ಪಿಎಚ್‌ಡಿಗಿಂತ ಡಿಗ್ರಿಗೇ ಹೆಚ್ಚು ಪ್ರಾಮುಖ್ಯ..!

By Suvarna Web DeskFirst Published Feb 14, 2018, 9:56 AM IST
Highlights

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕರಡು ನಿಯಮಗಳನ್ನು ಪ್ರಕಟಿಸಿದೆ. ಯುಜಿಸಿ, ತನ್ನ ವೆಬ್‌ಸೈಟ್‌ನಲ್ಲಿ ನಿಯಮಗಳನ್ನು ಪ್ರಕಟಿಸಿದ್ದು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ನವದೆಹಲಿ : ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕರಡು ನಿಯಮಗಳನ್ನು ಪ್ರಕಟಿಸಿದೆ. ಯುಜಿಸಿ, ತನ್ನ ವೆಬ್‌ಸೈಟ್‌ನಲ್ಲಿ ನಿಯಮಗಳನ್ನು ಪ್ರಕಟಿಸಿದ್ದು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ಕರಡು ನಿಯಮಾವಳಿಗಳನ್ನು ಗಮನಿಸಿದರೆ ಪಿಎಚ್‌ಡಿಗಿಂತ ಡಿಗ್ರಿಯಲ್ಲಿನ ಅಂಕಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕದ ವೇಳೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಕಂಡುಬಂದಿದೆ.

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಯು ಡಿಗ್ರಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ತೆಗೆದುಕೊಂಡಿದ್ದರೆ ನೇಮಕಾತಿ ವೇಳೆ ಆತನಿಗೆ 21 ಕೃಪಾಂಕಗಳನ್ನು ನೀಡಲಾಗುತ್ತದೆ. ಆದರೆ ಪಿಎಚ್‌ಡಿಗೆ ಅದಕ್ಕಿಂತ 1 ಅಂಕ ಕಮ್ಮಿ (20 ಕೃಪಾಂಕ) ನೀಡಲಾಗಿದೆ.

ದೇಶದ ಸುಮಾರು 800 ವಿಶ್ವವಿದ್ಯಾಲಯಗಳು ಹಾಗೂ 40 ಸಾವಿರ ಕಾಲೇಜುಗಳಿಗೆ ಸಹ-ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಏಕರೂಪದ ನಿಯಮಾವಳಿಗಳನ್ನು ರೂಪಿಸಿ, ಯುಜಿಸಿ ಕರಡು ನಿಯಮ ಪ್ರಕಟಿಸಿದೆ. ಈವರೆಗೆ ಆಯ್ಕೆ ಪ್ರಕ್ರಿಯೆಯು ಆಯಾ ವಿಶ್ವವಿದ್ಯಾಲಯಗಳಿಗೆ ಬೇರೆ ಬೇರೆ ರೀತಿ ನಡೆಯುತ್ತಿತ್ತು. ಆದರೆ ಈ ನಿಯಮಕ್ಕೆ ಬದಲಾವಣೆ ತರಲು ಹೊರಟಿರುವ ಯುಜಿಸಿ, ಎಲ್ಲ ವಿಶ್ವವಿದ್ಯಾಲಯಗಳಿಗೆ ಏಕರೂಪದ ನೇಮಕಾತಿ ನಿಯಮ ರೂಪಿಸಿದೆ.

ಕರಡು ನಿಯಮಗಳಲ್ಲೇನಿದೆ?

- ಸಹ-ಪ್ರಾಧ್ಯಾಪಕನಾಗಲು ಪಿಎಚ್‌ಡಿ ಕಡ್ಡಾಯ.

- ‘ನೆಟ್‌’ (ನ್ಯಾಷನಲ್‌ ಎಲಿಜಿಬಿಲಿಟಿ ಟೆಸ್ಟ್‌) ಅಥವಾ ಸೆಟ್‌ (ಸ್ಟೇಟ್‌ ಎಲಿಜಿಬಿಲಿಟಿ ಟೆಸ್ಟ್‌) ಜತೆಗೆ ವಿಶ್ವವಿದ್ಯಾಲಯಗಳ ವಿಭಾಗಗಳಲ್ಲಿ ಸಹಾಯಕ ಪ್ರಾಧ್ಯಾಪಕನಾಗಲು ಪಿಎಚ್‌ಡಿ ಕಡ್ಡಾಯ. 2021ರ ಜುಲೈನಿಂದ ಇದು ಜಾರಿ.

- ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು ಹೆಚ್ಚಿನ ವೇತನ ಶ್ರೇಣಿಗೆ ಬಡ್ತಿ ಬೇಕು ಎಂದರೆ ಕಡ್ಡಾಯವಾಗಿ ಪಿಎಚ್‌ಡಿ ಮಾಡಿರಬೇಕು. ಇದು 2020ರ ಜುಲೈನಿಂದ ಜಾರಿ. ಈವರೆಗೆ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಮಾತ್ರ ಪಿಎಚ್‌ಡಿ ಕಡ್ಡಾಯವಾಗಿತ್ತು.

- ಇನ್ನು ಮುಂದೆ ದೇಶಾದ್ಯಂತ ನೇಮಕಾತಿ ವೇಳೆ ಏಕರೂಪದ ನಿಯಮ. ಇಲ್ಲಿಯವರೆಗೆ ಆಯಾ ವಿಶ್ವವಿದ್ಯಾಲಯಗಳು ಪ್ರತ್ಯೇಕ ನೇಮಕಾತಿ ನಿಯಮಗಳನ್ನು ಪಾಲಿಸುತ್ತಿದ್ದವು.

- ಶೈಕ್ಷಣಿಕ ಅಂಕಗಳನ್ನು ಆಧರಿಸಿ ಆಯ್ಕೆ ಸಮಿತಿ ಕೃಪಾಂಕ ನೀಡುತ್ತದೆ. ಅಂತಿಮವಾಗಿ ಸಂದರ್ಶನದಲ್ಲಿ ತೋರುವ ಪ್ರತಿಭೆಯ ಅನುಸಾರ ನೇಮಕ ನಡೆಯುತ್ತದೆ.

ಏಕರೂಪದ ನಿಯಮಕ್ಕೆ ವಿರೋಧ

ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ದೇಶಾದ್ಯಂತ ಏಕರೂಪದ ನಿಯಮ ರೂಪಿಸಿದುದಕ್ಕೆ ವಿರೋಧ ವ್ಯಕ್ತವಾಗಿದೆ. ಶಹರ ಪ್ರದೇಶಗಳಿಗೆ ಹೋಲಿಸಿದರೆ ಸೂಕ್ತ ಶೈಕ್ಷಣಿಕ ಹಿನ್ನೆಲೆಯಿಂದ ಬಂದಿರದ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದರಿಂದ ಹಿನ್ನಡೆಯಾಗುತ್ತದೆ ಎಂದು ಹಲವು ಶಿಕ್ಷಣ ತಜ್ಞರು ಆಕ್ಷೇಪಿಸಿದ್ದಾರೆ. ಇದೇ ವೇಳೆ, ಈ ಹಿಂದೆ ಕೈಬಿಚ್ಚಿ ಅಂಕ ಕೊಡುತ್ತಿರಲಿಲ್ಲ. ಈಗ ನೀಡಲಾಗುತ್ತಿದೆ. ಹೀಗಾಗಿ ಹಳೆಯ ವಿದ್ಯಾರ್ಥಿಗಳಿಗೂ ಹಿನ್ನಡೆ ಎಂಬ ಆಕ್ಷೇಪ ಕೇಳಿಬಂದಿದೆ.

ಕೃಪಾಂಕ ನಿಗದಿ ಹೇಗೆ?

- ಡಿಗ್ರಿ: ಶೇ.80 ಅಥವಾ ಅದಕ್ಕಿಂತ ಹೆಚ್ಚು ಅಂಕಕ್ಕೆ 21 ಕೃಪಾಂಕ; ಶೇ.60ರಿಂದ ಶೇ.79ರವರೆಗೆ 19 ಕೃಪಾಂಕ, ಶೇ.55ರಿಂದ ಶೇ.59ರವರೆಗೆ ಗಳಿಸಿದ್ದರೆ 16 ಕೃಪಾಂಕ

- ಪಿಜಿ: ಶೇ.80 ಅಥವಾ ಅದಕ್ಕಿಂತ ಹೆಚ್ಚು ಅಂಕಕ್ಕೆ 33 ಕೃಪಾಂಕ, ಶೇ.60ರಿಂದ ಶೇ.79 ಅಂಕಕ್ಕೆ 30 ಕೃಪಾಂಕ, ಶೇ.55ರಿಂದ ಶೇ.59 ಅಂಕ ಗಳಿಸಿದ್ದರೆ 25 ಕೃಪಾಂಕ

- ಎಂಫಿಲ್‌: ಶೇ.60 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ್ದರೆ 7 ಕೃಪಾಂಕ, ಶೇ.55ರಿಂದ ಶೇ.59 ಅಂಕ ಗಳಿಸಿದ್ದರೆ 5 ಕೃಪಾಂಕ

- ಪಿಎಚ್‌ಡಿ: 20 ಕೃಪಾಂಕ

- ಎನ್‌ಇಟಿ ಜತೆ ಜೆಆರ್‌ಎಫ್‌: 10 ಕೃಪಾಂಕ, ಕೇವಲ ನೆಟ್‌-ಸೆಟ್‌: 8 ಕೃಪಾಂಕ

- ರೀಸಚ್‌ರ್‍ ಪಬ್ಲಿಕೇಶನ್‌: 6 ಕೃಪಾಂಕ

- ಶೈಕ್ಷಣಿಕ ಅನುಭವ: 10 ಕೃಪಾಂಕ

click me!