ಲೋಕಸಭೆ ಚುನಾವಣೆ ಪ್ರಯುಕ್ತ ಫೋನ್-ಇನ್ ಕಾರ್ಯಕ್ರಮ ಮುಂದೂಡಿದ ಬೆಂಗಳೂರು ಜಲಮಂಡಳಿ

By Sathish Kumar KHFirst Published Apr 24, 2024, 7:19 PM IST
Highlights

ಬೆಂಗಳೂರಿನಲ್ಲಿ ಏ.26ರಂದು ಲೋಕಸಭಾ ಚುನಾವಣೆ ಪ್ರಯುಕ್ತ ಬೆಂಗಳೂರು ಜಲಮಂಡಳಿಯಿಂದ ಶುಕ್ರವಾರ ನಡೆಸಲಾಗುತ್ತಿದ್ದ ಫೋನ್-ಇನ್ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಲಾಗಿದೆ.

ಬೆಂಗಳೂರು (ಏ.24): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಏ.26ರ ಶುಕ್ರವಾರ ಲೋಕಸಭಾ ಚುನಾವಣೆಯ ಮತದಾನ ನಡೆಯಲಿರುವುದರಿಂದ ಮತ್ತು ಸರ್ಕಾರಿ ರಜೆ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಫೂನ್ ಇನ್ ಕಾರ್ಯಕ್ರಮವನ್ನು ಮುಂದೂಡಿ ಮೇ 3ರಂದು ಆಯೋಜನೆ ಮಾಡಲಾಗಿದೆ ಎಂದು ಬೆಂಗಳೂರು ಜಲಮಂಡಳಿಯಿಂದ ಪ್ರಕಟಣೆ ತಿಳಿಸಲಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಏ.26ರಂದು ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಸರ್ಕಾರಿ ಹಾಗೂ ಎಲ್ಲ ಖಾಸಗಿ ಕಂಪನಿ ಮತ್ತು ಕಾರ್ಖಾನೆಗಳ ಉದ್ಯೋಗಿ ಮತ್ತು ಕಾರ್ಮಿಕರಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ  ಬೆಂಗಳೂರು ಜಲಮಂಡಳಿ ವತಿಯಿಂದ ಏ.26ರಂದು ಬೆಳಗ್ಗೆ 9:30ರಿಂದ 10:30ರವರೆಗೆ ನಡೆಯಬೇಕಾಗಿದ್ದ ಬೆಂಗಳೂರು ಜಲಮಂಡಳಿ ಅಧ್ಯಕ್ಷರೊಂದಿಗಿನ ಸಾರ್ವಜನಿಕರ ಕುಂದುಕೊರತೆಯ ಫೋನ್-ಇನ್ ಕಾರ್ಯಕ್ರಮ ಮುಂದೂಡಲಾಗಿದೆ.

ಜಲಮಂಡಳಿ ಅಧ್ಯಕ್ಷರೊಂದಿಗೆ ನಡೆಯಬೇಕಿದ್ದ ಫೋನ್ - ಇನ್ ಕಾರ್ಯಕ್ರಮವನ್ನು ಮೇ 03ರಂದು ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ತಮ್ಮ ವಲಯ ಪ್ರದೇಶದಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ/ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ, ಜಲಮಾಪನ ಹಾಗೂ ನೀರಿನ ಬಿಲ್ಲಿನ ಸಮಸ್ಯೆಗಳ ಕುರಿತು ಜಲಮಂಡಳಿಯ ಸಹಾಯವಾಣಿ 1916 ಮೂಲಕವೂ ದೂರು ನೀಡಬಹುದಾಗಿದೆ.

ಬೆಂಗಳೂರು: ಪೀಣ್ಯ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ನೀರಿನ ಸಂಸ್ಕರಣೆಗೆ ಜಪಾನ್ ಟೆಕ್ನಾಲಜಿ ಬಳಕೆ

ಅಧಿಕೃತ ಒಳಚರಂಡಿ ನೀರಿನ ಸಂಪರ್ಕಕ್ಕೆ ಮೇ 7ರೊಳಗೆ ಅರ್ಜಿ ಸಲ್ಲಿಸಿ: ಬೆಂಗಳೂರು ಜಲಮಂಡಳಿ ಕಾಯ್ದೆಯ ಉಲ್ಲಂಘನೆ ಮಾಡಿ ಅನಧಿಕೃತವಾಗಿ ಒಳಚರಂಡಿ ನೀರನ್ನು ಸಂಪರ್ಕ ಪಡೆದಿದ್ದಲ್ಲಿ ಮೇ 7ರೊಳಗಾಗಿ ಅರ್ಜಿ ಸಲ್ಲಿಸಿ ಅಧಿಕೃತ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್‌ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಜಲಮಂಡಳಿ ಕಾಯ್ದೆಯ ಉಲ್ಲಂಘನೆ ಮಾಡಿ ಅನಧಿಕೃತವಾಗಿ ಒಳಚರಂಡಿ ನೀರನ್ನು ಸಂಪರ್ಕ ಪಡೆದಿದ್ದಲ್ಲಿ  ಕೂಡಲೇ ಮೇ 7(07.05.2024) ರೊಳಗಾಗಿ ಬೆಂಗಳೂರು ಜಲಮಂಡಳಿಗೆ ಅರ್ಜಿ ಸಲ್ಲಿಸಿ ಅಂತಹ ಅನಧಿಕೃತ ಸಂಪರ್ಕವನ್ನು ಮಂಡಳಿಯ ನಿಯಮಾನುಸಾರ ಅಧಿಕೃತ ಮಾಡಿಕೊಳ್ಳುವಂತೆ  ತಿಳಿಸಿದ್ದಾರೆ. ಒಂದು ವೇಳೆ ಮೇ 7ರ ನಂತರ ಒಳಚರಂಡಿ ನೀರನ್ನು ಅನಧಿಕೃತವಾಗಿ ಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಅಥವಾ ಮಳೆ ನೀರು ಕಾಲುವೆಗೆ ಹರಿಸುತ್ತಿರುವುದು ಕಂಡುಬಂದಲ್ಲಿ ಅಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964 ಕಲಂ 65 ಮತ್ತು 72 ರನ್ವಯ ಬಿ.ಬಿ.ಎಂ.ಪಿ ವ್ಯಾಪ್ತಿಯ ಬೆಂಗಳೂರು ನಗರದ ನಾಗರೀಕರು ತಮ್ಮ ಕಟ್ಟಡದ ಒಳಚರಂಡಿ ನೀರನ್ನು ಕಡ್ಡಾಯವಾಗಿ ಬೆಂಗಳೂರು ಜಲಮಂಡಳಿಯಿಂದ ನೀರು ಮತ್ತು ಒಳಚರಂಡಿ ಸಂಪರ್ಕವನ್ನು ಪಡೆದು ಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಹರಿಸಬೇಕಾಗಿರುತ್ತದೆ.

ಬೆಂಗಳೂರು: ಯುಗಾದಿ ಹಬ್ಬಕ್ಕೆಂದು ಬೈಕ್‌ ತೊಳೆಯುತ್ತಿದ್ದ ವ್ಯಕ್ತಿಗೆ 5,000 ರೂ. ದಂಡ ಹಾಕಿದ ಜಲಮಂಡಳಿ

ಎಲ್ಲ ಮಾದರಿಯ ದೊಡ್ಡಗಾತ್ರದ ಕಟ್ಟಡದವರು ನಿಯಮಾನುಸಾರ ಎಸ್.ಟಿ.ಪಿ ಅಳವಡಿಸಿಕೊಂಡು ಸಂಸ್ಕರಿಸಿದ ನೀರನ್ನು ತಮ್ಮ ಕಟ್ಟಡದಲ್ಲಿ ಗೃಹ ಬಳಕೆಗೆ ಹೊರತುಪಡಿಸಿ ಇನ್ನಿತರೆ ಅನ್ಯ ಉದ್ದೇಶಗಳಿಗೆ ಬಳಸಬೇಕಾಗಿರುತ್ತದೆ. ಕೆಲವರು ಈ ಕ್ರಮವನ್ನು ಉಲ್ಲಂಘನೆ ಮಾಡಿ ಅನಧಿಕೃತವಾಗಿ ಒಳಚರಂಡಿ ನೀರನ್ನು ಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಹಾಗೂ ಮಳೆ ನೀರು ಕಾಲುವೆಗೆ ಹರಿಸುತ್ತಿರುವುವರ ಬಗ್ಗೆ ಬೆಂಗಳೂರು ಜಲಮಂಡಳಿಯಿಂದ ಸಮೀಕ್ಷೆ ಮಾಡಲಾಗುತ್ತಿದೆ ಎಂದು  ತಿಳಿಸಿದ್ದಾರೆ.

click me!