ಕನ್ನಡ ಚಿತ್ರರಂಗಕ್ಕೆ ಮುಂದಿನ ನಾಯಕ ಯಾರು?

By Web DeskFirst Published Nov 26, 2018, 12:29 PM IST
Highlights

ಚಿತ್ರೋದ್ಯಮಕ್ಕೂ ಒಬ್ಬ ಒಡೆಯ ಬೇಕು.  ಅಣ್ಣಾವ್ರ ನಂತರ ಆ ಕೆಲಸ ಮಾಡಿದ್ದು, ಹಾಗೆಯೇ ಇದ್ದಿದ್ದು ಅಂಬರೀಷ್. ಎಂಥಾ ಸಮಸ್ಯೆ ಬಂದರೂ ತನ್ನ ನೇರವಂತಿಕೆ, ಪ್ರೀತಿ ಮಾತು, ಒಳ್ಳೆಯತನದಿಂದ ಅದನ್ನು ಪರಿಹರಿಸುತ್ತಿದ್ದ ಚಿತ್ರರಂಗದ ಆಪತ್ಬಾಂಧವ ಅಂಬರೀಷ್.ಅವರು ಎಷ್ಟೇ ಒರಟಾಗಿ ಮಾತನಾಡಿದರೂ ಬೈದರೂ ಎಲ್ಲರೂ ಅವರನ್ನು ಪ್ರೀತಿಸುತ್ತಿದ್ದರು. ಆದರೆ ಇದೀಗ ಯಜಮಾನನ್ನು ಕಳೆದುಕೊಂಡು ಸ್ಯಾಂಡಲ್ ವುಡ್ ಅನಾಥವಾಗಿದೆ. 

ಬೆಂಗಳೂರು :  ಅಂಬರೀಷ್ ನಿಧನ ನಂತರ ತೀವ್ರವಾಗಿ ಕಾಡುತ್ತಿರುವ ಪ್ರಶ್ನೆ ಇದು. ಕುಟುಂಬಕ್ಕೊಬ್ಬ ಯಜಮಾನ ಬೇಕು. ಅದೇ ಥರ ಚಿತ್ರೋದ್ಯಮಕ್ಕೂ ಒಬ್ಬ ಒಡೆಯ ಬೇಕು.  ಅಣ್ಣಾವ್ರ ನಂತರ ಆ ಕೆಲಸ ಮಾಡಿದ್ದು, ಹಾಗೆಯೇ ಇದ್ದಿದ್ದು ಅಂಬರೀಷ್. ಎಂಥಾ ಸಮಸ್ಯೆ ಬಂದರೂ ತನ್ನ ನೇರವಂತಿಕೆ, ಪ್ರೀತಿ ಮಾತು, ಒಳ್ಳೆಯತನದಿಂದ ಅದನ್ನು ಪರಿಹರಿಸುತ್ತಿದ್ದ ಚಿತ್ರರಂಗದ ಆಪತ್ಬಾಂಧವ ಅಂಬರೀಷ್. ಅವರು ಎಷ್ಟೇ ಒರಟಾಗಿ ಮಾತನಾಡಿದರೂ ಬೈದರೂ ಎಲ್ಲರೂ ಅವರನ್ನು ಪ್ರೀತಿಸುತ್ತಿದ್ದರು.

ಸಿನಿಮಾದ ಜತೆಗೆ ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದ ಅವರಿಗೆ ನಾಯಕತ್ವ ಹುಟ್ಟಿನಿಂದಲೇ ಬಂದಂತಿತ್ತು. ಅದು ಚಿತ್ರೋದ್ಯಮಕ್ಕೂ ವರವಾಯಿತು. ಯಾವುದೇ ಸಂಕಷ್ಟದ ಸಂದರ್ಭ ಎದುರಾದರೂ, ತಾಳ್ಮೆಗೆಡದೆ, ಸಿಟ್ಟು, ಸೆಡವು ತೋರಿಸದೆ, ತಮ್ಮದೇ ವಿಶಿಷ್ಟ ಮ್ಯಾನರಿಸಂ ಮೂಲಕ ಬಗೆ ಹರಿಸುವ ಚಾಣಾಕ್ಷತೆ ಅವರಲ್ಲಿತ್ತು. ಹಾಗಾಗಿಯೇ ವಿಷ್ಣುವರ್ಧನ್ ಇದ್ದಾಗಲೂ ಅಂಬರೀಷ್ ಕನ್ನಡ ಚಿತ್ರೋದ್ಯಮಕ್ಕೆ ಹಿರಿಯಣ್ಣನಂತಿದ್ದರು. ಉದ್ಯಮವೂ ಕೂಡ ಪಕ್ಷಪಾತವಿಲ್ಲದೆ, ರಾಗ-ದ್ವೇಷವಿಲ್ಲದೆ, ಯಾವುದೇ ಅಪಸ್ವರಗಳಿಲ್ಲದೆ ಅಂಬರೀಷ್ ಅವರೇ ತಮ್ಮ ನಾಯಕ ಎಂದು ಒಪ್ಪಿಕೊಂಡು ಬಂತು. 

ಮತ್ತೊಂದೆಡೆ ಚಿತ್ರೋದ್ಯಮ ತಮ್ಮ ಮೇಲಿಟ್ಟ ನಂಬಿಕೆ, ವಿಶ್ವಾಸ, ಭರವಸೆಗೆ ತಕ್ಕಂತೆ ವಿವಾದ, ಜಗಳ, ಸಮಸ್ಯೆಗಳಿಗೆ ಚಿತ್ರೋದ್ಯಮ ಸಿಕ್ಕಾಗ ಅಲ್ಲಿ ಅಂಬರೀಷ್ ಹಾಜರಿರುತ್ತಿದ್ದರು. ಲೇಟಾದ್ರು ಲೇಟೆಸ್ಟ್ ಆಗಿಯೇ ಬಂದು ಒಂದೇ ಒಂದು ಮಾತಿನಲ್ಲಿ ಎಲ್ಲವನ್ನು ಬಗೆಹರಿಸಿ, ‘ಏನಿಲ್ಲ ಮುಗೀತು ಹೋಗಿ’ ಅಂತ ಕಡ್ಡಿ ಮುರಿದಂತೆ ಹೇಳುತ್ತಿದ್ದರು.

ದೂರು ಹೊತ್ತು ಬಂದವರು, ನ್ಯಾಯ ಕೇಳಿದವರು, ನೊಂದವರು, ಆರೋಪ ಮಾಡಿದವರು, ಆರೋಪಕ್ಕೆ ಸಿಲುಕಿದವರು ಇಬ್ಬರೂ ಮರು ಮಾತನಾಡದೆ ನಗು ಮುಖ ಹೊತ್ತು ಹೊರಟು ಹೋಗುತ್ತಿದ್ದರು. ಕುಚುಕು ಗೆಳೆಯ ವಿಷ್ಣುವರ್ಧನ್ ಇದ್ದಾಗಲೂ ಉದ್ಯಮದ ಸಮಸ್ಯೆಗಳ ಸಂದರ್ಭದಲ್ಲಿ ಅಂಬರೀಷ್ ಮುಂಚೂಣಿಯಲ್ಲಿರುತ್ತಿದ್ದರು. ‘ಅಂಬರೀಷ್ ಇದ್ದರೆ ವಿವಾದಗಳು ಇತ್ಯರ್ಥ’ ಎನ್ನುವ ಮಾತು ಚಾಲ್ತಿಗೆ ಬಂದಿತ್ತು. ಆದರೆ ಈಗ ಅವರಿಲ್ಲ. ಅವರ ಉತ್ತರಾಧಿಕಾರಿ ಯಾರು ಎನ್ನುವುದು ಈಗಿರುವ ಪ್ರಶ್ನೆ. ಉದ್ಯಮ ಮೊದಲಿನಂತಿಲ್ಲ. ಚಿತ್ರೋದ್ಯಮ ಸಾಕಷ್ಟು ಬೆಳೆದಿದೆ. ಹಾಗೆಯೇ ಸಾಕಷ್ಟು ಬದಲಾವಣೆಯೂ ಕಂಡಿದೆ. ಸಾಕಷ್ಟು ಜನಪ್ರಿಯತೆ ನಟರು ಸಾಕಷ್ಟಿದ್ದಾರೆ.

ರವಿಚಂದ್ರನ್, ಶಿವರಾಜ್ ಕುಮಾರ್, ರಾಕ್ ಲೈನ್ ವೆಂಕಟೇಶ್ ಹೀಗೆ ಹಲವಾರು ಮಂದಿ ಇದ್ದಾರೆ. ಅವರೊಂದಿಗೆ ಸುದೀಪ್, ದರ್ಶನ್, ಉಪೇಂದ್ರ ಮತ್ತಿತರರು ಇದ್ದಾರೆ. ಇವರಲ್ಲಿ ಯಾರು ನಾಯಕತ್ವ ವಹಿಸಿಕೊಂಡು ಕನ್ನಡ ಚಿತ್ರೋದ್ಯವನ್ನು ಕೊಂಡೊಯ್ಯಬಲ್ಲರು ಎನ್ನುವುದು ಸದ್ಯಕ್ಕಂತೂ ಉತ್ತರಿಸಲಾಗದ ಪ್ರಶ್ನೆ. ಕಾಲವೇ ಉತ್ತರ ಹೇಳಬೇಕು. 

click me!