ಕುತೂಹಲ ಸೃಷ್ಟಿಸಿದ ರಮೇಶ್‌ ಕುಮಾರ್‌ ನಡೆ

By Web DeskFirst Published Jul 7, 2019, 7:27 AM IST
Highlights

ಕರ್ನಾಟಕ ಸರ್ಕಾರದಲ್ಲಿ 12 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಇದೀಗ ಸ್ಪೀಕರ್ ರಮೇಶ್ ಕುಮಾರ್ ಅವರ ಮುಂದಿನ ನಡೆ ಕುತೂಹಲ ಸೃಷ್ಟಿಸಿದೆ. 

ಬೆಂಗಳೂರು [ಜು.07] :  ಹನ್ನೆರಡು ಮಂದಿ ಅತೃಪ್ತ ಶಾಸಕರು ನೀಡಿರುವ ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ವಿಧಾನಸಭೆ ಸ್ಪೀಕರ್‌ ತೆಗೆದುಕೊಳ್ಳುವ ತೀರ್ಮಾನದ ಮೇಲೆ ದೋಸ್ತಿ ಸರ್ಕಾರದ ಭವಿಷ್ಯ ನಿಂತಿದೆ. ಸರ್ಕಾರ ಉಳಿಸಲು ಅನುಕೂಲವಾಗುವಂತೆ ಈ ಶಾಸಕರ ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ವಿಳಂಬ ಮಾಡುವರೇ ಅಥವಾ ತಮ್ಮ ನಿಯಮಾವಳಿಗೆ ಕಟ್ಟುಬಿದ್ದು ಶೀಘ್ರ ನಿರ್ಧಾರ ಕೈಗೊಳ್ಳುವರೇ ಎಂಬುದು ಕುತೂಹಲ ಮೂಡಿಸಿದೆ.

ಶನಿವಾರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಹನ್ನೆರಡು ಮಂದಿ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದು, ಇಲ್ಲಿಯವರೆಗೆ ರಾಜೀನಾಮೆ ನೀಡಿದವರ ಒಟ್ಟು ಸಂಖ್ಯೆ 13ಕ್ಕೆ ಏರಿದೆ. ಇವರ ರಾಜೀನಾಮೆ ಅಂಗೀಕರಿಸುವ ಅಥವಾ ವಿಳಂಬ ಮಾಡುವ ತೀರ್ಮಾನ ವಿಧಾನಸಭಾ ಅಧ್ಯಕ್ಷರಿಗಿದೆ. ಅತೃಪ್ತ ಶಾಸಕರ ರಾಜೀನಾಮೆಯನ್ನು ತಕ್ಷಣ ಅಂಗೀಕರಿಸಿದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಅಲ್ಪಮತಕ್ಕೆ ಕುಸಿದು ಸರ್ಕಾರ ಪತನವಾಗುವ ಸಾಧ್ಯತೆಗಳಿವೆ.

ಆದರೆ, ಈ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಅವಕಾಶವೂ ಅವರ ಮುಂದಿದೆ. ಪ್ರಸ್ತುತ ರಾಜೀನಾಮೆ ನೀಡಿರುವವರ ಪೈಕಿ ಇಬ್ಬರು ಶಾಸಕರ (ರಮೇಶ್‌ ಜಾರಕಿಹೊಳಿ ಹಾಗೂ ಮಹೇಶ್‌ ಕುಮಟಳ್ಳಿ) ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆ ಅಡಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಫೆಬ್ರವರಿಯಲ್ಲಿ ದೂರು ನೀಡಿದ್ದರು. ಈವರೆಗೂ ದೂರಿನ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಬಳ್ಳಾರಿ ಗ್ರಾಮಾಂತರ ಬಿ. ನಾಗೇಂದ್ರ, ಅಥಣಿ ಶಾಸಕ ಮಹೇಶ್‌ ಕುಮಟಳ್ಳಿ, ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ, ಚಿಂಚೋಳಿ ಶಾಸಕ ಉಮೇಶ್‌ ಜಾಧವ್‌ ವಿರುದ್ಧ 82 ಪುಟಗಳ ದೂರು ನೀಡಲಾಗಿತ್ತು. ಈ ಪೈಕಿ ಈಗಾಗಲೇ ಉಮೇಶ್‌ ಜಾಧವ್‌ ಸಂಸದರಾಗಿ ಆಯ್ಕೆಯಾಗಿದ್ದು, ಬಿ. ನಾಗೇಂದ್ರ ಕಾಂಗ್ರೆಸ್‌ ವಲಯದಲ್ಲೇ ಉಳಿದುಕೊಂಡಿದ್ದಾರೆ.

ಉಳಿದಂತೆ ರಮೇಶ್‌ ಜಾರಕಿಹೊಳಿ ಹಾಗೂ ಮಹೇಶ್‌ ಕುಮಟಳ್ಳಿಗೆ ಪಕ್ಷಾಂತರ ನಿಷೇಧ ಕಾಯಿದೆ ಬಗ್ಗೆ ಸ್ಪೀಕರ್‌ ತೆಗೆದುಕೊಳ್ಳುವ ಕ್ರಮದ ಬಗ್ಗೆ ಆತಂಕ ಇದೆ. ಸ್ಪೀಕರ್‌ ಅವರು ಈ ಪ್ರಕ್ರಿಯೆಯನ್ನು ಆರಂಭಗೊಳಿಸುವ ಮೂಲಕ ಶಾಸಕರ ರಾಜೀನಾಮೆ ಪ್ರಕ್ರಿಯೆಯನ್ನು ವಿಳಂಬ ಮಾಡಬಹುದು.

ಇದಲ್ಲದೆ, ಉಮೇಶ್‌ ಜಾಧವ್‌ ಪ್ರಕರಣದಲ್ಲಿ ನಡೆದುಕೊಂಡಂತೆ ಶಾಸಕರನ್ನು ಒಬ್ಬೊಬ್ಬರಾಗಿ ಕರೆಸಿ ರಾಜೀನಾಮೆ ನೀಡಲು ನಿಜ ಕಾರಣದ ಬಗ್ಗೆ ಸ್ಪಷ್ಟನೆ ಪಡೆಯಬಹುದು. ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳುವ ನೆಪ ನೀಡಬಹುದು. ಅಲ್ಲದೆ, ಶಾಸಕರ ಕ್ಷೇತ್ರಗಳಿಂದ ಸಂಘಟನೆಗಳು ಹಾಗೂ ಸಾರ್ವಜನಿಕರನ್ನು ಆಹ್ವಾನಿಸಿ ಅವರ ಅಭಿಪ್ರಾಯ ಸಂಗ್ರಹ ನಡೆಸುವ ನೆಪ ನೀಡಿ ಈ ಪ್ರಕ್ರಿಯೆಯನ್ನು ಸಾಧ್ಯವಾದಷ್ಟುವಿಳಂಬ ಮಾಡಬಹುದು. ಹೀಗೆ ವಿಳಂಬ ಮಾಡುವ ಮೂಲಕ ಅತೃಪ್ತ ಶಾಸಕರ ಮನವೊಲಿಸರು ಮೈತ್ರಿಕೂಟದ ನಾಯಕರಿಗೆ ಸಮಯವನ್ನು ಒದಗಿಸಿಕೊಡಬಹುದು. ಆದರೆ, ವಿಳಂಬ ಧೋರಣೆ ಅನುಸರಿಸಿದರೂ ರಾಜೀನಾಮೆಯು ನಿಯಮ ಬದ್ಧವಾಗಿದ್ದರೆ ಅಂಗೀಕರಿಸಬೇಕಾಗುತ್ತದೆ.

ಈ ರೀತಿ ವಿಳಂಬ ಧೋರಣೆಯಿಂದ ವಿನಾಕಾರಣ ಗೊಂದಲ ಉಂಟುಮಾಡುವುದು ಏಕೆ ಎಂಬ ನಿರ್ಧಾರಕ್ಕೆ ಸ್ಪೀಕರ್‌ ಬಂದರೆ ಶೀಘ್ರವೇ ರಾಜೀನಾಮೆ ಪತ್ರ ಅಂಗೀಕರಿಸಬಹುದು. ಕರ್ನಾಟಕ ವಿಧಾನಮಂಡಲ ನೀತಿ-ನಿಯಮಗಳ (202/2) ಪ್ರಕಾರ ಶಾಸಕರು ಸ್ವಹಸ್ತಾಕ್ಷರದಲ್ಲಿ ಬರೆದ ರಾಜೀನಾಮೆ ಪತ್ರವನ್ನು ಸ್ಪೀಕರ್‌ ಕಚೇರಿಗೆ ನೀಡಿರುವುದರಿಂದ 2-3 ದಿನಗಳ ಅಂತರದಲ್ಲಿ ಅಂಗೀಕಾರ ಮಾಡುವ ಅಧಿಕಾರವೂ ಸ್ಪೀಕರ್‌ ಅವರಿಗೆ ಇದೆ.

click me!