ಸರ್ಜಿಕಲ್‌ ದಾಳಿ ಹಿಂದಿನ ಮಾಸ್ಟರ್‌ ಮೈಂಡ್‌ ಅಜಿತ್ ದೋವಲ್

By Prashant NatuFirst Published Oct 2, 2016, 6:23 AM IST
Highlights

ಸೆಪ್ಟೆಂಬರ್‌ 29ರ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ತನ್ನ ನಿವಾಸದಲ್ಲಿ ಕಾತರದಿಂದ, ದುಗುಡದಿಂದ ಒಂದು ದೂರವಾಣಿ ಕರೆಗಾಗಿ ಕಾಯುತ್ತಿದ್ದರು ಪ್ರಧಾನಿ ನರೇಂದ್ರ ಮೋದಿ. ಸರಿಯಾಗಿ 4 ಗಂಟೆ, 32 ನಿಮಿಷಕ್ಕೆ ಪ್ರಧಾನಿ ಬಳಸುವ ರಾಕ್ಸ್‌ ದೂರವಾಣಿಗೆ ಮಿಲಿಟರಿ ಕಂಟ್ರೋಲ್ ರೂಂನಿಂದ ದೂರವಾಣಿ ಕರೆ ಬಂದಾಗ, ಆ ಕಡೆಯಿಂದ ಕೇಳಿಬಂದ ಸುದ್ದಿ ತಿಳಿದು ಪ್ರಧಾನಿ ನಿರಾಳರಾಗುತ್ತಾರೆ.

ಪ್ರಧಾನಿಗೆ ದೂರವಾಣಿ ಕರೆ ಮಾಡಿದವರು ದೇಶದ ಭದ್ರತಾ ಸಲಹೆಗಾರ ಅಜಿತ್‌ ದೋವಲ್. ಆ ವೇಳೆ ದೋವಲ್, ಪ್ರಧಾನಿ ಮೋದಿಗೆ ಹೇಳಿದ ಒಂದು ವಾಕ್ಯವಿದು: ‘‘ಮಿಷನ್‌ ಯಶಸ್ವಿಯಾಗಿದೆ, ಹುಡುಗರು ಸುರಕ್ಷಿತವಾಗಿ ಮರಳಿದ್ದಾರೆ.'' ಖುಷಿಯಿಂದ, ‘‘ವೆಲ್ಡನ್‌ ಅಜಿತ್‌,'' ಎಂದು ಅಭಿನಂದಿಸಿದ ಮೋದಿ, ಮರುಕ್ಷಣ ಫೋನಾಯಿಸಿದ್ದು ವಿದೇಶಾಂಗ ಕಾರ್ಯದರ್ಶಿ ಎಸ್‌ ಜಯಶಂಕರ್‌ ಅವರಿಗೆ.

ಬೆಳಗಿನ ಒಂಬತ್ತು ಗಂಟೆಯೊಳಗೆ ವಿಶ್ವದ ಪ್ರಮುಖ ಮೂವತ್ತು ರಾಷ್ಟ್ರಗಳ ಮುಖ್ಯಸ್ಥರಿಗೆ ದಾಳಿಯ ಅನಿವಾರ್ಯತೆ ತಿಳಿಸಿಯಾಗಿತ್ತು. ಮುಖಭಂಗ ಅನುಭವಿಸಿದ್ದ ಪಾಕಿಸ್ತಾನ ರಜೋರಿಯಲ್ಲಿ ಶೆಲ್ ದಾಳಿ ಆರಂಭಿಸಿದಾಗ, ‘‘ಒಂದು ಗುಂಡಿಗೆ ಎರಡು ಗುಂಡು ಹಾರಿಸಿ,'' ಎಂದು ಬಿಎಸ್‌ಎಫ್‌ ಮುಖ್ಯಸ್ಥರಿಗೆ ಆದೇಶ ನೀಡಿ ನಿದ್ದೆಗೆ ಜಾರಿದ್ದರು ಮೂರು ದಿನಗಳಿಂದ ನಿದ್ದೆ ಮಾಡಿರದ ಅಜಿತ್‌ ದೋವಲ್. ಉರಿ ದಾಳಿ ನಡೆದ ದಿನವೇ ಪ್ರತಿದಾಳಿ ನಡೆಸಲು ತೀರ್ಮಾನಿಸಿದ್ದ ಪ್ರಧಾನಿ ಮೋದಿ, ಸರ್ಜಿಕಲ್ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿ ಹೊರಿಸಿದ್ದೇ ಈ ಅಜಿತ್‌ ದೋವಲ್ ಎಂಬ ಕೇರಳ ಕೇಡರ್‌ನ ನಿವೃತ್ತ ಐಪಿಎಸ್‌ ಅಧಿಕಾರಿಗೆ. ದೋವಲ್ ದೇಶದ ಅತ್ಯಂತ ಚತುರ ಚಾಣಾಕ್ಷ ಬೇಹುಗಾರರೂ ಹೌದು.

ಪ್ರಧಾನಿ ಮೋದಿಯ ಕಳೆದ ಎರಡು ವರ್ಷದ ಅಷ್ಟೂ ವಿದೇಶ ಯಾತ್ರೆಗಳ ಫೋಟೊಗಳನ್ನು ತೆಗೆದು ನೋಡಿದರೆ, ದ್ವಿಪಕ್ಷೀಯ ಮಾತುಕತೆ ನಡೆಯುವಾಗ ಎಡಗಡೆ ವಿದೇಶಾಂಗ ಕಾರ್ಯದರ್ಶಿ ಜಯಶಂಕರ್‌, ಬಲಗಡೆ ದೋವಲ್ ಹೆಚ್ಚೂಕಡಿಮೆ ಇದ್ದೇ ಇರುತ್ತಾರೆ. ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಮಿತ್‌ ಶಾರನ್ನು ಮೋದಿ ಹೇಗೆ ನಂಬುತ್ತಾರೋ ಹಾಗೆಯೇ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಅಫ್ಘಾನಿಸ್ತಾನ, ಚೀನಾದೊಂದಿಗೆ ಸಂಬಂಧಗಳ ವ್ಯಾಖ್ಯೆ ಏನು ಎಂಬುದನ್ನು ನಿರ್ಧರಿಸುವಾಗ ಮೋದಿ ಹೆಚ್ಚು ಅವಲಂಬಿಸಿರುವುದು ದೋವಲ್ರನ್ನು. ಮೋದಿಗಾಗಿ ತೆರೆಯ ಹಿಂದೆ ನಿಂತು ವಿದೇಶಾಂಗ ಮತ್ತು ಭದ್ರತಾ ವಿಷಯಗಳಲ್ಲಿ ಹೊಸ ರೀತಿಯ ನೀತಿಯ ಭಾಷ್ಯ ಬರೆಯುತ್ತಿರುವುದು ಇದೇ ದೋವಲ್.

ಉತ್ತರಾಖಂಡದ ಪೌರಿ ಗಡ್‌ವಾಲದಲ್ಲಿನ ಗಡ್‌ವಾಲಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ದೋವಲ್ ತಂದೆ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ರಾಜಸ್ಥಾನದ ಅಜ್ಮೇರ್‌ನಲ್ಲಿರುವ ಮಿಲಿಟರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಅಜಿತ್‌, ನಂತರ ಆಗ್ರಾ ವಿಶ್ವ ವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಾಲ್ಯದಿಂದಲೇ ಪೊಲೀಸ್‌ ಆಗಬೇಕೆಂದು ಕನಸು ಕಾಣುತ್ತಿದ್ದ ಅವರು, 1968ರಲ್ಲಿ ಐಪಿಎಸ್‌ ಅಧಿಕಾರಿ ಆಗಿ ಆಯ್ಕೆಯಾಗಿದ್ದು ಕೇರಳ ಕೇಡರ್‌ನಲ್ಲಿ. ಆದರೆ ಕೆಲ ವರ್ಷಗಳಲ್ಲೇ ಕೇಂದ್ರ ಬೇಹುಗಾರಿಕಾ ದಳದ ಅಧಿಕಾರಿಯಾಗಿ ದೆಹಲಿಗೆ ಕಾಲಿಟ್ಟ ದೋವಲ್ ಮಿಝೋರಾಂ ಮತ್ತು ಪಂಜಾಬ್‌ನಲ್ಲಿ ನಡೆಯುತ್ತಿದ್ದ ಉಗ್ರಗಾಮಿ ಚಟುವಟಿಕೆಗಳ ಕಾಲದಲ್ಲಿ ಅತ್ಯಂತ ಚುರುಕಾಗಿ ಕೆಲಸ ಮಾಡಿದ ಅಧಿಕಾರಿ. ಮಿಝೋ ನ್ಯಾಷನಲ್ ಫ್ರಂಟ್‌ನ ಲಾಲ್ ಡೆಂಗಾ ಬಳಿ ಇದ್ದ ಏಳು ಕಮಾಂಡರ್‌ಗಳ ಪೈಕಿ ಆರು ಜನರನ್ನು ಭಾರತದ ಪರವಾಗಿ ಹೊರಳಿಸಿದ ಅಜಿತ್‌, ಅತ್ಯಂತ ದೀರ್ಘ ಸಮಯದವರೆಗೆ ಚೀನಾ ಮತ್ತು ಮ್ಯಾನ್ಮಾರ್‌ನಲ್ಲಿ ಮಿಝೋ ನ್ಯಾಷನಲ್ ಫ್ರಂಟ್‌ ಉಗ್ರರೊಟ್ಟಿಗೆ ವೇಷ ಮರೆಸಿ ಇದ್ದು, ಭಾರತಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದರು. 1971ರಿಂದ 1999ರ ಕಂದಹಾರವರೆಗೆ, ಇಂಡಿಯನ್‌ ಏರ್‌ಲೈಸ್ಸ್‌ನ 15 ಹೈಜಾಕ್‌ ಪ್ರಕರಣಗಳಲ್ಲಿ ಒತ್ತೆಯಾಳುಗಳನ್ನು ಬಿಡಿಸುವಲ್ಲಿ ದೋವಲ್ ಶ್ರಮವಿದೆ. 1999ರಲ್ಲಿ ಕಂದಹಾರ ಅಪಹರಣ ನಡೆದ ನಂತರ ಉಗ್ರರ ಜೊತೆಗೆ ಮಾತುಕತೆಗಾಗಿ ದೆಹಲಿಯಿಂದ ಕಳುಹಿಸಿದ ಮೂವರು ಅಧಿಕಾರಿಗಳ ಪೈಕಿ ದೋವಲ್ ಕೂಡ ಒಬ್ಬರು.

1988ರಲ್ಲಿ ಪಂಜಾಬ್'ನ ಖಾಲಿಸ್ತಾನಿ ಉಗ್ರರು ಅಪಹರಿಸಿದ್ದ ರೊಮೇನಿಯಾ ರಾಯಭಾರಿ ಲಿವಿಡು ರಾಡು ಬಿಡುಗಡೆಯಲ್ಲಿ ದೋವಲ್ ಪಾತ್ರ ದೊಡ್ಡದು. ಆದರೆ ದೋವಲ್'ರಿಗೆ, ‘ಭಾರತದ ಜೇಮ್ಸ್ ಬಾಂಡ್‌' ಎಂದು ಹೆಸರು ಬಂದಿದ್ದು, ವೇಷ ಬದಲಿಸಿ ನಿರ್ವಹಿಸಿದ ಎರಡು ಪ್ರಕರಣಗಳಿಂದ. 1988ರಲ್ಲಿ ಆಪರೇಷನ್‌ ಬ್ಲೂ ಸ್ಟಾರ್‌ ನಂತರ ಮರಳಿ ಖಾಲಿಸ್ತಾನಿ ಉಗ್ರರು ಸ್ವರ್ಣಮಂದಿರ ಪ್ರವೇಶಿಸಿ ಕುಳಿತಿದ್ದರು. ಆದರೆ ಎಷ್ಟುಜನ ಇದ್ದಾರೆ ಎಂಬ ಖಚಿತ ಮಾಹಿತಿ ನಮ್ಮ ಸೇನೆಯ ಬಳಿ ಇರಲಿಲ್ಲ. ಆಗ ಒಬ್ಬ ಸಿಖ್‌ ರಿಕ್ಷಾ ಚಾಲಕನಾಗಿ ಕಾಣಿಸಿಕೊಂಡ ಅಜಿತ್‌, ಸ್ವರ್ಣಮಂದಿರದಲ್ಲಿ ಓಡಾಡಿ ಮಾಹಿತಿ ಸಂಗ್ರಹಿಸಿ ಕಳುಹಿಸತೊಡಗಿದರು. ಕೇವಲ 40 ಉಗ್ರರಿದ್ದಾರೆ, ಒಳಪ್ರವೇಶಿಸಬಹುದು ಎಂದು ಲೆಕ್ಕ ಹಾಕುತ್ತಿದ್ದ ಸೇನಾ ಕಮಾಂಡರ್‌ಗಳಿಗೆ, 250ಕ್ಕೂ ಹೆಚ್ಚು ಜನರಿದ್ದಾರೆ ಎಂದು ಹೇಳಿ, ದಾಳಿ ನಡೆಸುವುದು ಬೇಡವೆಂದು ಸಲಹೆ ನೀಡಿದ ದೋವಲ್, ಆ ಸ್ಥಳಕ್ಕೆ ನೀರು ಮತ್ತು ಆಹಾರ ಪೂರೈಕೆ ನಿಲ್ಲಿಸಲು ಹೇಳಿದರಂತೆ. ನಂತರ ರಿಕ್ಷಾ ಚಾಲಕನಾಗಿ ಉಗ್ರರನ್ನು ಭೇಟಿಯಾಗಿ, ತಾನೊಬ್ಬ ಪಾಕಿಸ್ತಾನಿ ಏಜೆಂಟ್‌ ಎಂದು ನಂಬಿಸುವಲ್ಲಿ ಯಶಸ್ವಿಯಾದ ಅಜಿತ್‌, ಗಡಿ ದಾಟಿಸಿ ಕರೆದುಕೊಂಡು ಹೋಗುವುದಾಗಿ ಪುಸಲಾಯಿಸುತ್ತಲೇ ಶರಣಾಗತಿಗೆ ತಯಾರಿಸಿದರಂತೆ. ಒಂದು ಗುಂಡು ಕೂಡ ಹಾರಿಸದೆ ನಿರ್ವಹಿಸಿದ ‘ಆಪರೇಷನ್‌ ಬ್ಲಾಕ್‌ ಥಂಡರ್‌' ಇದೇ.

ಎರಡನೇ ಘಟನೆ, ಪಾಕಿಸ್ತಾನದಲ್ಲಿ ಏಳು ವರ್ಷಗಳ ಕಾಲ ಲಾಹೋರ್‌, ಕರಾಚಿ ಪೇಶಾವರ್‌ಗಳಲ್ಲಿ ಮುಸ್ಲಿಮನಾಗಿ ದೋವಲ್ ವೇಷ ಮರೆಸಿಕೊಂಡು ಇದ್ದದ್ದು. ಭಾರತದ ಮೋಸ್ಟ್‌ ವಾಂಟೆಡ್‌ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನನ್ನು ಸೆರೆಹಿಡಿದು ಕರೆದುಕೊಂಡು ಬರುವ ಕಾರ್ಯಾಚರಣೆ ನಡೆಸಲು ಅಜಿತ್‌ ಪಾಕ್‌ನಲ್ಲಿದ್ದರು. ಒಮ್ಮೆ, ಅಜಿತ್‌ ಮುಸ್ಲಿಂ ವೇಷ ಧರಿಸಿ ಲಾಹೋರ್‌ನ ಮಸೀದಿ ಎದುರು ಕುಳಿತಿದ್ದಾಗ, ವೃದ್ಧನೊಬ್ಬ ಕರೆದು, ‘‘ನೀನು ಹಿಂದೂ ಅಲ್ಲವೇ?'' ಎಂದು ಕೇಳಿದನಂತೆ. ಅಜಿತ್‌ರಿಗೆ ಭೂಮಿ ಬಿರಿದ ಅನುಭವ. ತನ್ನ ಮನೆಗೆ ಕರೆದುಕೊಂಡು ಹೋದ ವೃದ್ಧ, ‘‘ನಿನ್ನ ಕಿವಿಯಲ್ಲಿ ರಂಧ್ರವಿದೆ, ನೀನು ಹಿಂದೂ. ಮುಸ್ಲಿಮರಲ್ಲಿ ಈ ಪದ್ಧತಿ ಇಲ್ಲ,'' ಎಂದು ಹೇಳಿದನಂತೆ. ಹೀಗಾಗಿ ವಾಪಸು ಭಾರತಕ್ಕೆ ಮರಳಿದಾಗ ದೋವಲ್ ಮಾಡಿದ ಮೊದಲ ಕೆಲಸ, ಕಿವಿಯ ರಂಧ್ರವನ್ನು ಪ್ಲಾಸ್ಟಿಕ್‌ ಸರ್ಜರಿ ಮೂಲಕ ಮುಚ್ಚಿಸಿಕೊಂಡಿದ್ದು.

ನಂತರ 2005ರಲ್ಲಿ ಭಾರತೀಯ ಬೇಹುಗಾರಿಕಾ ದಳದ ನಿರ್ದೇಶಕನಾಗಿ ನಿವೃತ್ತರಾದ ದೋವಲ್, ನಂತರ ಆರ್‌ಎಸ್‌ಎಸ್‌ ವಿಚಾರಧಾರೆ ಒಪ್ಪುವ ಕೆಲ ಚಿಂತಕರ ಜೊತೆ ಸೇರಿಕೊಂಡು ವಿವೇಕಾನಂದ ಫೌಂಡೇಶನ್‌ ಎಂಬ ಥಿಂಕ್‌ ಟ್ಯಾಂಕ್‌ ಸ್ಥಾಪಿಸಿದರು. ಪಾಕಿಸ್ತಾನ ಮತ್ತು ಉಗ್ರರ ಬಗೆಗಿನ ಸ್ಪಷ್ಟಖಚಿತ ಕಠಿಣ ನೀತಿಯಿಂದಾಗಿ ಮೊದಲಿನಿಂದಲೂ ಸಹಜವಾಗಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಾಯಕರ ಜೊತೆ ಆತ್ಮೀಯತೆ ಹೊಂದಿದ್ದ ದೋವಲ್, ನಿವೃತ್ತರಾದ ನಂತರ ಬಿಜೆಪಿ ಆಡಳಿತವಿದ್ದ ಹಲವು ರಾಜ್ಯಗಳ ಭದ್ರತಾ ಸಲಹೆಗಾರರಾಗಿ ಕೂಡ ಕೆಲಸ ಮಾಡಿದ್ದಾರೆ. 1996ರಲ್ಲಿ ಎನ್‌ಡಿಎ ಸರ್ಕಾರ ಬಂದಾಗ ಗೃಹಸಚಿವರಾಗಿದ್ದ ಎಲ್‌ ಕೆ ಆಡ್ವಾಣಿ ಅವರಿಗೆ, ಉಗ್ರರನ್ನು ಸದೆಬಡಿಯಲು ಪೋಟಾ ಕಾಯ್ದೆ ಜಾರಿಗೆ ತರುವಂತೆ ಮನವರಿಕೆ ಮಾಡಿಕೊಟ್ಟಿದ್ದೇ ದೋವಲ್ ಎನ್ನಲಾಗುತ್ತದೆ. ಅಷ್ಟೇ ಅಲ್ಲ, ಗುಜರಾತ್‌ನಲ್ಲಿ ಉಗ್ರರನ್ನು ಹತ್ಯೆಗೈಯುವ ಸರಣಿ ಎನ್‌ಕೌಂಟರ್‌ಗಳ ಹಿಂದೆಯೂ ದೋವಲ್ ಸಲಹೆ ಕೆಲಸ ಮಾಡಿತ್ತಂತೆ. ಆಗ ದೋವಲ್, ಕೇಂದ್ರ ಬೇಹುಗಾರಿಕಾ ದಳದ ಮುಖ್ಯಸ್ಥರಾಗಿದ್ದರು.

ಇಂಥ ಪ್ರಖರ ಚಿಂತನೆಯ ದೋವಲ್, ಸಹಜವಾಗಿ ನರೇಂದ್ರ ಮೋದಿಗೂ ಆತ್ಮೀಯರಾಗಿದ್ದರು. ಹೀಗಾಗಿ 2014ರ ಮೇ 16ರಂದು ಲೋಕಸಭಾ ಚುನಾವಣೆ ಗೆದ್ದ ತಕ್ಷಣ ಮೋದಿ ಕರೆಸಿಕೊಂಡ ಮೊದಲ ಅಧಿಕಾರಿ ಇದೇ ದೋವಲ್. ಆಗ ಮೇ 26ರಂದು ನಡೆದ ಮೋದಿ ಸಂಪುಟದ ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಸೇರಿದಂತೆ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರನ್ನು ಆಹ್ವಾನಿಸಿ ವಿಶ್ವಕ್ಕೆ ಸಂದೇಶ ನೀಡುವ ಸಲಹೆ ನೀಡಿದ್ದೇ ದೋವಲ್. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ವಿದೇಶಾಂಗ ನೀತಿ ಕುರಿತಾಗಿ ನಡೆದ ಮೊದಲ ಸಭೆಯಲ್ಲಿ ಅಜಿತ್‌ ಸ್ಪಷ್ಟಶಬ್ದಗಳಲ್ಲಿ, ‘‘ಶತ್ರುರಾಷ್ಟ್ರ ಸತತವಾಗಿ ನಮ್ಮ ರಕ್ತ ಸುರಿಸುತ್ತಿರುವಾಗ ಒಂದೋ ನಾವು ರಕ್ಷಣಾತ್ಮಕವಾಗಿ ಹೆಜ್ಜೆ ಇಡಬೇಕು, ಇದನ್ನು ನಾವು ಸ್ವಾತಂತ್ರ್ಯ ಸಿಕ್ಕಾಗಿನಿಂದ ಮಾಡಿದ್ದೇವೆ; ಇಲ್ಲವೇ, ಆಕ್ರಮಣಕಾರಿ ರಕ್ಷಣಾತ್ಮಕ ಹೆಜ್ಜೆ ಇಡಬೇಕು, ಅದು ನಡೆಯದಿದ್ದರೆ ಅಂತಿಮವಾಗಿ ಆಕ್ರಮಣ,'' ಎಂದು ಹೇಳಿದ್ದರಂತೆ. ಹೀಗಾಗಿ, ವಿಶ್ವದ ಇತರ ನಾಯಕರಿಗೆ ತೋರಿಸಲೆಂಬಂತೆ ಪ್ರಮಾಣವಚನ ಕಾರ್ಯಕ್ರಮಕ್ಕೆ ನವಾಜ್‌ ಷರೀಫ್‌ರನ್ನು ಆಹ್ವಾನಿಸಿ, ನಂತರ ದಾಳಿಗಳು ನಿಲ್ಲದೆ ಇದ್ದಾಗಲೂ ಒಲ್ಲದ ಪ್ರಧಾನಿಯನ್ನು ಒಪ್ಪಿಸಿ ಷರೀಫ್‌ ಪುತ್ರಿಯ ಮದುವೆಗೆ ಲಾಹೋರ್‌ಗೆ ಕರೆದುಕೊಂಡು ಹೋದ ದೋವಲ್, ಉರಿ ಘಟನೆ ಆದಾಗ ಮಾತ್ರ, ಇನ್ನು ಆಕ್ರಮಣಕಾರಿ ಹೆಜ್ಜೆ ಇಡಲೇಬೇಕು ಎಂದು ಪ್ರಧಾನಿಗೆ ಸಲಹೆ ನೀಡಿದ್ದರಂತೆ. ಇಂಥದ್ದೊಂದು ಸರ್ಜಿಕಲ್ ದಾಳಿ ಯೋಜಿಸುವ ಹೊಣೆಯನ್ನು ದೋವಲ್'ರಿಗೆ ವಹಿಸಿದ್ದ ಪ್ರಧಾನಿ, ಇದಾದ ನಂತರ ವಿಶ್ವದ ಪ್ರಮುಖ ರಾಷ್ಟ್ರಗಳ ರಾಯಭಾರಿಗಳನ್ನು ಸಮಾಧಾನಪಡಿಸುವ ಹೊಣೆ ವಹಿಸಿದ್ದು ವಿದೇಶಾಂಗ ಕಾರ್ಯದರ್ಶಿ ಎಸ್‌ ಜಯಶಂಕರ್‌ ಅವರಿಗೆ.

2015ರಲ್ಲಿ ಮ್ಯಾನ್ಮಾರ್‌ನಲ್ಲಿ ಪ್ರಾಯೋಗಿಕವಾಗಿ ಸರ್ಜಿಕಲ್ ದಾಳಿಯನ್ನು 40 ನಿಮಿಷಗಳಲ್ಲಿ ಕರಾರುವಾಕ್‌ ಆಗಿ ನಡೆಸಿ ತೋರಿಸಿದ್ದ ದೋವಲ್. ಪಾಕ್‌ನಲ್ಲಿನ ದಾಳಿ ಯೋಜನೆಯನ್ನು ಕೂಡ ಸೇನೆಯ ಅಧಿಕಾರಿಗಳ ಜೊತೆ ಕುಳಿತು ತಾವೇ ತಯಾರಿಸಿದ್ದರಂತೆ. ಮೂರು ದಿನ ಹಗಲೂ ರಾತ್ರಿ ಮಿಲಿಟರಿ ಕಂಟ್ರೋಲ್ ರೂಮ್'ನಲ್ಲಿ ಕುಳಿತು, ಒಂದು ಕೈಯಲ್ಲಿ ನಕಾಶೆ-ಇನ್ನೊಂದು ಕೈಯಲ್ಲಿ ಸಿಗರೇಟ್‌ ಹಿಡಿದು ಬೆಳಗಿನ ಜಾವ 4.32ಕ್ಕೆ ಪ್ರಧಾನಿಗೆ ಮಾಡಿದ ಕರೆಯು ಶಾಶ್ವತವಾಗಿ ನಮ್ಮ ವಿದೇಶಾಂಗ ನೀತಿಯ ಮಗ್ಗುಲನ್ನೇ ಬದಲಾಯಿಸಿದೆ ಎಂಬುದು ಸತ್ಯ.

ಕೃಪೆ: ಕನ್ನಡಪ್ರಭ

click me!