ಮಾಲೀಕರ ಕಣ್ತಪ್ಪಿಸಿ ವಜ್ರ, ಚಿನ್ನ, ನಗದು ಕದ್ದ ಕೆಲಸದಾಕೆಯ ಬಂಧನ!

By Kannadaprabha NewsFirst Published May 4, 2024, 6:03 AM IST
Highlights

ಕೆಲಸ ಮಾಡುತ್ತಿದ್ದ ಮನೆಯಲ್ಲಿ ಮಾಲೀಕರ ಕಣ್ಣು ತಪ್ಪಿಸಿ ನಗದು ಸೇರಿದಂತೆ ಲಕ್ಷಾಂತರ ರು. ಮೌಲ್ಯದ ಆಭರಣಗಳನ್ನು ಕಳ್ಳವು ಮಾಡಿದ್ದ ಮನೆಗೆಲಸದ ಮಹಿಳೆಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಮೇ.04): ಕೆಲಸ ಮಾಡುತ್ತಿದ್ದ ಮನೆಯಲ್ಲಿ ಮಾಲೀಕರ ಕಣ್ಣು ತಪ್ಪಿಸಿ ನಗದು ಸೇರಿದಂತೆ ಲಕ್ಷಾಂತರ ರು. ಮೌಲ್ಯದ ಆಭರಣಗಳನ್ನು ಕಳ್ಳವು ಮಾಡಿದ್ದ ಮನೆಗೆಲಸದ ಮಹಿಳೆಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಮೂಲದ ಮಂಜುಳಾ (38) ಬಂಧಿತ ಆರೋಪಿ. ಈಕೆಯಿಂದ 363 ಗ್ರಾಂ ಚಿನ್ನ-ವಜ್ರದ ಆಭರಣಗಳು, 176 ಗ್ರಾಂ ಬೆಳ್ಳಿ ಪದಾರ್ಥಗಳು ಹಾಗೂ ಒಂದು ಲಕ್ಷ ರು. ನಗದು ಸೇರಿದಂತೆ ಒಟ್ಟು 35 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಜೆ.ಪಿ.ನಗರ 1ನೇ ಹಂತದ ಅಪಾರ್ಟ್‌ಮೆಂಟ್‌ ನಿವಾಸಿ ರೇಖಾ ಕಿರಣ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?: ದೂರುದಾರೆ ರೇಖಾ ಕಿರಣ್‌ ದಂಪತಿ ಹಿರಿಯ ನಾಗರಿಕರಾಗಿದ್ದು, ಜೆ.ಪಿ.ನಗರ 1ನೇ ಹಂತದ ಅಪಾರ್ಟ್‌ಮೆಂಟ್‌ ಪ್ಲ್ಯಾಟ್‌ನಲ್ಲಿ ನೆಲೆಸಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳು ಇದ್ದು, ವಿದೇಶದಲ್ಲಿ ನೆಲೆಸಿದ್ದಾರೆ. ಹೀಗಾಗಿ ಮನೆಯಲ್ಲಿ ರೇಖಾ ಕಿರಣ್‌ ದಂಪತಿ ಮಾತ್ರ ನೆಲೆಸಿದ್ದಾರೆ. ಇವರ ಮನೆಯಲ್ಲಿ ಆರೋಪಿ ಮಂಜುಳಾ ಕಳೆದ 8 ವರ್ಷಗಳಿಂದ ಮನೆಗೆಲಸ ಮಾಡಿಕೊಂಡಿದ್ದಳು. ಕಳೆದ ಮಾ.27ರಂದು ರೇಖಾ ಕಿರಣ್‌ ಮೊಮ್ಮಗನ ನಾಮಕರಣವಿತ್ತು. ನಾಮಕರಣ ಕಾರ್ಯಕ್ರಮ ಮುಗಿದ ಬಳಿಕ ರೇಖಾ ಕಿರಣ್‌ ತಮ್ಮ ಚಿನ್ನ, ವಜ್ರದ ಆಭರಣ ಹಾಗೂ ನಗದು ಹಣವನ್ನು ಲೆಕ್ಕ ಮಾಡಿ ಗಾಡ್ರೇಜ್‌ ಬೀರುವಿನಲ್ಲಿ ಇರಿಸಿದ್ದರು. ಏ.4ರಂದು ಬೀರು ತೆರೆದು ಆಭರಣಗಳನ್ನು ಪರಿಶೀಲಿಸಿದಾಗ 4 ಚಿನ್ನದ ಬಳೆಗಳು ಸೇರಿದಂತೆ ಇತರೆ ಆಭರಣಗಳು ಹಾಗೂ 50 ಸಾವಿರ ರು. ನಗದು ಇಲ್ಲದಿರುವುದು ಕಂಡು ಬಂದಿದೆ.

ಮಾಲಿಕರ ಕಣ್ಣು ತಪ್ಪಿಸಿ ಕಳವು: ಮನೆಯಲ್ಲಿ ಮೊಮ್ಮಗನ ನಾಮಕರಣವಾದ ಮಾ.27ರಿಂದ ಏ.18ರ ನಡುವೆ ಮನೆಗೆಲಸದ ಮಂಜುಳಾ ಹೊರತುಪಡಿಸಿ ಬೇರೆ ಯಾರು ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಅನುಮಾನಗೊಂಡು ರೇಖಾ ಕಿರಣ್‌, ಮಂಜುಳಾಳನ್ನು ಪ್ರಶ್ನೆ ಮಾಡಿದಾಗ ನನಗೆ ಗೊತ್ತಿಲ್ಲ ಎಂದು ಆಕೆ ಹೇಳಿದ್ದಾಳೆ. ಆದರೂ ಮನೆಗೆ ಮಂಜುಳಾ ಹೊರತಾಗಿ ಬೇರೆ ಯಾರೂ ಬಾರದಿರುವ ಹಿನ್ನೆಲೆಯಲ್ಲಿ ಆಕೆಯೇ ಕಳವು ಮಾಡಿರುವ ಬಗ್ಗೆ ರೇಖಾ ಕಿರಣ್‌ಗೆ ಅನುಮಾನ ಬಲವಾಗಿದ್ದರಿಂದ ಜೆ.ಪಿ.ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮಂಜುಳಾನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿದ್ದು ತಾನೇ ಎದ್ದು ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ಲಾಂಚ್‌ಗೆ ಸೋನಿಯಾ 20 ಸಲ ವಿಫಲ ಪ್ರಯತ್ನ: ಅಮಿತ್‌ ಶಾ ವ್ಯಂಗ್ಯ

ಒಂದೊಂದೇ ಆಭರಣ ಕಳವು!: ಆರೋಪಿ ಮಂಜುಳಾ, ರೇಖಾ ಕಿರಣ್‌ ಮನೆಯಲ್ಲಿ ಬೀರುವಿನ ಕೀ ಇರಿಸುವ ಜಾಗ ನೋಡಿಕೊಂಡಿ ದ್ದಳು. ಕೆಲಸಕ್ಕೆ ಬಂದಾಗ ಬೀರು ತೆರೆದು ಒಂದೊಂದೇ ಆಭರಣಗಳನ್ನು ಕಳವು ಮಾಡಿದ್ದಳು. ಕಳವು ಮಾಡಿದ್ದ ಚಿನ್ನಾಭರಣಗಳ ಪೈಕಿ 2 ಬಳೆಗಳನ್ನು ಗಂಡತನ ಮುಖಾಂತರ ಪರಿಚಿತರಿಗೆ ಮಾರಾಟ ಮಾಡಿದ್ದಳು. ಉಳಿದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥ ಗಳನ್ನು ಚಾಮರಾಜನಗರದ ತವರು ಮನೆಯಲ್ಲಿ ಇರಿಸಿದ್ದಳು. ಆರೋಪಿಯು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಎಲ್ಲಾ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!