7 ವರ್ಷದ ಮುಗ್ದ ಪುಟಾಣಿಯ ಅತ್ಯಾಚಾರದ ಕಥೆ - ವ್ಯಥೆ

By Web DeskFirst Published Jul 28, 2018, 9:02 AM IST
Highlights

7 ವರ್ಷದ ಪುಟಾಣಿ ಎರಡೂವರೆ ವರ್ಷವಿದ್ದಾಗ ನಡೆದ ಅತ್ಯಾಚಾರ ಪ್ರಕರಣ ಬಗ್ಗೆ ವಿವರಣೆ ನೀಡುವ ಅನಿವಾರ್ಯತೆಯೊಂದು ಬಂದೊದಗಿದೆ.

ಬೆಂಗಳೂರು : ಅದು ಎರಡೂವರೆ ವರ್ಷದ ಮುಗ್ಧ ಮಗು. ಒಂದು ದುರ್ದಿನದಂದು ಅದರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ. ಖಾಸಗಿ ಶಾಲಾ ವಾಹನ ಚಾಲಕನೇ ಈ ಹೇಯ ಕೃತ್ಯ ಎಸಗಿದ್ದು ಎಂದು ಪೋಷಕರು ಪೊಲೀಸರಿಗೆ ದೂರು ನೀಡುತ್ತಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಆತನ ಬಂಧನವಾಗುತ್ತದೆ. ಕಠಿಣ ಕಾಯ್ದೆಯ ಅನ್ವಯ ನ್ಯಾಯಾಂಗ ವಶದಲ್ಲಿರುತ್ತಾನೆ. ಇದೇ ವೇಳೆ, ಕರಾಳ ನೆನಪು ಸಂಪೂರ್ಣ ಮಾಯುವ ರೀತಿಯಲ್ಲಿ ಅಮಾಯಕ ಪುಟಾಣಿಗೆ ಅದರ ಪೋಷಕರು ಚಿಕಿತ್ಸೆ ಕೊಡಿಸುತ್ತಾರೆ. ಈ ಮಧ್ಯೆ, ದೂರುದಾರರು ಹಾಗೂ ಆರೋಪಿಯ ನಡುವೆ ಕಾನೂನು ಹೋರಾಟ ನಡೆಯುತ್ತದೆ. 

ಇದೆಲ್ಲ ಆಗಿ 4.5 ವರ್ಷಗಳೇ ಕಳೆಯುತ್ತದೆ. ಆರೋಪಿ ಜೈಲಲ್ಲೇ ಇರುತ್ತಾನೆ. ಇದೀಗ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾನೆ. ವಿಚಾರಣೆ ನಡೆಸಿದ ನ್ಯಾಯಾಲಯವು ಪೋಕ್ಸೋ ಕಾಯ್ದೆ ಅಡಿ 30 ದಿನದಲ್ಲಿ ಸಂತ್ರಸ್ತೆ ಹಾಗೂ ಸಾಕ್ಷಿಗಳ ಹೇಳಿಕೆ ಪಡೆಯಬೇಕು, ಇಲ್ಲವಾದಲ್ಲಿ ಆರೋಪಿಗೆ ಷರತ್ತುಗಳ ಮೇರೆಗೆ ಜಾಮೀನು ನೀಡಬೇಕು ಎಂದು ಆದೇಶಿಸಿದೆ.

ಇಡೀ ಪ್ರಕರಣ ಮೇಲ್ನೋಟಕ್ಕೆ ಒಂದು ಸರಳ ಅಪರಾಧ ಪ್ರಕರಣದಂತೆ ಕಂಡು ಬಂದರೂ, ಮುಗ್ಧ ಬಾಲಕಿಯ ಪೋಷಕರ ಪಾಲಿಗೆ ಇದು ದುಃಸ್ವಪ್ನವೇ ಆಗಿಬಿಟ್ಟಿದೆ. ಮಕ್ಕಳ ಹಕ್ಕುಗಳ ಕಾಳಜಿ ಹೊಂದಿರುವವರೂ ಸಂತ್ರಸ್ತ ಬಾಲಕಿಯ ಪರಿಸ್ಥಿತಿಯ ಬಗ್ಗೆ ಆತಂಕ ಹಾಗೂ ತಳಮಳ ವ್ಯಕ್ತಪಡಿಸಿದ್ದಾರೆ. ‘4.5 ವರ್ಷ ಹಿಂದಿನ ಘಟನೆಯ ನೋವು ಮಾಯುವಂತೆ ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾಗಿದೆ. ಈಗ 7 ವರ್ಷವಾಗಿರುವ ಬಾಲಕಿ ಅದನ್ನೆಲ್ಲ ಮರೆತು ಲವಲವಿಕೆಯಿಂದಿದ್ದಾಳೆ. 

ಈಗ ಆಕೆ ನಾಲ್ಕೂವರೆ ವರ್ಷ ಹಿಂದಿನ ಘೋರ ಘಟನೆ ವಿವರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಹಳೆ ಘಟನೆ ಕೆದಕಿ ಆಕೆಯನ್ನು ಮತ್ತೆ ಆಘಾತಕ್ಕೆ ದೂಡುವುದು ಹೇಗೆ? ಕೋರ್ಟಲ್ಲಿ ಹೇಳಿಕೆ ಕೊಡಿಸಬೇಕೋ, ಬೇಡವೋ?’ ಎಂಬಿತ್ಯಾದಿ ಗೊಂದಲಕ್ಕೆ ಸಿಲುಕಿದ್ದಾರೆ ಪೋಷಕರು. ಇದ ಲ್ಲದೆ, ಹಿಂದೆ ಪೊಲೀಸರಿಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ ಆರೋಪಿ, ತಾನು 15ಕ್ಕೂ ಹೆಚ್ಚು ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ್ದಾಗಿ ಹೇಳಿದ್ದ. ಇದೂ ಸಂತ್ರಸ್ತ ಬಾಲಕಿಯ ಪೋಷಕರು ಕಂಗೆಡುವಂತೆ ಮಾಡಿದೆ. 

‘ಒಂದು ವೇಳೆ, ಬಾಲಕಿ ನ್ಯಾಯಾಲಯದೆದುರು ದೌರ್ಜನ್ಯದ ಬಗ್ಗೆ ಹೇಳಿಕೆ ನೀಡದೇ ಇದ್ದಲ್ಲಿ, ಆರೋಪಿಯು ಜಾಮೀನು ಸಿಕ್ಕಿ ಹೊರಬರುತ್ತಾನೆ. ಆಗ ಆತ ತಮ್ಮ ಮೇಲೆ ಹಗೆ ಸಾಧಿಸಲಾರ ಎಂಬುದಕ್ಕೇನು ಖಾತ್ರಿ?’ ಎಂಬ ಭೀತಿಯೂ ಕಾಡುತ್ತಿದೆ. 

2014ರ ದೂರು: ಆರೋಪಿಯು ನಗರದ ಖಾಸಗಿ ಶಾಲೆಯೊಂದರ ವಾಹನ ಚಾಲಕನಾಗಿದ್ದ. ಈ ವೇಳೆ ಆರೋಪಿಯು ತಮ್ಮ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆಯ ತಾಯಿ 2014ರ ಜ.9ಕ್ಕೆ ಪೊಲೀಸರಿಗೆ ದೂರು ನೀಡಿದ್ದರು. ಈ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೋ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. 

1.5 ವರ್ಷ ಕಳೆದರೂ, ವಿಚಾರಣೆ ಪೂರ್ಣ ಗೊಳಿಸದ ಹಿನ್ನೆಲೆಯಲ್ಲಿ ಆರೋಪಿಯು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ. ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್, ವಿಚಾರಣೆಯನ್ನು 6ತಿಂಗಳಲ್ಲಿ ಪೂರ್ಣಗೊಳಿಸು ವಂತೆ 2016 ರ ಜೂ. 15ಕ್ಕೆ ಅಧೀನ ನ್ಯಾಯಾ ಲಯಕ್ಕೆ ನಿರ್ದೇಶಿಸಿತ್ತು. ಈ ಮಧ್ಯೆ ವಿಚಾರಣೆ ಪೂರ್ಣಗೊಳಿಸಲು ಮತ್ತೆ 6 ತಿಂಗಳು ಕಾಲಾವಕಾಶ ಕೋರಿ ಅಧೀನ ನ್ಯಾಯಾಲಯ 2017 ರ ಜ.9 ಕ್ಕೆ ಹೈಕೋರ್ಟ್‌ಗೆ ಮನವಿ ಮಾಡಿತ್ತು. ಇದಕ್ಕೆ ಒಪ್ಪದ ಹೈಕೋರ್ಟ್ 3 ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ಸೂಚಿಸಿತ್ತು. ಆದರೂ, ಅಧೀನ ನ್ಯಾಯಾಲಯ ವಿಚಾರಣೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಆರೋಪಿ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ. 

ಜು.3ರಂದು ವಿಚಾರಣೆ ನಡೆಸಿರುವ ಹೈಕೋರ್ಟ್, 30  ದಿನಗಳಲ್ಲಿ ಸಂತ್ರಸ್ತೆಯ ಹೇಳಿಕೆ ಸೇರಿದಂತೆ ಪ್ರಕರಣದ ಇತರೆ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕು. ತಪ್ಪಿದಲ್ಲಿ ಎರಡು ಲಕ್ಷ ರು. ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತಾ ಖಾತರಿ ಪಡೆದು ಆರೋಪಿಗೆ ಜಾಮೀನು ನೀಡಬೇಕು ಎಂದು ಅಧೀನ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

click me!