ವಿದ್ಯಾರ್ಥಿಗಳಲ್ಲೇ ಹೆಚ್ಚು ಮಾದಕ ವ್ಯಸನ : ಪತ್ತೆ ಹೇಗೆ..?

By Web DeskFirst Published Aug 12, 2018, 7:38 AM IST
Highlights

ಮಾರಕ ಮಾದಕ ದ್ರವ್ಯದ ಚಟ ರಾಜ್ಯದಲ್ಲಿ ಯಾವ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದರೆ, ರಾಜ್ಯದಲ್ಲಿ ಮದ್ಯ ಹಾಗೂ ಮಾದಕ ವಸ್ತು ಸೇವನೆಯ ಚಟಕ್ಕೆ ಸಿಲುಕಿರುವವರ ಪೈಕಿ ಶೇ.21.6 ರಷ್ಟುಮಂದಿ ಯುವಕರು ಹಾಗೂ ವಿದ್ಯಾರ್ಥಿಗಳಾಗಿದ್ದಾರೆ.

ಬೆಂಗಳೂರು :  ಮಾರಕ ಮಾದಕ ದ್ರವ್ಯದ ಚಟ ರಾಜ್ಯದಲ್ಲಿ ಯಾವ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದರೆ, ರಾಜ್ಯದಲ್ಲಿ ಮದ್ಯ ಹಾಗೂ ಮಾದಕ ವಸ್ತು ಸೇವನೆಯ ಚಟಕ್ಕೆ ಸಿಲುಕಿರುವವರ ಪೈಕಿ ಶೇ.21.6 ರಷ್ಟುಮಂದಿ ಯುವಕರು ಹಾಗೂ ವಿದ್ಯಾರ್ಥಿಗಳಾಗಿದ್ದಾರೆ.

ಹಾಗಂತ ಹೇಳುತ್ತಿದೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಮಾದಕ ವಸ್ತು ಸೇವನೆ ಹಾವಳಿ ಕುರಿತು ನಡೆಸಿರುವ ಸಮೀಕ್ಷೆ. ಆದರೆ, ಈ ಸಮೀಕ್ಷೆ ಈಗಾಗಲೇ ಕಂಡುಕೊಂಡಿರುವ ಅಂಶಗಳು ನಿಜಕ್ಕೂ ಗಾಬರಿ ಬೀಳಿಸುವಂತಿವೆ. ಕಳೆದ ಎರಡು ವರ್ಷಗಳ ಹಿಂದೆ ದೇಶದ ಎಲ್ಲಾ ರಾಜ್ಯಗಳಲ್ಲಿ ನಡೆಸಲಾಗಿರುವ ಸಮೀಕ್ಷೆಯಲ್ಲಿ ಈ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ರಾಜ್ಯದ ಶೇ.21ರಷ್ಟುಯುವಕರು ಮದ್ಯಪಾನದಂತಹ ವ್ಯಸನಕ್ಕೆ ಸಿಲುಕಿದ್ದಾರೆ, ಶೇ 0.6ರಷ್ಟುಮಂದಿ ಮಾದಕ ದ್ರವ್ಯ ವ್ಯಸನಕ್ಕೆ ಒಳಗಾಗಿದ್ದಾರೆ ಎಂಬುದು ಈ ಸಮೀಕ್ಷೆಯಿಂದ ಗೊತ್ತಾಗಿದೆ. ತೃಪ್ತಿಪಟ್ಟುಕೊಳ್ಳಬೇಕಾದ ವಿಚಾರ ಎಂದರೆ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿನ ಪ್ರಮಾಣ ಕಡಿಮೆಯೇ ಇದೆ. ಈಶಾನ್ಯ ರಾಜ್ಯಗಳಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಿದೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಮಾದಕ ವ್ಯಸನಕ್ಕೆ ಸಿಲುಕುವವರ ಸರಾಸರಿ ವಯಸ್ಸು 12 ವರ್ಷದಿಂದ 19 ವರ್ಷವಾಗಿದ್ದು, ಬಹುತೇಕರು ಕಾಲೇಜು ವಿದ್ಯಾರ್ಥಿಗಳು. ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ತನ್ನ ಬೇರು ಗಟ್ಟಿಪಡಿಸಿಕೊಳ್ಳುತ್ತಿರುವ ಡ್ರಗ್ಸ್‌ ಮಾಫಿಯಾಗೆ ಕಾಲೇಜು ಯುವಕರೇ ಮುಖ್ಯ ಗುರಿಯಾಗಿರುವುದು ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಪೋಷಕರಿಂದ ದೂರವಿರುವ ಹಾಗೂ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಯುವಕರು ಬೇಗ ಈ ಚಟದತ್ತ ಆಕರ್ಷಿತರಾಗುತ್ತಾರೆ.

ವಿದ್ಯೆ ಅರಸಿ ದೂರದ ನಗರಗಳಿಗೆ ಬರುವ ಯುವಕರು ಬೇಗ ಚಟಕ್ಕೆ ಒಳಗಾಗುತ್ತಿದ್ದಾರೆ. ಈ ಚಟವನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ, ಆಪ್ತ ಸಮಾಲೋಚನೆ ಹಾಗೂ ಸೂಕ್ತ ಚಿಕಿತ್ಸೆ ನೀಡದಿದ್ದರೆ ಪ್ರಾಣಕ್ಕೇ ಕುತ್ತು ತರಬಹುದು. ಇದಕ್ಕಿರುವ ಚಿಕಿತ್ಸೆಗಳೆಲ್ಲಾ ನೆಪ ಮಾತ್ರವಾಗಿದ್ದು, ವ್ಯಸನಿ ಮನಸ್ಸು ಮಾಡದ ಹೊರತು ಚಟ ಹೋಗುವುದಿಲ್ಲ. ಒಮ್ಮೆ ಚಟ ಅಂಟಿಕೊಂಡರೆ ಸುಲಭವಾಗಿ ಪಾರಾಗಲು ಸಾಧ್ಯವಿಲ್ಲ.

ವ್ಯಸನ ಪತ್ತೆ ಹೇಗೆ?:

ನಿಮ್ಹಾನ್ಸ್‌ ನಿರ್ದೇಶಕ ಪ್ರೊ.ಬಿ.ಎನ್‌.ಗಂಗಾಧರ್‌ ಅವರ ಪ್ರಕಾರ, ಮಾದಕ ದ್ರವ್ಯ ಒಂದು ರೀತಿ ‘ಸ್ಲೋ ಪಾಯಿಸನ್‌’ ಇದ್ದಂತೆ. ಮಾದಕ ವ್ಯಸನಕ್ಕೆ ಒಳಗಾಗಿರುವ ವ್ಯಕ್ತಿಯು ಸದಾ ಮನೆಯ ಸದಸ್ಯರಿಂದ ದೂರವಿದ್ದು ಕೊಠಡಿಯಲ್ಲಿ ಏಕಾಂತವಾಗಿರಲು ಬಯಸುತ್ತಾನೆ. ಜತೆಗೆ ಸದಾ ತುಂಬು ತೋಳಿನ ಉಡುಪು ಮಾತ್ರ ಧರಿಸಲು ಯತ್ನಿಸುತ್ತಾನೆ. ಮನೆಯಲ್ಲಿ ವ್ಯಕ್ತಿ ವಾಸವಿರುವ ಕೊಠಡಿಯ ಅಲ್ಮೇರಾ ಹಾಗೂ ಕೊಠಡಿಯ ಬಾಗಿಲುಗಳು ಸದಾ ಬಿಗಿಯಾಗಿ ಮುಚ್ಚಿದ ಸ್ಥಿತಿಯಲ್ಲೇ ಕಂಡುಬರುತ್ತವೆ. ವ್ಯಸನಿಯನ್ನು ಹುಡುಕಿಕೊಂಡು ಯಾವ ಸ್ನೇಹಿತರೂ ಮನೆಗೆ ಬರುವುದಿಲ್ಲ. ಕಾರಣ ವ್ಯಸನಿಯು ಹೊರಗಡೆ ಚಟವಿರುವವರೊಂದಿಗೆ ಮಾತ್ರ ಬೆರೆಯುತ್ತಿರುತ್ತಾನೆ. ಬೆರಳೆಣಿಕೆಯಷ್ಟುಸ್ನೇಹಿತರನ್ನು ಮಾತ್ರ ಹೊಂದಿರುತ್ತಾನೆ. ಡ್ರಗ್ಸ್‌ ಸಿಗದಿದ್ದಾಗ ತೀರಾ ಸಿಟ್ಟಿನ ವರ್ತನೆ ತೋರುತ್ತಾನೆ. ಇಂತಹ ಲಕ್ಷಣಗಳು ಕಂಡು ಬಂದರೆ ಕೂಡಲೇ ಎಚ್ಚರಿಕೆ ವಹಿಸಿ ಆಪ್ತ ಸಮಾಲೋಚನಾ ಕೇಂದ್ರಕ್ಕೆ ಕರೆದುಕೊಂಡು ಹೋಗಬೇಕು ಎಂದು ಮನೋವೈದ್ಯರು ಹೇಳುತ್ತಾರೆ.

ವಿದ್ಯಾರ್ಥಿಗಳ ಮೇಲೆ ಪೋಷಕರು ಸಂಪೂರ್ಣ ನಿಗಾ ವಹಿಸಿರಬೇಕು. ಮಗ ಅಥವಾ ಮಗಳ ವರ್ತನೆಯಲ್ಲಿ ಯಾವುದೇ ಬದಲಾವಣೆಯಾದರೆ ಕೂಡಲೇ ಲಕ್ಷ್ಯ ವಹಿಸಬೇಕು. ವೈದ್ಯರನ್ನು ಸಂಪರ್ಕಿಸಬೇಕು. ಹಾಗಾಂತ ಎಲ್ಲಾ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಮಕ್ಕಳ ಮೇಲೆ ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಎನ್ನುತ್ತಾರೆ ಪ್ರೊ.ಬಿ.ಎನ್‌.ಗಂಗಾಧರ್‌.

ಚಟದಿಂದ ಮುಕ್ತಿ ಕಷ್ಟಸಾಧ್ಯ:

ವ್ಯಕ್ತಿಯು ಒಮ್ಮೆ ಚಟಕ್ಕೆ ಅಂಟಿಕೊಂಡರೆ ಸುಲಭವಾಗಿ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುವ ವ್ಯಸನವು ಪ್ರಾಣಕ್ಕೂ ಸಂಚಕಾರಿ ಎಂಬುದನ್ನು ಅರಿಯುವ ವೇಳೆಗೆ ಅಪಾಯದ ಮಟ್ಟಮೀರಿರುತ್ತದೆ. ಕೆಲವು ಮಾದಕ ದ್ರವ್ಯಗಳು ತೀವ್ರ ಹಾನಿಕಾರಿಯಾಗಿದ್ದು, ಅವುಗಳ ಸೇವನೆಯಿಂದ ದೇಹದ ಅಂಗಾಂಗಗಳಿಗೆ ಹಾನಿಯುಂಟಾಗುತ್ತದೆ. ಹೆರಾಯಿನ್‌ ಮತ್ತು ಮೆತಾಂಪೆಟಮಿನ್‌ನಂತಹ ಮಾದಕ ವಸ್ತುಗಳು ದೈಹಿಕ ಹಾನಿಯನ್ನು ಕೂಡ ಉಂಟು ಮಾಡುತ್ತದೆ ಎನ್ನುತ್ತಾರೆ ಮನೋರೋಗ ವೈದ್ಯರೊಬ್ಬರು.


ವರ್ಷದಿಂದ ವರ್ಷಕ್ಕೆ ಪ್ರಕರಣ ಹೆಚ್ಚಳ

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಮಾದಕ ವಸ್ತುವಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಏರಿಕೆಯಾಗಿದೆ. 2014ರಲ್ಲಿ 283, 2015ರಲ್ಲಿ 353, 2016ರಲ್ಲಿ 655, 2017ರಲ್ಲಿ 1127, 2108ರ ಜೂನ್‌ವರೆಗೆ 352 ಪ್ರಕರಣಗಳು ದಾಖಲಾಗಿದ್ದು, ವರ್ಷದಿಂದ ವರ್ಷಕ್ಕೆ ಸೇವನೆ ಪ್ರಮಾಣ ಹೆಚ್ಚಾಗುತ್ತಿರುವುದನ್ನು ಸಾಕ್ಷೀಕರಿಸುತ್ತದೆ. ಅಲ್ಲದೆ, ಮಾದಕ ವಸ್ತುಗಳ ಜಪ್ತಿ ಪ್ರಮಾಣ ಕೂಡ ಹೆಚ್ಚಾಗಿದೆ.

 

ಪ್ರಸ್ತುತ ದಿನಗಳಲ್ಲಿ ಮಾದಕ ವಸ್ತುಗಳ ಸುಲಭವಾಗಿ ಸಿಗುತ್ತಿವೆ. ಪೋಷಕರು ಮಕ್ಕಳ ಬಗ್ಗೆ ನಿಗಾ ವಹಿಸಿರಬೇಕು. ಡ್ರಗ್ಸ್‌ ತೆಗೆದುಕೊಳ್ಳುವ ಯುವಕರ ನಡವಳಿಕೆಯಲ್ಲಿ ಗಮನಾರ್ಹ ಬಲಾವಣೆ ಇರುತ್ತದೆ. ಹದಿಹರೆಯದ ಯವಕರು ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ಪೋಷಕರು ಎಚ್ಚರದಿಂದಿರಬೇಕು.

ಪ್ರೊ.ಬಿ.ಎನ್‌.ಗಂಗಾಧರ್‌, ನಿರ್ದೇಶಕ, ನಿಮ್ಹಾನ್ಸ್‌

 

ಶಾಲಾ-ಕಾಲೇಜುಗಳಿಗೆ ತೆರಳಿ ನಿರಂತರವಾಗಿ ಈ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತದೆ. ಆರೋಗ್ಯ ಇಲಾಖೆಯಿಂದ ಆಗಿಂದಾಗ್ಗೆ ಕಾರ್ಯಾಗಾರ ನಡೆಸಲಾಗುತ್ತಿದೆ. ಮೂಲದಲ್ಲೇ ಯುವಕರು ವ್ಯಸನಿಗಳಾಗುವುದನ್ನು ಪತ್ತೆ ಹಚ್ಚಬೇಕು.

- ಡಾ.ಪ್ರತಿಮಾ ಮೂರ್ತಿ, ಪ್ರಾಧ್ಯಾಪಕರು, ಮಾನಸಿಕ ಮತ್ತು ವ್ಯಸನ ಮುಕ್ತ ವೈದ್ಯಕೀಯ ಶಾಸ್ತ್ರ, ನಿಮ್ಹಾನ್ಸ್‌

ಎನ್‌. ಲಕ್ಷ್ಮಣ್‌

click me!