ಸ್ಮಶಾನದಲ್ಲೇ ವನಜಾರ ನಿತ್ಯಕಾಯಕ : ಸಾರ್ಥಕ ಸಾಧಕಿಗೆ ಪ್ರಶಸ್ತಿಯ ಗರಿ

Published : Apr 29, 2017, 12:12 PM ISTUpdated : Apr 11, 2018, 12:49 PM IST
ಸ್ಮಶಾನದಲ್ಲೇ ವನಜಾರ ನಿತ್ಯಕಾಯಕ : ಸಾರ್ಥಕ ಸಾಧಕಿಗೆ ಪ್ರಶಸ್ತಿಯ ಗರಿ

ಸಾರಾಂಶ

ಕಳೆದ ಮೂರು ದಶಕಗಳಲ್ಲಿ 40 ಸಾವಿರಕ್ಕೂ ಅಧಿಕ ದೇಹಗಳ ಇಹಲೋಕ ಪ್ರಯಾಣದ ಚರಮಗೀತೆಗೆ ಈಕೆ ಸಾಕ್ಷಿಯಾಗಿದ್ದಾರೆ. ಹೆಸರು ವನಜಮ್ಮ, ಸ್ಮಶಾನ ಕಾವಲು ಮತ್ತು ಹೆಣ ಸುಡುವುದು ಈಕೆಯ ವೃತ್ತಿ. ಪತಿ ಸತ್ತಾಗ ಆತ ಮಾಡುತ್ತಿದ್ದ ಕಾಯಕವನ್ನು ಹೊಟ್ಟೆಪಾಡಿಗೆ ವನಜಮ್ಮ ಆರಿಸಿಕೊಂಡರು. ಬಂಧುಗಳು ಮೂದಲಿಸಿದಾಗ ಮನಸೊಳಗೇ ನಕ್ಕರು. ಯಾಕಂದ್ರೆ ಈ ಸ್ಮಶಾನವನ್ನು ಈಕೆ ಮುಕ್ತಿಧಾಮ ಅಂತ ನಂಬಿದವರು.

ಹೆಣ ಸುಡುವಾಗ ಹೆಣ್ಮಕ್ಕಳು ಸ್ಮಶಾನಕ್ಕೆ ಹೋಗುವ ಪರಿಪಾಠ ಈಗಲೂ ಇಲ್ಲ. ಆದರೆ ನಾವು ನೀವು ಊಹಿಸದ ಕಾಲ ಘಟ್ಟದಲ್ಲಿ ಈ ದಿಟ್ಟ ಮಹಿಳೆ ಸ್ಮಶಾನವನ್ನೇ ಮನೆ ಮಾಡಿಕೊಂಡಿದ್ದರು. ಹೆಣ್ಣು ಕೋಮಲೆ, ಆಕೆ ಹೆಣದ ಬಳಿ ಹೋಗಬಾರದು ಅನ್ನೋದು ಜನರ ಮನೋಧರ್ಮ. ಆದರೆ ಚಿತೆಗೆ ಹೆಣವಿಟ್ಟು ತಾನೇ ಅಂತಿಮ ಸಂಸ್ಕಾರ ನಡೆಸುವ ದಿಟ್ಟ ಮಹಿಳೆ ಉಡುಪಿಯ ವನಜಮ್ಮ. ಒಂದರ್ಥದಲ್ಲಿ ಈಕೆ ಬೀಡಿನಗುಡ್ಡೆಯ ಸ್ಮಶಾನದುರ್ಗೆ ಅಂದರೂ ತಪ್ಪಲ್ಲ.

ಸ್ಮಶಾನ ಅಂದೊಡನೆ ಒಂದು ಭಯಾನಕ ಚಿತ್ರಣ ಮನಸಿಗೆ ಮೂಡುತ್ತೆ. ಸುಡುವ ಹೆಣ, ಬಂಧುಗಳ ಕಣ್ಣೀರು, ಅಗಲುವಿಕೆಯ ನೋವು ತಾಪಗಳಿಂದ ಅಲ್ಲಿಗೆ ಹೋಗಲು ಎಂಥಾ ಗಟ್ಟಿಗರೂ ಭಯಬೀಳುತ್ತಾರೆ. ಶುಭ-ಅಶುಭಗಳ ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ಆದರೆ ಇಲ್ಲೊಬ್ಬ ಗಟ್ಟಿಗಿತ್ತಿ ನೋಡಿ.ತನ್ನ ಕೈಯ್ಯಾರೆ ಹೆಣಕ್ಕೆ ಬೆಂಕಿಯಿಟ್ಟು ದೇಹ ಬೂದಿಯಾಗುವವರೆಗೂ ಕಾವಲು ಕಾಯುತ್ತಾರೆ. ಭೂತಪ್ರೇತ-ಭಯಭೀತಿ ಯಾವ ಹಂಗೂ ಇವಳಿಗಿಲ್ಲ. ಈಕೆಯ ಜೀವನದಲ್ಲಿ ಕಷ್ಟಗಳು ಬಂದಾಗ ಕಷ್ಟ ಈಕೆಯ ಕೈ ಹಿಡಿಯಿತು. ಕಳೆದ ಮೂರು ದಶಕಗಳಲ್ಲಿ 40 ಸಾವಿರಕ್ಕೂ ಅಧಿಕ ದೇಹಗಳ ಇಹಲೋಕ ಪ್ರಯಾಣದ ಚರಮಗೀತೆಗೆ ಈಕೆ ಸಾಕ್ಷಿಯಾಗಿದ್ದಾರೆ. ಹೆಸರು ವನಜಮ್ಮ, ಸ್ಮಶಾನ ಕಾವಲು ಮತ್ತು ಹೆಣ ಸುಡುವುದು ಈಕೆಯ ವೃತ್ತಿ. ಪತಿ ಸತ್ತಾಗ ಆತ ಮಾಡುತ್ತಿದ್ದ ಕಾಯಕವನ್ನು ಹೊಟ್ಟೆಪಾಡಿಗೆ ವನಜಮ್ಮ ಆರಿಸಿಕೊಂಡರು. ಬಂಧುಗಳು ಮೂದಲಿಸಿದಾಗ ಮನಸೊಳಗೇ ನಕ್ಕರು. ಯಾಕಂದ್ರೆ ಈ ಸ್ಮಶಾನವನ್ನು ಈಕೆ ಮುಕ್ತಿಧಾಮ ಅಂತ ನಂಬಿದವರು.

ಉಡುಪಿ ಜಿಲ್ಲೆಯ ಬೀಡಿನಗುಡ್ಡೆ ಸ್ಮಶಾನದಲ್ಲೇ ಅತೀಹೆಚ್ಚು ಹೆಣಗಳ ಅಂತಿಮ ಸಂಸ್ಕಾರ ನಡೆಯೋದು. ಅದಕ್ಕೆ ಕಾರಣ ವನಜಮ್ಮನ ಸೇವೆ. ಹೊಟ್ಟೆಪಾಡಿಗೆ ಆರಂಭಿಸಿದ ಈ ಉದ್ಯೋಗ ಈಕೆಗೆ ಜೀವನದ ಸತ್ಯಗಳನ್ನು ದರ್ಶಿಸಿದೆ. ಹೋಗುವಾಗ ಮನುಷ್ಯ ಏಕಾಂಗಿ ಅನ್ನೋದರ ಅರಿವಿದೆ. ಹಾಗಾಗಿ ಈಕೆ ಕಠಿಣ ಹೃದಯಿ. ಯಾವ ಸಾವುಗಳೂ ಈಕೆಯನ್ನು ಬಾಧಿಸುವುದಿಲ್ಲ. ದಿನಂಪ್ರತಿ ಏನಿಲ್ಲ ಅಂದ್ರೂ ಮೂರ್ನಾಲ್ಕು ಹೆಣಗಳು  ವನಜಮ್ಮನ ಕೈಯ್ಯಲ್ಲಿ ಅಂತಿಮಯಾತ್ರೆ ಆರಂಭಿಸ್ತವೆ. ಸುಟ್ಟ ಹೆಣಗಳಿಗೆ ಲೆಕ್ಕ ಇಟ್ಟವರಿಲ್ಲ ಆದರೂ ಸುಮಾರು 40 ಸಾವಿರ ಹೆಣಗಳ ದಫನ ಮಾಡಿದರೆ, ಹೂತ ಹೆಣಗಳೆಷ್ಟೋ ಮರೆತೇ ಹೋಗಿದೆ. ನೊಂದ ಬರುವ ಬಂಧುಗಳಿಗೆ ಸಾಂತ್ವನ ಹೇಳುವುದು, ನೋವು ಮರೆಸುವ ಹಿತವಾದ ಮಾತುಗಳನ್ನಾಡಿ ಧೈರ್ಯ ತುಂಬುದು, ಹೀಗೆ ಈ ಸ್ಮಶಾನ ನಿಜಾರ್ಥದಲ್ಲಿ ಮುಕ್ತಿಧಾಮ ಆಗೋದಕ್ಕೆ ವನಜಮ್ಮನೇ ಕಾರಣ.

ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಮಲತಾಯಿಯಿಂದ ಸಂಕಟ ಅನುಭವಿಸಿದ್ದ ವನಜ ಅವರಿಗೆ, ಮದುವೆಯ ನಂತರವೂ ಜೀವನ ಬಹಳ ಕಷ್ಟದ ಹಾದಿಯಾಗಿತ್ತು. ಆದರೂ ಎದೆಗುಂದದೇ ಇದುವರೆಗೆ ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಅತ್ಯಂತ ಸಹನೆ, ನಿಷ್ಟೆಯಿಂದ ಈ ಉದ್ಯೋಗ ನಡೆಸಿಕೊಂಡು ಬಂದಿದ್ದಾರೆ.ಈ ಸ್ಮಶಾನದಲ್ಲಿ 3 ಚಿತಾಗಾರಗಳಿವೆ, ಪ್ರತಿದಿನ 3 - 4 ಹೆಣಗಳು ಬರುತ್ತವೆ, ಒಂದೊಂದು ದಿನ ಏಕಕಾಲದಲ್ಲಿ 6 ಹೆಣಗಳನ್ನು ಸುಟ್ಟದ್ದೂ ಇದೆ.ಇದೇ ಉದ್ಯೋಗದ ಸಂಪಾದನೆಯಿಂದಲೇ ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಿಸಿದ್ದಾರೆ, ಮಗನನ್ನು ಓದಿಸಿ, ಆತ ಈಗ ಉದ್ಯೋಗದಲ್ಲಿದ್ದಾನೆ. ಇಂಥಾ ವನಜಮ್ಮ ಇದೀಗ ಸುವರ್ಣ ನ್ಯೂಸ್ ಮಹಿಳಾ ಸಾಧಕಿಯಾಗಿ ಸಾಮಾಜಿಕ ಸೇವಾ ವಿಭಾಗದಿಂದ ಆಯ್ಕೆಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

70ರ ಹರೆಯದಲ್ಲಿ ಸಿಕ್ಕಿಂ ಸುಂದರಿಗೆ ಮನಸೋತ ಆನಂದ್ ಮಹೀಂದ್ರ,ಅವಳಂದಕ್ಕೆ ಕಳೆದುಹೋಗ್ತೀರಿ
ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌