ತೇನೆ ಅಂದರು. ಆಗ ಆಕೆ ಪ್ರಧಾನ ಮಂತ್ರಿಯೇನೂ ಆಗಿರಲಿಲ್ಲ. ಆದರೆ ಚಿಕ್ಕಮಗಳೂರಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದದ್ದರು. ಮುಖ್ಯಮಂತ್ರಿ ದೇವರಾಜು ಅರಸು ಅವರಿಗೆ ಇದರ ಬಗ್ಗೆ ಏನೂ ಹೇಳಿರಲಿಲ್ಲ. ಇಂದಿರಾ ಬರುವುದಕ್ಕೆ ಮುಂಚೆ ನನಗೆ ಒಂದು ಮಾತು ಹೇಳಲಿಲ್ಲ ಎಂದುಕೊಂಡ ಅರಸು ‘ಬಂದರೆ ಬರಲಿ’ ಎಂದು ಉದಾಸೀನ ಮಾಡಿದರು. ಹೀಗಾಗಿ ಇಂದಿರಾ ಕೈಗೆ ಸಿಗದ ಹಾಗೆ ಹೋಗಬೇಕೆಂಬ ಪ್ಲಾನ್‌ ಮಾಡಿದ ಮುಖ್ಯಮಂತ್ರಿ ಅರಸು, ಇಂದಿರಾಗಿಂತ ಮುಂಚೆ ಮದುವೆಗೆ ಹೋಗಿ ವಾಪಸ್‌ ಬಂದಿದ್ದರು. ಇಂದಿರಾ ಸಹಜವಾಗಿ ಮದುವೆಗೆ ಹೋಗಿ ಅಲ್ಲಿಂದ ಮಂಗಳೂರಿಗೆ ಹೋಗಿ ದೆಹಲಿಗೆ ಹೋದರು. ಇದು ಸಣ್ಣ ವಿಚಾರವಾದರೂ ಅವರಿಬ್ಬರ ಭಿನ್ನಾಭಿಪ್ರಾಯವನ್ನು ಹೆಚ್ಚು ಮಾಡಿತು.

ಮಂಡ್ಯದಲ್ಲಿ ಪ್ರಚಾರಕ್ಕೆ ರಾತ್ರಿ 12 ಗಂಟೆಗೆ ಬಂದಿದ್ದ ಇಂದಿರಾ

1980ರ ತನಕ ಸಾರ್ವಜನಿಕ ಸಭೆಗೆ ಲಾರಿಯಲ್ಲಿ ಜನ ತರುವಂಥ ವಿಚಾರವೇ ಇರಲಿಲ್ಲ. ಇಂದಿರಾ ಬರುತ್ತಾರೆಂದರೆ ಜನ ಸ್ವಯಂಪ್ರೇರಿತರಾಗಿ ಬರುತ್ತಿದ್ದರು. ಜನರಿಗೆ ದುಡ್ಡು ಕೊಟ್ಟು ಓಟು ಹಾಕಿಸಿಕೊಳ್ಳುವ ಪ್ರಮೇಯವೇ ಇರಲಿಲ್ಲ. 1980ರ ಚುನಾವಣೆಯ ಸಂದರ್ಭದಲ್ಲಿ ಮಂಡ್ಯಕ್ಕೆ ಅವರು ರಾತ್ರಿ 10 ಗಂಟೆಗೆ ಬರುವ ಸಂದರ್ಭವಿತ್ತು. ಆದರೆ ಅವರು ಬಂದಿದ್ದು ರಾತ್ರಿ 12 ಗಂಟೆಗೆ. ಜನ ಒಂಚೂರೂ ಕದಲದೆ ಅವರಿಗಾಗಿ ಕಾಯುತ್ತಿದ್ದರು. ಆಗಲೇ ಮುಂದಿನ ಚುನಾವಣೆಯ ಫಲಿತಾಂಶ ಏನಂತ ನಮಗೆ ಗೊತ್ತಾಗಿ ಹೋಗಿತ್ತು.

ತಿಮ್ಮಪ್ಪನ ಹುಂಡಿಗೆ ವಾಚು, ನನಗೆ ಕೇಂದ್ರ ಮಂತ್ರಿ ಹುದ್ದೆ!

1983ರಲ್ಲಿ ಒಮ್ಮೆ ತಿರುಪತಿಗೆ ಹೋಗಿದ್ದೆ. ವೆಂಕಟೇಶ್ವರ ದೇವರ ಮಂಗಳಾರತಿ ತೆಗೆದುಕೊಳ್ಳಬೇಕಾದರೆ ಅಚಾನಕ್‌ ಆಗಿ ನನ್ನ ವಾಚು ಕಳಚಿತು. ಅದನ್ನು ದೇವಾಲಯದ ಅರ್ಚಕರು ಗಮನಿಸಿ ನನ್ನ ಸ್ನೇಹಿತರಾದ ಸಿಂಗಾರಿಗೌಡರಿಗೆ ‘ಆ ವಾಚನ್ನು ದೇವರ ಹುಂಡಿಗೆ ಹಾಕಿ’ ಎಂದರು. ಅದನ್ನು ದೇವರಿಗೆ ಅರ್ಪಿಸಿ ಬೆಂಗಳೂರಿಗೆ ಬಂದೆ. ಸಾಯಂಕಾಲ ಹೈದರಾಬಾದ್‌ಗೆ ಹೋದೆ. ರಾತ್ರಿ ಹೋಟೆಲ್‌ನಲ್ಲಿ ಎಷ್ಟೋ ಹೊತ್ತಿನಿಂದ ಫೋನ್‌ ಹೊಡೆದುಕೊಳ್ಳುತ್ತಲೇ ಇತ್ತು. ನನಗೆ ಎಚ್ಚರವೇ ಆಗಿಲ್ಲ.

ಒಂದು ಹೊತ್ತಿನಲ್ಲಿ ಫೋನ್‌ ಶಬ್ದ ಕೇಳಿಸಿ ಎತ್ತಿಕೊಂಡರೆ, ಆ ಕಡೆಯಿಂದ ಪ್ರೇಮಾ, ‘ತುರ್ತಾಗಿ ಎಂ.ಎಲ್‌. ಪೋತೆದಾರ್‌ ಅವರಿಗೆ ಫೋನ್‌ ಮಾಡಿ’ ಎಂದಳು. ಅವರಿಗೆ ಫೋನ್‌ ಮಾಡಿದರೆ, ‘ನೀವು ನಾಳೆ ಬೆಳಿಗ್ಗೆಯೇ ದೆಹಲಿಗೆ ಬರಬೇಕಾಗುತ್ತದೆ’ ಎಂದರು.

ಗೋವಾ ಮಾಜಿ ಸಿಎಂ ಪರ್ರಿಕರ್ ಬಯೋಪಿಕ್ ತೆರೆಗೆ

ದೆಹಲಿಗೆ ಬಂದು ಷಹಜಾನ್‌ ರೋಡಿನಲ್ಲಿದ್ದ ನಮ್ಮ ಮನೆಗೆ ಬಂದೆ. 1.45ರ ತನಕ ಯಾವುದೂ ಸಮಾಚಾರವಿಲ್ಲ. ರಾಜೀವ್‌ ಗಾಂಧಿ ಅವರ ಒಡನಾಡಿ ಡಿ.ಪಿ.ಧರ್‌ ನನಗೆ ಫೋನ್‌ ಮಾಡಿ, ‘ನೀವು ಕೇಂದ್ರ ಮಂತ್ರಿಯಾಗುತ್ತೀರಿ ಶುಭಾಶಯಗಳು’ ಎಂದರು. ಕೇಂದ್ರ ಸರ್ಕಾರದಲ್ಲಿ ಕೈಗಾರಿಕಾ ಖಾತೆ ರಾಜ್ಯ ಮಂತ್ರಿಯಾಗಿ ಅಂದೇ ಪ್ರಮಾಣ ವಚನ ಸ್ವೀಕರಿಸಿದೆ.

ಹೆಗಡೆ ಮೇಲಿನ ದಾಳಿ ನೋಡಿ ವಿಧಾನಸೌಧಕ್ಕೆ ಬೇಲಿ ಹಾಕಿಸಿದೆ

1994ರಲ್ಲಿ ಜನತಾದಳ ಅಧಿಕಾರಕ್ಕೆ ಬಂತು. ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆ ಅಂದು ನಡೆದ ಘರ್ಷಣೆ ನೊಡಿದರೆ ಎಲ್ಲರಿಗೂ ಭಯವುಂಟಾಗುತ್ತಿತ್ತು. ಎಚ್‌.ಡಿ ದೇವೇಗೌಡರು ಮುಖ್ಯಮಂತ್ರಿಯಾಗುವುದಕ್ಕೆ ರಾಮಕೃಷ್ಣ ಹೆಗಡೆ ಅಡ್ಡಗಾಲು ಹಾಕುತ್ತಿದ್ದಾರೆಂದು ಜನ ಭಾವಿಸಿ ವಿಧಾನಸೌಧಕ್ಕೆ ನುಗ್ಗಿ ರಾಮಕೃಷ್ಣ ಹೆಗಡೆ, ಎಂ.ಪಿ ಪ್ರಕಾಶ್‌, ಆರ್‌.ವಿ ದೇಶಪಾಂಡೆ ಮುಂತಾದವರ ಮೇಲೆ ದಾಳಿ ಮಾಡಿದರು. ಹೆಗಡೆಯವರ ಅಂಗಿ ಹರಿದುಹಾಕಿದರು.

ಪ್ರಾಯಶಃ ಇವರೆಲ್ಲಾ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಸುತ್ತಮುತ್ತಲಿನ ಜನರೇ ಇರಬೇಕು. ಇದನ್ನೆಲ್ಲಾ ನಿಯಂತ್ರಿಸಿ ವಿಧಾನಸೌಧಕ್ಕೆ ಒಂದು ರಕ್ಷಣೆ ಕೊಡುವಂತಹ ಸಣ್ಣ ಯೋಜನೆ ಅಂದು ನನ್ನ ಮನಸ್ಸಿನಲ್ಲಿ ಮೂಡಿತ್ತು. 1999ರಲ್ಲಿ ನಾನು ಮುಖ್ಯಮಂತ್ರಿಯಾದಾಗ ವಿಧಾನಸೌದ, ಎ.ಜಿ. ಆಫೀಸ್‌, ಉದ್ಯೋಗ ಸೌಧ ಎಲ್ಲವೂ ಸೇರಿದಂತೆ ಒಂದು ಕಾಂಪ್ಲೆಕ್ಸ್‌ ತರಹ ಮಾಡಿ ರಕ್ಷಣೆಗೆ ಬೇಲಿ ಹಾಕಲಾಯಿತು.

ಕುಮಾರಸ್ವಾಮಿ ಕಾಲಿಗೆ ಬಿದ್ದ ಕತೆ

1994ರಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡು ಜನತಾದಳ ಅಧಿಕಾರಕ್ಕೆ ಬಂತು. ಅನೇಕ ಗೊಂದಲದ ನಡುವೆ ದೇವೇಗೌಡರು ಮುಖ್ಯಮಂತ್ರಿಯಾದರು. 1996ರಲ್ಲಿ ಲೋಕಸಭೆ ಚುನಾವಣೆ ಎದುರಾಯಿತು. ಒಂದು ದಿನ ಮಿತ್ರರಾದ ಎಚ್‌.ಎನ್‌. ನಂಜೇಗೌಡರು ಕರೆ ಮಾಡಿ ‘ಇಂದು ನೀವು ನಮ್ಮ ಮನೆಗೆ ಊಟಕ್ಕೆ ಬರಬೇಕು. ಎಚ್‌.ಡಿ ದೇವೆಗೌಡರು ಬರುತ್ತಾರೆ’ ಎಂದರು. ಆಗ ನಂಜೇಗೌಡರು ಬಸವನಗುಡಿ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿದ್ದರು. ಸಂಜೆ ಅವರ ಮನೆಗೆ ಹೋದೆ. ಸಮಯಕ್ಕೆ ಸರಿಯಾಗಿ ದೇವೇಗೌಡರೂ ಬಂದರು.

ಅದು ಇದು ಮಾತನಾಡುತ್ತಾ ಅವರು ಮಾಮೂಲಿ ಧಾಟಿಯಲ್ಲಿ ‘ನೋಡಿ ನಮ್ಮ ಕುಮಾರ ಕನಕಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಬೇಕು ಅಂತ ಹೇಳುತ್ತಿದ್ದಾನೆ. ತಾವು ಅವನಿಗೆ ಆಶೀರ್ವಾದ ಮಾಡಬೇಕು’ ಎಂದರು. ದೇವೇಗೌಡರ ಕೋರಿಕೆಯನ್ನು ಮನ್ನಿಸಿ, ‘ಗೌಡರೇ ನಾನೇನು ಚುನಾವಣೆಯಲ್ಲಿ ಆಕ್ಟಿವ್‌ ಆಗಿ ಭಾಗವಹಿಸುವುದಿಲ್ಲ. ನಿಮ್ಮ ಮಗ ಚೆನ್ನಾಗಿ ಕೆಲಸ ಮಾಡಲಿ. ಜನ ಆಶೀರ್ವದಿಸುತ್ತಾರೆ’ ಎಂದೆ. ತಕ್ಷಣ ದೇವೇಗೌಡರು ಕೂಗು ಹಾಕಿದರು. ಆಚೆಯಿದ್ದ ಅವರ ಮಗ ಕುಮಾರ್‌ ಬಂದು ಎದುರಿಗೆ ನಿಂತ. ದೇವೇಗೌಡರು ‘ಕಾಲಿಗೆ ಬೀಳೋ ಕೃಷ್ಣ ಸಾಹೇಬರು ಒಪ್ಪಿದ್ದಾರೆ’ ಎಂದರು.

ಕುಮಾರಸ್ವಾಮಿ ‘ನಾಳೆ ನಿಮ್ಮ ಮನೆಗೆ ಬರುತ್ತೇನೆ ಸರ್‌’ ಅಂದರು. ತಕ್ಷಣ ನಾನು ಇಂಥದ್ದೆಲ್ಲಾ ಮಾಡಬೇಡ, ಬಹಿರಂಗವಾಗಿ ನಿನಗೇನೂ ಸಹಾಯ ಮಾಡಲಿಕ್ಕಾಗುವುದಿಲ್ಲ. ನಿನ್ನ ಪಾಡಿಗೆ ನೀನು ಕೆಲಸ ಮಾಡು ನಿನಗೆ ಒಳ್ಳೆಯದಾಗಲಿ’ ಎಂದೆ. ಸಚಿವ ಪಿ.ಜಿ ಆರ್‌ ಸಿಂಧ್ಯ ಸ್ಪರ್ಧಿಸುತ್ತಾರೆಂದು ಭಾವಿಸಿದ ಕನಕಪುರ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧಿಸಿದರು. ಅಲ್ಲಿಂದ ಅವರ ದೆಸೆ ಆರಂಭವಾಯಿತು.

ದೇವೇಗೌಡರ ಕೇಂದ್ರ ಸರ್ಕಾರ ಪತನಗೊಂಡ ಹಿನ್ನೆಲೆ

ಪಿ.ವಿ. ನರಸಿಂಹರಾವ್‌ ಮತ್ತು ಎಚ್‌.ಡಿ. ದೇವಗೌಡರಿಗೂ ಉತ್ತಮವಾದ ಸಂಬಂಧ ಇತ್ತು. ನರಸಿಂಹರಾವ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಬಿಟ್ಟಮೇಲೆ ದೇವೇಗೌಡರು ಕಾಂಗ್ರೆಸ್‌ ಅಧ್ಯಕ್ಷರ ಜೊತೆಗೆ ಉತ್ತಮ ಸಂಪರ್ಕವಿಟ್ಟುಕೊಳ್ಳಲಿಲ್ಲ. ಪಿ.ವಿ. ನರಸಿಂಹರಾವ್‌ ಅವರಿಗೆ ನೀಡಿದಷ್ಟೇ ಗೌರವವನ್ನು ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿ ಅವರಿಗೂ ಕೊಡಬೇಕಿತ್ತು. ಜೊತೆಗೆ ಯಾವುದೋ ಹಳೆ ಪ್ರಕರಣವನ್ನು ಕೆದಕಿ ಕೇಸರಿಯವರ ಮೇಲೆ ಸಿಬಿಐ ತನಿಖೆ ಮಾಡಿಸಲು ದೇವೇಗೌಡರು ಮುಂದಾದರು. ಇದೆಲ್ಲಾ ಅಸಮಾಧಾನಕ್ಕೆ ಕಾರಣವಾಯಿತು. ಸೀತಾರಾಂ ಕೇಸರಿ ಬೆಳಗ್ಗೆ ಸೀದಾ ರಾಷ್ಟ್ರಪತಿ ಭವನಕ್ಕೆ ಹೋದರು. ದಿಢೀರನೆ ‘ದೇವೇಗೌಡರ ನಾಯಕತ್ವದ ಜನತಾದಳ ಸರ್ಕಾರಕ್ಕೆ ಕಾಂಗ್ರೆಸ್‌ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿದೆ’ ಎಂಬ ಪತ್ರ ಕೊಟ್ಟರು. ಅಲ್ಲಿಗೆ ಗೌಡರ ಸರ್ಕಾರದ ಕತೆ ಮುಗಿಯಿತು.

ಸೋನಿಯಾ ಗಾಂಧಿ ಬಳ್ಳಾರಿ ಸ್ಪರ್ಧೆ ರಹಸ್ಯ

ಒಂದು ದಿನ ನನ್ನ ಮಗಳಿಗೆ ಸೌತ್‌ ಪರೇಡ್‌ನಲ್ಲಿ ಏನನ್ನೋ ಕೊಡಿಸಲು ನಾನೇ ಕಾರು ಡ್ರೈವ್‌ ಮಾಡಿಕೊಂಡು ಹೋಗುತ್ತಿದ್ದೆ. ನನ್ನ ಮೊಬೈಲಿಗೆ ಒಂದು ಕರೆ ಬಂತು. ಆಗ ಗುಲಾಂ ನಬಿ ಆಜಾದ್‌ ‘ಕಾರಿನಲ್ಲಿ ಯಾರಾದರೂ ಇದ್ದಾರೆಯೇ?’ ಎಂದರು. ‘ಇಲ್ಲಾ ಹೇಳಿ’ ಅಂದೆ. ‘ನೀವು ನಾಳೆ 10 ಗಂಟೆಗೆ ಖಾಲಿ ಬಿ-ಫಾರಂ ತೆಗೆದುಕೊಂಡು ಬಳ್ಳಾರಿಗೆ ಬನ್ನಿ’ ಎಂದರು. ನನಗೆ ಸೂಕ್ಷ್ಮ ಹೊಳೆಯಿತು. ವಿಚಾರಿಸಿದರೆ ಹೆಲಿಕಾಪ್ಟರ್‌ ಆಗಲಿ, ಸಣ್ಣ ಫ್ಲೈಟ್‌ ಆಗಲಿ ಯಾವುದೂ ಇಲ್ಲ. ಕೊನೆಗೆ ಸಂಬಂಧಿ ಬಿ.ಸಿ.ರಾಜ ಹಾಗೂ ಮಿತ್ರ ಶಿಂಧೆ ರಾತ್ರಿ ಬೆಂಗಳೂರಿನಿಂದ ಕಾರಿನಲ್ಲಿಯೇ ಹೊರಟೆವು.

ಯಾವುದೋ ಲಾಡ್ಜ್‌ನಲ್ಲಿ ಉಳಿದು ಬೆಳಿಗ್ಗೆ 9ರ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಹೋದೆವು. ಗುಲಾಂ ನಬಿ ಆಜಾದ್‌ ಜೊತೆಗೆ ಸೋನಿಯಾ ಗಾಂಧಿ ಇಳಿದರು. ನೇರವಾಗಿ ಡಿ.ಸಿ. ಆಫೀಸಿಗೆ ಹೋದೆವು. ಆದರೆ ಅಷ್ಟುಹೊತ್ತಿಗೆ ಸುಷ್ಮಾ ಸ್ವರಾಜ್‌ ಬಿಜೆಪಿಯಿಂದ ನಾಮಿನೇಶನ್‌ ಫೈಲ್‌ ಮಾಡಲು ಕಾಯುತ್ತಿದ್ದರು. ಅವರಾದ ಮೇಲೆ ಸೋನಿಯಾ ನಾಮಿನೇಶನ್‌ ಫೈಲ್‌ ಮಾಡಿದರು. ಒಂದು ಗಂಟೆಗೆ ಮತ್ತೆ ಜಯಕಾರದೊಂದಿಗೆ ಅವರು ದೆಹಲಿಗೆ ಹೋದರು. ಎಷ್ಟೇ ಗುಟ್ಟಾಗಿ ಇಟ್ಟಿದ್ದರೂ ಇಂತಹ ವಿಚಾರಗಳು ವಿರೋಧಿ ಪಾಳಯಕ್ಕೆ ತಕ್ಷಣ ಗೊತ್ತಾಗುತ್ತದೆ.

ಮನಮೋಹನ ಸಿಂಗ್‌ ಅಲ್ಲದಿದ್ದರೆ ನಾನು ಪ್ರಧಾನಿ?

ಡಾ.ಮನಮೋಹನ ಸಿಂಗ್‌ ಅವರು ತಮ್ಮ ಸಹಪಾಠಿಗಳಾಗಿದ್ದರೂ ಪ್ರೊ.ಕೆ. ವೆಂಕಟಗಿರಿ ಗೌಡರವರ ಜೊತೆಗೆ ‘ಕರ್ನಾಟಕದಲ್ಲಿ ಎಸ್‌.ಎಂ ಕೃಷ್ಣ ಉತ್ತಮ ಕೆಲಸ ಮಾಡುತ್ತಿದ್ದಾರೆ. 2004ರಲ್ಲಿ ಯುಪಿಎ ಸರ್ಕಾರ ಬಂದರೆ ಕೃಷ್ಣ ಅಥವಾ ನಾನು ಪ್ರಧಾನಮಂತ್ರಿಯಾಗುತ್ತೇವೆ. ಖಂಡಿತ ಸೋನಿಯಾ ಗಾಂಧಿ ಅವರು ಈ ಹುದ್ದೆಯ ಆಕಾಂಕ್ಷಿ ಅಲ್ಲ’ ಎಂದಿದ್ದರಂತೆ. ಈ ವಿಚಾರವನ್ನು ಪ್ರೊ.ವೆಂಕಟಗಿರಿ ಅವರು ತಮ್ಮ ಆಪ್ತವಲಯಲ್ಲಿ ಹೇಳಿಕೊಂಡಿದ್ದರು.

- ಜನವರಿ 4ರಂದು ಬಿಡುಗಡೆಯಾಗಲಿರುವ ಎಸ್‌.ಎಂ.ಕೃಷ್ಣ ಅವರ ಆತ್ಮಕತೆ ‘ಸ್ಮೃತಿ ವಾಹಿನಿ’ ಕೃತಿಯ ಆಯ್ದ ಭಾಗ

click me!