
ನವದೆಹಲಿ[ಸೆ.14] : ಭಾರೀ ದಂಡ ಮತ್ತು ಕಠಿಣ ಶಿಕ್ಷೆಯ ಅಂಶ ಒಳಗೊಂಡ ನೂತನ ಮೋಟಾರು ಕಾಯ್ದೆಯನ್ನು ರಾಜ್ಯ ಸರ್ಕಾರಗಳು ದುರ್ಬಲಗೊಳಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಈ ಕುರಿತು ಕಾನೂನು ಸಚಿವಾಲಯದ ಸಲಹೆ ಕೋರಿದೆ. ಈ ಮೂಲಕ, ದಂಡ ಪ್ರಮಾಣ ಇಳಿಕೆಯಲ್ಲಿ ಅಧಿಕಾರ ಮೀರಿ ವರ್ತಿಸುತ್ತಿರುವ ರಾಜ್ಯಗಳಿಗೆ ಮೂಗುದಾರ ಹಾಕಲು ಮುಂದಾಗಿದೆ.
ಅಲ್ಲದೆ ಶೀಘ್ರವೇ ಮುಖ್ಯಮಂತ್ರಿಗಳ ಸಭೆಯೊಂದನ್ನು ಕರೆದು, ಅಲ್ಲಿ ದಂಡದ ಪ್ರಮಾಣ ಇಳಿಕೆ ಮಾಡದಂತೆ ಮನವೊಲಿಸುವ ಕೆಲಸ ಮಾಡಲೂ ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಉಲ್ಲಂಘನೆ: ಕೇಂದ್ರ ಸರ್ಕಾರ ರೂಪಿಸಿರುವ ನೂತನ ಮೋಟಾರು ಕಾಯ್ದೆಯನ್ನು ರಾಜ್ಯ ಸರ್ಕಾರಗಳು ಅಂಗೀಕರಿಸುವ ವೇಳೆ, ಕೆಲವೊಂದು ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅವುಗಳಲ್ಲಿ ದಂಡದ ಪ್ರಮಾಣ ಕಡಿತ ಸೇರಿದಂತೆ ಕೆಲವೊಂದು ಅಂಶಗಳು ಸೇರಿವೆ. ಆದರೆ ಕೆಲ ರಾಜ್ಯಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಕಾಯ್ದೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿವೆ. ಉದಾಹರಣೆಗೆ ಬಿಜೆಪಿಯದ್ದೇ ಆಡಳಿತ ಇರುವ ಗುಜರಾತ್‌ನಲ್ಲಿ, ಹಿಂಬದಿ ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಇದ್ದಲ್ಲಿ ದಂಡ ಹಾಕುವ ಅಂಶವನ್ನು ಕೈಬಿಡಲಾಗಿದೆ. ಹೀಗಾಗಿ ರಾಜ್ಯಗಳಿಗೆ ಇಂಥ ಅಧಿಕಾರ ಇದೆಯೇ ಎಂಬುದರ ಮಾಹಿತಿ ಕೋರಿ ರಸ್ತೆ ಸಾರಿಗೆ ಸಚಿವಾಲಯವು ಕಾನೂನು ಸಚಿವಾಲಯದಿಂದ ನೆರವು ಕೋರಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದೇ ವೇಳೆ ಭಾರೀ ದಂಡ ಮತ್ತು ಶಿಕ್ಷೆಯ ನೆಪವೊಡ್ಡಿ, ಕಾಯ್ದೆ ಜಾರಿಯನ್ನು ಮುಂದೂಡುತ್ತಿರುವ, ಕಾಯ್ದೆ ಜಾರಿಗೆ ನಿರಾಕರಿಸುತ್ತಿರುವ ರಾಜ್ಯಗಳ ವರ್ತನೆಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿಯೇ ಸಚಿವ ನಿತಿನ್ ಗಡ್ಕರಿ ಅವರು ಕಾಯ್ದೆಯನ್ನು ದುರ್ಬಲಗೊಳಿಸುತ್ತಿರುವ ಇಲ್ಲವೇ ಜಾರಿಗೆ ನಿರಾಕರಿಸುತ್ತಿರುವ ಎಲ್ಲಾ ಮುಖ್ಯಮಂತ್ರಿಗಳ ಸಭೆಯೊಂದನ್ನು ಶೀಘ್ರವೇ ಆಯೋಜಿಸಿ, ಅಲ್ಲಿ ಯಾವ ಕಾರಣಕ್ಕಾಗಿ ಕಾಯ್ದೆ ಜಾರಿಗೊಳಿಸಲಾಯಿತು, ಅದನ್ನು ದುರ್ಬಲಗೊಳಿಸುವುದರಿಂದ ಆಗುವ ಅಡ್ಡ ಪರಿಣಾಮಗಳೇನು ಎಂಬುದರ ಬಗೆ ತಿಳಿಸಿಕೊಡುವ ಯತ್ನ ಮಾಡಲಿದ್ದಾರೆ ಎನ್ನಲಾಗಿದೆ.
ಎಲ್ಲೆಲ್ಲಿ ಏನೇನು?: ಗುಜರಾತ್ ಮತ್ತು ಉತ್ತರಾಖಂಡ ಸರ್ಕಾರ ಈಗಾಗಲೇ ದಂಡದ ಪ್ರಮಾಣದಲ್ಲಿ ಕಡಿತ ಮಾಡಿವೆ. ಕರ್ನಾಟಕ ದಂಡದ ಪ್ರಮಾಣ ಕಡಿತ ಮಾಡುವ ಸುಳಿವು ನೀಡಿವೆ. ತಮಿಳುನಾಡು, ಮಹಾರಾಷ್ಟ್ರ, ಉತ್ತರಪ್ರದೇಶ, ಛತ್ತೀಸ್‌ಗಢ, ಪಂಜಾಬ್ ಸರ್ಕಾರಗಳು ಕಾಯ್ದೆ ಜಾರಿ ಮುಂದೂಡಿವೆ. ಮಧ್ಯಪ್ರದೇಶ, ಕೇರಳ, ದೆಹಲಿ ಸರ್ಕಾರಗಳು ಹೊಸ ಕಾಯ್ದೆ ತಿರಸ್ಕರಿಸುವ ಘೋಷಣೆ ಮಾಡಿವೆ. ಪಶ್ಚಿಮ ಬಂಗಾಳ ಸರ್ಕಾರ ಯಾವುದೇ ಕಾರಣಕ್ಕೂ ಕಾಯ್ದೆ ಜಾರಿ ಇಲ್ಲ ಎಂದಿದೆ. ಒಡಿಶಾದಲ್ಲಿ 3 ತಿಂಗಳು ಮುಂದೂಡಿಕೆ. ರಾಜಸ್ಥಾನದಲ್ಲಿ ಭಾಗಶಃ ಜಾರಿ. ಹರ್ಯಾಣದಲ್ಲಿ ಜಾರಿ, ತ್ರಿಪುರಾದಲ್ಲಿ ಇನ್ನೂ ಜಾರಿಯಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.