ಭಾರತದಲ್ಲಿದ್ದಾಗ ಜೀನ್ಸ್‌, ಪಾಕ್‌ನಲ್ಲಿದ್ದಾಗ ಹಿಜಾಬ್‌ ಧರಿಸುತ್ತಾರಾ ಸಾನಿಯಾ?

By Web DeskFirst Published Jan 19, 2019, 9:24 AM IST
Highlights

ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಭಾರತದ ಕುವರಿ ಪಾಕ್ ಸೊಸೆ |  ಭಾರತದಲ್ಲಿದ್ದಾಗ ಜೀನ್ಸ್ ಹಾಕಿ, ಪಾಕ್‌ನಲ್ಲಿದ್ದಾಗ ಹಿಜಾಬ್ ಧರಿಸುತ್ತಾರಾ? ಏನಿದರ ಅಸಲಿಯತ್ತು? ಇಲ್ಲಿದೆ ಸತ್ಯಾಸತ್ಯತೆ ನೋಡಿ. 

ಬೆಂಗಳೂರು (ಜ. 19):  ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಎರಡು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಎರಡು ಫೋಟೋಗಳನ್ನು ಉಲ್ಲೇಖಿಸಿ ಸಾನಿಯಾ ಮಿರ್ಜಾ ಭಾರತದಲ್ಲಿದ್ದಾಗ ಜೀನ್ಸ್‌ ಟಿ-ಶರ್ಟ್‌ ಹೀಗೆ ಇಷ್ಟಬಂದ ಉಡುಪನ್ನು ಧರಿಸುತ್ತಾರೆ. ಆದರೆ ಪಾಕಿಸ್ತಾನದಲ್ಲಿ ಹಿಜಾಬ್‌ ಧರಿಸುತ್ತಾರೆ.

ಇಷ್ಟೆಲ್ಲಾ ಸ್ವಾತಂತ್ರ್ಯ ನೀಡಿದರೂ ಭಾರತ ಅಸಹಿಷ್ಣು ಅಲ್ಲವೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿ ಮಿರ್ಜಾ ಅವರ ಎರಡು ಫೋಟೋಗಳನ್ನು ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ನೇಶಿಯೋ ಡಿಸೋಜಾ ಎಂಬ ಹೆಸರಿನ ಫೇಸ್‌ಬುಕ್‌ ಖಾತೆಯಿಂದ ಪೋಸ್ಟ್‌ ಮಾಡಲಾದ ಈ ಪೋಟೋವು 350 ಬಾರಿ ಶೇರ್‌ ಆಗಿದೆ. ಕೇವಲ ಫೇಸ್‌ಬುಕ್‌ಗಳಲ್ಲಿ ಮಾತ್ರವಲ್ಲದೆ ಟ್ವೀಟರ್‌ನಲ್ಲೂ ಇದು ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ ಸಾನಿಯಾ ಮಿರ್ಜಾ ಹಿಜಾಬ್‌ ಧರಿಸಿರುವ ಫೋಟೋ ಪಾಕಿಸ್ತಾನದ್ದೇ ಎಂದು ಪರಿಶೀಲಿಸಿದಾಗ ಅದು ಪಾಕಿಸ್ತಾನದಲ್ಲಿ ಕ್ಲಿಕ್ಕಿಸಿದ ಫೋಟೋ ಅಲ್ಲ, ಸೌದಿ ಅರೇಬಿಯಾಕ್ಕೆ ತೆರಳಿದ್ದ ಸಂದರ್ಭದ್ದು ಎಂದು ತಿಳಿದುಬಂದಿದೆ. ಬೂಮ್‌ ಈ ಚಿತ್ರದ ಜಾಡು ಹಿಡಿದು ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ 11 ನವೆಂಬರ್‌ 2006ರಲ್ಲಿ ರಾರ‍ಯಡಿಫ್‌ ಸುದ್ದಿ ಸಂಸ್ಥೆ ಇದೇ ಪೋಟೋವನ್ನು ಪ್ರಕಟಿಸಿ ವರದಿ ಮಾಡಿದ್ದು ಪತ್ತೆಯಾಗಿದೆ.

ಮೂಲ ಚಿತ್ರದಲ್ಲಿ ಮಿರ್ಜಾ ಅವರೊಂದಿಗೆ ಮತ್ತೊಬ್ಬ ಮಹಿಳೆ ಕೂಡ ಹಿಜಾಬ್‌ ಧರಿಸಿರುವುದು ಕಂಡುಬರುತ್ತದೆ. ಆದರೆ ಆ ವರದಿಯಲ್ಲಿ ಟೆನಿಸ್‌ ತಾರೆಯ ಪಕ್ಕದಲ್ಲಿ ನಿಂತಿರುವ ಮಹಿಳೆ ಯಾರೆಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಸುಹೀಲ್‌ ಅಹ್ಮೆದ್‌ ಸಜ್ಜಾದ್‌ ಎಂಬುವವರು ಈ ಫೋಟೋ ಕ್ಲಿಕ್ಕಿಸಿದ್ದರು ಎಂದಿದೆ. ಪವಿತ್ರ ಕ್ಷೇತ್ರಗಳಿಗೆ ಹೋಗಿದ್ದ ಸಂದರ್ಭದಲ್ಲಿ ಸಾನಿಯಾ ಮಿರ್ಜಾ ಹಿಜಾಬ್‌ ಧರಿಸಿರುವ ಹಲವು ಫೋಟೋಗಳು ಲಭ್ಯವಿವೆ.

- ವೈರಲ್ ಚೆಕ್ 

click me!